ಕಲಬುರಗಿ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನೇಕ ಯೋಜನೆಗಳಿಗೆ ಬ್ಯಾಂಕಿನ ಆರ್ಥಿಕ ಸಹಾಯ ಅತ್ಯಗತ್ಯ. ಜಿಲ್ಲೆಯಲ್ಲಿ ಬ್ಯಾಂಕುಗಳು ಸಾರ್ವಜನಿಕರಿಗೆ, ಉದ್ಯಮಿಗಳಿಗೆ ಹಾಗೂ ಸ್ವ–ಸಹಾಯ ಗುಂಪುಗಳ ಮಹಿಳೆಯರಿಗೆ ಕಾಲಮಿತಿಯಲ್ಲಿ ಸಾಲ ಸೌಲಭ್ಯ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಸಮಾಲೋಚನಾ ಸಮಿತಿ (ಡಿ.ಸಿ.ಸಿ), ಜಿಲ್ಲಾಮಟ್ಟದ ಪರಿಶೀಲನಾ ಸಮಿತಿ (ಡಿ.ಎಲ್.ಆರ್.ಸಿ) ಹಾಗೂ ವಿಶೇಷ ಜಿಲ್ಲಾಮಟ್ಟದ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ, ಪ್ರಗತಿ ಪರಿಶೀಲಿಸಿ ಅವರು ಮಾತನಾಡಿದರು.
‘ಬ್ಯಾಂಕ್‌ಗಳು ಕೃಷಿ ವಲಯದಲ್ಲಿ ₹1,487 ಕೋಟಿ ಗುರಿಯ ಪೈಕಿ ₹1,417 ಕೋಟಿ ಸಾಲ ವಿತರಿಸಿ, ಶೇ95.29ರಷ್ಟು ಗುರಿ ಸಾಧಿಸಿವೆ. ರೈತರಿಗೆ ಸಾಧ್ಯವಾದಲ್ಲಿ ಶೇ100ಕ್ಕಿಂತ ಹೆಚ್ಚಿನ ಸಾಲ ಸೌಲಭ್ಯ ನೀಡಿ’ ಎಂದು ಸಲಹೆ ನೀಡಿದರು.
ಪಿ.ಎಂ.ಸ್ವನಿಧಿ ಯೋಜನೆಯಡಿ ಜೂನ್ ತ್ರೈಮಾಸಿಕದ ಅಂತ್ಯಕ್ಕೆ ನಿಗದಿತ 11,081 ಗುರಿ ಪೈಕಿ 9,896 ಬೀದಿ ಬದಿ ವ್ಯಾಪಾರಿಗಳಿಗೆ ಮೊದಲನೇ ಕಂತಿನ ರೂಪದಲ್ಲಿ ತಲಾ ₹10 ಸಾವಿರ, ಎರಡನೇ ಕಂತಿಗೆ ಅರ್ಜಿ ಸಲ್ಲಿಸಿದ 3,675 ಜನರ ಪೈಕಿ 3,381 ಜನರಿಗೆ ತಲಾ ₹20 ಸಾವಿರ ಹಾಗೂ 3ನೇ ಕಂತಿಗೆ ಅರ್ಜಿ ಸಲ್ಲಿಸಿದ 481ರಲ್ಲಿ 440 ಜನರಿಗೆ ಸಾಲ ನೀಡಿರುವುದಕ್ಕೆ ಭಂವರ್‌ಸಿಂಗ್ ತೃಪ್ತಿ ವ್ಯಕ್ತಪಡಿಸಿದರು.
‘ಬೀದಿ ಬದಿ ವ್ಯಾಪಾರಿಗಳು ದಿನವಿಡೀ ದುಡಿದು ತಿನ್ನುವ ಬಡಜನರು. ಇಂಥವರಿಗೆ ಗುರಿಯಾಗಿಸಿ ಹೆಚ್ಚಿನ ಸಾಲ ಸೌಲಭ್ಯ ಒದಗಿಸಲು ಬ್ಯಾಂಕ್‌ಗಳು ಮುಂದಾಗಬೇಕು’ ಎಂದು ಸಲಹೆ ನೀಡಿದರು.
ಜಮಾ–ಖರ್ಚು ಅನುಪಾತ ಶೇ69.03:
ಎಸ್.ಬಿ.ಐನ ಜಿಲ್ಲಾ ಲೀಡ್ ಬ್ಯಾಂಕ್ ಚೀಫ್ ಮ್ಯಾನೇಜರ್ ಮತ್ತು ಸಮಿತಿಯ ಸಂಯೋಜಕ ಸದಾಶಿವ ವಿ. ರಾತ್ರಿಕರ್ ಮಾತನಾಡಿ, ‘ಜೂನ್ ತ್ರೈಮಾಸಿಕ ಅಂತ್ಯಕ್ಕೆ ಜಿಲ್ಲೆಯಲ್ಲಿ ಸಣ್ಣ ಮತ್ತು ಮಧ್ಯಮ ವರ್ಗದ ಉದ್ಯಮಿಗಳಿಗೆ ನಿಗದಿತ ಆರ್ಥಿಕ ಗುರಿ ₹351 ಕೋಟಿಗಳಿಗೆ ಎದುರಾಗಿ ₹917 ಕೋಟಿ ಸಾಲ ನೀಡಲಾಗಿದೆ. ಆದ್ಯತಾ ವಲಯದಡಿ ಶಿಕ್ಷಣ, ಹೌಸಿಂಗ್ ಸೇರಿದಂತೆ ₹2,384 ಕೋಟಿ ಸಾಲ ಒದಗಿಸಲಾಗಿದ್ದು, ಇದು ನಿಗದಿತ ಗುರಿಗೆ ಎದುರಾಗಿ ಶೇ112.50ರಷ್ಟು ಸಾಧನೆ ಮಾಡಿದೆ. ಇದರಲ್ಲಿ ₹823 ಕೋಟಿ ಆರ್ಥಿಕ ಹಿಂದುಳಿದ ಫಲಾನುಭವಿಗಳಿಗೆ ಸಾಲ ನೀಡಲಾಗಿದೆ. ಜಿಲ್ಲೆಗೆ ಆರ್.ಬಿ.ಐ ಕ್ರೆಡಿಟ್–ಡೆಬಿಟ್ ಅನುಪಾತ ಶೇ60ರಷ್ಟು ನಿಗದಿಪಡಿಸಿದ್ದು, ಪ್ರಸ್ತುತ ಜಿಲ್ಲೆಯ ಈ ಅನುಪಾತ ಶೇ69.03ರೊಂದಿಗೆ ಉತ್ತಮ ಸ್ಥಾನದಲ್ಲಿದೆ’ ಎಂದು ಸಭೆಗೆ ಮಾಹಿತಿ ನೀಡಿದರು.
ಇದೇ ವೇಳೆ, ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ, ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ ಸೇರಿದಂತೆ ಇಲಾಖಾವಾರು ಲಿಂಕ್ ಯೋಜನೆಗಳ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಎಸ್.ಬಿ.ಐ ಬ್ಯಾಂಕ್‌ನ ಪ್ರಾದೇಶಿಕ ವ್ಯವಸ್ಥಾಪಕ ಸುಮಾ ಎಚ್., ಸಾಲವಿಭಾಗದ ಪ್ರಧಾನ ವ್ಯವಸ್ಥಾಪಕ ರಾಮಸುಬ್ರಣ್ಯಂ, ಕೆ.ಎ.ಜಿ.ಬಿ. ಬ್ಯಾಂಕಿನ ವಲಯ ವ್ಯವಸ್ಥಾಪಕ ಶಾಂತಲಿಂಗಯ್ಯ ಹುಲಿಮನಿ ಸೇರಿದಂತೆ ವಿವಿಧ ಬ್ಯಾಂಕಿನ ಹಿರಿಯ ಅಧಿಕಾರಿಗಳು, ಜಿಲ್ಲೆಯ ವಿವಿಧ ಸರ್ಕಾರಿ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಮುದ್ರಾ ಸಾಲ ಇನ್ನೂ ಹೆಚ್ಚು ಕೊಡಿ
ಸಭೆಯಲ್ಲಿ ವಿಶೇಷ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಸಂಸದ ಡಾ.ಉಮೇಶ ಜಾಧವ್ ‘ಜಿಲ್ಲೆಯ ಸಮಗ್ರ ಬೆಳವಣಿಗೆಗೆ ನವೋದ್ಯಮ ಆರಂಭಿಸಲು ಮುಂದೆ ಬರುವ ನವೋದ್ಯಮಿಗಳಿಗೆ ಮುದ್ರಾ ಯೋಜನೆಯಡಿ ಇನ್ನೂ ಹೆಚ್ಚಿನ ಸಾಲ ಸೌಲಭ್ಯ ಕಲ್ಪಿಸಬೇಕು’ ಎಂದು ಸಲಹೆ ನೀಡಿದರು. ಮುದ್ರಾ ಯೋಜನೆಯಡಿ ಜೂನ್–2023 ತ್ರೈಮಾಸಿಕದ ಅಂತ್ಯಕ್ಕೆ ಶಿಶು ವಿಭಾಗದಲ್ಲಿ 19123 ಜನರಿಗೆ ₹62.44 ಕೋಟಿ ಕಿಶೋರ ವಿಭಾಗದಡಿ 7246 ಜನರಿಗೆ ₹84.07 ಕೋಟಿ ಹಾಗೂ ತರುಣ ವಿಭಾಗದಲ್ಲಿ 467 ಜನರಿಗೆ ₹37.97 ಕೋಟಿ ಸಾಲ ನೀಡಿದಕ್ಕೆ ಸಂಸದರು ಮೆಚ್ಚುಗೆ ವ್ಯಕ್ತಪಡಿಸಿದರು. ‘ಉದ್ಯಮಿಗಳಿಗೆ ಬ್ಯಾಂಕ್ ಸಾಲ ನೀಡಿದಲ್ಲಿ ಅದು ಉದ್ಯೋಗ ಸೃಜನೆಗೆ ಸಹಕಾರವಾಗಲಿದೆ. ಸ್ಥಳೀಯರಿಗೆ ಇಲ್ಲಿಯೆ ಉದ್ಯೋಗ ದೊರೆಯಲಿದೆ’ ಎಂದು ಅಭಿಪ್ರಾಯಪಟ್ಟರು.
‘₹2000 ನೋಟು ಸೆ.30ರೊಳಗೆ ಬ್ಯಾಂಕಿಗೆ ಸಲ್ಲಿಸಿ’
ಸಭೆಯಲ್ಲಿ ಮಾತನಾಡಿದ ಬೆಂಗಳೂರಿನ ಆರ್.ಬಿ.ಐ ಎಫ್.ಐ.ಡಿ.ಡಿ. ಮ್ಯಾನೇಜರ್ ಸುಪ್ರಿಯಾ ಬ್ಯಾನರ್ಜಿ ‘ಆರ್.ಬಿ.ಐ ನಿರ್ದೇಶನದಂತೆ ಪ್ರಸ್ತುತ ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿರುವ ₹2000 ಮುಖ ಬೆಲೆಯ ನೋಟುಗಳನ್ನು ಇದೇ ಸೆಪ್ಟೆಂಬರ್ 30ರೊಳಗೆ ಬ್ಯಾಂಕುಗಳಿಗೆ ಜಮೆ ಮಾಡಬೇಕು’ ಎಂದು ಸಲಹೆ ನೀಡಿದರು. ‘ಇನ್ನು ₹10 ಮುಖಬೆಲೆಯ ನಾಣ್ಯಗಳು ಕಾನೂನು ಬದ್ಧವಾಗಿ ಚಲಾವಣೆಯಲ್ಲಿವೆ. ಎಲ್ಲರೂ ಇವುಗಳನ್ನು ವಹಿವಾಟಿಗೆ ಬಳಸಬೇಕು. ಈ ನಾಣ್ಯಗಳನ್ನು ಸ್ವೀಕರಿಸಲು ಯಾರೂ ನಿರಾಕರಿಸುವಂತಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.