ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿಫಾ ವೈರಾಣು’: 12ಕ್ಕೇರಿದ ಸಾವಿನ ಸಂಖ್ಯೆ

ಒಂದೇ ಕುಟುಂಬದ ನಾಲ್ವರ ಸಾವು: ಸೋಂಕಿತರ ಸಂಖ್ಯೆ 15ಕ್ಕೆ ಹೆಚ್ಚಳ
Last Updated 24 ಮೇ 2018, 19:30 IST
ಅಕ್ಷರ ಗಾತ್ರ

ಕೋಯಿಕ್ಕೋಡ್: ನಿಫಾ ವೈರಾಣು ಸೋಂಕಿಗೆ ಗುರುವಾರ ಪೆರಂಬಾರದ ಚಂಗರೊತ್ತು ನಿವಾಸಿ ವಿ.ಮೂಸಾ (62) ಬಲಿಯಾಗಿದ್ದು, ಇದರಿಂದ ಸಾವಿನ ಸಂಖ್ಯೆ 12ಕ್ಕೆ ತಲುಪಿದೆ.

‘ಕಳೆದ ಕೆಲವು ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂಸಾ ಜೀವರಕ್ಷಕ ವ್ಯವಸ್ಥೆಯಲ್ಲಿದ್ದರು’ ಎಂದು ಕೋಯಿಕ್ಕೋಡ್ ಜಿಲ್ಲಾ ವೈದ್ಯಾಧಿಕಾರಿ ಡಾ. ಜಯಶ್ರೀ ತಿಳಿಸಿದ್ದಾರೆ.

ಮೂಸಾ ಪುತ್ರರಾದ ಮೊಹಮ್ಮದ್ ಸಲೀಹ್ (28), ಮೊಹಮ್ಮದ್ ಸಾದಿಕ್ (26) ಹಾಗೂ ಸಂಬಂಧಿ ಮರಿಯಮ್ ಈ ಮೊದಲು ಮೃತಪಟ್ಟಿದ್ದಾರೆ. ಇವರಲ್ಲಿ ಇಬ್ಬರಿಗೆ ಸೋಂಕು ತಗುಲಿದ್ದು ದೃಢಪಟ್ಟಿದೆ. ಆದರೆ ಮೂಸಾ ಅವರ ಒಬ್ಬ ಪುತ್ರನ ರಕ್ತದ ಮಾದರಿ ಮಾತ್ರ ನಿಫಾ ಸೋಂಕು ಪರೀಕ್ಷೆಗೆ ಒಳಪಟ್ಟಿಲ್ಲ.

ಕೋಯಿಕ್ಕೋಡ್‌ನ ಸರ್ಕಾರಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ದಾಖಲಾಗಿರುವ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬರಿಗೆ ಸೋಂಕು ತಗುಲಿರುವುದು ಗುರುವಾರ ದೃಢಪಟ್ಟಿದೆ. ಇದರಿಂದಾಗಿ ರಾಜ್ಯದಲ್ಲಿ ಸೋಂಕಿಗೆ ತುತ್ತಾದವರ ಸಂಖ್ಯೆ 15ಕ್ಕೆ ಏರಿದೆ. ವೈರಾಣು ಸಂಸ್ಥೆಗೆ ಕಳುಹಿಸಲಾಗಿರುವ 160 ಜನರ ರಕ್ತದ ಮಾದರಿಗಳ ವರದಿಗಾಗಿ ರಾಜ್ಯ ಆರೋಗ್ಯ ಇಲಾಖೆ ಕಾಯುತ್ತಿದೆ.

ಕಾರ್ಯಕ್ರಮ ರದ್ದು: ಇದೇ 31ರವರೆಗೆ ನಿಗದಿಯಾಗಿದ್ದ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳನ್ನು ಕೋಯಿಕ್ಕೋಡ್ ಜಿಲ್ಲಾಡಳಿತ ರದ್ದುಪಡಿಸಿದೆ.

ಎಲ್ಲಾ ಜಿಲ್ಲೆಗಳಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದೆ.  ಕೋಯಿಕ್ಕೋಡ್‌ನಲ್ಲಿ ಎಲ್ಲಾ ತರಬೇತಿ ಕಾರ್ಯಕ್ರಮಗಳು ಹಾಗೂ ಬೇಸಿಗೆ ಶಿಬಿರಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಆದರೆ ಬೇಸಿಗೆ ರಜೆ ಮುಗಿದ ಬಳಿಕ ಶಾಲೆಗಳನ್ನು ಪುನರಾರಂಭಿಸುವ ಕುರಿತು ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ.

ಲಿನಿ ಸ್ಮರಣೆ: ಸೋಂಕಿತರಿಗೆ ಚಿಕಿತ್ಸೆ ನೀಡುವ ವೇಳೆ ಸ್ವತಃ ಸೋಂಕಿಗೆ ಗುರಿಯಾಗಿ ಮೃತಪಟ್ಟ ದಾದಿ ಲಿನಿ ಪುದುಶ್ಶೇರಿಗೆ ಗೌರವ ಸಲ್ಲಿಸಲು ಕೇರಳದ ದಾದಿಯರು ಹಾಗೂ ನರ್ಸಿಂಗ್ ವಿದ್ಯಾರ್ಥಿಗಳು ಸೇರಿದಂತೆ ನೂರಾರು ಜನರು ಮೋಂಬತ್ತಿ ಬೆಳಗಿದರು.

ಬಸ್‌ ಪ್ರಯಾಣಿಕರ ಮೇಲೂ ನಿಗಾ (ಬೆಂಗಳೂರು ವರದಿ): ‘ನಿಫಾ ವೈರಸ್‌ ಹರಡದಂತೆ ಕ್ರಮ ಕೈಗೊಳ್ಳುವ ಉದ್ದೇಶದಿಂದ ಕೇರಳದಿಂದ ಬಂದು ಹೋಗುವ ಬಸ್‌ಗಳ ಮೇಲೆ ತೀವ್ರ ನಿಗಾ ಇರಿಸಬೇಕು’ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ಹೇಳಿದರು.

‘ಬಸ್‌ಗಳ ಮೇಲೆ ಭಿತ್ತಿಪತ್ರಗಳನ್ನು ಅಂಟಿಸಿ ಜಾಗೃತಿ ಮೂಡಿಸಬೇಕು. ಚಾಲಕರು ರಜೆ ಕೇಳಿದರೆ ಅವರ ಆರೋಗ್ಯದ ಕುರಿತು ಮಾಹಿತಿ ಪಡೆದುಕೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.

**

ಸಾಗರದಲ್ಲಿ ‘ನಿಫಾ’ ಶಂಕೆ

ಶಿವಮೊಗ್ಗ: ಸಾಗರದ ಶಿರವಂತೆಯ ಯುವಕನಿಗೆ ನಿಫಾ ವೈರಾಣು ತಗುಲಿರಬಹುದು ಎಂದು ಅಲ್ಲಿನ ವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ.

ಶಿರವಂತೆಯ ಮಿಥುನ್ (21) ಕೆಲವು ದಿನಗಳ ಹಿಂದೆ ಕೇರಳಕ್ಕೆ ಹೋಗಿ ಬಂದಿದ್ದರು. ಎರಡು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿತ್ತು. ಮೇಲುನೋಟಕ್ಕೆ ನಿಫಾ ರೋಗ ಲಕ್ಷಣಗಳು ಕಾಣಿಸಿಕೊಂಡ ಕಾರಣ ಮನೆಯಲ್ಲೇ ತಪಾಸಣೆ ನಡೆಸಿದ ವೈದ್ಯರು ಅವರ ರಕ್ತದ ಮಾದರಿ ಸಂಗ್ರಹಿಸಿ ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

ಮರತ್ತೂರು ಗ್ರಾಮದ ಬಾವಿಯಲ್ಲಿ ಎರಡು ಬಾವಲಿ ಸತ್ತು ಬಿದ್ದಿರುವ ಮಾಹಿತಿ ಸಿಕ್ಕಿದ್ದು, ಅಲ್ಲಿ ವಾಸಿಸುತ್ತಿದ್ದ ಇಬ್ಬರ ರಕ್ತದ ಮಾದರಿಯನ್ನೂ ಪುಣೆಗೆ ಕಳುಹಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.

**

ದಕ್ಷಿಣ ಕನ್ನಡದಲ್ಲಿ ಸೋಂಕು ಇಲ್ಲ

ಮಂಗಳೂರು: ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಯಾವುದೇ ಭಾಗದಲ್ಲಿ ನಿಫಾ ಸೋಂಕು ಪತ್ತೆಯಾಗಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಸ್.ಸಸಿಕಾಂತ್ ಸೆಂಥಿಲ್‌ ಅವರು ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ‘ನಿಫಾ ಸೋಂಕು ತಗುಲಿರುವ ಶಂಕೆ ಮೇಲೆ ಇಬ್ಬರ ಕಫದ ಮಾದರಿಗಳನ್ನು ಸಂಗ್ರಹಿಸಿ ಮಣಿಪಾಲದ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಎರಡೂ ಪ್ರಕರಣಗಳಲ್ಲಿ ನಿಫಾ ವೈರಸ್‌ ಪತ್ತೆಯಾಗಿಲ್ಲ ಎಂಬ ವರದಿ ಬಂದಿದೆ’ ಎಂದರು.

ಮೊದಲ ಪ್ರಕರಣದಲ್ಲಿ, ಕೋಯಿಕ್ಕೋಡ್‌ನ ವೈದ್ಯಕೀಯ ಕಾಲೇಜೊಂದರ ಉದ್ಯೋಗಿಯಾಗಿರುವ ಮಹಿಳೆ ಮಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ನಿಫಾ ವೈರಾಣು ಸೋಂಕು ತಗುಲಿರಬಹುದು ಎಂಬ ಶಂಕೆಯಿಂದ ಕಫದ ಮಾದರಿ ಸಂಗ್ರಹಿಸಲಾಗಿತ್ತು. ಇನ್ನೊಂದು ಪ್ರಕರಣದಲ್ಲಿ ವ್ಯಕ್ತಿಯೊಬ್ಬರ ಕಫದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಎರಡೂ ಪ್ರಕರಣಗಳ ಪರೀಕ್ಷಾ ವರದಿ ಲಭ್ಯವಾಗಿದೆ ಎಂದು ಅವರು ತಿಳಿಸಿದರು.

ಸೇಂದಿ ನಿರ್ಬಂಧಕ್ಕೆ ಚಿಂತನೆ: ಕೇರಳದಲ್ಲಿ ಈಚಲು ಮರದಿಂದ ತೆಗೆಯುವ ಸೇಂದಿ ಬಳಸುವ ಕುಟುಂಬಗಳಲ್ಲಿ ನಿಫಾ ವೈರಾಣು ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಸೇಂದಿ ಬಳಕೆಯಲ್ಲಿದೆ. ಜಿಲ್ಲೆಯಲ್ಲಿ ಸೇಂದಿ ಬಳಕೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವ ಕುರಿತು ಚರ್ಚೆ ನಡೆಯುತ್ತಿದೆ. ಶೀಘ್ರದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

**

ಬಸ್‌ ಪ್ರಯಾಣಿಕರ ಮೇಲೂ ನಿಗಾ

ಬೆಂಗಳೂರು: ‘ನಿಫಾ ವೈರಸ್‌ ಹರಡದಂತೆ ಕ್ರಮ ಕೈಗೊಳ್ಳುವ ಉದ್ದೇಶದಿಂದ ಕೇರಳದಿಂದ ಬಂದು ಹೋಗುವ ಬಸ್‌ಗಳ ಮೇಲೆ ತೀವ್ರ ನಿಗಾ ಇರಿಸಬೇಕು’ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ಹೇಳಿದರು.

‘ಬಸ್‌ಗಳ ಮೇಲೆ ಭಿತ್ತಿಪತ್ರಗಳನ್ನು ಅಂಟಿಸಿ ಜಾಗೃತಿ ಮೂಡಿಸಬೇಕು. ಚಾಲಕರು ರಜೆ ಕೇಳಿದರೆ ಅವರ ಆರೋಗ್ಯದ ಕುರಿತು ಮಾಹಿತಿ ಪಡೆದುಕೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.

**

ನಿಫಾ ಸೋಂಕು ಕೇರಳದಲ್ಲಿ ಸ್ಥಳೀಯವಾಗಿದೆ. ಜನರು ಭೀತಿಪಡುವ ಅಗತ್ಯವಿಲ್ಲ.

–ಅಶ್ವಿನ್ ಕುಮಾರ್ ಚೌಬೆ, ಕೇಂದ್ರ ಆರೋಗ್ಯ ಖಾತೆಯ ರಾಜ್ಯ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT