ಗುರುವಾರ , ಸೆಪ್ಟೆಂಬರ್ 23, 2021
24 °C
‘ಕೆಚ್ಚದೆಯ ಕನ್ನಡತಿ ಅಕ್ಕ ಅನು‘ ತಂಡದ ಸಾಮಾಜಿಕ ಕಾರ್ಯ

ಭಂಟನಳ್ಳಿ ಸರ್ಕಾರಿ ಶಾಲೆಗೆ ಕಾಯಕಲ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂಚೋಳಿ: ತಾಲ್ಲೂಕಿನ ಭಂಟನಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬಣ್ಣ ಬಳಿದು, ಶಾಲಾ ಆವರಣ ಸ್ವಚ್ಛಗೊಳಿಸುವ ಮೂಲಕ ‘ಕೆಚ್ಚೆದೆಯ ಕನ್ನಡತಿ ಅಕ್ಕ ಅನು’ ತಂಡದ ಸದಸ್ಯರು ಮಾದರಿಯಾಗಿದ್ದಾರೆ.

ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಚಿಕ್ಕಬೇರ್ಗಿ ಗ್ರಾಮದ ಅನು ‘ಸರ್ಕಾರಿ ಕನ್ನಡ ಶಾಲೆ ಉಳಿಸಿ, ಬೆಳೆಸಿ’ ಆಂದೋಲನದ ಮೂಲಕ ಶಾಲೆಗಳ ಉಳಿವಿಗಾಗಿ ಕೆಲಸ ಮಾಡುತ್ತಿದ್ದಾರೆ.

ಬೆನಕನಳ್ಳಿಯ ಸಾಮಾಜಿಕ ಕಾರ್ಯಕರ್ತ ಮಲ್ಲು ರಾಯಪ್ಪಗೌಡ ಅವರ ಕೋರಿಕೆಯ ಮೇರೆಗೆ ತಂಡದ ಸದಸ್ಯರಾದ ಅನು, ರಾಘವ, ಗಣೇಶ, ಪುರಂಧರ ಮತ್ತಿತರರು ಇಲ್ಲಿಗೆ ಬಂದು  ಗ್ರಾಮದಲ್ಲಿ ಉಳಿದು ಶಾಲಾ ಕಟ್ಟಡಕ್ಕೆ ಕಾಯಕಲ್ಪ ನೀಡಿದರು.

ಕಟ್ಟಡ ಸ್ವಚ್ಛಗೊಳಿಸಿ, ಆವರಣದಲ್ಲಿ ಕಸಕಡ್ಡಿ, ತ್ಯಾಜ್ಯ ಮತ್ತು ನಿರುಪಯುಕ್ತ ವಸ್ತುಗಳನ್ನು ತೆಗೆದುಹಾಕಿ ಮಕ್ಕಳ ಆಟೋಟಕ್ಕೂ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಮಲ್ಲು ರಾಯಪ್ಪಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶಾಲೆಗೆ ಸುಣ್ಣ ಬಣ್ಣ ಬಳಿದು ಹೊಸ ಹೊಳಪು ನೀಡಿದ ಬೆನ್ನಲ್ಲಿಯೇ ಶಾಲಾ ಮೈದಾನ ಸ್ವಚ್ಛತೆ, ರಸ್ತೆ ಸ್ವಚ್ಛತೆಯನ್ನು ಶ್ರಮದಾನದ ಮೂಲಕ ಮಾಡಿದ ಅನು ತಂಡದವರ ಸಾಮಾಜಿಕ ಕಾಳಜಿ ನಿಜಕ್ಕೂ ಶ್ಲಾಘನೀಯ’ ಎಂದು ಮುಖ್ಯಶಿಕ್ಷಕ ಚನ್ನಬಸಪ್ಪ ಹೋಳ್ಕರ್ ತಿಳಿಸಿದರು.

‘ಸರ್ಕಾರಿ ಕನ್ನಡ ಶಾಲೆಗಳು ಪ್ರಸ್ತುತ ದಿನಗಳಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿವೆ. ಈ ಕುರಿತು ಜನರಲ್ಲಿ ಅರಿವು ಮೂಡಿಸಿದರೆ ಕನ್ನಡ ಶಾಲೆಗಳು ಮತ್ತೆ ಮುಖ್ಯವಾಹಿನಿಗೆ ಬರುತ್ತವೆ. ಸರ್ಕಾರಿ ಕನ್ನಡ ಶಾಲೆಗಳಿಗೆ ದಾಖಲಾಗುವವರಲ್ಲಿ ಅತಿ ಹೆಚ್ಚಿನವರು ಬಡವರಾಗಿದ್ದರಿಂದ ಅವರಿಗೆ ಶಿಕ್ಷಣದ ಹಕ್ಕು ಕೊಡಿಸುವುದರ ಜತೆಗೆ ಕನ್ನಡ ಭಾಷೆ ಉಳಿಯಬೇಕು ಮತ್ತು ಬೆಳೆಯಬೇಕೆಂಬ ಮಹಾದಾಸೆಯಿಂದ ಆಂದೋಲನ ನಡೆಸುತ್ತಿದ್ದೇನೆ’ ಎಂದು ಅನು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು