ಸೋಮವಾರ, ಮೇ 23, 2022
21 °C

42 ಡಿಗ್ರಿ ಸೆಲ್ಸಿಯಸ್‌ ಮುಟ್ಟಿದ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಉಷ್ಣಾಂಶ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶದ ಏಳೂ ಜಿಲ್ಲೆಗಳಲ್ಲಿ ಈಗ ಉಷ್ಣಾಂಶ 41 ಡಿಗ್ರಿ ಸೆಲ್ಸಿಯಸ್‌ ದಾಟಿದೆ. ಆದರೂ ರಾಜ್ಯ ಸರ್ಕಾರ ಈ ಭಾಗದ ಜಿಲ್ಲೆಗಳಲ್ಲಿ ‘ಬಿಸಿಗಾಳಿ ಪೀಡಿತ’ ಎಂಬ ಮುನ್ನೆಚ್ಚರಿಕೆ ನೀಡಿಲ್ಲ. ಆಯಾ ಜಿಲ್ಲಾಡಳಿತ ಕೂಡ ಜನರಿಗೆ ಅಪಾಯದ ಸೂಚನೆ ನೀಡಿಲ್ಲ.

ಯಾವುದೇ ಪ್ರದೇಶದಲ್ಲಿ ನಿರಂತರ ಮೂರು ದಿನದ ಗರಿಷ್ಠ ತಾಪಮಾನ 40 ಡಿಗ್ರಿ ಅಥವಾ ಅದಕ್ಕಿಂತ ಹೆಚ್ಚಿದ್ದರೆ ಆ ಪ್ರದೇಶವು ‘ಬಿಸಿಗಾಳಿ ಪೀಡಿತ’ ಎಂದು ಭಾರತೀಯ ಹವಾಮಾನ ಇಲಾಖೆ (IMD) ಘೋಷಿಸಿದೆ.

ದೆಹಲಿಯಲ್ಲಿ 39 ಡಿಗ್ರಿ ಹಾಗೂ ಮುಂಬೈಯಲ್ಲಿ 40 ಡಿಗ್ರಿ ಸೆಲ್ಸಿಯಸ್‌ ದಾಖಲಾದ್ದರಿಂದ ಏಪ್ರಿಲ್‌ 1ರಿಂದಲೇ ‘ಎಲ್ಲೋ ಅಲರ್ಟ್‌’ (ಬಿಸಿಗಾಳಿಯ ಮುನ್ನೆಚ್ಚರಿಕೆ) ನೀಡಲಾಗಿದೆ. ಕಲಬುರಗಿ, ಬೀದರ್‌, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜ‍‍ಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಮಾರ್ಚ್‌ 30 ರಿಂದಲೇ 39.5ರಿಂದ 40 ಡಿಗ್ರಿ ದಾಖಲಾಗಿದೆ. 

ಏಪ್ರಿಲ್‌ 1ರಿಂದ ಮೂರು ದಿನಗಳಲ್ಲಿ 42 ಡಿಗ್ರಿ ಆಸುಪಾಸಿನಲ್ಲೇ ತಾಪಮಾನವಿದೆ. ಆದರೂ ಆಯಾ ಜಿಲ್ಲಾಡಳಿತದಿಂದ ಜನರಿಗೆ ಯಾವುದೇ ಮುನ್ನೆಚ್ಚರಿಕೆ, ಮುಂಜಾಗ್ರತೆಯ ಸಂದೇಶ ಸಿಕ್ಕಿಲ್ಲ.

ನೆರೆಯ ತೆಲಂಗಾಣ ರಾಜ್ಯದ ಹೈದರಾಬಾದ್, ಅದಿಲಾಬಾದ್, ಭೂಪಾಲಪಲ್ಲಿ, ಕುಮಾರಮ್‌ ಭೀಮ್, ರಂಗಾರೆಡ್ಡಿ ಪ್ರದೇಶಗಳಲ್ಲೂ 40 ಡಿಗ್ರಿ ದಾಟಿದೆ ಎಂದು ಐಎಂಡಿ ದಾಖಲಿಸಿದ್ದರಿಂದ ‘ಎಲ್ಲೋ ಅಲರ್ಟ್‌’ ಘೋಷಿಸಲಾಗಿದೆ.

ಬಿಸಿಗಾಳಿಯನ್ನು ‘ಪ್ರಕೃತಿ ವಿಕೋಪ’ ಎಂದು ರಾಜ್ಯ ಸರ್ಕಾರ ಪರಿಗಣಿಸಿದೆ. ಇದರ ಪರಿಣಾಮದಿಂದ ಜೀವಹಾನಿ ಸಂಭವಿಸಿದರೆ ₹ 4 ಲಕ್ಷ ಪರಿಹಾರ ಕೊಡುವುದೂ ಕಾಯ್ದೆಯಲ್ಲಿದೆ.

ಆದರೆ, ಈ ಸಂಬಂಧ ಜಿಲ್ಲಾಡಳಿತದಿಂದ ಪೂರ್ಣಪ್ರಮಾಣದ ಮಾಹಿತಿ ದೊರೆಯದ ಕಾರಣ ಈವರೆಗೆ ‘ಬಿಸಿ’ ತಟ್ಟಿ ಪ್ರಾಣ ಕಳೆದುಕೊಂಡವರನ್ನು ಪತ್ತೆ ಮಾಡಲು ಆಗಿಲ್ಲ. ಪರಿಹಾರ ನೀಡುವ ವಿಚಾರವೂ ಪ್ರಚಾರ ಪಡೆದಿಲ್ಲ.

‘ವಿಪರೀತ ಬಿಸಿಲು, ಬಿಸಿಗಾಳಿಯ ಪರಿಣಾಮ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ದುಡಿಮೆಯ ಅವಧಿ ಮತ್ತು ಸಾಮರ್ಥ್ಯ ಎರಡೂ ಕಡಿಮೆ ಆಗುತ್ತವೆ. ಫಲವತ್ತತೆ ದರ ಕುಸಿಯುತ್ತದೆ. ನಿರ್ಜಲೀಕರಣದಿಂದ ಸಂಕಷ್ಟ ಎದುರಾಗುತ್ತದೆ. ಕೃಷಿಕರು, ಕಾರ್ಮಿಕರು, ನೌಕರ ವರ್ಗದವರು, ವಿದ್ಯಾರ್ಥಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಾರೆ. ಮನಸ್ಸಿದ್ದರೂ, ಕೆಲಸವಿದ್ದರೂ ಕಾರ್ಯ ಸಾಮರ್ಥ್ಯ ಪ್ರಮಾಣ ಕುಸಿಯುವ ಸಾಧ್ಯತೆ ಇರುತ್ತದೆ. ತಲಾ ಆದಾಯ ಕಡಿಮೆ ಇರಲು ಈ ಕಾರಣವೂ ಮುಖ್ಯವಾದದ್ದು. ಹೀಗಾಗಿ, ಹಸಿರೀಕರಣದ ಮೂಲಕ ತಾಪಮಾನದ ನಿಯಂತ್ರಣ ಹಾಗೂ ಜನರಿಗೆ ಆರೋಗ್ಯ ಅರಿವು ಮೂಡಿಸುವಲ್ಲಿ ಜಿಲ್ಲಾಡಳಿತ ಗಂಭೀರ ಯೋಚಿಸಬೇಕು’ ಎನ್ನುತ್ತಾರೆ ಅರ್ಥಶಾಸ್ತ್ರಜ್ಞರಾದ ಸಂಗೀತಾ ಕಟ್ಟಿಮನಿ.

*

ವಿದ್ಯಾರ್ಥಿಗಳ ಗೋಳು ಕೇಳೋರ್‍ಯಾರು?

ಪಿಯು ದ್ವಿತೀಯ ಪರೀಕ್ಷೆಗಳು ಮಾರ್ಚ್‌ ಬರುವ ಮುನ್ನವೇ ಮುಗಿಯಬೇಕಿತ್ತು. ಆದರೆ, ವಿವಿಧ ಕಾರಣಗಳಿಂದ ಈ ಬಾರಿ ಏಪ್ರಿಲ್‌ನಲ್ಲಿ ನಡೆಯುತ್ತಿವೆ. ಇದರಿಂದ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಬಹುದು.

‘ನಗರವೂ ಸೇರಿ ಜಿಲ್ಲೆಯ ಬಹಳಷ್ಟು ಶಾಲೆ– ಕಾಲೇಜುಗಳಿಗೆ ಇನ್ನೂ ವಿದ್ಯುತ್‌ ಸಂಪರ್ಕವಿಲ್ಲ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಪರೀಕ್ಷೆ ವೇಳೆ ಕೂಲರ್‌ ಇಟ್ಟರೂ ಅದಕ್ಕೆ ಹಾಕಲು ನೀರು ಸಿಗದಂಥ ಸ್ಥಿತಿ ನಗರದ ಕಾಲೇಜುಗಳಲ್ಲೇ ಇದೆ. ಇಷ್ಟೆಲ್ಲ ಅಡೆತಡೆಗಳ ಮಧ್ಯೆ ಮಕ್ಕಳು ಪರೀಕ್ಷೆ ಎದುರಿಸುವುದು ಸವಾಲೇ ಸರಿ’ ಎಂದು ವಿದ್ಯಾರ್ಥಿಗಳ ಪಾಲಕರು ಮತ್ತು ಉಪನ್ಯಾಸಕರು ಹೇಳುತ್ತಾರೆ.

‘ಬಿಸಿಗಾಳಿ ಪೀಡಿತ ಪ್ರದೇಶದಲ್ಲಿ ಆಯಾ ಜಿಲ್ಲಾಡಳಿತ ಅಗತ್ಯ ಸೌಕರ್ಯ ಕಲ್ಪಿಸಬೇಕು. ಆದರೆ, ಈ ಬಗ್ಗೆ ಕನಿಷ್ಠ ಅರಿವನ್ನೂ ಮೂಡಿಸದ ಕಾರಣ ನಮ್ಮ ಪ್ರದೇಶದ ಫಲಿತಾಂಶ ಕುಸಿತ ಕಾಣುತ್ತದೆ’ ಎಂದು ಅಭಿಪ್ರಾಯಪಡುತ್ತಾರೆ.

‘ದೆಹಲಿಯಲ್ಲಿ ಸರ್ಕಾರಿ ಕಚೇರಿ ಸಮಯ ಬದಲಾವಣೆ ಮಾಡದ ಕಾರಣ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲೂ ಮಾಡುವುದಿಲ್ಲ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಇದು ವಿಚಿತ್ರ ನಿರ್ಧಾರ. ಕಳೆದ ಬಾರಿ ಕೊರೊನಾ ನೆಪ, ಈ ಬಾರಿ ದೆಹಲಿ ನೆ‍ಪ ಹೇಳಿದ್ದಾರೆ. ದೆಹಲಿಯಲ್ಲಿ ಇರುವ ಸೌಕರ್ಯಗಳು ಈ ಭಾಗದಲ್ಲಿ ಇವೆಯೇ? ಅಲ್ಲಿನ ಶಾಲೆ, ಕಚೇರಿಗಳು, ಸಂಚಾರ, ವಿದ್ಯುತ್‌, ನೀರಿನ ಸೌಕರ್ಯಗಳು ಇಲ್ಲಿಯೂ ಇವೆಯೇ? ಎರಡೂ ಭಾಗಗಳನ್ನು ಹೇಗೆ ಹೋಲಿಕೆ ಮಾಡಲಾಗಿದೆ ಎಂಬುದೇ ಅರ್ಥವಾಗುತ್ತಿಲ್ಲ. ಇದು ವೈಜ್ಞಾನಿಕ ನಿರ್ಧಾರ’ ಎಂದು ನೌಕರರ ಸಂಘದ ಕೆಲ ಮುಖಂಡರು ದೂರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು