ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ | ಕೌಶಲ ಅಭಿವೃದ್ಧಿ ವಿ.ವಿ: ಚಿಗುರಿದ ಕನಸು

ಕಲ್ಯಾಣ ಕರ್ನಾಟಕದಲ್ಲಿ ಯಥೇಚ್ಛವಾಗಿದೆ ಪ್ರಾದೇಶಿಕ, ಐತಿಹಾಸಿಕ, ಮಾನವ ಸಂಪನ್ಮೂಲ
Last Updated 22 ಫೆಬ್ರುವರಿ 2022, 4:44 IST
ಅಕ್ಷರ ಗಾತ್ರ

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗ ದಲ್ಲಿ ಕೌಶಲ ಅಭಿವೃದ್ಧಿ ವಿಶ್ವವಿದ್ಯಾಲಯ ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಸಾರಿಗೆ ಸಚಿವರೂ ಆದ371 (ಜೆ) ಕಲಂ ಅನುಷ್ಠಾನದ ಪ್ರಗತಿ ಪರಿಶೀಲನೆ ಮತ್ತು ಪರಾಮರ್ಶೆಯ ಸಂಪುಟ ಉಪ ಸಮಿತಿಯ ಅಧ್ಯಕ್ಷ ಬಿ.ಶ್ರೀರಾಮುಲು ಈ ಹಿಂದೆಯೇ ಘೋಷಣೆ ಮಾಡಿದ್ದಾರೆ. ಸಹಜವಾಗಿಯೇ ಇದು ಪ್ರಸಕ್ತ ಬಜೆಟ್‌ ನಲ್ಲಿ ಘೋಷಣೆ ಆಗಲಿದೆ ಎಂಬ ತವಕ ಈ ಭಾಗದ ಯುವ ಸಮುದಾಯದಲ್ಲಿ ಪುಟಿದಿದೆ.

ಕಲಬುರಗಿಯಲ್ಲಿ ಈಚೆಗೆ ನಡೆದ ಸಮಿತಿಯ ಸಭೆಯಲ್ಲಿಯೇ ಇದರ ಚರ್ಚೆ ಕೂಡ ನಡೆಸಲಾಗಿದೆ.ಸಾಂಪ್ರದಾಯಿಕ ತರಬೇತಿಯ ಬದಲು, ಫಲಿತಾಂಶ ಆಧರಿತ ತರಬೇತಿಯ ಅಗತ್ಯವಿದೆ. ಈಗಿನ ಅಗತ್ಯಗಳಿಗೆ ತಕ್ಕಂತೆ ಯುವಕರಲ್ಲಿ ಕೌಶಲ ಬೆಳೆಸಬೇಕಿದೆ. ಈ ಆಶಯದೊಂದಿಗೆ ಕೌಶಲ ವಿಶ್ವವಿದ್ಯಾಲಯ ಸ್ಥಾಪನೆಗೆ ಕ್ರಿಯಾಯೋಜನೆ ಸಿದ್ಧಪಡಿಸಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಇಲ್ಲಿನಮಾನವ ಸಂಪನ್ಮೂಲ ಸದ್ಬಳಕೆ ಮಾಡಿಕೊಂಡು ಸಮಗ್ರ ಅಭಿವೃದ್ಧಿ ಸಾಧಿಸಲು ಇದು ಅಗತ್ಯವೂ ಆಗಿದೆ. ತಜ್ಞರೊಂದಿಗೆ ಚರ್ಚೆ ಕೂಡ ನಡೆಸಿದ್ದೇವೆ. ಕೌಶಲ ಅಭಿವೃದ್ಧಿ ಈ ಭಾಗದಲ್ಲಿ ಎಷ್ಟು ಮಹತ್ವ ಅವಶ್ಯಕ ಎಂಬುದನ್ನು ಗಮನದಲ್ಲಿ ಇಟ್ಟುಕೊಂಡು ಈ ವಿಶ್ವವಿದ್ಯಾಲಯ ಸ್ಥಾಪಿಸಲು ಉತ್ಸುಕರಾಗಿದ್ದೇವೆ ಎನ್ನುತ್ತಾರೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ.

ಕೆಕೆಆರ್‌ಡಿಬಿ ಅನುದಾನದಲ್ಲಿ ಈ ವಿಶ್ವವಿದ್ಯಾಲಯ ಸ್ಥಾಪಿಸುವುದಕ್ಕೂ ಆಸಕ್ತರಾಗಿದ್ದೇವೆ. ಸಾಧ್ಯವಾದರೆ ಇದೇ ಬಜೆಟ್‌ನಲ್ಲಿ ಘೋಷಣೆ ಮಾಡಬೇಕು ಎಂಬುದು ಕೂಡ ನಮ್ಮ ಹಂಬಲ ಎಂದೂ ರೇವೂರ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಕಲಬುರ್ಗಿ ವಿಜನ್‌–2050’ನಲ್ಲಿ ಕೌಶಲ ಅಭಿವೃದ್ಧಿಗೆ ಹೆಚ್ಚು ಒತ್ತುನೀಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಕೂಡ ಮೇಲಿಂದ ಮೇಲೆ ಹೇಳುತ್ತಲೇ ಇದ್ದಾರೆ.

ಏನೇನು ಸಾಧ್ಯತೆ ಇದೆ?: ಈ ಎಲ್ಲ ಬೆಳವಣಿಗೆಗಳ ಕಾರಣ ಕಲ್ಯಾಣ ಕರ್ನಾಟಕ ಭಾಗದ ಯುವಜನರಲ್ಲಿ ಸಹಜವಾಗಿಯೇ ಹೊಸ ಕನಸುಗಳು ಹುಟ್ಟಿಕೊಂಡಿವೆ. ಪರಂಪರೆ,ಕೃಷಿ, ಶಿಕ್ಷಣ, ಸಾರಿಗೆ, ಆಹಾರೋತ್ಪನ್ನ, ಗುಡಿಕೈಗಾರಿಕೆ ಹಾಗೂ ಆರೋಗ್ಯ ಮೂಲಸೌಕರ್ಯ ಹೀಗೆ ಹಲವು ಆಯಾಮಗಳಲ್ಲಿಯೂ ಕೌಶಲಯುತ ಪೀಳಿಗೆ ಸನ್ನದ್ಧಗೊಳಿಸಲು ಸಾಧ್ಯವಿದೆ.

ಉದಾಹರಣೆಗೆ; ದಕ್ಷಿಣ ಭಾರತಕ್ಕೆ ಅತ್ಯಂತ ಗುಣಮಟ್ಟದ ತೊಗರಿ ಸರಬರಾಜು ಆಗುತ್ತಿರುವುದು ಕಲಬುರಗಿಯಿಂದ. ಇದಕ್ಕೆ ಭೌಗೋಳಿಕ ವಿಶೇಷತೆ ಮಾನ್ಯತೆ ಕೂಡ ಸಿಕ್ಕಿದೆ. ಹೀಗಾಗಿ, ವಿಶ್ವಮಟ್ಟದಲ್ಲಿ ಇದರ ಮಾರುಕಟ್ಟೆ ಕಂಡುಕೊಳ್ಳಲು ಸಾಕಷ್ಟು ಅವಕಾಶಗಳಿವೆ. ಇಂಥ ಅವಕಾಶಗಳನ್ನು ಹುಟ್ಟುಹಾಕಲು ಸಮರ್ಥ ಕೌಶಲ ಹೊಂದಿದ ಮಾನವಶಕ್ತಿ ಬೇಕು. ಸದ್ಯಕ್ಕೆ ತೊಗರಿಬೇಳೆಯನ್ನು ಅಡುಗೆಗೆ ಮಾತ್ರ ಬಳಸಲಾಗುತ್ತಿದೆ. ಇದರ ಉಪ ಉತ್ಪನ್ನಗಳನ್ನು ಕಂಡುಕೊಳ್ಳಲು ಆಗಿಲ್ಲ. ಸಾಂಪ್ರದಾಯಿಕ ಮಷಿನರಿಗಳನ್ನು ಬಳಸುವ ದಾಲ್‌ಮಿಲ್‌ಗಳಿಗೂ ಹೈಟೆಕ್‌ ಸ್ಪರ್ಶ ನೀಡಲು ಆಗಿಲ್ಲ. ಸ್ಥಳೀಯರಲ್ಲಿ ಇದರ ಬಗೆಗಿನ ಕೌಶಲವನ್ನು ಅಭಿವೃದ್ಧಿಪಡಿಸಿದರೆ ಇದು ಸಾಧ್ಯವಿದೆ ಎನ್ನುವುದು ತಜ್ಞರ ಅಭಿಪ್ರಾಯ.‌

ಕೌಶಲ ವೃದ್ಧಿಗೆ ವಿಪುಲ ಅವಕಾಶ ಇವೆ
‘ಕೌಶಲ ವಿಶ್ವವಿದ್ಯಾಲಯ ಕಲಬುರಗಿಯಲ್ಲಿ ಆದರೆ ವಿಫುಲ ಅವಕಾಶಗಳು ಹುಟ್ಟಲಿವೆ. ಕಲಬುರಗಿಯ ಬೇಳೆ, ವಿಜಯಪುರದ ದ್ರಾಕ್ಷಿ, ರಾಯಚೂರು– ಕೊಪ್ಪಳದ ಅಕ್ಕಿ, ಸಿರಿಧಾನ್ಯಗಳು ದೇಶದಾದ್ಯಂತ ಬಳಸುವ ಆಹಾರೋತ್ಪನ್ನಗಳು. ಇವುಗಳಲ್ಲಿ ವೈವಿಧ್ಯಮಯ ಉತ್ಪಾದನೆ ಕಂಡುಕೊಂಡು, ಬ್ರ್ಯಾಂಡ್‌ ಮಾಡಬೇಕಾಗಿದೆ. ಮೇಲಾಗಿ, ಐತಿಹಾಸಿಕ, ಪ್ರವಾಸಿ ತಾಣ, ಸೌರವಿದ್ಯುತ್‌, ಗುಡಿ ಕೈಗಾರಿಕೆ, ಕಟ್ಟಡ ನಿರ್ಮಾಣಗಳಲ್ಲಿ ಯಥೇಚ್ಚ ಅವಕಾಶಗಳಿವೆ. ಈ ಹಿಂದೆ ಇದ್ದ ಸಾಂಪ್ರದಾಯಿಕ ವೃತ್ತಿ, ಜನಪದ ಕಲೆಗಳನ್ನೂ ಉದ್ಯಮವಾಗಿ ಪರಿವರ್ತನೆ ಮಾಡಲು ಸಾಧ್ಯವಿದೆ. ಹಂಪಿಯಲ್ಲಿರುವ ಸಂಗೀತ ಮಹಲ್‌ ಇದಕ್ಕೆ ಉತ್ತಮ ಉದಾಹರಣೆ. ಕಲ್ಲಿನಲ್ಲೂ ವಾದ್ಯನಾದ ಕೇಳಿಸುವಂಥ ಕೌಶಲ ನಮ್ಮ ಹಿರಿಯರಲ್ಲಿ ಇತ್ತು. ಆದರೆ, ಅದು ಮರೆತುಹೋಗಿದೆ. ಆ ಕೌಶಲವನ್ನು ಬಳಸಿಕೊಂಡಿದ್ದರೆ ವಿಶ್ವದ ಶ್ರೇಷ್ಠ ಪ್ರಯೋಗವಾಗುತ್ತಿತ್ತು. ಇನ್ನು ಮುಂದಾದರೂ ನಾವು ಇಂಥ ಪೀಳಿಗೆ ಸಿದ್ಧಗೊಳಿಸುವುದು ಅಗತ್ಯವಿದೆ’ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಎಂಬಿಎ ವಿಭಾಗದ ಪ್ರಾಧ್ಯಾಪಕ ಪ್ರೊ.ಎಂ.ವಿ. ಅಳಗವಾಡಿ ಹೇಳಿದರು.

ರಾಷ್ಟ್ರಮಟ್ಟದಲ್ಲಿ ‘ನ್ಯಾಷನಲ್‌ ಸ್ಕಿಲ್‌ ಕ್ವಾಲಿಫಿಕೇಷನ್‌ ಫ್ರೇಮರ್ಕ್‌’ ಹಾಗೂ ‘ಸ್ಕಿಲ್‌ ಸೆಕ್ಟರ್ಸ್‌ ಕೌನ್ಸಿಲ್‌’ಗಳು ಇವೆ. ಇವುಗಳೊಂದಿಗೆ ಒಡಂಬಡಿಕೆ ಮಾಡಿಕೊಂಡರೆ ವಿಶ್ವಮಟ್ಟದಲ್ಲಿ ಬಾಗಿಲು ತೆರೆಯಲಿದೆ. ದೇಶದಲ್ಲಿ ಬೇರೆ ಕಡೆ ಇಂಥ ಒಂದು ವಿ.ವಿ ಇದೆಯೇ ಇಲ್ಲವೇ ನನಗೆ ಗೊತ್ತಿಲ್ಲ. ಆದರೆ, ಹಲವು ವಿಶ್ವವಿದ್ಯಾಲಯಗಳಲ್ಲಿ ವಿಭಾಗಗಳಿವೆ. ಈ ವಿ.ವಿ.ಯನ್ನು ಹೇಗೆ ಪ್ರಯೋಗಕ್ಕೆ ಇಳಿಸುತ್ತಾರೆ ಎನ್ನುವುದರ ಮೇಲೆ ಅದರ ಯಶಸ್ಸು ನಿರ್ಧಾರವಾಗುತ್ತದೆ. ಇದೊಂದು ದೂರದೃಷ್ಟಿಯ ಯೋಜನೆ’ ಎಂದೂ ಅವರು ಹೇಳಿದರು.

ಉದ್ಯೋಗ, ಮಾರುಕಟ್ಟೆಯೂ ಸಿಗುತ್ತದೆ
ಈ ಭಾಗದಲ್ಲಿ ಪ್ರಾಕೃತಿಕ ಹಾಗೂ ಮಾನವ ಸಂಪನ್ಮೂಲ ಸಾಕಷ್ಟಿದೆ. ಅದನ್ನು ಬ್ರ್ಯಾಂಡ್‌ ಆಗಿ ಪರಿವರ್ತಿಸಲು ಕೌಶಲ ವರ್ಗ ಬೇಕು. ಈ ಉದ್ದೇಶದಿಂದ ಕೌಶಲ ವಿ.ವಿ. ಸ್ಥಾಪಿಸಬೇಕು ಎಂಬುದು ನಮ್ಮ ಆಶಯ. ಜರ್ಮನಿ, ಚೀನಾ ಹಾಗೂ ಜಪಾನ್‌ನಂಥ ದೇಶಗಳಲ್ಲಿ ಶಿಕ್ಷಣದ ಜೊತೆಜೊತೆಗೇ ಒಂದು ಕೌಶಲವನ್ನೂ ಕಲಿಯುವ ಪದ್ಧತಿ ಇದೆ. ಹೀಗಾಗಿ, ಅಲ್ಲಿನ ತಾಂತ್ರಿಕ ಸಾಮರ್ಥ್ಯ ವೃದ್ಧಿಸಿದೆ. ಇಂಥದ್ದೇ ಪ್ರಯತ್ನವನ್ನು ನಾವೂ ಮಾಡಲು ಸಾಕಷ್ಟು ಅವಕಾಶಗಳಿವೆ. ಜತೆಗೆ, ಕೌಶಲ ತರಬೇತಿ ಪಡೆದವರಿಗೆ ಉದ್ಯೋಗ ನೀಡುವುದು ಮತ್ತು ಅವರ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವುದೂ ಮುಖ್ಯ. ಈ ಎಲ್ಲ ಆಯಾಮಗಳಲ್ಲೂ ಚಿಂತನೆ ನಡೆಸಿದ್ದೇವೆ.
-ದತ್ತಾತ್ರೇಯ ಪಾಟೀಲ ರೇವೂರ,ಅಧ್ಯಕ್ಷ, ಕೆಕೆಆರ್‌ಡಿಬಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT