ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೇಡಂ ಸರ್ಕಾರಿ ಪದವಿ ಪೂರ್ವ ಕಾಲೇಜು | ಹೆಚ್ಚಿದ ದಾಖಲಾತಿ; ಬೋಧನೆಯದ್ದೆ ಸಮಸ್ಯೆ!

Published 21 ಜೂನ್ 2024, 4:50 IST
Last Updated 21 ಜೂನ್ 2024, 4:50 IST
ಅಕ್ಷರ ಗಾತ್ರ

ಸೇಡಂ: ಪಟ್ಟಣದ ಹೃದಯಭಾಗದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರವೇಶ ಪ್ರತಿವರ್ಷ ಹೆಚ್ಚುತ್ತಿರುವುದರಿಂದ ಬೋಧನೆ ಮಾಡುವುದೇ ಉಪನ್ಯಾಸಕರಿಗೆ ಸವಾಲಾಗಿದೆ.

ಕಲಾ-626, ವಿಜ್ಞಾನ-378 ಮತ್ತು ವಾಣಿಜ್ಯ-173ಕ್ಕೂ ಅಧಿಕ ವಿದ್ಯಾರ್ಥಿಗಳ ಸಂಖ್ಯೆಯಿದೆ. ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಕಲಾ ಮತ್ತು ವಿಜ್ಞಾನ ವಿಭಾಗಗಳನ್ನು ‘ಎ’ ಮತ್ತು ‘ಬಿ’ ವರ್ಗಗಳನ್ನಾಗಿ ವಿಂಗಡಿಸಲಾಗಿದೆ. ಮಾಡಿದ ಪಾಠ ತಿಳಿಯಲೆಂದು ಉಪನ್ಯಾಸಕರು ಸ್ವಂತ ಖರ್ಚಿನಲ್ಲಿ ಮೈಕ್ ಖರೀದಿಸಿದ್ದಾರೆ.

1972ರಲ್ಲಿ 35 ವಿದ್ಯಾರ್ಥಿಗಳಿಂದ (ಕಲಾ) ಪ್ರಾರಂಭವಾದ ಪದವಿ ಪೂರ್ವ ಕಾಲೇಜು, ವಿಜ್ಞಾನ ಮತ್ತು ವಾಣಿಜ್ಯ ಸೇರಿದಂತೆ 1100 ದಾಟಿದೆ. ಆರಂಭದಲ್ಲಿ 6 ಮಂಜೂರಾತಿ ಹುದ್ದೆಗಳಿದ್ದವು. ಪ್ರಸ್ತುತ 20 (ಮಂಜೂರಾತಿ) ಸಿಬ್ಬಂದಿಗಳಲ್ಲಿ 14 ಖಾಯಂ ಸಿಬ್ಬಂದಿಗಳು ಕಾರ್ಯದಲ್ಲಿದ್ದಾರೆ. ಪ್ರೌಢಶಾಲೆಯ ಒಂದು ಕೋಣೆಯಿಂದ ಆರಂಭಗೊಂಡ ಕಾಲೇಜು ಗ್ರಂಥಾಲಯ, ಪ್ರಯೋಗಾಲಯ, ಬೋಧನಾ ಕೋಣೆ, ಸಭಾಂಗಣ ಸೇರಿ 20 ಕೋಣೆಗಳಿಗೆ ತಲುಪಿದೆ.

ಸಂಖ್ಯೆಗೆ ಹೆದರಿ ಬಾರದ ಉಪನ್ಯಾಸಕರು: ಕಲಾ, ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ಸಂಖ್ಯೆಗೆ ಹೆದರಿ ಉಪನ್ಯಾಸಕರು ಕಾಲೇಜಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. 2011 ರಿಂದ ಕನ್ನಡ ವಿಷಯ ಅತಿಥಿ ಉಪನ್ಯಾಸಕರಿಂದೇ ನಡೆಯುತ್ತಿದೆ. ಅಲ್ಲದೇ 2018 ರಿಂದ ಸಮಾಜಶಾಸ್ತ್ರ ಹುದ್ದೆ ಖಾಲಿಯಿದ್ದು, ಅತಿಥಿ ಉಪನ್ಯಾಸಕರೇ ಅನಿವಾರ್ಯವೆಂಬಂತಾಗಿದೆ. ದ್ವಿತೀಯ ದರ್ಜೆ ಸಹಾಯಕ ಹುದ್ದೆಗೂ ಬರಲು ಭಯಪಡುತ್ತಿದ್ದಾರೆ ಎಂಬ ಮಾತು ಉಪನ್ಯಾಸಕರದ್ದಾಗಿದೆ. ಎಸ್‌ಡಿಎ ಜವಾಬ್ದಾರಿಯನ್ನು ಉಪನ್ಯಾಸಕರೇ ನಿಭಾಯಿಸುತ್ತಿದ್ದಾರೆ.

ಸುಸಜ್ಜಿತ ಕಟ್ಟಡಕ್ಕೆ ನಿರ್ವಹಣೆಯ ಕೊರತೆ?: ಕಾಲೇಜು ಕಟ್ಟಡ ಸುಸಜ್ಜಿತವಾಗಿದ್ದು, ನಿರ್ವಹಣೆಯ ಕೊರತೆಯೇ ಎದ್ದು ಕಾಣುತ್ತಿದೆ. ಮಳೆಗಾಲದಲ್ಲಿ ಮಳೆ ನೀರು ನಿಂತು ಮೈದಾನವಿಡಿ ಕೆರೆಯಂತಾಗಿ, ಕಲಿಕೆಗೆ ಸಮಸ್ಯೆಯಾಗುತ್ತಿದೆ. ಅಲ್ಲದೆ ಕಾಲೇಜಿನಲ್ಲಿರುವ ಶೌಚಾಲಯಗಳು ನಿರ್ವಹಣೆಯ ಕೊರತೆಯಿಂದಾಗಿ ಗಬ್ಬು ನಾರುತ್ತಿವೆ. ‘ನಾವು ಕಾಲೇಜಿಗೆ ಬಂದಾಗ ಶೌಚಾಲಯಕ್ಕೆ ತೆರಳಬೇಕಾದರೆ ಗಬ್ಬು ವಾಸನೆ ಬರುತ್ತಿದೆ. ಕುಡಿಯುವ ನೀರಿನ ವ್ಯವಸ್ಥೆಯೂ ಸಮರ್ಪಕವಾಗಿ ಇರುವುದಿಲ್ಲ. ನಮಗೆ ಅತ್ಯಂತ ಮುಜುಗರವಾಗುತ್ತದೆ’ ಎಂದು ವಿದ್ಯಾರ್ಥಿನಿಯರು ಅಸಹಾಯಕತೆ ತೋಡಿಕೊಂಡರು.

ಬೇಕಿದೆ ಸಿಬ್ಬಂದಿ: ಕಾಲೇಜಿನಲ್ಲಿ ಒಟ್ಟು 1100ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕೇವಲ 14 ಬೋಧಕರು ಮಾತ್ರ ಪಾಠ ಬೋಧನೆ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಅದಕ್ಕನುಗುಣವಾಗಿ ಉಪನ್ಯಾಸಕರ ಸಂಖ್ಯೆ ಹೆಚ್ಚಬೇಕಿದೆ. ಕನ್ನಡ, ಇಂಗ್ಲೀಷ, ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ಸಮಾಜಶಾಸ್ತ್ರ ಸೇರಿದಂತೆ ದ್ವಿತೀಯ ದರ್ಜೆ, ಪ್ರಥಮ ದರ್ಜೆ ಸಹಾಯಕ,ಗ್ರೂಪ್-ಡಿ ಸೇರಿದಂತೆ ಇನ್ನಿತರ ಹುದ್ದೆಗಳ ಸೃಷ್ಟಿಯಾಗಬೇಕಿದೆ ಎನ್ನುವುದು ವಿದ್ಯಾರ್ಥಿಗಳ ಒತ್ತಾಸೆಯಾಗಿದೆ.

ಸಮಸ್ಯೆಗಳ ಮಧ್ಯೆಯೂ ಉತ್ತಮ ಫಲಿತಾಂಶ: ವಿವಿಧ ಸಮಸ್ಯೆಗಳು ಕಾಲೇಜಿನಲ್ಲಿ ತಾಂಡವಾಡುತ್ತಿದ್ದರೂ ಸಹ ಈಚೆಗೆ ಪ್ರಕಟಗೊಂಡ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಕಾಲೇಜು ಉತ್ತಮ ಫಲಿತಾಂಶ ಪಡೆದಿದೆ.

ಕಲಾ, ವಿಜ್ಞಾನ ಮತ್ತು ವಾಣಿಜ್ಯ ಸೇರಿ ಒಟ್ಟು 9 ಅಗ್ರಶ್ರೇಣಿಯಲ್ಲಿ ವಿದ್ಯಾರ್ಥಿಗಳು ಪಾಸಾಗಿದ್ದು, ಕಲಾ ವಿಭಾಗದ ವಿದ್ಯಾರ್ಥಿನಿ ಸುಹಾನಾ ಬೇಗಂ (ಶೇ 96.33) ಅಂಕ ಪಡೆದು ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಳು. ಕಾಲೇಜಿನ ಇತಿಹಾಸದಲ್ಲಿಯೇ ಇದು ದಾಖಲಾರ್ಹ ಸಾಧನೆ ಎಂದು ಸಿಬ್ಬಂದಿಗಳು ಮಾಹಿತಿ ನೀಡಿದರು.

ಕಾಲೇಜಿಗೆ ಸರ್ಕಾರ ಆದರ್ಶ ಕಾಲೇಜು ಎಂದು 2023-2024ನೇ ವರ್ಷ ಘೋಷಿಸಿದ್ದರಿಂದ ಉಪನ್ಯಾಸಕ ವರ್ಗದಲ್ಲಿ ಸಂತಸ ಮೂಡಿದೆ. ಅಲ್ಲದೇ ಕಾಲೇಜಿನಲ್ಲಿ ಓದಿದ ಎಂ.ರಾಚಪ್ಪ ಪ್ರಸ್ತುತ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಸೂರ್ಯಕಾಂತ ಮತ್ತು ಚಂದ್ರಕಾಂತ ಅವಳಿ ಸಹೋದರರು ಯೋಗಸಾಧನೆಯಲ್ಲಿ ರಾಜ್ಯಮಟ್ಟ ತಲುಪಿದ್ದು ದಾಖಲಾರ್ಹ.

ಕಾಲೇಜಿನ ವಿದ್ಯಾರ್ಥಿಗಳಿಗೆ ಉಪನ್ಯಾಸಕ ಬೋಧಿಸುತ್ತಿರುವುದು
ಕಾಲೇಜಿನ ವಿದ್ಯಾರ್ಥಿಗಳಿಗೆ ಉಪನ್ಯಾಸಕ ಬೋಧಿಸುತ್ತಿರುವುದು
ಕಾಲೇಜಿನಲ್ಲಿರುವ ವಿವಿಧ ಸಮಸ್ಯೆಗಳನ್ನು ಬಗೆಹರಿಸುವುದರೊಂದಿಗೆ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಕಾಲೇಜಿಗೆ ಕಾಯಂ ಹುದ್ದೆಗಳ ಭರ್ತಿಯ ಅವಶ್ಯವಿದೆ
ಪಂಡಿತರಾವ ಪಾಟೀಲ ಪ್ರಾಚಾರ್ಯ ಸರ್ಕಾರಿ ಪಿಯು ಕಾಲೇಜು ಸೇಡಂ
ನಮ್ಮ ಕಾಲೇಜಿನಲ್ಲಿ ಉತ್ತಮ ಅನುಭವವುಳ್ಳ ಉಪನ್ಯಾಸಕ ಬಳಗವಿದ್ದು ಸಮರ್ಪಕ ಆಡಳಿತಾತ್ಮಕ ನಿರ್ವಹಣೆ ಮಾಡುವ ಅವಶ್ಯಕತೆ ಇದೆ
ಸೌಮ್ಯ ವಿದ್ಯಾರ್ಥಿನಿ
ಕಾಲೇಜಿನ ಪ್ರಯೋಗಾಲಯದಲ್ಲಿ ವಿವಿಧ ಸಾಮಾಗ್ರಿಗಳ ಕೊರತೆಯಿದೆ. ಸಲಕರಣೆಗಳ ಪ್ರಯೋಗಾಲಯಕ್ಕೆ ಆದ್ಯತೆ ಸಿಗಬೇಕು.
ವಿಶ್ವರಾಜ ವಿದ್ಯಾರ್ಥಿ
ಕಾಲೇಜು ಪಟ್ಟಣದಲ್ಲಿರುವುದರಿಂದ ಸಾವಿರಾರು ವಿದ್ಯಾರ್ಥಿಗಳು ಕಾಲೇಜಿಗೆ ಬರುತ್ತಾರೆ. ವಿದ್ಯಾರ್ಥಿಗಳ ಶೌಚಾಲಯ ಮತ್ತು ನೀರಿನ ಕಡೆಗೆ ಗಮನ ಕೊಡಬೇಕು.
ನಾಗರಾಜ ಹಾಬಾಳ ಸ್ಥಳೀಯ ನಿವಾಸಿ
ಮುಧೋಳ: ಖಾಲಿ ಹುದ್ದೆಗಳೇ ಹೆಚ್ಚು 
ಸೇಡಂ ತಾಲ್ಲೂಕಿನ ಮುಧೋಳ ಗ್ರಾಮದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 10 ಮಂಜೂರಾತಿ ಹುದ್ದೆಗಳಲ್ಲಿ ಕೇವಲ ಮೂವರು ಮಾತ್ರ ಇದ್ದಾರೆ. ಕಲಾ ವಿಭಾಗದಲ್ಲಿ 70ಕ್ಕೂ ಅಧಿಕ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಇತಿಹಾಸ ಕನ್ನಡ ಮತ್ತು ಇಂಗ್ಲಿಷ್ ವಿಷಯಗಳಿಗೆ ಕಾಯಂ ಉಪನ್ಯಾಸಕರನ್ನು ಹೊರತು ಪಡಿಸಿ ಐಚ್ಛಿಕ ವಿಷಯಗಳಾದ ಇಂಗ್ಲಿಷ್ ಹಿಂದಿ ಸಮಾಜಶಾಸ್ತ್ರ ಮತ್ತು ರಾಜ್ಯಶಾಸ್ತ್ರ ಅತಿಥಿ ಶಿಕ್ಷಕರಿಂದಲೇ ನಡೆಯುತ್ತಿವೆ. ಅಲ್ಲದೇ ಪ್ರಾಚಾರ್ಯ ಎಸ್.ಡಿ.ಎ ಮತ್ತು ಗ್ರೂಪ್ ಡಿ ಹುದ್ದೆ ಖಾಲಿ ಇವೆ’ ಎಂದು ಶಾಲೆಯ ಪ್ರಭಾರ ಪ್ರಾಚಾರ್ಯ ಸಂತೋಷ ರಾಠೋಡ ಮತ್ತು ಉಪನ್ಯಾಸಕ ಡಾ.ಸಿದ್ದಲಿಂಗ ಶಾಕಾಪರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು. ಮಳಖೇಡ:ಬೇಕಿದೆ ಕಾಂಪೌಂಡ್ ತಾಲ್ಲೂಕಿನ ಮಳಖೇಡ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಆವರಣ ಗೋಡೆ ಇಲ್ಲ. ಗ್ರಾಮ ಕೆಲವರು ಕಾಲೇಜಿನ ಆವರಣದೊಳಗೆ ನುಗ್ಗಿ ಮದ್ಯೆ ಸೇವಿಸುವುದು ಜೂಜಾಟ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಮಾಡುತ್ತಾರೆ. ಕಿಟಕಿ ಗಾಜು ಬಾಗಿಲು ಮುರಿಯುತ್ತಿದ್ದಾರೆ. ಆವರಣದಲ್ಲಿ ಎಲ್ಲಿ ನೋಡಿದರೂ ಮದ್ಯದ ಖಾಲಿ ಬಾಟಲಿಗಳೇ ಕಾಣುತ್ತವೆ. ಆದಷ್ಟು ಶೀಘ್ರದಲ್ಲಿ ಕಾಲೇಜಿಗೆ ತಡೆಗೋಡೆ ನಿರ್ಮಾಣವಾಗಬೇಕು’ ಎಂದು ಕಾಲೇಜಿನ ಪ್ರಾಚಾರ್ಯ ಅಶೋಕ ಶಾಸ್ತ್ರಿ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT