ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಆತಂಕ ಸೃಷ್ಟಿಸಿದ ಬೀದಿನಾಯಿಗಳು

450 ಬೀದಿನಾಯಿಗಳ ಸೆರೆ; ಇನ್ನೂ ಉಳಿದಿವೆ ಸಾವಿರಾರು
Last Updated 29 ಜುಲೈ 2018, 16:30 IST
ಅಕ್ಷರ ಗಾತ್ರ

ಕಲಬುರ್ಗಿ: ನಗರದಲ್ಲಿ ಬೀದಿ ನಾಯಿಗಳನ್ನು ಹಿಡಿಯುವ ಕಾರ್ಯಾಚರಣೆ ಮುಂದುವರಿದಿದ್ದು, ಇದುವರೆಗೆ 450 ನಾಯಿಗಳನ್ನು ಹಿಡಿಯಲಾಗಿದೆ. ಆದರೂ ಸಾರ್ವಜನಿಕರ ಆತಂಕ ಕಡಿಮೆಯಾಗಿಲ್ಲ. ಇನ್ನೂ ಸಾವಿರಾರು ನಾಯಿಗಳು ಎಲ್ಲೆಂದರಲ್ಲಿ ಗುಂಪುಗೂಡಿ ಆತಂಕ ಸೃಷ್ಟಿಸುತ್ತಿವೆ.

ನಗರದಲ್ಲಿ ಈಚೆಗೆ ಬೀದಿ ನಾಯಿ, ಬಿಡಾಡಿ ದನಗಳು ಮತ್ತು ಹಂದಿಗಳ ಕಾಟ ಹೆಚ್ಚಾಗಿದೆ. ನಾಯಿಗಳು ಮಕ್ಕಳನ್ನು ಕಚ್ಚಿ ಗಾಯಗೊಳಿಸಿರುವ ಹಲವಾರು ಆತಂಕಕಾರಿ ಘಟನೆಗಳು ನಡೆದಿವೆ. ಸಾರ್ವಜನಿಕರ ಒತ್ತಡ ಹೆಚ್ಚಿದ ನಂತರ ಮಹಾನಗರಪಾಲಿಕೆ ಬೀದಿ ನಾಯಿಗಳನ್ನು ಹಿಡಿಯಲು ಮುಂದಾಗಿದೆ.

ಬೀದಿ ನಾಯಿಗಳನ್ನು ಹಿಡಿಯಲು ಕೇರಳದ ಜನರನ್ನು ಕರೆಸಲಾಗಿದೆ. 500 ನಾಯಿಗಳನ್ನು ಹಿಡಿದು ಸಾಗಿಸುವಂತೆ ಸೂಚಿಸಲಾಗಿದೆ. 15 ದಿನಗಳಲ್ಲಿ 450 ನಾಯಿಗಳನ್ನು ಹಿಡಿದು, ಇಲ್ಲಿಂದ 30ರಿಂದ 40 ಕೀ.ಮೀ ದೂರದ ಕುರಚಲು ಕಾಡಿನಂತಹ ಪ್ರದೇಶಗಳಲ್ಲಿ ಬಿಟ್ಟು ಬರಲಾಗುತ್ತಿದೆ. ಪ್ರತಿಯೊಂದು ನಾಯಿಗೆ ನಗರ ಪಾಲಿಕೆಯಿಂದ ₹250 ಶುಲ್ಕ ನೀಡಲಾಗುತ್ತದೆ.

‘ನಗರದ ಕೆಲವು ಪ್ರದೇಶಗಳಲ್ಲಿ ಮಾಂಸದ ಅಂಗಡಿಗಳ ತ್ಯಾಜ್ಯವನ್ನು ಕಸದೊಂದಿಗೆ ಸುರಿಯಲಾಗುತ್ತಿದೆ. ಅಂತಹ ಅಂಗಡಿಗಳನ್ನು ಗುರುತಿಸಿ ನಗರ ಪಾಲಿಕೆ ಪರಿಸರ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ನಗರದಲ್ಲಿ ನಾಯಿಗಳ ಉಪಟಳ ಹೆಚ್ಚಾಗಿದೆ. ಮಾಂಸದ ತುಂಡುಗಳನ್ನು ತಿನ್ನುವ ನಾಯಿಗಳು ಎಲ್ಲೆಂದರಲ್ಲಿ ಗುಂಪುಗೂಡಿ ದಾಳಿ ನಡೆಸುತ್ತಿವೆ. ಮಾಂಸವನ್ನು ರಸ್ತೆಗೆ ಎಳೆದು ತಂದು ಹಾಕುತ್ತಿವೆ’ ಎಂಬುದು ಸಾರ್ವಜನಿಕರ ಆರೋಪ.

ಪ್ರಮುಖ ರಸ್ತೆಗಳಲ್ಲಿ ರಾತ್ರಿ ಸಂದರ್ಭ ಹತ್ತಾರು ನಾಯಿಗಳ ಗುಂಪು ಬೈಕ್‌ ಸವಾರರನ್ನು ಅಟ್ಟಸಿಕೊಂಡು ಹೋಗುತ್ತವೆ. ಇದರಿಂದ ಭಯಗೊಂಡ ಬೈಕ್‌ ಸವಾರರು ಬಿದ್ದು ಗಾಯಗೊಂಡಿರುವ ಉದಾಹರಣೆಗೂ ಇವೆ.

‘ನಗರದಲ್ಲಿ 2 ಸಾವಿರಕ್ಕೂ ಹೆಚ್ಚು ಬೀದಿ ನಾಯಿಗಳಿರಬಹುದು ಎಂದು ಅಂದಾಜಿಸಲಾಗಿದೆ. 500 ನಾಯಿಗಳನ್ನು ಹಿಡಿಯುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಎಲ್ಲ ನಾಯಿಗಳನ್ನು ಹಿಡಿದು ಅರಣ್ಯಕ್ಕೆ ಸಾಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ಕ್ರಮಕೈಗೊಳ್ಳಲಾಗುವುದು’ ಎಂದು ಪಾಲಿಕೆ ಉಪ ಆಯುಕ್ತ ಆರ್‌.ಪಿ.ಜಾಧವ ತಿಳಿಸಿದರು.

‘ನಗರದಲ್ಲಿ ಹಂದಿಗಳ ಉಪಟಳವೂ ಹೆಚ್ಚಾಗಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿಯೇ ಓಡಾಡುತ್ತಿವೆ. ಹಂದಿಗಳನ್ನು ನಗರದ ಹೊರವಲಯಕ್ಕೆ ಸಾಗಿಸುವಂತೆ ಪಾಲಿಕೆ ಸೂಚಿಸಿದರೂ ಮಾಲೀಕರು ಪಾಲಿಸುತ್ತಿಲ್ಲ. ಪಾಲಿಕೆ ಸಿಬ್ಬಂದಿ ಮೇಲೆಯೇ ಹಲ್ಲೆ ಮಾಡುತ್ತಿದ್ದಾರೆ’ ಎಂದು ಪಾಲಿಕೆ ಅಧಿಕಾರಿಗಳು ಹೇಳುತ್ತಾರೆ.

‘ಪಾಲಿಕೆಯಿಂದ ಮೂರು ತಿಂಗಳ ಹಿಂದೆ ಹಂದಿಗಳನ್ನು ಹಿಡಿಯುವ ಕಾರ್ಯಾಚರಣೆ ನಡೆಸಲಾಗಿತ್ತು. 150 ಹಂದಿಗಳನ್ನು ಹಿಡಿದು ಸಾಗಿಸಲಾಗಿತ್ತು. ಹಂದಿಗಳನ್ನು ಹಿಡಿಯುವರಿಗೆ ಪಾಲಿಕೆಯಿಂದ ಹಣ ಪಾವತಿ ಮಾಡುವುದಿಲ್ಲ. ಬದಲಿಗೆ ಹಂದಿಯನ್ನು ಹಿಡಿದವರೇ ಕೊಂಡೊಯ್ಯುತ್ತಾರೆ. ಇದರಿಂದ ಮಾಲೀಕರು ಆಕ್ರೋಶಗೊಂಡಿದ್ದರು. ನಂತರ ಕಾರ್ಯಾಚರಣೆ ನಿಲ್ಲಿಸಲಾಗಿತ್ತು. ಈಗ ಮತ್ತೆ ಆರಂಭಿಸಲಾಗುವುದು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಶಸ್ತ್ರಚಿಕಿತ್ಸೆ ಅತಿ ದುಬಾರಿ’
ನಾಯಿಗಳ ಸಂಖ್ಯೆಯನ್ನು ನಿಯಂತ್ರಣ ಮಾಡಲು ಗರ್ಭಧಾರಣೆ ತಡೆ ಶಸ್ತ್ರಚಿಕಿತ್ಸೆ ಮಾಡುವ ಪದ್ಧತಿಯೂ ಚಾಲ್ತಿಯಲ್ಲಿದೆ. ಮೂರು ವರ್ಷಗಳ ಹಿಂದೆ ನಗರದಲ್ಲಿಯೂ ಈ ಪ್ರಯೋಗ ಮಾಡಲಾಗಿತ್ತು. ಆದರೆ ಅದು ಅತಿ ದುಬಾರಿ ಎಂಬ ಕಾರಣಕ್ಕೆ ಸ್ಥಗಿತಗೊಳಿಸಲಾಯಿತು.

ಮೂರು ವರ್ಷದ ಹಿಂದೆಯೇ ಒಂದು ನಾಯಿಗೆ ₨ 750 ಪಾವತಿಸಿ ಶಸ್ತ್ರಚಿಕಿತ್ಸೆ ಮಾಡಿಸಲಾಗಿತ್ತು. ಶಸ್ತ್ರಚಿಕಿತ್ಸೆಗೆ ಒಳಗಾದ ನಾಯಿಗಳನ್ನು ಎರಡು ವಾರ ಕಾಪಾಡಬೇಕು. ಇದು ತ್ರಾಸದಾಯಕ ಕೆಲಸವಾಗುವುದರಿಂದ ಯಶಸ್ವಿಯಾಗಲಿಲ್ಲ ಎಂದು ಆರ್‌.ಪಿ.ಜಾದವ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ನಗರದಲ್ಲಿ ಬಿಡಾಡಿ ದನಗಳ ಉಪಟಳ ಹೆಚ್ಚಳವಾಗಿರುವುದು ಗಮನಕ್ಕೆ ಬಂದಿದೆ. ಇವುಗಳನ್ನು ನಗರದ ಹೊರವಲಯಕ್ಕೆ ಸಾಗಿಸಲು ಸೂಕ್ತ ವ್ಯವಸ್ಥೆ ಇಲ್ಲ. ಇದಕ್ಕಾಗಿ ಗೋಶಾಲೆಯೊಂದರ ಜೊತೆ ಮಾತುಕತೆ ನಡೆಯುತ್ತಿದೆ. ರಸ್ತೆಯಲ್ಲಿ ಬೀಡುಬಿಟ್ಟಿರುವ ಬಿಡಾಡಿ ದನಗಳನ್ನು ಹೊರಗೆ ಸಾಗಿಸಿ ಮಾಲೀಕರಿಗೆ ದಂಡ ವಿಧಿಸುವ ಬಗ್ಗೆ ಯೋಜಿಸಲಾಗುತ್ತಿದೆ ಎಂದು ಅವರು ಹೇಳಿದರು.

ನಗರದಲ್ಲಿ ನಾಯಿ ಕಚ್ಚಿದರೆ ಚಿಕಿತ್ಸೆಗಾಗಿ ನಗರಪಾಲಿಕೆಯಿಂದ ₨10 ಸಾವಿರ ಪರಿಹಾರ ನೀಡಲಾಗುತ್ತದೆ. ಅರ್ಜಿ ಸಲ್ಲಿಸಿ ಪರಿಹಾರ ಪಡೆಯಬಹುದು.
- ಆರ್‌.ಪಿ.ಜಾದವ, ನಗರಪಾಲಿಕೆ ಉಪ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT