ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇಡಂ ಕ್ಷೇತ್ರ ಸ್ಥಿತಿ–ಗತಿ : ಪಾಟೀಲದ್ವಯರ ಪ್ರಾಬಲ್ಯದ ಸೇಡಂ ಕ್ಷೇತ್ರ

ಲಿಂಗಾಯತ ರೆಡ್ಡಿ, ಕಬ್ಬಲಿಗ, ಈಡಿಗ ಸಮುದಾಯ, ಮಹಿಳಾ ಮತದಾರರೇ ನಿರ್ಣಾಯಕ
Last Updated 5 ಫೆಬ್ರುವರಿ 2023, 6:52 IST
ಅಕ್ಷರ ಗಾತ್ರ

ಕಲಬುರಗಿ: ಒಂದೂವರೆ ದಶಕಗಳಿಂದ ಕಾಂಗ್ರೆಸ್‌ನ ಡಾ.ಶರಣಪ್ರಕಾಶ ಪಾಟೀಲ ಮತ್ತು ಬಿಜೆಪಿಯ ಹಾಲಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಅವರ ನಡುವಿನ ಜಿದ್ದಾಜಿದ್ದಿನ ಕಣವಾಗಿರುವ ಸೇಡಂ ಮತಕ್ಷೇತ್ರಕ್ಕೆ ಜೆಡಿಎಸ್‌ನ ಬಾಲರಾಜ್‌ ಗುತ್ತೇದಾರ ಪ್ರವೇಶದಿಂದ 2023ರ ಚುನಾವಣೆಯ ಕಣ ರಂಗೇರಲಿದೆ.

ತೇಲ್ಕೂರ ಅವರು ಸತತ ಮೂರು ಬಾರಿ ಸೋಲಿನ ಅನುಕಂಪದ ಮೇಲೆ ಗೆದ್ದು, ತಮ್ಮ ಸೋಲಿನ ಸರಪಳಿ ಕಳಚಿಕೊಂಡರು. ಗೆಲುವಿನ ಓಟ ಮುಂದುವರಿಸಲು ಮುಖ್ಯಮಂತ್ರಿ ನೇತೃತ್ವದಲ್ಲಿ 69ನೇ ಅಖಿಲ ಭಾರತ ಸಹಕಾರ ಸಪ್ತಾಹ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಂದ ತಾಂಡಾ ನಿವಾಸಿಗಳ ಹಕ್ಕುಪತ್ರ ವಿತರಣೆಯಂತಹ ಕಾರ್ಯಕ್ರಮ ಆಯೋಜಿಸಿ ಲಕ್ಷಾಂತರ ಜನರನ್ನು ಸೇರಿಸಿದರು.

ಕಂದಾಯ ಸಚಿವ ಆರ್. ಅಶೋಕ ಅವರಿಂದ ಎರಡು ಬಾರಿ ಗ್ರಾಮ ವಾಸ್ತವ್ಯ ಸಹ ಮಾಡಿಸಿದ್ದರು. ಮತ್ತೊಮ್ಮೆ ಮುಖ್ಯಮಂತ್ರಿಗಳನ್ನು ಕ್ಷೇತ್ರಕ್ಕೆ ಕರೆಸಿ, ಕಾಗಿಣಾ ಏತ ನೀರಾವರಿ ಯೋಜನೆಗೆ ಚಾಲನೆ ಕೊಡಿಸುವ ಸಾಧ್ಯತೆ ಇದೆ.

ಮೊದಲ ಬಾರಿಗೆ ಗೆದ್ದು ಜಿಲ್ಲೆಯ ಪ್ರಬಲ ಬಿಜೆಪಿ ನಾಯಕರಾಗಿರುವ ತೇಲ್ಕೂರ ಕ್ಷೇತ್ರದ ಜನರಿಗೆ ಸಿಗುವುದಿಲ್ಲ ಎಂಬ ಆಪಾದನೆ ಇದೆ.

ಹ್ಯಾಟ್ರಿಕ್‌ ಗೆಲುವಿನಿಂದ ವಂಚಿತರಾದ ಡಾ. ಶರಣಪ್ರಕಾಶ ಪಾಟೀಲ ಅವರು ಮುಂದಿನ ಚುನಾವಣೆಯಲ್ಲಿ ಶತಾಯಗತಾಯ ಜಯ ಸಾಧಿಸಲು ಹಳ್ಳಿ–ಹಳ್ಳಿಗಳನ್ನು ಸುತ್ತಿ, ಹಿಂದೆ ಮಾಡಿದ್ದ ತಪ್ಪು ತಿದ್ದಿಕೊಳ್ಳುತ್ತಿದ್ದಾರೆ. ಎರಡು ಹಂತದ ಜನಜಾಗೃತಿ ಯಾತ್ರೆ ಮುಗಿಸಿ, 3ನೇ ಹಂತಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕ್ಷೇತ್ರದ ಸುಮಾರು 150 ಪ್ರಮುಖ ಗ್ರಾಮಗಳ ಪೈಕಿ ಅಂದಾಜು 70 ಗ್ರಾಮಗಳಿಗೆ ಭೇಟಿ ನೀಡಿದ್ದಾರೆ. ತಮ್ಮ ವರ್ಚಸ್ಸು ಹಾಗೂ ಶಾಸಕ, ಸಚಿವರಾಗಿ ಕ್ಷೇತ್ರದಲ್ಲಿ ತಾವು ಮಾಡಿದ್ದ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದಾರೆ.

2004ರಲ್ಲಿ ಚಂದ್ರಶೇಖರ ರೆಡ್ಡಿ ಮದನ ಅವರನ್ನು ಕಣಕ್ಕಿಳಿಸಿ ಕ್ಷೇತ್ರದಲ್ಲಿ ಮತ ಬ್ಯಾಂಕ್‌ ಸೃಷ್ಟಿಕೊಂಡು ಗೆಲುವು ಸಾಧಿಸಿದ್ದ ಜೆಡಿಎಸ್‌ ಈ ಬಾರಿ ಬಾಲರಾಜ್ ಗುತ್ತೇದಾರ ಅವರಿಗೆ ಟಿಕೆಟ್ ಘೋಷಿಸಿದೆ. ಬಾಲರಾಜ್ ಅವರ ಇಡೀ ಕುಟುಂಬ ಸೇಡಂನಲ್ಲಿ ಮನೆ ಖರೀದಿಸಿ ಮತದಾರರ ಮನೆ ಮನೆಗೆ ಎಡತಾಕುತ್ತಿದೆ.

ಪಾದಯಾತ್ರೆ, ಜನತಾ–ಜಲಧಾರೆ ಹಾಗೂ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಪಂಚರತ್ನ ಯಾತ್ರೆಗಳು ಬಾಲರಾಜ್ ಅವರಿಗೆ ಬಲ ತಂದಿವೆ. ಬಾಲರಾಜ್ ಬ್ರಿಗೇಡ್, ಶಾರದಾ ಚಾರಿಟಬಲ್ ಟ್ರಸ್ಟ್ ಹಾಗೂ ಸುಕಲ್ಪಾ ಫೌಂಡೇಷನ್‌ ಮೂಲಕ ಉದ್ಯೋಗ ಮೇಳದಂತಹ ಸಾಮಾಜಿಕ ಚಟುವಟಿಕೆ ಆಯೋಜಿಸಿ, ಜನರೊಂದಿಗೆ ಸಂಪರ್ಕ ಸಾಧಿಸಿದ್ದಾರೆ.

ಏಕಾಂಗಿ ಓಡಾಟ: ರಾಜಕುಮಾರ ಪಾಟೀಲ ತೇಲ್ಕೂರ ಹಾಗೂ ಬಾಲರಾಜ್ ಗುತ್ತೇದಾರ ಅವರ ಚುನಾವಣೆ ಪ್ರಚಾರಕ್ಕೆ ಕುಟುಂಬಸ್ಥರು ಮುಂದೆ ನಿಂತು ಓಡಾಡುತ್ತಿದ್ದಾರೆ. ಆದರೆ, ಡಾ. ಶರಣಪ್ರಕಾಶ ಪಾಟೀಲ ಅವರು ಏಕಾಂಗಿಯಾಗಿ ಕ್ಷೇತ್ರ ಸುತ್ತುತ್ತಿದ್ದಾರೆ.

ರಾಜಕುಮಾರ ಪಾಟೀಲ ತೇಲ್ಕೂರ ಅವರ ಗೆಲುವಿನಲ್ಲಿ ಸಹೋದರ ಶಿವಕುಮಾರ ಪಾಟೀಲ ತೇಲ್ಕೂರ ಅವರ ಪಾತ್ರ ಹಿರಿದು. ಆಂತರಿಕ ಭಿನ್ನಾಭಿಪ್ರಾಯದಿಂದ ಕೆಲ ದಿನಗಳ ಮಟ್ಟಿಗೆ ದೂರಾಗಿದ್ದ ಸಹೋದರರು ಮತ್ತೆ ಒಂದಾಗಿ, ಚುನಾವಣೆ ಎದುರಿಸಲು ಸಜ್ಜಾಗಿದ್ದಾರೆ.

ಜೆಡಿಎಸ್‌ ಮತಗಳಿಕೆ ಮೇಲೆ ಕ್ಷೇತ್ರದ ಫಲಿತಾಂಶ!

2018ರಲ್ಲಿ ರಾಜಕುಮಾರ ಪಾಟೀಲ ತೇಲ್ಕೂರ ಅವರು 7,200 ಮತಗಳ ಅಂತರದಿಂದ ಡಾ.ಶರಣಪ್ರಕಾಶ ಪಾಟೀಲರ ವಿರುದ್ಧ ಗೆದ್ದರು. ಜೆಡಿಎಸ್‌ ಅಭ್ಯರ್ಥಿ ಸುನಿತಾ ತಳವಾರ 2,075 ಮತಗಳನ್ನು ಮಾತ್ರ ಪಡೆದಿದ್ದರು.

ಈ ಬಾರಿ ಕಣದಲ್ಲಿ ಜೆಡಿಎಸ್‌ನಿಂದ ಬಾಲರಾಜ್‌ ಗುತ್ತೇದಾರ ಇದ್ದು, ಇಬ್ಬರೂ ನಾಯಕರಿಗೆ ಪ್ರಬಲ ಪೈಪೋಟಿ ನೀಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

ಜೆಡಿಎಸ್‌ಗೆ ಸಾಂಪ್ರದಾಯಿಕ ಮತಬ್ಯಾಂಕ್‌ ಇರುವ ಕಾರಣ, ಕಳೆದ ಮೂರು ಚುನಾವಣೆಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವಿನ ಗೆಲುವಿನ ಅಂತರ 12 ಸಾವಿರದಿಂದ 7 ಸಾವಿರ ಮತಗಳಷ್ಟಿದೆ. ಹೀಗಾಗಿ, ಬಾಲರಾಜ್‌ ಅವರ ಮತಗಳಿಕೆಯ ಮೇಲೆ ಕ್ಷೇತ್ರದ ಫಲಿತಾಂಶ ನಿಂತಿದೆ ಎಂಬುದು ಅವರ ವಾದ.

ಲಿಂಗಾಯತ ರೆಡ್ಡಿ ಪ್ರಾಬಲ್ಯ

1957ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಎರಡು ಸ್ಥಾನಗಳನ್ನು ಹೊಂದಿದ್ದು, 1962ರಲ್ಲಿ ರದ್ದಾಗಿ 1978ರವರೆಗೆ ಮೀಸಲು ಕ್ಷೇತ್ರವಾಯಿತು. 1978ರ ಚುನಾವಣೆಯಲ್ಲಿ ಇಂದಿರಾ ಗಾಂಧಿ ಅವರ ಕಾಂಗ್ರೆಸ್‌ನಿಂದ (ಐ) ಶೇರಖಾನ್‌ ಗೆಲುವು ಸಾಧಿಸಿದ್ದರು. ಅಲ್ಲಿಂದ ಇಲ್ಲಿಯವರೆಗೂ ಲಿಂಗಾಯತೇತರ ಅಭ್ಯರ್ಥಿ ಗೆದ್ದಿಲ್ಲ.

ಕ್ಷೇತ್ರದಲ್ಲಿ ಲಿಂಗಾಯತ ರೆಡ್ಡಿ ನಂತರ ಕಬ್ಬಲಿಗ, ಆರ್ಯ ಈಡಿಗ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದ್ದು, ಇವುಗಳದ್ದೇ ಇಲ್ಲಿ ನಿರ್ಣಾಯಕ ಪಾತ್ರ. ಒಟ್ಟು 16 ವಿಧಾನಸಭಾ ಚುನಾವಣೆ ನಡೆದಿದ್ದು, 4 ಬಾರಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಆಕಳ ಕರು ಚಿಹ್ನೆ), 3 ಬಾರಿ ಪಕ್ಷೇತರ, ತಲಾ ಒಂದು ಬಾರಿ ಜನತಾದಳ ಮತ್ತು ಜೆಡಿಎಸ್‌ ಪಡೆದುಕೊಂಡಿವೆ. ಎರಡು ಬಾರಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ (ಕೈ ಚಿಹ್ನೆ) 5 ಬಾರಿ ಕ್ಷೇತ್ರದ ಜನತೆ ಆಶೀರ್ವದಿಸಿದ್ದಾರೆ.

ಮಹಿಳಾ ಮತದಾರರು ಹೆಚ್ಚು

ಸೇಡಂ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗಿದೆ. 1,08,006 ಪುರುಷ ಹಾಗೂ 1,10,692 ಮಹಿಳಾ ಮತದಾರರು ಇದ್ದಾರೆ.

ಮಹಿಳಾ ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು ಹಲವು ತಂತ್ರಗಳನ್ನು ಹೆಣೆಯುತ್ತಿವೆ. ಟಿಕೆಟ್ ಆಕಾಂಕ್ಷಿಗಳು, ಪಕ್ಷದ ನಾಯಕರು ಮಹಿಳಾ ಮತದಾರರ ಮನೆ ಬಾಗಿಲು ತಟ್ಟುತ್ತಿದ್ದಾರೆ.

ಜನಾರ್ದನ ರೆಡ್ಡಿ ಸಂಬಂಧಿ ಸ್ಪರ್ಧೆ?

ಬಿಜೆಪಿಯಿಂದ ಹೊರ ಬಂದು ಸ್ವತಂತ್ರವಾಗಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಆರಂಭಿಸಿದ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಅವರ ದೂರದ ಸಂಬಂಧಿ ಲಲ್ಲೇಶ್‍ ರೆಡ್ಡಿ ಸ್ಪರ್ಧಿಸಬಹುದು ಎಂಬ ಸುದ್ದಿ ಕ್ಷೇತ್ರದಲ್ಲಿ ಹರಿದಾಡುತ್ತಿದೆ.

ಕಾಂಗ್ರೆಸ್‌ನಿಂದ ಡಾ. ಶರಣಪ್ರಕಾಶ ಪಾಟೀಲ ಟಿಕೆಟ್‌ಗಾಗಿ ಅರ್ಜಿ ಹಾಕಿದ್ದು, ‘ಆಪ್‌’ನಿಂದ ದೊಡ್ಡಪ್ಪಗೌಡ ಹೆಸರು ಕೇಳಿಬರುತ್ತಿದೆ. ಬಿಎಸ್‌ಪಿ ಅಭ್ಯರ್ಥಿ ಸ್ಪರ್ಧಿಸುವ ಸಾಧ್ಯತೆ ಇದೆ. ಹಾಲಿ ಶಾಸಕ ರಾಜಕುಮಾರ್ ಪಾಟೀಲ ತೇಲ್ಕೂರ ಅವರಿಗೇ ಬಿಜೆಪಿ ಟಿಕೆಟ್ ಸಿಗಬಹುದು ಎಂಬ ನಿರೀಕ್ಷೆ ಇದೆ.

‘ಕಮಲ’ ತೊರೆದ ಅತೃಪ್ತರು: ಬಿಜೆಪಿಯ ಮುಖಂಡರಾಗಿದ್ದ ರಾಜಶೇಖರ ನಿಲಂಗಿ ಮತ್ತು ಶಿವಲಿಂಗರೆಡ್ಡಿ ಪಾಟೀಲ ಬೆನಕನಹಳ್ಳಿ ಅವರು ‘ರಾಜಕುಮಾರ ಪಾಟೀಲ ತೇಲ್ಕೂರ ಅವರ ಕುಟುಂಬ ರಾಜಕಾರಣದಿಂದ ಬೇಸತ್ತು ಪಕ್ಷದಿಂದ ಹೊರಬಂದರು’ ಎಂಬುದು ಸ್ಥಳೀಯರ ಹೇಳಿಕೆ.

ಸೇಡಂ ಕ್ಷೇತ್ರದ ಪರಿಚಯ

ಹಾಲಿ ಶಾಸಕ; ರಾಜಕುಮಾರ ಪಾಟೀಲ ತೇಲ್ಕೂರ

2018ರ ಚುನಾವಣೆ ಫಲಿತಾಂಶ

ಬಿಜೆಪಿ; 80,668

ಕಾಂಗ್ರೆಸ್‌; 73,468

ಜೆಡಿಎಸ್‌; 2,075

––––––––––

ಹಾಲಿ ಮತದಾರರ ವಿವರ

ಪುರುಷ– 1,08,006

ಮಹಿಳೆ 1,10,692

ಒಟ್ಟು 2,18,698

ಮತಗಟ್ಟೆಗಳು; 260

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT