ಕಲಬುರಗಿ: ಎಸ್ಎಸ್‌ಎಲ್‌ಸಿ ವಾರ್ಷಿಕ ಮತ್ತು ಎರಡು ಪೂರಕ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ 10ನೇ ತರಗತಿಗೆ ಮರು ದಾಖಲಾಗಲು ಅವಕಾಶ ನೀಡಿದರೂ ಜಿಲ್ಲೆಯ ವಿದ್ಯಾರ್ಥಿಗಳು ನಿರೀಕ್ಷಿತ ಮಟ್ಟದಲ್ಲಿ ಪ್ರವೇಶಾತಿ ಪಡೆಯುತ್ತಿಲ್ಲ.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಶಾಲಾ– ಕಾಲೇಜುಗಳಿಗೆ ದಾಖಲಾಗಿ, ಪಾಠ ಕೇಳುವ ಅವಕಾಶವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕಲ್ಪಿಸಿದೆ. ರೆಗ್ಯುಲರ್ ವಿದ್ಯಾರ್ಥಿಗಳಿಗೆ ಸಿಗುವ ಎಲ್ಲ ಕಲಿಕಾ ಸಾಮಗ್ರಿಗಳನ್ನು ಒದಗಿಸುತ್ತಿದ್ದರೂ ಮರು ದಾಖಲಾತಿಯ ಪ್ರಮಾಣ ಕಡಿಮೆ ಇದೆ.
2024ರ ಮಾರ್ಚ್–ಏಪ್ರಿಲ್‌ನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ 42,275 ವಿದ್ಯಾರ್ಥಿಗಳು ಹಾಜರಾಗಿದ್ದರು. 23,861 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರೆ, 18,414 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದರು. ಎಸ್‌ಎಸ್‌ಎಲ್‌ಸಿ ಪೂರ್ಣಗೊಳಿಸಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಹೋಗಲೆಂದು ಎರಡು ಪೂರಕ ಪರೀಕ್ಷೆಗಳನ್ನು ಸಹ ನಡೆಸಲಾಗಿತ್ತು.
ಎರಡನೇ ಪೂರಕ ಪರೀಕ್ಷೆಯಲ್ಲಿ 17,332 ವಿದ್ಯಾರ್ಥಿಗಳು ಕುಳಿತು 5,231 ವಿದ್ಯಾರ್ಥಿಗಳು ಪಾಸಾದರೆ, 12,101 ವಿದ್ಯಾರ್ಥಿಗಳು ಫೇಲಾದರು. ಈ ವೇಳೆ ಶೇ 30.18ರಷ್ಟು ಫಲಿತಾಂಶ ದಾಖಲಾಗಿತ್ತು. ಮೂರನೇ ಪೂರಕ ಪರೀಕ್ಷೆಗೆ 8,889 ವಿದ್ಯಾರ್ಥಿಗಳು ಕುಳಿತಿದ್ದು, 2,531 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಮುಂದಿನ ಶಿಕ್ಷಣಕ್ಕೆ ಅವಕಾಶ ಗಿಟ್ಟಿಸಿಕೊಂಡರು. ಆ ಪರೀಕ್ಷೆಯಲ್ಲಿ 6,358 ವಿದ್ಯಾರ್ಥಿಗಳು ಮತ್ತೆ ಅನುತ್ತೀರ್ಣರಾದರು.
ಮೂರು ಪರೀಕ್ಷೆಗಳು ನಡೆಸಿದರು ಫೇಲಾದ 10,652 ವಿದ್ಯಾರ್ಥಿಗಳ ಪೈಕಿ ಕೆಲವರು 8ನೇ ತರಗತಿ ತೇರ್ಗಡೆಯ ಅರ್ಹತೆಯ ಮೇಲೆ ಐಟಿಐ ಕಾಲೇಜುಗಳನ್ನು ಸೇರಿದರು. ಜಿಲ್ಲೆಯಲ್ಲಿ ಮೂರಂಕಿಯಷ್ಟು ವಿದ್ಯಾರ್ಥಿಗಳು 10ನೇ ತರಗತಿಗೆ ಮರು ದಾಖಲಾಗಿದ್ದರೆ ಬಹುತೇಕರು ತರಗತಿಯಿಂದ ಹೊರಗೆ ಉಳಿದಿದ್ದಾರೆ. ಇಲಾಖೆ ಕಲ್ಪಿಸಿರುವ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುತ್ತಿಲ್ಲ ಎನ್ನುತ್ತಾರೆ ಶಿಕ್ಷಕರು.
ಪ್ರೌಢಶಾಲೆಯ 10ನೇ ತರಗತಿಗೆ ಮರು ದಾಖಲಾದ ವಿದ್ಯಾರ್ಥಿಗಳಿಗೆ ಶಾಲೆಯ ನೋಂದಣಿ ಕಾರ್ಡ್ ನೀಡಲಾಗುತ್ತದೆ. ಪೂರ್ಣ ಅವಧಿಯ ಅಧ್ಯಯನ ಮಾಡಿ ಎಲ್ಲ ವಿಷಯಗಳಿಗೆ ಪರೀಕ್ಷೆಯನ್ನು ಬರೆಯಬೇಕು. ಶಿಕ್ಷಣ ಇಲಾಖೆಯ ನಿಯಮ ಅನುಸಾರ ನೀಡುವ ಸಮವಸ್ತ್ರ, ಪಠ್ಯಪುಸ್ತಕ, ಶೂ–ಸಾಕ್ಸ್, ಅಕ್ಷರ ದಾಸೋಹದ ಬಿಸಿಯೂಟದಂತಹ ಸೌಲಭ್ಯಗಳನ್ನು ಕೊಡಲಾಗುತ್ತದೆ. ಮರು ದಾಖಲಾದ ವಿದ್ಯಾರ್ಥಿಗಳನ್ನು ರೆಗ್ಯುಲರ್ ವಿದ್ಯಾರ್ಥಿಯಂತೆ ಪರಿಗಣಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.