ಸೇಡಂ: ‘ಮಳೆಗಾಲದಲ್ಲಿ ಶಾಲೆ ನಿರ್ವಹಣೆಯದ್ದೆ ಸಮಸ್ಯೆ. ಒಂದು ಕಡೆ ವಿದ್ಯಾರ್ಥಿಗಳ ರಕ್ಷಣೆ ಮತ್ತೊಂದು ಕಡೆ ಪಾಠ ಬೋಧನೆಯದ್ದು. ಇದೇ ಸವಾಲು’ ಎಂದು ತಾಲ್ಲೂಕಿನ ನೀಲಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಮಂಜು ನರೋಣಾ ಹೇಳಿದರು.
ಈ ಸಮಸ್ಯೆ ಕೇವಲ ನೀಲಹಳ್ಳಿ ಶಾಲೆಯದ್ದಲ್ಲ. ತಾಲ್ಲೂಕಿನಲ್ಲಿ ಸುಮಾರು 30ಕ್ಕೂ ಅಧಿಕ ಶಾಲೆಗಳ ಪರಿಸ್ಥಿತಿಯಿದು. ಹಳೆ ಕಟ್ಟಡವಿರುವ ಶಾಲೆಗಳು ಶಿಥಿಲಗೊಂಡಿವೆ. ಗೋಡೆ ಅಲ್ಲಲ್ಲಿ ಬಿರುಕು ಬಿಟ್ಟು, ಛತ್ ಉದುರಿ ಬೀಳುತ್ತಿದೆ. ಮೇಲ್ಚಾವಣಿ ಪದರು ಉದುರಿ, ಕಬ್ಬಿಣದ ರಾಡ್ ತೇಲಿದ್ದು ಕಂಡುಬರುತ್ತಿವೆ. ದುರಸ್ತಿಗಾಗಿ ಉನ್ನತ ಅಧಿಕಾರಿಗಳ ಗಮನಕ್ಕೆ ಮುಖ್ಯಶಿಕ್ಷಕರು ಮನವಿ ಪತ್ರ ಸಲ್ಲಿಸಿದರೂ, ಸರ್ಕಾರದಿಂದ ಅನುದಾನ ಬಿಡುಗಡೆಯ ಸಮಸ್ಯೆ ಸವಾಲಾಗಿ ಪರಿಣಮಿಸುತ್ತಿದೆ.
ತಾಲ್ಲೂಕಿನ ನೀಲಹಳ್ಳಿ, ಕೋಲ್ಕುಂದಾ, ಮಳಖೇಡ, ಮುಧೋಳ, ಕುರಕುಂಟಾ, ಆಡಕಿ, ಕೋಡ್ಲಾ, ಬಿಲಕಲ್, ಗುಂಡಳ್ಳಿ, ಚಿಟಕನಪಲ್ಲಿ, ರಂಜೋಳ ಸೇರಿದಂತೆ ವಿವಿಧ ಗ್ರಾಮಗಳಲ್ಲಿನ ಸರ್ಕಾರಿ ಶಾಲೆಗಳಲ್ಲಿ ಮೈದಾನದ ಸಮಸ್ಯೆ ಇದೆ. ಇನ್ನು ಜಿಲ್ಲೆಡಪಲ್ಲಿ, ಮೇದಕ, ಯಾನಾಗುಂದಿ, ಪಾಕಾಲ್ ಸೇರಿದಂತೆ ವಿವಿಧ ಶಾಲೆಗಳಿಗೆ ತೆರಳಲು ಸಮರ್ಪಕ ರಸ್ತೆ ಕೊರತೆಯಿದೆ.
‘ಶೌಚಾಲಯಗಳ ಸಮಸ್ಯೆ, ಶೌಚಾಲಯವಿದ್ದಲ್ಲಿ ನೀರಿನ ಸಮಸ್ಯೆ, ನಿರ್ವಹಣೆ ಹೀಗೆ ಹತ್ತಾರು ಸಮಸ್ಯೆಗಳು ತಾಂಡವವಾಡುತ್ತಿದ್ದು, ವಿದ್ಯಾರ್ಥಿಗಳು ಸಮಸ್ಯೆಗಳ ಮಧ್ಯೆ ಶಿಕ್ಷಣ ಕಲಿಕೆ ಮುಂದುವರಿಸುತ್ತಿದ್ದಾರೆ’ ಎಂದು ಪಾಲಕ ದೇವಪ್ಪ ನಾಯಿಕೋಡಿ ದೂರುತ್ತಾರೆ.
‘ತಾಲ್ಲೂಕಿನಲ್ಲಿ 31 ಪ್ರೌಢ ಮತ್ತು 215 ಪ್ರಾಥಮಿಕ ಶಾಲೆ ಸೇರಿದಂತೆ ಒಟ್ಟು 246 ಸರ್ಕಾರಿ ಶಾಲೆಗಳಿವೆ. 24,124 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಸುಮಾರು 30ಕ್ಕೂ ಅಧಿಕ ಶಾಲೆಗಳು ಮಳೆಗಾಲದಲ್ಲಿ ಸೋರುತ್ತವೆ. 40ಕ್ಕೂ ಅಧಿಕ ಶಾಲೆಗಳಿಗೆ ಮೈದಾನದ ಕೊರತೆಯಿದೆ’ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಮಾರುತಿ ಹುಜರಾತಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಕುರಕುಂಟಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಶಿಥಿಲಗೊಂಡಿದ್ದು, ಹೊಸ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಗೋಪನಪಲ್ಲಿ (ಬಿ), ಸೂರವಾರ ಮತ್ತು ಗುಂಡಳ್ಳಿ (ಬಿ) ಗ್ರಾಮದ ಶಾಲೆಗಳ ಕೋಣೆಗಳು ಶಿಥಿಲಗೊಂಡು ಬೀಳುವ ಹಂತಕ್ಕೆ ತಲುಪಿವೆ. ಕೋಣೆಗಳ ಸ್ಥಿತಿಗತಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ’ ಎಂದು ಮಾಹಿತಿ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ತೆರಳುವ ದಾರಿಯಲ್ಲಿ ನೀರು ನಿಂತು ಕೆಸರುಮಯವಾಗಿರುತ್ತದೆ. ಪಟ್ಟಣದ ಹೋಳಿತಿಪ್ಪಿ ಬಡಾವಣೆಯ ಶಾಲೆ ಶಿಥಿಲಗೊಂಡಿದ್ದು ಹೊಸ ಕಟ್ಟಡ ನಿರ್ಮಿಸಬೇಕು.– ಶ್ರೀಮಂತ ಆವಂಟಿ, ಸಾಮಾಜಿಕ ಕಾರ್ಯಕರ್ತ
ನೀಲಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕೋಣೆಗಳು ಮಳೆಗಾಲದಲ್ಲಿ ಸೋರುತ್ತಿದ್ದು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಶೌಚಾಲಯ ಸೇರಿದಂತೆ ಹೊಸ ಕೋಣೆಗಳನ್ನು ನಿರ್ಮಿಸಬೇಕು.– ದೇವಪ್ಪ ನಾಯಿಕೋಡಿ, ಎಸ್‌ಡಿಎಂಸಿ ಅಧ್ಯಕ್ಷ
ತಾಲ್ಲೂಕಿನಲ್ಲಿ ಶಿಥಿಲಗೊಂಡ ಶಾಲಾ ಕೋಣೆಗಳ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 45 ಕೋಣೆಗಳ ನಿರ್ಮಾಣಕ್ಕೆ ಕೆಕೆಆರ್‌ಡಿಬಿ ವತಿಯಿಂದ ಮಂಜೂರಾತಿ ಸಿಕ್ಕಿದೆ.–ಮಾರುತಿ ಹುಜರಾತಿ, ಕ್ಷೇತ್ರ ಶಿಕ್ಷಣಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.