ಗುರುವಾರ , ಡಿಸೆಂಬರ್ 8, 2022
18 °C
ಕಲಬುರಗಿಯ ಸೋನಿಯಾ ಗಾಂಧಿ ನಗರದ ನಿವಾಸಿಗಳ ಸಂಕಟ

ತೆರಿಗೆ ಕಟ್ರಿ, ಸೌಲಭ್ಯ ಕೇಳಬ್ಯಾಡ್ರಿ... ಸೋನಿಯಾ ಗಾಂಧಿ ನಗರದ ನಿವಾಸಿಗಳ ಸಂಕಟ

ಮನೋಜಕುಮಾರ್ ಗುದ್ದಿ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ನಗರದ ಹೊರವಲಯದಲ್ಲಿ ದಶಕಗಳಿಂದ ಸೋನಿಯಾ ಗಾಂಧಿ ನಗರ ಅಸ್ತಿತ್ವದಲ್ಲಿದೆ. ಅಲ್ಲಿ 468 ಮನೆಗಳಿವೆ. ಆದರೆ, ಅಲ್ಲಿನ ನಿವಾಸಿಗಳಿಗೆ ಪರಕೀಯ ಪರಿಸ್ಥಿತಿ. ಅವರು ಅತ್ತ ಮಹಾನಗರ ಪಾಲಿಕೆಗೂ ಸೇರುವುದಿಲ್ಲ, ಇತ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಗೂ ಬರುವುದಿಲ್ಲ. ಅವರು ಜನನ, ಪ್ರಮಾಣಪತ್ರ ಪಡೆಯುವುದಂತೂ ಇನ್ನೂ ಕಷ್ಟ.

ಇದರಿಂದ ಬೇಸತ್ತ ನಿವಾಸಿಗಳು ಅಂತಿಮವಾಗಿ ಜಿಲ್ಲಾಧಿಕಾರಿ ಕಚೇರಿ ಬಾಗಿಲು ತಟ್ಟಿದ್ದಾರೆ.

‘ಹಾಗರಗಾ ಕ್ರಾಸ್‌ ಬಳಿ ಇರುವ ಸೋನಿಯಾ ಗಾಂಧಿ ನಗರವು ದಶಕಗಳಿಂದ ಅಸ್ತಿತ್ವದಲ್ಲಿದ್ದು, ಮುಂಚೆ ಭೂಪಾಲ ತೆಗನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿತ್ತು. ಅಲ್ಲಿ ಆಶ್ರಯ ಕಾಲೊನಿಯನ್ನು ನಿರ್ಮಿಸಿದ ಬಳಿಕ ಮಹಾನಗರ ಪಾಲಿಕೆಯೇ ಮನೆಗಳ ಹಕ್ಕುಪತ್ರ, ನೋಂದಣಿ, ಖಾತಾ ಹಾಗೂ ತೆರಿಗೆಯನ್ನು ಪಾವತಿಸಿಕೊಂಡಿದೆ. 2014ರವರೆಗೂ ಎಲ್ಲವನ್ನೂ ಪಾಲಿಕೆಯೇ ನಿರ್ವಹಿಸುತ್ತಿತ್ತು. ಅದಾದ ಬಳಿಕ ಯಾವುದೇ ಪ್ರಮಾಣಪತ್ರವನ್ನು ನೀಡುತ್ತಿಲ್ಲ. ಆದರೆ, ತೆರಿಗೆಯನ್ನು ಮಾತ್ರ ನಿಯಮಿತವಾಗಿ ಪಡೆಯುತ್ತಿದೆ’ ಎಂದು ನಿವಾಸಿಗಳು ಆರೋಪಿಸುತ್ತಾರೆ.

‘ಜನನ, ಮರಣ ಪ್ರಮಾಣಪತ್ರ, ಹಕ್ಕುಪತ್ರಕ್ಕೆ ಸಂಬಂಧಿಸಿದ ದಾಖಲೆಗಳೂ ಸೇರಿದಂತೆ ಕಂದಾಯ ದಾಖಲೆಗಳನ್ನು ಪಡೆಯಲು ಅರ್ಜಿ ಸಲ್ಲಿಸಿದಾಗ ಮಹಾನಗರ ಪಾಲಿಕೆ ಹಾಗೂ ತಹಶೀಲ್ದಾರ್ ಕಚೇರಿಗಳು ಸೋನಿಯಾ ಗಾಂಧಿ ನಗರ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂಬ ಹಿಂಬರಹ ನೀಡಿವೆ. ಹೀಗಾಗಿ, ಎಲ್ಲ ಬಗೆಯ ನಾಗರಿಕ ಸೌಲಭ್ಯಗಳಿಂದ ವಂಚಿತರಾಗಿದ್ದು, ಕೂಡಲೇ ಜಿಲ್ಲಾಧಿಕಾರಿ ಅವರು ಈ ಸಮಸ್ಯೆ ಬಗೆಹರಿಸಬೇಕು’ ಎಂದು ಸೋನಿಯಾ ಗಾಂಧಿ ಇತ್ತಿಹಾದ್ ವೆಲ್ಫೇರ್ ಕಮಿಟಿ ತಾಲ್ಲೂಕು ಕಾರ್ಯದರ್ಶಿ ರಫೀಕ್ ಅಹ್ಮದ್ ಹರಕಂಚಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪಾಲಿಕೆ ವ್ಯಾಪ್ತಿಯಲ್ಲಿಲ್ಲ: ಭೂಪಾಲ ತೆಗನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಲಗತ್ತಿ ರಸ್ತೆಯಲ್ಲಿರುವ ಸರ್ವೆ ನಂಬರ್ 45/1, 45/2 ಮತ್ತು 84/1 ಹಾಗೂ 84/2 ನಂಬರ್‌ಗಳಲ್ಲಿನ ಜಾಗದಲ್ಲಿ ಪಾಲಿಕೆಯ ವತಿಯಿಂದ ಆಶ್ರಯ ಕಾಲೊನಿಯನ್ನು ನಿರ್ಮಿಸಲಾಗಿದೆ. ಆದರೆ, ಈ ಸರ್ವೆ ನಂಬರ್‌ಗಳು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವುದಿಲ್ಲ. ಈ ವಿಷಯವಾಗಿ ಅಲ್ಲಿನ ನಿವಾಸಿಗಳು ತಮ್ಮನ್ನು ಸಂಪರ್ಕಿಸಿದಾಗ ಈ ಆಶ್ರಯ ಕಾಲೊನಿ ಪಾಲಿಕೆ ವ್ಯಾಪ್ತಿಗೆ ಬರಲಿದೆ ಎಂದು ತಿಳಿಸಿದ್ದೀರಿ. ಆದರೆ, 1997ರ ಸೆ‍ಪ್ಟೆಂಬರ್ 25ರಂದು ಹೊರಡಿಸಿದ ಅಧಿಸೂಚನೆ ಪ್ರಕಾರ ಈ ಸರ್ವೆ ನಂಬರ್‌ಗಳು ಪಾಲಿಕೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಮಹಾನಗರ ಪಾಲಿಕೆಯ ಉಪ ಆಯುಕ್ತರು (ಅಭಿವೃದ್ಧಿ) ಕಳೆದ ಜುಲೈ 26ರಂದು ತಹಶೀಲ್ದಾರ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಮಹಾನಗರ ಪಾಲಿಕೆಯ ಈ ಪತ್ರವನ್ನು ಆಧರಿಸಿ ಸೋನಿಯಾ ಗಾಂಧಿ ಕಾಲೊನಿ ನಿವಾಸಿ ಶಹನಾಜ್ ಬೇಗಂ ಅವರು ತಮ್ಮ ಪತಿ ಮೊಹಮ್ಮದ್ ಅಬ್ದುಲ್ ರೆಹಮಾನ್ ಅವರು ಮೃತಪಟ್ಟ ಬಳಿಕ ಮರಣ ಪ್ರಮಾಣಪತ್ರ ಪಡೆಯಲು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದರು. ಇದಕ್ಕೆ ಕಳೆದ ಆಗಸ್ಟ್ 28ರಂದು ಪತ್ರ ಬರೆದ ತಹಶೀಲ್ದಾರ್ ಅವರು, ‘ಕಾಲೊನಿಯು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುತ್ತದೆ. ಆದ್ದರಿಂದ ಮರಣ ಪ್ರಮಾಣಪತ್ರ ನೀಡಲು ಬರುವುದಿಲ್ಲ’ ಎಂದು ತಿಳಿಸಿದ್ದಾರೆ.

ಮಹಾನಗರ ಪಾಲಿಕೆ ಹಾಗೂ ಕಂದಾಯ ಇಲಾಖೆಯ ಮುಸುಕಿನ ಗುದ್ದಾಟದಲ್ಲಿ ನಿವಾಸಿಗಳು ನಲುಗಬೇಕಾಗಿದೆ. ಈ ಸಮಸ್ಯೆ ಬಗೆಹರಿಯದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುವುದು ಅನಿವಾರ್ಯ ಎನ್ನುತ್ತಾರೆ ನಿವಾಸಿಗಳು.

  ಸೋನಿಯಾ ಗಾಂಧಿ ನಗರದ ಆಶ್ರಯ ಕಾಲೊನಿ ನಿವಾಸಿಗಳ ಸಮಸ್ಯೆ ನನ್ನ ಗಮನಕ್ಕೆ ಬಂದಿದೆ. ಸರ್ವೆ ನಂಬರ್‌ಗಳನ್ನು ಬದಲಿಸಿ ಪಾಲಿಕೆ ವ್ಯಾಪ್ತಿಗೆ ಒಳಪಡಿಸಿಕೊಂಡು ಅಗತ್ಯ ಪ್ರಮಾಣಪತ್ರಗಳನ್ನು ನೀಡುವಂತೆ ಸೂಚನೆ ನೀಡಿದ್ದೇನೆ

– ಯಶವಂತ ವಿ. ಗುರುಕರ್, ಜಿಲ್ಲಾಧಿಕಾರಿ

   2014ರವರೆಗೂ ಎಲ್ಲ ಸರಿ ಇತ್ತು. ಆದರೆ ನಂತರ ನಮಗೆ ಬೇಕಾದ ದಾಖಲೆಗಳನ್ನು ಮಹಾನಗರ ಪಾಲಿಕೆಯವರು ಕೊಡುತ್ತಿಲ್ಲ. ಗುರುತಿನ ಚೀಟಿಯನ್ನೂ ನೀಡಿಲ್ಲ. ಅಭಿವೃದ್ಧಿ ಕೆಲಸಗಳನ್ನೂ ತಡೆ ಹಿಡಿಯಲಾಗಿದೆ

– ರಫೀಕ್ ಅಹ್ಮದ್ ಹರಕಂಚಿ, ಸೋನಿಯಾ ಗಾಂಧಿ ನಗರದ ನಿವಾಸಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು