ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳಗಿ | ಲಿಂಗ ಪ್ರತಿಷ್ಠಾಪನೆ, ಗೋಪುರ ಕಳಸಾರೋಹಣ ಇಂದು

Published 19 ನವೆಂಬರ್ 2023, 5:58 IST
Last Updated 19 ನವೆಂಬರ್ 2023, 5:58 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಕಾಳಗಿ:‌‌ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಹಾರಕೂಡ ಸಂಸ್ಥಾನ ಹಿರೇಮಠ ತನ್ನದೆಯಾದ ಇತಿಹಾಸ ಹೊಂದಿದೆ. ಪ್ರಸ್ತುತ ಪೀಠಾಧಿಪತಿ ಚನ್ನವೀರ ಶಿವಾಚಾರ್ಯರಿಂದಲೂ ಶ್ರೀಮಠ ಅಪಾರ ಭಕ್ತ ಸಮೂಹವನ್ನು ಹೊಂದಿದೆ. ಶ್ರೀಗಳು ಎಂಟನೇ ಪೀಠಾಧಿಪತಿಗಳಾಗಿದ್ದಾರೆ. ಕಾಳಗಿಯಲ್ಲಿ ನಂದೂರ ಶಿವಲಿಂಗೇಶ್ವರ ಗದ್ದುಗೆ ಎನ್ನಲಾದ ಲಿಂಗೈಕ್ಯ ಸಿದ್ದಲಿಂಗ ಶಿವಾಚಾರ್ಯರು ಹಾರಕೂಡ ಮಠದ ಎರಡನೇ ಪೀಠಾಧಿಪತಿಯಾಗಿದ್ದರು ಎಂದು ತಿಳಿದುಬಂದಿದೆ.

ಭರತನೂರ ಮುಖ್ಯರಸ್ತೆ ಬಲಬದಿಯಲ್ಲಿದ್ದ ಪುಟ್ಟ ಕಟ್ಟೆಯು ಇಂದು ಹಾರಕೂಡ ಸಂಸ್ಥಾನದ 2ನೇ ಪೀಠಾಧಿಪತಿ ಗದ್ದುಗೆಯ ಗೋಪುರವಾಗಿ ಹೊರಹೊಮ್ಮಿದೆ.

ಹಿನ್ನೆಲೆ

ಭರತನೂರ ವಿರಕ್ತಮಠದ ಕರ್ತೃ ಗುರುನಂಜೇಶ್ವರ ಶಿವಯೋಗಿಗಳು ಮತ್ತು ಸಿದ್ದಲಿಂಗ ಶಿವಾಚಾರ್ಯರು ಜತೆಗೂಡಿ ಕಲಬುರಗಿ ಸಮೀಪದ ನಂದೂರ ಗ್ರಾಮದ ಭಕ್ತರೊಬ್ಬರ ಮನೆಯಲ್ಲಿ ಪೂಜೆ, ಪ್ರಸಾದ ಮಾಡಿ ವಾಪಸ್ ಬರುತ್ತಿದ್ದರು. ಆಗ ಕಾಳಗಿ-ಭರತನೂರ ಮಾರ್ಗಮಧ್ಯೆ ಹಳ್ಳದ ದಂಡೆಗೆ ಸೇಂದಿ ಗಿಡಗಳ ವನವಿತ್ತು. ಇಲ್ಲಿಗೆ ಬರುತ್ತಿದ್ದಂತೆ ನಾನು ಇಲ್ಲೇ ಐಕ್ಯ ಆಗುವೆ, ನೀನು ಮುಂದೆ ಕಾಣುವ ಆಲದ ಮರದ ಹತ್ತಿರ ನೆಲೆಸು ಎಂದು ಹೇಳಿ ಸಿದ್ದಲಿಂಗ ಶಿವಾಚಾರ್ಯರು ಕಾಳಗಿಯಲ್ಲೇ ದೇಹ ಬಿಟ್ಟಿದ್ದಾರೆ. ಅಂದಿನಿಂದ ಈ ಜಾಗದಲ್ಲಿ ಸಣ್ಣ ಕಟ್ಟೆಯೊಂದನ್ನು ಕಟ್ಟಲಾಗಿ ‘ನಂದೂರ ಶಿವಲಿಂಗೇಶ್ವರ’ ಗದ್ದುಗೆ ಎಂದು ಕರೆಯುತ್ತ ಬರಲಾಗಿದೆ ಎನ್ನುತ್ತಾರೆ ಹಿರಿಯರು.

ಪ್ರತಿವರ್ಷ ಶ್ರಾವಣ ಮಾಸ ನಂತರದ ಗುರುವಾರ ಖಾಂಡ ಮಾಡುತ್ತ ಹೂರಣಗಡಬು-ತುಪ್ಪದ ನೈವೇದ್ಯ ಸಲ್ಲಿಸಿ ಬಂದ ಭಕ್ತರಿಗೂ ಅದನ್ನೇ ಪ್ರಸಾದವಾಗಿ ಸ್ವೀಕರಿಸುತ್ತಾರೆ. ಭಕ್ತಗಣ ಹೆಚ್ಚುತ್ತಿದ್ದಂತೆ ಈ ಸ್ಥಳ ಕಟ್ಟೆಯಿಂದ ಗುಡಿ-ಗೋಪುರವಾಗಿ ನಿರ್ಮಾಣಗೊಂಡು ಡಾ.ಚನ್ನವೀರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಲಿಂಗ ಪ್ರತಿಷ್ಠಾಪನೆ ಹಾಗೂ ಗೋಪುರ ಕಳಸಾರೋಹಣ ಕಾರ್ಯಕ್ರಮಕ್ಕೆ ಸಜ್ಜುಗೊಂಡಿದೆ.

ಕಾರ್ಯಕ್ರಮಗಳ ವಿವರ:

ನ.19ರಂದು ಬೆಳಿಗ್ಗೆ 7ಗಂಟೆಗೆ ವಿಶೇಷ ಪೂಜೆ. 10ಗಂಟೆಗೆ ಬಸ್ ನಿಲ್ದಾಣದಿಂದ ಡಾ.ಚನ್ನವೀರ ಶಿವಾಚಾರ್ಯರ ಮೆರವಣಿಗೆ. 11ಗಂಟೆಗೆ ಭರತನೂರಿನ ಚಿಕ್ಕಗುರುನಂಜೇಶ್ವರ ಸ್ವಾಮೀಜಿ, ಸ್ಥಳೀಯ ಹಿರೇಮಠದ ನೀಲಕಂಠ ಮರಿದೇವರ ಉಪಸ್ಥಿತಿಯಲ್ಲಿ ಲಿಂಗ ಪ್ರತಿಷ್ಠಾಪನೆ ಮತ್ತು ಗೋಪುರಕ್ಕೆ ಕಳಸಾರೋಹಣ ನೆರವೇರುವುದು.

ಬಳಿಕ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ ಪರಿವಾರದಿಂದ ಹಾರಕೂಡ ಪೂಜ್ಯರಿಗೆ ನಾಣ್ಯದಲ್ಲಿ ತುಲಾಭಾರ, ಆಮೇಲೆ ಧಾರ್ಮಿಕ ಸಭೆ ಜರುಗಲಿದ್ದು ಕೇಂದ್ರ ಸಚಿವ ಭಗವಂತ ಖೂಬಾ, ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪ ದರ್ಶನಾಪುರ, ಶಾಸಕ ಅಲ್ಲಮಪ್ರಭು ಪಾಟೀಲ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮಶೇಖರ ಗೋನಾಯಕ, ಮುಖಂಡ ಸುಭಾಷ ರಾಠೋಡ, ಶಾಸಕ ಡಾ.ಅವಿನಾಶ ಜಾಧವ ಭಾಗಿಯಾಗಲಿದ್ದಾರೆ.

ಭರದ ಸಿದ್ಧತೆ

ಕಾಳಗಿಯಲ್ಲಿ ಮೊದಲಬಾರಿಗೆ ದೊಡ್ಡದಾದ ಪೆಂಡಲ್ ಹೊಡೆದಿದ್ದು, 6ಸಾವಿರ ಕುರ್ಚಿಗಳ ವ್ಯವಸ್ಥೆ, ಬರುವ 10ಸಾವಿರಕ್ಕೂ ಹೆಚ್ಚು ಭಕ್ತರಿಗೆ ಹೂರಣಗಡಬು-ತುಪ್ಪದ ಪ್ರಸಾದ ವಿತರಣೆ ತಯಾರಿ ಜೋರಾಗಿದೆ. ಸೇವಾಭಕ್ತರಿಗೆ ಸನ್ಮಾನ ಜರುಗಲಿದೆ.

ಇದೊಂದು ಅಚ್ಚುಕಟ್ಟಾದ ಐತಿಹಾಸಿಕ ಕಾರ್ಯಕ್ರಮದ ಅವಕಾಶ ನನಗೆ ಸಿಕ್ಕಿದ್ದು ಎರಡು ವಾರದಿಂದ ಸಿದ್ಧತೆಯಲ್ಲಿ ತೊಡಗಿಸಿಕೊಂಡಿರುವೆ.
ರಾಜೇಶ ಗುತ್ತೇದಾರ, ಸ್ವಾಗತ ಸಮಿತಿ ಅಧ್ಯಕ್ಷ
ಇಪ್ಪತ್ತು ವರ್ಷಗಳಿಂದ ಇಲ್ಲಿನ ಸ್ವರೂಪವೇ ಬೇರೆಯಾಗಿದೆ. ಇನ್ನು ಮುಂದೆ ಡಾ.ಚನ್ನವೀರ ಶಿವಾಚಾರ್ಯರು ಪ್ರತಿ ತಿಂಗಳಿಗೊಮ್ಮೆ ಇಲ್ಲಿಗೆ ಭೇಟಿ ಕೊಡುವಂತಾಗಲಿ.
ನೀಲಕಂಠಪ್ಪ ಕುಡಳ್ಳಿ, ಸ್ವಾಗತ ಸಮಿತಿ ಗೌರವಾಧ್ಯಕ್ಷ
ಕಾರ್ಯಕ್ರಮಕ್ಕೆ ಸಿದ್ಧಪಡಿಸಲಾದ ಭವ್ಯ ವೇದಿಕೆ
ಕಾರ್ಯಕ್ರಮಕ್ಕೆ ಸಿದ್ಧಪಡಿಸಲಾದ ಭವ್ಯ ವೇದಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT