ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಸ್ಟೆಲ್‌ ಚಾವಣಿ ಪ್ಲಾಸ್ಟರ್ ಬಿದ್ದು 4 ವಿದ್ಯಾರ್ಥಿಗಳಿಗೆ ಗಾಯ

Published 11 ಜುಲೈ 2024, 6:56 IST
Last Updated 11 ಜುಲೈ 2024, 6:56 IST
ಅಕ್ಷರ ಗಾತ್ರ

ಅಫಜಲಪುರ: ಪಟ್ಟಣದ ಹೊರವಲಯದಲ್ಲಿರುವ ಹಿಂದುಳಿದ ವರ್ಗಗಳ ಬಾಲಕರ ಮೆಟ್ರಿಕ್ ಪೂರ್ವ ವಸತಿ ನಿಲಯದ ಮೇಲ್ಚಾವಣಿ ಮಳೆಯಿಂದ ತೇವಗೊಂಡ ಪರಿಣಾಮ ಪ್ಲಾಸ್ಟರ್ ತುಕಡಿಗಳು ಬಿದ್ದು ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ಮೂರು ಅಂತಸ್ತಿನ ವಸತಿ ನಿಲಯವಿದ್ದು ಮಳೆ ಬಂದಾಗ ನೀರು ಸರಿಯಾಗಿ ಹರಿದು ಮುಂದೆ ಹೋಗದಿರುವುದರಿಂದ ಕೆಲವು ಕೋಣೆಗಳ ಮೇಲ್ಚಾವಣಿಯ ಪ್ಲಾಸ್ಟರ್ ಬೀಳುತ್ತಿದೆ. ಕೋಣೆಯಲ್ಲಿ ಎರಡು ಕಡೆ ಪ್ಲಾಸ್ಟರ್ ತುಕಡಿ ಬಿದ್ದಿದೆ. ಮೂರನೇ ಮಹಡಿಯಲ್ಲಿ ಮಳೆ ನೀರು ಸಂಪೂರ್ಣವಾಗಿ ಹೊರಗೆ ಹರಿದು ಹೋದರೆ ಸಮಸ್ಯೆ ಆಗುವುದಿಲ್ಲ. ಒಂದು ಕಡೆ ಪ್ಲಾಸ್ಟರ್ ಮಾಡಿದ ಮೇಲೆ ಸರಿಯಾಗಿ ಕ್ಯೂರಿಂಗ್ ಆಗದಿರುವುದರಿಂದ ಅದು ಗಟ್ಟಿಯಾಗಿ ನಿಲ್ಲುತ್ತಿಲ್ಲ ಎಂದು ಹೇಳಲಾಗುತ್ತಿದೆ. ವಸತಿ ನಿಲಯದ ಕಿಟಕಿಗಳು, ಬಾಗಿಲುಗಳ ಪ್ಲಾಸ್ಟರ್ ಅಲ್ಲಲ್ಲಿ ಕಿತ್ತು ಹೋಗುತ್ತಿವೆ ಮತ್ತು ಸ್ನಾನಗೃಹ, ಶೌಚಾಲಯಗಳಲ್ಲಿ ನೆಲಕ್ಕೆ ಹಾಕಿರುವ ಟೈಲ್ಸ್ ಕಲ್ಲುಗಳು ಒಡೆದು ಹೋಗುತ್ತಿವೆ.

ಈ ಕುರಿತು ವಸತಿ ನಿಲಯ ಮೇಲ್ವಿಚಾರಕ ವಿಜಯ ಕುಮಾರ್ ಕುದರಿ ಮಾಹಿತಿ ನೀಡಿ, ‘ವಸತಿ ನಿಲಯದ ಮೂರನೇ ಮಹಡಿ ಕೋಣೆ ಮೇಲೆ ಮರಳು ಹಾಕಿದ್ದರಿಂದ ಆ ಮರಳು ತೇವಗೊಂಡು ಕೆಳಗಿನ ಪ್ಲಾಸ್ಟರ್ ತುಕಡಿಗಳು ಬಿದ್ದಿರುವುದರಿಂದ ನಾಲ್ವರು ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ. ಒಬ್ಬ ವಿದ್ಯಾರ್ಥಿಗೆ ಹೆಚ್ಚು ಗಾಯಗಳಾಗಿದ್ದು, ಎಲ್ಲರಿಗೂ ಚಿಕಿತ್ಸೆ ನೀಡಲಾಗಿದೆ. ಬಿದ್ದಿರುವ ಚಾವಣಿಯ ಪ್ಲಾಸ್ಟರ್ ಒಂದು ಕಡೆ ದುರಸ್ತಿ ಮಾಡಲಾಗಿದೆ. ಇನ್ನೊಂದು ಕಡೆ ದುರಸ್ತಿ ಮಾಡಲಾಗುತ್ತದೆ’ ಎಂದರು.

‘ವಸತಿ ಕೋಣೆಯಲ್ಲಿ ಸೋಮವಾರ ಸಂಜೆ 6 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದರು. ಏಕಾಏಕಿ ಮೇಲ್ಚಾವಣಿಯ ಪ್ಲಾಸ್ಟರ್ ತುಕಡಿಗಳು ವಿದ್ಯಾರ್ಥಿಗಳಾದ ಉದಯ ಶ್ರೀಮಂತ, ಶವರಸಿದ್ಧ ಹಿಕ್ಕಲಗುಂತಿ, ರೋಹಿತ್ ಯಾದವ್ ಹಾಗೂ ಬಾಳಪ್ಪ ಎಂಬ ವಿದ್ಯಾರ್ಥಿಗಳ ತಲೆಯ ಮೇಲೆ ಬಿದ್ದು ಪೆಟ್ಟಾಗಿ ರಕ್ತ ಬರುತ್ತಿತ್ತು. ತಕ್ಷಣ ವಿದ್ಯಾರ್ಥಿಗಳಿಗೆ ಚಿಕಿತ್ಸೆ ಕೊಡಿಸಲಾಗಿದೆ’ ವಿಜಯ್ ಕುಮಾರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT