ಚಿತ್ತಾಪುರ: ‘ಶ್ರಾವಣ ಮಾಸದ ಮಧ್ಯದ ಸೋಮವಾರ ನಡೆಯುವ ದಂಡಗುಂಡ ಬಸವೇಶ್ವರ ಜಾತ್ರೆಗೆ ಬರುವ ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ, ವಾಹನ ದಟ್ಟಣೆ ನಿವಾರಣೆ, ಸುಗಮ ಸಂಚಾರ ವ್ಯವಸ್ಥೆಗಾಗಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗುವುದು’ ಎಂದು ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ್ ಹೇಳಿದರು.
ತಾಲ್ಲೂಕಿನ ದಂಡಗುಂಡ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಮಧ್ಯದ ಸೋಮವಾರ (ಆ.19) ನಡೆಯುವ ಪಲ್ಲಕ್ಕಿ ಉತ್ಸವ, ರಥೋತ್ಸವ ನಿಮಿತ್ತ ಮಂಗಳವಾರ ಚಿತ್ತಾಪುರ ಪೊಲೀಸ್ ಠಾಣೆಯಿಂದ ಆಯೋಜಿಸಿದ್ದ ಸಾರ್ವಜನಿಕ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ದಂಡಗುಂಡ ಬಸವೇಶ್ವರ ಭಕ್ತರು ರಾಜ್ಯಾದ್ಯಂತ ಇದ್ದಾರೆ. ಜಾತ್ರೆಗೆ ರಾಜ್ಯ, ಹೊರರಾಜ್ಯಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಬಂದ ಭಕ್ತರಿಗೆ ಸಮಸ್ಯೆ, ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ. ಜಾತ್ರೆಯ ಕಾರ್ಯಕ್ರಮಗಳು ಧಾರ್ಮಿಕ ಸಂಪ್ರದಾಯದಂತೆ ಅಚ್ಚುಕಟ್ಟಾಗಿ ನೆರವೇರಲು ಬೇಕಾದ ಪೊಲೀಸ್ ಬಂದೋಬಸ್ತ್ ಒದಗಿಸುತ್ತೇವೆ. ಜಾತ್ರೆಯ ಯಾವುದೇ ಸಂಪ್ರದಾಯ ತಪ್ಪಿಸಬೇಡಿ. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು’ ಎಂದು ಗ್ರಾಮಸ್ಥರಿಗೆ ತಿಳಿಸಿದರು.
ದೇವರ ದರ್ಶನಕ್ಕೆ ಬರುವ ಭಕ್ತರು ತೊಂದರೆಯಿಲ್ಲದೆ ದರ್ಶನ ಪಡೆಲು ಮಹಿಳೆಯರಿಗೆ, ಪುರುಷರಿಗೆ ಪ್ರತ್ಯೇಕ ಸರದಿ ವ್ಯವಸ್ಥೆ ಮಾಡಲಾಗುತ್ತದೆ. ದರ್ಶನಕ್ಕೆ ಹೋಗುವ ಮತ್ತು ದರ್ಶನ ಮುಗಿಸಿ ವಾಪಾಸ್ ಬರುವ ವ್ಯವಸ್ಥೆ ಕೈಗೊಳ್ಳಲಾಗುವುದು. ಅದಕ್ಕೆ ಅಗತ್ಯ ಪೊಲೀಸ್ ಸಿಬ್ಬಂದಿ ನಿಯೋಜಿಸುತ್ತೇವೆ. ಪ್ರತಿ ವರ್ಷ ಜಾತ್ರೆಯಲ್ಲಿ ವಾಹನ ದಟ್ಟಣೆಯಿಂದ ಸಂಚಾರ ಸಮಸ್ಯೆ ಸಾಮಾನ್ಯವಾಗಿದೆ. ಈ ವರ್ಷ ಸುಗಮ ಸಂಚಾರಕ್ಕೆ ಕೆಲವು ನಿಯಮ ಅನುಸರಿಸಿ ಸಮಸ್ಯೆಯಾಗದಂತೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು’ ಎಂದು ಅವರು ಹೇಳಿದರು.
ಸಿಪಿಐ ಚಂದ್ರಶೇಖರ ತಿಗಡಿ ಮಾತನಾಡಿ, ‘ಜಾತ್ರೆಯಲ್ಲಿ ಭಕ್ತರಿಗೆ ಯಾವುದೇ ತೊಂದರೆಯಗದಂತೆ ನೋಡಿಕೊಳ್ಳಲು ದೇವಸ್ಥಾನದ ಟ್ರಸ್ಟ್‌ನವರು ಸ್ವಯಂ ಸೇವಕರನ್ನು ನೀಡಿದರೆ ಸಂಚಾರ ಸಮಸ್ಯೆ ನಿವಾರಣೆಗೆ ತುಂಬಾ ಅನುಕೂಲವಾಗುತ್ತದೆ. ಅವರಿಗೆ ಜಾತ್ರೆಗೆಂದು ಪೊಲೀಸ್ ಪಾಸ್ ನೀಡಿ ಸಂಚಾರ ಸಮಸ್ಯೆ ನಿವಾರಣೆಗೆ ನಿಯೋಜಿಸುತ್ತೇವೆ’ ಎಂದು ಅವರು ಹೇಳಿದರು.
ಪಿಎಸ್ಐ ಶ್ರೀಶೈಲ್ ಅಂಬಾಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವಸ್ಥಾನ ಟ್ರಸ್ಟ್ ಕಾರ್ಯದರ್ಶಿ ಚಂದ್ರಶೇಖರ ಅವಂಟಿ, ಸದಸ್ಯ ಭೀಮಣ್ಣ ಸಾಲಿ ಮಾತನಾಡಿದರು. ಟ್ರಸ್ಟ್ ಅಧ್ಯಕ್ಷ ಭಾಗನಗೌಡ ಸಂಕನೂರು, ಸದಸ್ಯರಾದ ಭೀಮರಾಯಗೌಡ ಚಾಮನೂರು, ಮಹಾಂತಗೌಡ ಪಾಟೀಲ್, ಮುಖಂಡರಾದ ಬಸವರಾಜಗೌಡ ಭಾಸರೆಡ್ಡಿ, ಗುರುರಾಜ ಪೂಜಾರಿ, ಕಲ್ಯಾಣಕುಮಾರ, ಸಾರಿಗೆ ಇಲಾಖೆ ಅಧಿಕಾರಿ ಬಸವರಾಜ, ಅಗ್ನಿಶಾಮಕ ಠಾಣೆಯ ಶಿವರಾಯ, ಜೆಸ್ಕಾಂ ಇಲಾಖೆಯ ಕಿರಿಯ ಎಂಜಿನಿಯರ್ ಶಿವರಾಜ ಹಾಜರಿದ್ದರು. ಬಸುಗೌಡ ಮಾಲಿಪಾಟೀಲ್ ಸ್ವಾಗತಿಸಿ, ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.