ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗುರಿ ಮುಟ್ಟದ ಫಲಾನುಭವಿಗಳ ಆಯ್ಕೆ‌‌: ಸಚಿವ ತಂಗಡಗಿ ಸಿಡಿಮಿಡಿ

ಕಲಬುರಗಿ ವಿಭಾಗದ ಹಿಂದುಳಿದ‌ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ
Published 28 ಆಗಸ್ಟ್ 2023, 16:44 IST
Last Updated 28 ಆಗಸ್ಟ್ 2023, 16:44 IST
ಅಕ್ಷರ ಗಾತ್ರ

ಕಲಬುರಗಿ: ‘ಫಲಾನುಭವಿಗಳ ಆಯ್ಕೆಯಲ್ಲಿ ಹಿಂದಿನ ವರ್ಷದ ಗುರಿಯನ್ನು ಇದುವರೆಗೆ ತಲುಪಲು ಸಾಧ್ಯವಾಗಿಲ್ಲವೇ?’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ‌ ಇಲಾಖೆ ಸಚಿವ ಶಿವರಾಜ ಎಸ್.ತಂಗಡಗಿ ಅವರು ಅಧಿಕಾರಿಗಳ ವಿರುದ್ಧ ಸಿಡಿಮಿಡಿಗೊಂಡರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಕಲಬುರಗಿ ವಿಭಾಗದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ವಿವಿಧ ನಿಗಮಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಬೇಸರ ವ್ಯಕ್ತಪಡಿಸಿದರು.

‘ಹಿಂದುಳಿದ ವರ್ಗದವರಿಗೆ‌ ನ್ಯಾಯ ಕೊಡಿಸುವತ್ತ ಅಧಿಕಾರಿಗಳು ಮುಂದಾಗಬೇಕು. ಫಲಾನುಭವಿಗಳ ಆಯ್ಕೆ‌‌ಯ ವಿಚಾರದಲ್ಲಿ ಶಾಸಕರು ಆಯ್ಕೆ‌ ಪಟ್ಟಿ ಅಂತಿಮಗೊಳಿಸಿಲ್ಲ ಎಂದು ಹೇಳುವುದನ್ನು ಒಪ್ಪುವುದಿಲ್ಲ. ಶಾಸಕರಿಗೆ ಹತ್ತಾರು ಕೆಲಸ‌ಗಳು ಇರುತ್ತವೆ. ಶಾಸಕರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಆಯ್ಕೆ‌ ಅಂತಿಮಗೊಳಿಸಬೇಕು’ ಎಂದು‌ ಅಧಿಕಾರಿಗಳಿಗೆ ಕಟ್ಟುನಿಟ್ಟಿನ‌ ಸೂಚನೆ ಕೊಟ್ಟರು.

‘ಇಲಾಖೆ ವ್ಯಾಪ್ತಿಯ ನಿಗಮಗಳಲ್ಲಿ ಹಿಂದಿನ ಹಾಗೂ ಪ್ರಸಕ್ತ ವರ್ಷದ ಫಲಾನುಭವಿಗಳ ಆಯ್ಕೆ‌ಯನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ಪೂರ್ಣಗೊಳಿಸಬೇಕು’ ಎಂದರು.

ವಿಧಾನ ಪರಿಷತ್ ಸದಸ್ಯ ತಿಪ್ಪಣಪ್ಪ ಕಮಕನೂರ ಮಾತನಾಡಿ,‌ ‘ಬಿಸಿಎಂ ನಿಗಮಕ್ಕೆ ಸಾಲ‌ ಕೋರಿ ಬರುವವರಿಗೆ ಕಲಬುರಗಿ ಕಚೇರಿಯಲ್ಲಿ ಸ್ಪಂದನೆ ಸಿಗುತ್ತಿಲ್ಲ. ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಸಾಲ ಕೊಡಲ್ಲ. ನಿಗಮವು ಸಾಲ ನೀಡಲು ಸತಾಯಿಸಿದರೆ ಬಡವರು ಎಲ್ಲಿಗೆ ಹೋಗಬೇಕು’ ಎಂದು ಪ್ರಶ್ನಿಸಿದರು.‌

‘ಬಡವರ ಕಲ್ಯಾಣಕ್ಕೆ ನಿಗಮ ಸ್ಥಾಪಿಸಿ ನಿಮಗೆ ಕಾರು, ಕಚೇರಿ, ಸಂಬಳ ನೀಡಲಾಗುತ್ತಿದೆ. ಬಡವರ ಕಲ್ಯಾಣ ಮಾಡದಿದ್ದರೆ‌ ನೀವಿದ್ದು ಏನು ಪ್ರಯೋಜನ?’ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸಚಿವರು ತಮ್ಮ ತವರು ಕ್ಷೇತ್ರ ಕನಕಗಿರಿಯಲ್ಲೇ ಗಂಗಾ ಕಲ್ಯಾಣ‌ ಯೋಜನೆ ಇನ್ನೂ ಅನುಷ್ಠಾನ ಆಗದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ‘ಒಂದು ಕೆಲಸ‌ ಮಾಡಿ, ಇಲ್ಲ ಶಿಸ್ತು ಕ್ರಮಕ್ಕೆ ಎದುರಾಗಿ’ ಎಂದು ತಾಲ್ಲೂಕು ಅಧಿಕಾರಿ ಕರೆಪ್ಪ ಅವರಿಗೆ ಎಚ್ಚಸಿದರು. ‘ಮುಂದಿನ 15 ದಿನದಲ್ಲಿ ಕೊಪ್ಪಳ ಜಿಲ್ಲೆಯ ಎಲ್ಲಾ ಗಂಗಾ ಕಲ್ಯಾಣ ಯೋಜನೆಗಳನ್ನು ಪೂರೈಸಬೇಕು’ ಎಂದು ಸೂಚನೆ ನೀಡಿದರು.

‘ಚಿತ್ತಾಪುರ ಪಟ್ಟಣದಲ್ಲಿ‌ ₹1 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ಭವನಕ್ಕೆ ಬಾಕಿ ₹50 ಲಕ್ಷ ತಕ್ಷಣವೇ ಬಿಡುಗಡೆ ಮಾಡಲಾಗುವುದು’ ಎಂದರು.

ಸಭೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಸಿ.ಕೆ.ಜಗದೀಶ‌, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕಾಂತರಾಜ್, ಪ್ರಧಾನ ವ್ಯವಸ್ಥಾಪಕ (ಹಣಕಾಸು) ಪಂಚಲಿಂಗ ಸ್ವಾಮಿ, ಮರಾಠಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ ಪಾಘೋಜಿ, ವಿಶ್ವಕರ್ಮ ಅಭಿವೃದ್ಧಿ ನಿಗಮದ ಎಂ.ಡಿ. ಭಾವನಾ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಎಂಡಿ ಗೀತಾ ಎಲ್.ಆರ್., ಸಚಿವರ ಆಪ್ತ ಕಾರ್ಯದರ್ಶಿ ಜಿ.ಎಸ್.ಮಧೂಸೂಧನ ಇದ್ದರು.

ಸಮುದಾಯ ಭವನಗಳನ್ನು ಲೋಕೋಪಯೋಗಿ ಅಧಿಕಾರಿಗಳಿಂದ ವಶಕ್ಕೆ ಪಡೆದು ಸುಣ್ಣ-ಬಣ್ಣ ಬಳಿದು ಲೋಕಾರ್ಪಣೆ ಮಾಡಬೇಕು. ಬಾಕಿ ಉಳಿದ ಸಮುದಾಯ ಭವನಗಳ ಮಾಹಿತಿ ನೀಡಬೇಕು
ಶಿವರಾಜ ಎಸ್.ತಂಗಡಗಿ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ‌ ಇಲಾಖೆ ಸಚಿವ

‘ಮಕ್ಕಳಿಗೆ ಗುಣಮಟ್ಟದ ಆಹಾರ ಪೂರೈಸಿ’

‘ವಸತಿ ನಿಲಯದ ಮಕ್ಕಳಿಗೆ ಗುಣಮಟ್ಟದ ಆಹಾರ‌ ಪೂರೈಸಬೇಕು. ಶುಚಿತ್ವ ಕಾಪಾಡಿ ಆಗಾಗ ಮಕ್ಕಳನ್ನು ಆರೋಗ್ಯ ತಪಾಸಣೆಗೆ ಒಳಪಡಿಸಬೇಕು. ಫಲಿತಾಂಶ‌ ಸುಧಾರಣೆಗೂ ಆದ್ಯತೆ ನೀಡಬೇಕು’ ಎಂದು ಸಚಿವ ಶಿವರಾಜ ಎಸ್.ತಂಗಡಗಿ ತಾಕೀತು ಮಾಡಿದರು. ‘ಮಂಜೂರಾತಿ ಸಂಖ್ಯೆಗಿಂತ ಮಕ್ಕಳು ಹೆಚ್ಚಿದ್ದಲ್ಲಿ ಕಟ್ಟಡ ಬಾಡಿಗೆ ಪಡೆಯಿರಿ. ವಸತಿ ನಿಲಯ ಅಭಿವೃದ್ಧಿ ಪೋಷಕರ ಸಮಿತಿಗಳ ಮಾಸಿಕ ಸಭೆ ನಡೆಸಿ ಸಲಹೆ ಪಡೆಯಬೇಕು. ವಸತಿ‌ ನಿಲಯಕ್ಕೆ ಆಗಾಗ ಭೇಟಿ ನೀಡಿ ಮಕ್ಕಳೊಂದಿಗೆ ಊಟ ಸೇವಿಸಿ. ವಸತಿ‌ ನಿಲಯ ಸ್ವಂತ‌ ಕಟ್ಟಡ ನಿರ್ಮಾಣಕ್ಕೆ ನಿವೇಶನ‌ ಲಭ್ಯವಿದ್ದಲ್ಲಿ ಮಾಹಿತಿ ನೀಡಿ. ಕೆಕೆಆರ್‌ಡಿಬಿಯಿಂದ ಅನುದಾನ ದೊರಕಿಸಿಕೊಡಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT