ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಕ್ಷೇತ್ರ ಕಳೆದುಕೊಂಡ ಮಾಜಿ ಮೇಯರ್‌ಗಳು

ಕಲಬುರ್ಗಿ ಮಹಾನಗರ ಪಾಲಿಕೆ ಕ್ಷೇತ್ರ ಮರುವಿಂಗಡಣೆ ತಂದ ಬದಲಾವಣೆ, ಕೆಲವರು ಸ್ಪರ್ಧೆಯಿಂದ ದೂರ
Last Updated 14 ಆಗಸ್ಟ್ 2021, 3:42 IST
ಅಕ್ಷರ ಗಾತ್ರ

ಕಲಬುರ್ಗಿ: ಮಹಾನಗರ ಪಾಲಿಕೆ ವಾರ್ಡ್‌ಗಳ ಮರು ವಿಂಗಡಣೆ ಮತ್ತು ಮೀಸಲಾತಿಯಿಂದಾಗಿ ಕೆಲವು ಮಾಜಿ ಮೇಯರ್‌ಗಳು ತಮ್ಮ ಕ್ಷೇತ್ರ ಕಳೆದುಕೊಂಡು ಪೇಚಿಗೆ ಸಿಲುಕಿದ್ದಾರೆ. ಈ ಹಿಂದೆ ಪುರುಷರಿಗೆ ಇದ್ದ ವಾರ್ಡ್‌ಗಳಲ್ಲಿ ಈಗ ಮಹಿಳಾ ಮೀಸಲಾತಿ ಬಂದಿದೆ. ಮಹಿಳೆ ಮೇಯರ್‌ ಆಗಿದ್ದ ವಾರ್ಡ್‌ ಪುರುಷ ಮೀಸಲು ಕ್ಷೇತ್ರವಾಗಿ ಪರಿವರ್ತನೆಯಾಗಿದೆ. ಕ್ಷೇತ್ರ ಕಳೆದುಕೊಂಡವರಲ್ಲಿ ಕೆಲವರು ತಮ್ಮ ಪತ್ನಿ ಅಥವಾ ಸಂಬಂಧಿಗಳನ್ನು ಕಣಕ್ಕೆ ಇಳಿಸುವ ಕಸರತ್ತು ನಡೆಸಿದ್ದಾರೆ.

2014ರಲ್ಲಿ ಪಾಲಿಕೆಯ ಮೇಲೆ ಕಾಂಗ್ರೆಸ್‌ ಪ್ರಾಬಲ್ಯ ಸಾಧಿಸಿತು. ಮೊದಲ ಅವಧಿಯಲ್ಲಿ ಮಹಿಳಾ ಮೀಸಲಾತಿ ಬಂದಿದ್ದರಿಂದ ಆಲಿಯಾ ಶಿರೀನ್‌ ಮೇಯರ್ ಆಗಿ ಅವಧಿ ಪೂರ್ಣಗೊಳಿಸಿದರು. 2015ರಲ್ಲಿ ಎರಡನೇ ಅವಧಿಗೆ ಹಿಂದುಳಿದ ವರ್ಗ–ಬಿ ಪುರುಷ ಮೀಸಲಾತಿಯ ಪ್ರಕಾರ ಭೀಮರೆಡ್ಡಿ ಪಾಟೀಲ ಕುರಕುಂದ ಮೇಯರ್ ಆದರು. 16ನೇ ವಾರ್ಡಿನಿಂದ ಗೆದ್ದಿದ್ದರು ಭೀಮರೆಡ್ಡಿ. ಆದರೆ, ಈ ವಾರ್ಡ್‌ ಪ್ರಸಕ್ತ ಅವಧಿಗೆ ಸಾಮಾನ್ಯ ಮಹಿಳಾ ಮೀಸಲಾತಿ ಸಿಕ್ಕಿದೆ. ಹೀಗಾಗಿ, ಈ ಕ್ಷೇತ್ರದಿಂದ ತಮ್ಮ ಪತ್ನಿಯನ್ನೇ ಕಣಕ್ಕಿಳಿಸಲು ಭೀಮರೆಡ್ಡಿ ಸಿದ್ಧತೆ ನಡೆಸಿದ್ದಾರೆ.

2016ರಲ್ಲಿ ಸಯ್ಯದ್‌ ಅಹ್ಮದ್‌ ಮೇಯರ್‌ ಆಗಿ ಆಯ್ಕೆಯಾದರು. ಅವರು ಸ್ಪರ್ಧಿಸಿದ್ದ 5ನೇ ವಾರ್ಡ್‌ ಈ ಬಾರಿ 18ನೇ ವಾರ್ಡ್‌ ಆಗಿ ಬದಲಾಗಿದೆ. ಅಲ್ಲಿನ ಮೀಸಲಾತಿಯೂ ಮಹಿಳೆಯ ಪಾಲಾಗಿದೆ. ಹೀಗಾಗಿ, ಸಯ್ಯದ್‌ ತಮ್ಮ ಕ್ಷೇತ್ರವನ್ನು ಬೇರೊಬ್ಬರಿಗೆ ಬಿಟ್ಟು ತಾವು ಇನ್ನೊಂದು ಕ್ಷೇತ್ರಕ್ಕೆ ವಲಸೆ ಹೋಗುವುದು ಅನಿವಾರ್ಯವಾಗಿದೆ.‌

2017ರಲ್ಲಿ ಶರಣಕುಮಾರ ಮೋದಿ ಮೇಯರ್‌ ಆದರು. ಅವರ ಅವಧಿ ಮುಗಿಯುವ ಮುನ್ನ ಮೀಸಲಾತಿ ವಿಚಾರವಾಗಿ ಕೆಲವರು ನ್ಯಾಯಾಲಯ ಮೊರೆ ಹೋದರು. ಪರಿಣಾಮ ಮತ್ತೆ 7 ತಿಂಗಳು ಹೆಚ್ಚುವರಿ ಮೇಯರ್‌ ಹುದ್ದೆ ಅಲಂಕರಿಸಿದರು. ಆದರೆ, ಶರಣಕುಮಾರ ಅವರು ಪ್ರತಿನಿಧಿಸಿದ್ದ 17ನೇ ವಾರ್ಡ್‌ ಈಗ ಮೂರು ಭಾಗವಾಗಿ ಹಂಚಿದೆ. ಬಹುಪಾಲು ಭಾಗ ಈಗ 24ರಲ್ಲಿ ಸೇರಿಕೊಂಡಿದ್ದು, ಸಾಮಾನ್ಯ ಮಹಿಳೆ ಮೀಸಲು ಬಂದಿದೆ.

ಕಳೆದ ಅವಧಿಯ (2014–2019) ಕೊನೆಯ ಮೇಯರ್‌ ಆಗಿ 2018ರಲ್ಲಿ ಆಯ್ಕೆಯಾದವರು ಮಲ್ಲಮ್ಮ ವಳಕೇರಿ. ಆಗ ಎಸ್‌.ಸಿ ಮಹಿಳಾ ಮೀಸಲಿದ್ದ 44ನೇ ವಾರ್ಡ್‌ ಈಗ 34ನೇ ವಾರ್ಡ್‌ ಆಗಿದ್ದು ಎಸ್‌.ಸಿ ಪುರುಷ ಅಭ್ಯರ್ಥಿಗೆ ಮೀಸಲಾಗಿದೆ. ಹೀಗಾಗಿ, ಮಲ್ಲಮ್ಮ ಅವರು ತಮ್ಮ ಕ್ಷೇತ್ರದಲ್ಲಿ ತಮ್ಮ ಪುತ್ರ ಗಣೇಶ ಅವರನ್ನೇ ನಿಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

box

ಕ್ಷೇತ್ರ ಉಳಿಸಿಕೊಂಡ ಶಿರೀನ್‌

2014ರಲ್ಲಿ ಮೀಸಲಾತಿ ಪ್ರಕಾರ ಆಲಿಯಾ ಶಿರೀನ್ ಅವರು ಆ ಅವಧಿಯ ಮೊದಲ ಮೇಯರ್‌ ಆಗಿ ಆಯ್ಕೆಯಾದರು. ಅವರು ಆಗ ಪ್ರತಿನಿಧಿಸಿದ್ದು ವಾರ್ಡ್‌ ಸಂಖ್ಯೆ 24. 2018ರಲ್ಲಿ ಮತ್ತೆ ಮೇಯರ್‌ ಹಾಗೂ ಉಪಮೇಯರ್‌ ಸ್ಥಾನಗಳು ಮಹಿಳಾ ಮೀಸಲಾತಿ ಬಂದವು. ಆಗ ಮಲ್ಲಮ್ಮ ವಳಕೇರಿ ಅವರು ಮೇಯರ್‌, ಶಿರೀನ್‌ ಉಪ ಮೇಯರ್‌ ಆಗಿ ಕೊನೆಯ ಅವಧಿಗೆ ಮುಂದುವರಿದರು.

ಆದರೆ, ವಾರ್ಡ್‌ ಮರು ವಿಂಗಡಣೆಯಾದ ಬಳಿಕವೂ ಶಿರೀನ್‌ ಅವರಿಗೆ ಅದೃಷ್ಟ ಒಲಿದಿದೆ. ಈಗ 24 ಹಾಗೂ 17ನೇ ವಾರ್ಡ್‌ ಎರಡನ್ನೂ ಸೇರಿಸಿ ಒಂದು ಹೊಸ ವಾರ್ಡ್‌ ಮಾಡಲಾಗಿದ್ದು, ಅದಕ್ಕೂ ಸಾಮಾನ್ಯ ಮಹಿಳೆ ಮೀಸಲಾತಿ ಸಿಕ್ಕಿದೆ. ಹೀಗಾಗಿ, ಶಿರೀನ್‌ ಮತ್ತೆ ಸ್ಪರ್ಧಿಸುವ ಅವಕಾಶ ಪಡೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT