ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸುಸ್ಥಿರ ಅಭಿವೃದ್ಧಿ ನಮ್ಮ ಆದ್ಯತೆಯಾಗಲಿ’

ಜಿಲ್ಲಾ ಮಟ್ಟದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ಚಾಲನೆ
Last Updated 9 ಡಿಸೆಂಬರ್ 2019, 13:04 IST
ಅಕ್ಷರ ಗಾತ್ರ

ಕಲಬುರ್ಗಿ: ಮನುಷ್ಯನ ದಾಹಕ್ಕೆ ಬಲಿಯಾಗಿ ಪರಿಸರ ದಿನೇ ದಿನೇ ಹಾಳಾಗುತ್ತಿದೆ. ಪ್ಲಾಸ್ಟಿಕ್‌ ತ್ಯಾಜ್ಯ, ಸಿಮೆಂಟ್‌ ತಯಾರಿಕೆ ಸಂದರ್ಭದಲ್ಲಿ ಹೊರಸೂಸುವ ಕಾರ್ಬನ್‌ ಮೊನಾಕ್ಸೈಡ್‌ ಅನಿಲವು ಗಾಳಿಯಲ್ಲಿ ಸೇರಿ ವಿಷಮಯವಾಗುತ್ತಿದೆ. ಇದಕ್ಕೆ ಪರ್ಯಾಯ ಕ್ರಮ ತೆಗೆದುಕೊಳ್ಳದ ಹೊರತು ಮನುಕುಲಕ್ಕೆ ಉಳಿಗಾಲವಿಲ್ಲ ಎಂದು ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ.ಬಾಬುರಾವ ಶೇರಿಕಾರ ಎಚ್ಚರಿಸಿದರು.

ನಗರದ ನಳಂದ ಪದವಿಪೂರ್ವ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ 27ನೇ ಜಿಲ್ಲಾ ಮಟ್ಟದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಕಲಬುರ್ಗಿ ಜಿಲ್ಲೆಯಲ್ಲಿ ಸುಮಾರು 10 ಸಿಮೆಂಟ್‌ ಕಾರ್ಖಾನೆಗಳಿದ್ದು, ಮೂರು ಪ್ರಮುಖ ಕಾರ್ಖಾನೆಗಳು ನಿತ್ಯ 10 ಸಾವಿರ ಟನ್‌ ಸಿಮೆಂಟ್‌ ಉತ್ಪಾದಿಸುತ್ತವೆ. ಈ ಪ್ರಕ್ರಿಯೆಯಲ್ಲಿ ನಿತ್ಯ 1 ಲಕ್ಷ ಟನ್ ಕಾರ್ಬನ್‌ ಮೊನಾಕ್ಸೈಡ್‌ ಹೊರಸೂಸುತ್ತದೆ. ಇದರಿಂದ ಶಾಖದ ಪ್ರಮಾಣ ಜಾಸ್ತಿಯಾಗಲಿದ್ದು, ಆಸಿಡ್‌ ಮಳೆಯಂತಹ ಹವಾಮಾನ ವೈಪರೀತ್ಯಗಳನ್ನು ನೋಡಬೇಕಾಗುತ್ತದೆ. ಕಲ್ಲಿದ್ದಲು ಬಳಸಿ ವಿದ್ಯುತ್‌ ಉತ್ಪಾದಿಸುವುದೂ ಪರಿಸರಕ್ಕೆ ಮಾರಕವಾಗಲಿದ್ದು, ಪವನವಿದ್ಯುತ್‌, ಸೌರವಿದ್ಯುತ್‌ನಂತಹ ಪರ್ಯಾಯ ಮಾದರಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಸುಸ್ಥಿರ ಅಭಿವೃದ್ಧಿಗೆ ಮುಂದಾಗಬೇಕು’ ಎಂದರು.

ಭೂಮಿಯ ಮೇಲೆ ಲಭ್ಯವಿರುವ ಒಟ್ಟು ನೀರಿನ ಪೈಕಿ ಶೇ 97 ಸಮುದ್ರದಲ್ಲಿದ್ದು, ಉಪ್ಪು ನೀರಾಗಿದೆ. ಶುದ್ಧ ಉಳಿದ ಶೇ 3ರ ಪೈಕಿ ಬಹುತೇಕ ನೀರು ಅಂಟಾರ್ಟಿಕಾದಲ್ಲಿದೆ. ಹೀಗಾಗಿ, ಲಭ್ಯವಿರುವ ಅಲ್ಪ ನೀರಿನಲ್ಲಿಯೇ ಮನುಕುಲದ ಕುಡಿಯುವ ನೀರಿನ ಅವಶ್ಯಕತೆಯನ್ನು ತೀರಿಸಿಕೊಳ್ಳಬೇಕಿದೆ ಎಂದು ಹೇಳಿದರು.

ವಿಜ್ಞಾನ ಪರಿಷತ್ತಿನ ಗೌರವ ಕಾರ್ಯದರ್ಶಿ ಗಿರೀಶ ಕಡ್ಲೇವಾಡ ಮಾತನಾಡಿ, ‘10ರಿಂದ 17 ವರ್ಷ ವಯೋಮಾನದ ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವ ಸಲುವಾಗಿ ವಿಜ್ಞಾನ ಪರಿಷತ್ತು ನಿರಂತರವಾಗಿ ಶ್ರಮಿಸುತ್ತಿದೆ. ರಾಜ್ಯಮಟ್ಟದ ಸ್ಪರ್ಧೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿಯಲ್ಲಿ ನಡೆಯಲಿದೆ. ರಾಷ್ಟ್ರಮಟ್ಟದ ಸ್ಪರ್ಧೆಯು ಕೇರಳದಲ್ಲಿ ಡಿಸೆಂಬರ್‌ 27ರಿಂದ 31ರವರೆಗೆ ನಡೆಯಲಿದೆ. ಅಲ್ಲಿ ಒಟ್ಟು 30 ಬಗೆಯ ವಿಜ್ಞಾನದ ಪ್ರಾತ್ಯಕ್ಷಿಕೆಗಳನ್ನು ಕಳಿಸಿಕೊಡಲಾಗುವುದು’ ಎಂದರು.

‘ಇತ್ತೀಚಿನ ದಿನಗಳಲ್ಲಿ ಬೆಳೆಗಳಿಗೆ ಅಪಾಯಕಾರಿ ರಾಸಾಯನಿಕಗಳನ್ನು ಸಿಂಪಡಿಸಲಾಗುತ್ತಿದೆ. ಇದರಿಂದಾಗಿ ಮಣ್ಣಿನ ಫಲವತ್ತತೆ ಕಾಲಕ್ರಮೇಣ ಕಡಿಮೆಯಾಗುತ್ತಿದ್ದು, ಭವಿಷ್ಯದಲ್ಲಿ ಅಪಾಯ ಕಾದಿದೆ. ಆದಷ್ಟೂ ಪ್ಲಾಸ್ಟಿಕ್‌ ಬಳಕೆಯನ್ನೂ ಕಡಿಮೆ ಮಾಡಬೇಕು’ ಎಂದು ಸಲಹೆ ನೀಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ವಿಷಯ ಪರಿವೀಕ್ಷಕ ಹೃಷಿಕೇಶ ದಂತಕಾಳೆ ಮಾತನಾಡಿದರು. ನಳಂದ ಪಿ.ಯು. ಕಾಲೇಜಿನ ಪ್ರಾಚಾರ್ಯ ಭಾರಧ್ವಾಜ್, ಮಹೇಶಕುಮಾರ ದೇವಣಿ ವೇದಿಕೆಯಲ್ಲಿದ್ದರು.

ನಗರ ಹಾಗೂ ಗ್ರಾಮೀಣ ಪ್ರದೇಶಗಳಿಂದ ಬಂದಿದ್ದ ಶಾಲಾ ವಿದ್ಯಾರ್ಥಿಗಳು ವಿಜ್ಞಾನ ಪ್ರಾತ್ಯಕ್ಷಿಕೆಗಳನ್ನು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT