ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಿಲ್ಲೆಯ ಹೆಜ್ಜೆ ಗುರುತು’ ಬಿಂಬಿಸಿದ ಸಾಹಿತಿಗಳು

Last Updated 8 ಡಿಸೆಂಬರ್ 2018, 14:55 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಬಾಪುಗೌಡ ದರ್ಶನಾಪುರ ರಂಗಮಂದಿರದಲ್ಲಿ ‘ಜಿಲ್ಲೆಯ ಹೆಜ್ಜೆ ಗುರುತು’ ಶೀರ್ಷಿಕೆಯಡಿ ಶನಿವಾರ ಆಯೋಜಿಸಿದ್ದ ಗೋಷ್ಠಿಯು ಜಿಲ್ಲೆಯ ಹೆಜ್ಜೆ ಗುರುತುಗಳನ್ನು ನೆನಪಿಸಿತು.

ಉಪನ್ಯಾಸಕ ಮುಡಬಿ ಗುಂಡೇರಾವ ಅವರು ‘ಅಲಕ್ಷಿತ ಸಾಂಸ್ಕೃತಿಕ ನೆಲೆಗಳು’ ಕುರಿತು ವಿಶ್ಲೇಷಿಸಿದರು. ಪ್ರಾಧ್ಯಾಪಕ ಡಾ.ಶೈಲಜಾ ಕೊಪ್ಪರ ಅವರು ‘ನಮ್ಮ ಪರಂಪರೆಯ ಸಾಹಿತಿಗಳು’ ಮತ್ತು ಡಾ. ಪಂಡಿತ ಬಿ.ಕೆ. ಅವರು ‘ನಮ್ಮ ನೆಲದ ಸಾಧಕರು’ ಕುರಿತು ತಮ್ಮ ಪ್ರಬಂಧಗಳನ್ನು ಮಂಡಿಸಿದರು.

ಮಲ್ಲಿಕಾರ್ಜುನ ಪಾಲಮೂರ ಸ್ವಾಗತಿಸಿದರು. ಬಾನುಕುಮಾರ ಗಿರೆಗೋಳ ನಿರೂಪಿಸಿ, ವಿಶ್ವನಾಥ ಭಕರೆ ವಂದಿಸಿದರು.
ಜಗನ್ನಾಥ ಇಮ್ಮಣಿ, ಗುರುಶಾಂತ ಚಿಂಚೋಳಿ, ಕಾಸಯ್ಯ ಗುತ್ತೇದಾರ ನಿರ್ವಹಿಸಿದರು.

‘ಕಲಬುರ್ಗಿ ನಿರ್ಲಕ್ಷ್ಯಕ್ಕೆ ಒಳಗಾದ ಭೂಮಿ’
ಕಲಬುರ್ಗಿ ಜಿಲ್ಲೆಯು ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಪ್ರವಾಸೋದ್ಯಮ ಇಲಾಖೆಯು ಇಲ್ಲಿಯ ಪ್ರವಾಸಿ ತಾಣಗಳು ಮತ್ತು ಸ್ಮಾರಕಗಳನ್ನು ಗುರುತಿಸುವ ಕೆಲಸ ಮಾಡಬೇಕು. ನಮ್ಮ ಮಕ್ಕಳಿಗೆ ಬಿಜ್ಜನಳ್ಳಿ, ನಾಗಾವಿ, ಸನ್ನತಿ, ಮಣ್ಣೂರಿನ ದರ್ಶನ ಮಾಡಿಸಬೇಕು.
ನಾಗಾವಿ ವಿಶ್ವವಿದ್ಯಾಲಯದ ಬಗ್ಗೆ ಮುಂದಿನ ಪೀಳಿಗೆಗೆ ಹೇಳುವಂತಾಗಬೇಕು. ಮೌಢ್ಯವನ್ನು ಪಠ್ಯದಲ್ಲಿ ಸೇರಿಸಿದ್ದೇವೆ. ಆದರೆ, ನಮ್ಮ ನೆಲದ ಬಗ್ಗೆ ಪಠ್ಯವಿಲ್ಲದಿರುವುದು ದುರಂತ. ಹಂಪಿ, ಹಳೇಬೀಡು, ಬೇಲೂರು ಬಗ್ಗೆ ಪಠ್ಯದಲ್ಲಿ ಸೇರಿಸಲಾಗಿದೆ. ಆದರೆ, ಕಲಬುರ್ಗಿ ಜಿಲ್ಲೆಯ ಇತಿಹಾಸದ ಬಗ್ಗೆ ಏನನ್ನೂ ದಾಖಲಿಸಿಲ್ಲ.
ಮುಡಬಿ ಗುಂಡೇರಾವ, ಸೇಡಂ

‘ಈ ನೆಲದ ಸಾಹಿತಿಗಳು ಧನ್ಯ’
ಕಲಬುರ್ಗಿ ಜಿಲ್ಲೆಯಲ್ಲಿ ನಾಲ್ಕು ಪೀಳಿಗೆಯ ಸಾಹಿತಿಗಳು ಇದ್ದಾರೆ. ಈ ನೆಲದ ಸಾಹಿತಿಗಳು ನಿಜಕ್ಕೂ ಧನ್ಯರು. ಜಿಲ್ಲೆಯ ಸಾಹಿತಿಗಳು ಎಲ್ಲಾ ಪ್ರಕಾರಗಳಲ್ಲೂ ಸಮೃದ್ಧ ಕೃಷಿಯನ್ನು ಮಾಡಿದ್ದಾರೆ. ಅನ್ಯ ಸಾಹಿತ್ಯಕ್ಕೂ ಮಣೆ ಹಾಕಿದ ನೆಲ ಕರ್ನಾಟಕ. ಹಿರಿಯ, ಕಿರಿಯ ಪೀಳಿಗೆಯವರು ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇಲ್ಲಿಯ ಸಾಹಿತಿಗಳು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಮಹತ್ವದ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಎಲ್ಲರೂ ತಮ್ಮ ಪಾಡಿಗೆ ತಾವು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವುದು ಹೆಮ್ಮೆಯ ಸಂಗತಿ.
-ಡಾ. ಶೈಲಜಾ ಕೊಪ್ಪರ, ಕಲಬುರ್ಗಿ

*
‘ವೈವಿಧ್ಯಮಯ ಸಂಸ್ಕೃತಿಯ ತವರು’
ಕಲಬುರ್ಗಿ ವೈವಿಧ್ಯಮಯ ಸಂಸ್ಕೃತಿಯ ತವರು. ಐತಿಹಾಸಿಕ, ಧಾರ್ಮಿಕ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಈ ನೆಲದ ಸಾಧಕರ ಕೊಡುಗೆ ಅಪಾರ. ಖಾಜಾ ಬಂದಾ ನವಾಜ್, ಶರಣಬಸವೇಶ್ವರ ವಿದ್ಯಾವರ್ಧಕ ಸಂಘ, ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಗಳು ಈ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಎನ್.ಧರ್ಮಸಿಂಗ್, ವೀರೇಂದ್ರ ಪಾಟೀಲ ಅವರು ಮುಖ್ಯಮಂತ್ರಿಗಳಾಗಿದ್ದರು. ಮಲ್ಲಿಕಾರ್ಜುನ ಖರ್ಗೆ, ಎಸ್.ಕೆ.ಕಾಂತ, ವೈಜನಾಥ ಪಾಟೀಲ ಅವರ ಹೋರಾಟದ ಫಲವಾಗಿ ಹೈದರಾಬಾದ್ ಕರ್ನಾಟಕ ಭಾಗಕ್ಕೆ 371 (ಜೆ) ವಿಶೇಷ ಸ್ಥಾನಮಾನ ದೊರಕಿದೆ.
-ಡಾ. ಪಂಡಿತ ಬಿ.ಕೆ., ಚಿತ್ತಾಪುರ

*
‘ಕಲಬುರ್ಗಿ ಶ್ರೀಮಂತ ಜಿಲ್ಲೆ’
ಕಲೆ, ಸಾಹಿತ್ಯ, ಸಂಸ್ಕೃತಿಯಲ್ಲಿ ಕಲಬುರ್ಗಿ ಜಿಲ್ಲೆ ಅತ್ಯಂತ ಶ್ರೀಮಂತವಾಗಿದೆ. ಜಾತಿ, ಲಿಂಗ ಮತ್ತು ಪ್ರಾದೇಶಿಕತೆಗೆ ಅನುಗುಣವಾಗಿ ಸಾಮಾಜಿಕ ನ್ಯಾಯ ಕಲ್ಪಿಸಬೇಕಾಗಿರುವುದು ಎಲ್ಲರ ಜವಾಬ್ದಾರಿಯಾಗಿದೆ. ಸ್ಥಳೀಯ ಮತ್ತು ಸಾಮಾಜಿಕ ನ್ಯಾಯದ ವಿಷಯದಲ್ಲಿ ಸ್ಥಳೀಯ ನ್ಯಾಯಕ್ಕೆ ಹೆಚ್ಚು ಒತ್ತು ಕೊಡಬೇಕು. ಏಕೆಂದರೆ ಸ್ಥಳೀಯ ಎಂಬುದು ಯಾವಾಗಲೂ ತುಚ್ಛೀಕರಣಕ್ಕೆ ಒಳಗಾಗುತ್ತಿದೆ. ಸ್ಮಾರಕ, ಸಂಸ್ಕೃತಿ, ಉತ್ಪಾದನೆ ಕಡೆಗಣನೆಗೆ ಒಳಗಾಗಿವೆ. ಸರ್ಕಾರಿ ಶಾಲೆ, ಸರ್ಕಾರಿ ಆಸ್ಪತ್ರೆ, ಸರ್ಕಾರಿ ಬಸ್ ಯಾರಿಗೂ ಬೇಡ. ಆದರೆ, ಸರ್ಕಾರಿ ನೌಕರಿ ಎಲ್ಲರಿಗೂ ಬೇಕು. ಇದು ನಮ್ಮ ವೈರುಧ್ಯ.
-ಡಾ. ಬಸವರಾಜ ಸಬರದ, ಹಿರಿಯ ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT