ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಅತಿವೃಷ್ಟಿಗೆ ಕಿತ್ತುಹೋದ 194 ಕಿ.ಮೀ ರಸ್ತೆ

ನಿರಂತರ ಮಳೆಯಿಂದ ಗ್ರಾಮೀಣ ರಸ್ತೆಗಳಿಗೇ ಹೆಚ್ಚು ಹಾನಿ, ಹನಾದಿಗಳಲ್ಲಿ ರೈತರಿಗೆ ತಪ್ಪದ ಪರದಾಟ
Last Updated 31 ಜುಲೈ 2021, 6:48 IST
ಅಕ್ಷರ ಗಾತ್ರ

ಕಲಬುರ್ಗಿ: ಜುಲೈ ತಿಂಗಳಲ್ಲಿ ಜಿಲ್ಲೆಯಲ್ಲಿ ಬಿದ್ದ ಅತಿವೃಷ್ಟಿಯಿಂದಾಗಿ ಗ್ರಾಮೀಣ ಭಾಗದ 194 ಕಿ.ಮೀ ಉದ್ದದ ರಸ್ತೆಗಳು ಕೆಟ್ಟುಹೋಗಿವೆ. ಇದರಿಂದ ₹ 718 ಕೋಟಿ ಹಾನಿ ಉಂಟಾಗಿದೆ.

ಜಿಲ್ಲಾ ಉಸ್ತುವಾರಿ ವಹಿಸಿಕೊಂಡಿದ್ದ ಮುರುಗೇಶ ನಿರಾಣಿ ಅವರು ಈಚೆಗೆ ನಡೆಸಿದ ಪ್ರವಾಹ ಪರಿಸ್ಥಿತಿಯ ಅವಲೋಕನ ಸಭೆಯಲ್ಲಿ ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ.

ಇದರೊಂದಿಗೆ ಎಂಟು ‘ಸಿ.ಡಿ’ಗಳೂ ಕುಸಿದಿದ್ದು ₹ 110 ಕೋಟಿ ಹಾನಿ ಸಂಭವಿಸಿದೆ. ಜುಲೈ 7ರಿಂದ 23ರವರೆಗಿನ ಅವಧಿಯಲ್ಲಿ ರಸ್ತೆ, ಸಿ.ಡಿ ಸೇರಿ ಒಟ್ಟು ₹ 828 ಕೋಟಿ ಹಾನಿಯುಂಟಾಗಿದೆ ಎಂದು ಅಂದಾಜಿಸಲಾಗಿದೆ.

ಜಿಲ್ಲೆಯಲ್ಲಿ ಚಿಂಚೋಳಿ ತಾಲ್ಲೂಕಿನಲ್ಲಿಯೇ ಅತಿ ಹೆಚ್ಚು; ಅಂದರೆ 68.10 ಕಿ.ಮೀ ಉದ್ದದ ರಸ್ತೆ ಹಾನಿಯಾಗಿದೆ. ಅದರಲ್ಲೂ ಚಿಂಚೋಳಿ, ಕುಂಚಾವರಂ, ಎತ್ತಿಪೋತಾ, ಘಟ್ಟಂಗೊಟ್ಟ ಮಾರ್ಗದಲ್ಲೇ ಬಹುಪಾಲು ಸಿಮೆಂಟ್‌ ಹಾಗೂ ಡಾಂಬರ್‌ ರಸ್ತೆಗಳು ಕಿತ್ತುಬಂದಿವೆ. ನಂತರ ಸ್ಥಾನದಲ್ಲಿ ಆಳಂದ ತಾಲ್ಲೂಕು 55 ಕಿ.ಮೀ, ಮೂರನೇ ಸ್ಥಾನದಲ್ಲಿ ಕಲಬುರ್ಗಿ ತಾಲ್ಲೂಕು ಇದ್ದು ಇಲ್ಲಿ 50 ಕಿ.ಮೀ ಉದ್ದದ ರಸ್ತೆ ಹಾಳಾಗಿವೆ. ಉಳಿದಂತೆ, ಅಫಜಲಪುರದಲ್ಲಿ 10 ಕಿ.ಮೀ, ಜೇವರ್ಗಿ– 5 ಕಿ.ಮೀ, ಕಾಳಗಿ 5.10 ಕಿ.ಮೀ ರಸ್ತೆ ಹಾಳಾಗಿದೆ. ಯಡ್ರಾಮಿ, ಕಮಲಾಪುರ, ಶಹಾಬಾದ್‌, ಸೇಡಂ, ಚಿತ್ತಾಪುರ ತಾಲ್ಲೂಕುಗಳಲ್ಲು ಕೂಡ ಅತಿವೃಷ್ಟಿ ಸಂಭವಿಸಿದ್ದರೂ ರಸ್ತೆ ಹಾನಿಯಾಗಿಲ್ಲ ಎಂದೂ ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.

ಅಫಜಲಪುರದಲ್ಲಿ 1, ಚಿಂಚೋಳಿ 3, ಚಿತ್ತಾಪುರ 2, ಕಲಬುರ್ಗಿ 1, ಕಾಳಗಿ 1 ಸೇರಿ ಎಂಟು ಸಿ.ಡಿ.ಗಳು ಹಾನಿಗೊಳಗಾಗಿವೆ.

ಮೂಲಸೌಕರ್ಯಗಳಿಗೂ ಧಕ್ಕೆ: ಅತಿಯಾದ ಮಳೆಯಿಂದ ಗೋಡೆ ಕುಸಿದು ಒಬ್ಬರು ಪ್ರಾಣ ಕಳೆದುಕೊಂಡಿದ್ದು, ಇನ್ನೊಬ್ಬರು ಗಾಯಗೊಂಡಿದ್ದಾರೆ. ಎಂಟು ಜಾನುವಾರುಗಳೂ ಅಸುನೀಗಿವೆ.‌

ಒಟ್ಟು 1,268 ಮನೆಗಳಿಗೆ ನೀರು ನುಗ್ಗಿದೆ (ಪ್ರವಾಹದ ನೀರು ಹೊರತುಪಡಿಸಿ). 358 ಮನೆಗಳು ಭಾಗಶಃ ಹಾನಿಗೊಂಡಿವೆ. ಇದರಲ್ಲೂ ಚಿಂಚೋಳಿ ತಾಲ್ಲೂಕೇ ಮುಂಚೂಣಿಯಲ್ಲಿದ್ದು ಒಟ್ಟು 119 ಮನೆಗಳಿಗೆ ಧಕ್ಕೆಯಾಗಿದೆ. ಉಳಿದೆಡೆ ಬಟ್ಟೆ, ಪಾತ್ರೆ, ಧಾನ್ಯಗಳ ಹಾನಿಯನ್ನೂ ಪಟ್ಟಿ
ಮಾಡಲಾಗಿದೆ.

2020ನೇ ಸಾಲಿನಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದ ಕಾರಣ 240 ಕಿ.ಮೀ ಉದ್ದದ ರಸ್ತೆ ಹಾನಿಗೊಂಡಿತ್ತು. ಇದರಲ್ಲಿ ಶೇ 60ರಷ್ಟು ರಸ್ತೆಗಳಿಗೆ ತೇಪೆ ಹಚ್ಚಿ, ದುರಸ್ತಿ ಮಾಡಿಸಲಾಗಿತ್ತು. ಈ ಬಾರಿ ಬಹುಪಾಲು ಹೊಸ ಕಾಮಗಾರಿಗಳೇ ಕಿತ್ತುಹೋಗಿವೆ ಎನ್ನುವುದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಮಾಹಿತಿ.

box

ಅತಿ ಹೆಚ್ಚು ಬೆಳೆ ಹಾನಿ

ಕಲಬುರ್ಗಿ: ಜುಲೈ ತಿಂಗಳಲ್ಲಿ ವಾಡಿಕೆಗಿಂದ ಶೇ 150ರಷ್ಟು ಹೆಚ್ಚು ಮಳೆ ಬಿದ್ದಿದೆ. ಇದರಿಂದ ತೊಗರಿ, ಹೆಸರು, ಸೋಯಾಬಿನ್‌, ಹತ್ತಿ ಬಿತ್ತಿದ ಹೊಲಗಳಲ್ಲಿ ಅಪಾರ ಜೌಗು ಹಿಡಿದು ಬೆಳೆ ಹಾನಿಯಾಗಿದೆ.

ಹತ್ತಿ ಬೆಳೆ ಕಲಬುರ್ಗಿ ತಾಲ್ಲೂಕಿನಲ್ಲಿ 254 ಹೆಕ್ಟೇರ್, ಅಫಜಲಪುರದಲ್ಲಿ 161 ಹೆಕ್ಟೇರ್‌ ಹಾನಿಯಾಗಿದೆ. ಹೆಸರು– ಚಿತ್ತಾಪುರ ತಾಲ್ಲೂಕಿನಲ್ಲಿ ಅತಿಹೆಚ್ಚು ಅಂದರೆ 3040 ಹೆಕ್ಟೇರ್‌ ಹಾಳಾಗಿದೆ. ಚಿಂಚೋಳಿ ತಾಲ್ಲೂಕಿನಲ್ಲಿ 246 ಹೆಕ್ಟೇರ್‌ ಸೋಯಾಬಿನ್‌ 742 ಹೆಕ್ಟೇರ್‌ ರೆಡ್‌ಗ್ರಾಂ, ಸೇಡಂನಲ್ಲಿ 1910 ಹೆಕ್ಟೇರ್‌ ರೆಡ್‌ಗ್ರಾಂ ಹಾಗೂ ಕಲಬುರ್ಗಿಯಲ್ಲಿ 512 ಹೆಕ್ಟೇರ್‌ ರೆಡ್‌ ಗ್ರಾಂ ಹಾನಿಯಾಗಿದೆ. ಅಫಲಜಪುರದಲ್ಲಿ ಮಾತ್ರ 22 ಹೆಕ್ಟೇರ್‌ ಸೂರ್ಯಕಾಂತಿ ಹಾಳಾಗಿದ್ದು, ಇವು ಅತಿ ಹೆಚ್ಚು ಹಾನಿ ಸಂಭವಿಸಿದ ಪ್ರದೇಶಗಳು ಎಂದು ಕೃಷಿ ಇಲಾಖೆ ಗುರುತಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT