ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರತ್ಯೇಕ ತೊಗರಿ ಮಂಡಳಿ ರಚಿಸಿ: ₹ 25 ಕೋಟಿ ನೀಡಿ’

Last Updated 5 ಡಿಸೆಂಬರ್ 2022, 4:34 IST
ಅಕ್ಷರ ಗಾತ್ರ

ಕಲಬುರಗಿ: ‘ಪ್ರತ್ಯೇಕತೊಗರಿ ಮಂಡಳಿ ರಚಿಸಿ ‌₹ 25 ಕೋಟಿ ಅನುದಾನ ನೀಡಬೇಕು. ‌ಪ್ರತಿ ಕ್ವಿಂಟಲ್ ತೊಗರಿಗೆ ₹ 12 ಸಾವಿರ ಕನಿಷ್ಠ ಬೆಂಬಲ ಬೆಲೆ ನೀಡಿ, ಗ್ರಾಮ ಪಂಚಾಯಿತಿಗೆ ಒಂದು ತೊಗರಿ ಖರೀದಿ ಕೇಂದ್ರ ತೆರೆಯಬೇಕು’ ಎಂಬ ನಿರ್ಣಯಗಳನ್ನು ತೊಗರಿ ಬೆಳೆಗಾರರ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ತೆಗೆದುಕೊಳ್ಳಲಾಯಿತು.

ಇಲ್ಲಿನ ಡಾ. ಎಸ್‌.ಎಂ.ಪಂಡಿತ್ ರಂಗಮಂದಿ‌ರದಲ್ಲಿ ಭಾನುವಾರ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್‌) ಜಿಲ್ಲಾ ಸಮಿತಿ ವಿಚಾರಣ ಸಂಕಿರಣ ಆಯೋಜಿಸಿತ್ತು. ಕಲ್ಯಾಣ ಕರ್ನಾಟಕ ಭಾಗದ ಪದಾಧಿಕಾರಿಗಳು ಪಾಲ್ಗೊಂಡು ತಮ್ಮ ಸಲಹೆಗಳನ್ನು ನೀಡಿದರು.

‘ಕೆಎಂಎಫ್‌ ಮಾದರಿಯಲ್ಲಿ ತೊಗ‌ರಿ ಮಂಡಳಿ ಕಾರ್ಯನಿರ್ವಹಿಸಬೇಕು. ಅಕ್ಷರ ದಾಸೋಹ ಹಾಗೂ ನ್ಯಾಯಬೆಲೆ ಅಂಗಡಿಗಳಿಗೆ ತೊಗರಿ ಬೇಳೆ ಪೂರೈಕೆ ಮಾಡಬೇಕು. ಬೆಳೆ ಸಂರಕ್ಷಣೆಗೆ ಸಂಶೋಧನೆ ನಡೆಸಿ, ಉತ್ಪಾದನೆಯಲ್ಲಿ ಹೊಸ ತಂತ್ರಜ್ಞಾನ ಪರಿಚಯಿಸಬೇಕು’ ಎಂದು ಕೋರಿದರು.

‘ವಿದೇಶಿ ಬೇಳೆಗಳ ಆಮದು ನಿಲ್ಲಿಸಿ, ತೊಗರಿ ಖರೀದಿಯಲ್ಲಿ ಕಾರ್ಪೊರೇಟ್‌ ಏಕಸ್ವಾಮ್ಯ ಕೊನೆಗಾಣಿಸಿ ಸರ್ಕಾರವೇ ‌ರೈತರಿಂದ ನೆರವಾಗಿ ಕೊಂಡುಕೊಳ್ಳಬೇಕು. ಅತಿವೃಷ್ಟಿ ಹಾಗೂ ನೆಟೆ ರೋಗದಿಂದ ಬೆಳೆ ಕಳೆದುಕೊಂಡ ರೈತರ ಪ್ರತಿ ಎಕರೆಗೆ ₹ 15 ಸಾವಿರ ಪರಿಹಾರ ಕೊಡಬೇಕು’ ಎಂದು ಆಗ್ರಹಿಸಿದರು.

ಅಖಿಲ ಭಾರತ ಕಿಸಾನ್‌ ಸಭಾ ರಾಷ್ಟ್ರೀಯ ಘಟಕದ ಅಧ್ಯಕ್ಷ ಡಾ. ಅಶೋಕ ಧವಳೆ ಮಾತನಾಡಿ, ‘ಕೇಂದ್ರ ಸರ್ಕಾರ ವಿದೇಶದ ತೊಗರಿ ಬೇಳೆಗಳ ಮೇಲಿನ ಆಮದು ಸುಂಕ ಶೂನ್ಯಕ್ಕೆ ಇಳಿಸಿದೆ. ಇದರ ಫಲವಾಗಿ 7 ಲಕ್ಷ ಟನ್ ಭಾರತಕ್ಕೆ ಬಂದಿದೆ. ವಿದೇಶಕ್ಕೆ ಮಣೆ ಹಾಕಿದರೆ ಸ್ಥಳೀಯ ರೈತರ ಬೇಳೆಗಳಿಗೆ ಉತ್ತಮ ಬೆಲೆ ಹೇಗೆ ಸಿಗುತ್ತದೆ’ ಎಂದು ಪ್ರಶ್ನಿಸಿದರು.

‘ಉದಾರ ನೀತಿ ಜಾರಿಯ ಬಳಿಕ 4 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಆಡಳಿತದ 8 ವರ್ಷಗಳಲ್ಲಿ 1 ಲಕ್ಷ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದು ಸರ್ಕಾರದ ರೈತ ವಿರೋಧಿ ನೀತಿಗೆ ಹಿಡಿದ ಕೈಗನ್ನಡಿ. ಇದರಲ್ಲಿ ಕರ್ನಾಟಕದ ಸಾವಿರಾರು ರೈತರೂ ಇದ್ದಾರೆ’ ಎಂದು ಹೇಳಿದರು.

ಕೆಪಿಆರ್‌ಎಸ್‌ ಸಂಘದ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಮಾತನಾಡಿ, ‘ರಾಜ್ಯ ಸರ್ಕಾರ ₹ 2 ಕೋಟಿ ಖರ್ಚು ಮಾಡಿ ‌ಭೀಮಾ ಪಲ್ಸ್ ಬ್ರ್ಯಾಂಡ್‌ ಹೆಸರಿನ ತೊಗರಿ ಬೇಳೆ ಬಿಡುಗಡೆ ಮಾಡಿದೆ. ಆದರೆ, ಬೇಳೆ ಸಂಸ್ಕರಣೆಯ ಘಟಕ, ಪ್ಯಾಕಿಂಗ್ ಯಂತ್ರಗಳು, ಖರೀದಿಯ ಮೂಲವೇ ಇಲ್ಲ’ ಎಂದು ದೂರಿದರು.

‘ಬ್ರಿಟಿಷ್ ಮಾದರಿ ಆಡಳಿತ’

‘ಧರ್ಮ, ಜಾತಿಗಳ ಹೆಸರಲ್ಲಿ ಜನರನ್ನು ವಿ‌ಭಜಿಸಿ ಬ್ರಿಟಿಷರು 200 ವರ್ಷಗಳ ಕಾಲ ಭಾರತವನ್ನು ಆಳಿದ್ದರು. ಅದೇ ಮಾದರಿಯಲ್ಲಿ ಮೋದಿ–ಅಮಿತ್ ಶಾ ಜೋಡಿಯ ಬಿಜೆಪಿ ಸರ್ಕಾರ ಅಧಿಕಾರ ನಡೆಸುತ್ತಿದೆ’ ಎಂದು ಡಾ. ಅಶೋಕ ಧವಳೆ ಆರೋಪಿಸಿದರು.

‘ಮೋದಿ ನೇತೃತ್ವದಲ್ಲಿ ಇರುವುದು ಗುಲಾಮಿ ಸರ್ಕಾರ. ರೈತರನ್ನು ಕಡೆಗಣಿಸಿ ಅಂಬಾನಿ, ಅದಾನಿ ಅಂತಹ ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡುತ್ತಿದೆ. ಧರ್ಮ, ಜಾತಿ ಹಾಗೂ ಭಾಷೆಯ ಹೆಸರಿನಲ್ಲಿ ಗಲಭೆಗಳನ್ನು ಸೃಷ್ಟಿಸಿ ದೇಶವನ್ನು ವಿಭಜಿಸುವ ಹುನ್ನಾರ ಮಾಡುತ್ತಿದೆ’ ಎಂದು ದೂರಿದರು.

‘ರೈತರ ಹೋರಾಟಗಳು ಮುಂದಿನ ದಿನಗಳಲ್ಲಿ ರಾಜನೀತಿ ಆಗಬೇಕು. ಚುನಾವಣೆಯೇ ಪ್ರಮುಖ ಅಸ್ತ್ರವಾಗಬೇಕು’ ಎಂದರು.

‘ಸಂಸದರನ್ನು ಪ್ರಶ್ನಿಸಿ’

‘ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿದ್ದೇನೆ ಎಂದು ಗೆದ್ದು ಬೀಗುತ್ತಿರುವ ಸಂಸದ ಡಾ.ಉಮೇಶ ಜಾಧವ ಅವರು ಸಂಸತ್ತನಲ್ಲಿ ಏನು ‌ಮಾಡುತ್ತಿದ್ದಾರೆ’ ಎಂದು ಕೆಪಿಆರ್‌ಎಸ್‌ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ ಪ್ರಶ್ನಿಸಿದರು. ‘ಜಿಲ್ಲೆಯ ರೈತರಿಗಾಗಿ ಸಂಸದರು ಏನು ಮಾಡುತ್ತಿದ್ದಾರೆ? ತೊಗರಿಗೆ ಬೆಂಬಲ ಬೆಲೆ ಕೊಡಿಸಲು ಕೇಂದ್ರದ ಮೇಲೆ ಒತ್ತಡ ಹಾಕಿತ್ತಿಲ್ಲ. ರೈತರು ಉಮೇಶ ಜಾಧವ ಅವರನ್ನು ಹಿಡಿದು ನಿಲ್ಲಿಸಿ ಕೇಳಬೇಕು’ ಎಂದರು.

ವಿಚಾರ ಸಂಕಿರಣದಲ್ಲಿ ಕೆಪಿಆರ್‌ಎಸ್‌ ಜಿಲ್ಲಾ ಕಾರ್ಯದರ್ಶಿ ಡಾ. ಸಾಯಬಣ್ಣ ಗುಡುಬಾ, ಖಜಾಂಚಿ ಸುಭಾಷ ಹೊಸಮನಿ, ಯಾದಗಿರಿ ಜಿಲ್ಲಾ ಅಧ್ಯಕ್ಷ ಚನ್ನಪ್ಪ ಆನೆಗುಂದಿ, ಕಾರ್ಯದರ್ಶಿ ಎಸ್‌.ಎಂ.ಸಾಗರ, ರಾಯಚೂರು ಜಿಲ್ಲಾ ಅಧ್ಯಕ್ಷ ಡಿ.ವೀರಣ್ಣಗೌಡ, ಕಾರ್ಯದರ್ಶಿ ನರಸಣ್ಣ ನಾಯಕ, ವಿಜಯಪುರ ಜಿಲ್ಲಾ ಅಧ್ಯಕ್ಷ ಅಣ್ಣರಾಯ ಇಳಿಗೆರಾ, ಕಾರ್ಯದರ್ಶಿ ಭೀಮರಾಯ ಪೂಜಾರಿ, ಜಿಲ್ಲಾ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT