ಶುಕ್ರವಾರ, ಜೂನ್ 18, 2021
21 °C

ಕಲಬುರ್ಗಿ: ಅಗತ್ಯ ವೈದ್ಯಕೀಯ ಸೌಕರ್ಯಕ್ಕೆ ಎಸ್‌ಯುಸಿಐ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕೊರೊನಾ ಸೋಂಕು ತಡೆಯಲು ರಾಜ್ಯ ಸರ್ಕಾರ ಕೋವಿಡ ರೋಗಿಗಳ ಚಿಕಿತ್ಸೆಗೆ ಬೇಕಾದಷ್ಟು ಆಂಬುಲೆನ್ಸ್, ಹಾಸಿಗೆ, ಆಮ್ಲಜನಕ, ವೆಂಟಿಲೇಟರ್, ಐಸಿಯುಗಳನ್ನು ಸಮರೋಪಾದಿಯಲ್ಲಿ ಒದಗಿಸಬೇಕು ಎಂದು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷ ಒತ್ತಾಯಿಸಿದೆ.

ಈ ಕುರಿತು ‍ಪತ್ರಿಕಾ ಹೇಳಿಕೆ ನೀಡಿರುವ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್‌.ವಿ.ದಿವಾಕರ, ‘ಅಗತ್ಯ ಔಷಧಿಗಳ ಸುಗಮ ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಇತರ ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆಯ ಲಭ್ಯತೆಯನ್ನು ಖಾತ್ರಿಪಡಿಸಬೇಕು. ವೈದ್ಯರು, ದಾದಿಯರು, ಪ್ರಯೋಗಾಲಯ ತಜ್ಞರು, ಡಿ ಗ್ರೂಪ್ ನೌಕರರ ಕೊರತೆಯನ್ನು ಸರಿಪಡಿಸಿ, ನೇಮಕಾತಿ ನಡೆಸಿ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಬೇಕು. ಮುಂಚೂಣಿ ಕಾರ್ಯಕರ್ತರಾದ ವೈದ್ಯರು, ದಾದಿಯರು, ಆಶಾ ಕಾರ್ಯಕರ್ತೆಯರು ಮೊದಲಾದವರಿಗೆ ಅಗತ್ಯವಿರುವಷ್ಟು ಮಾಸ್ಕ್, ಸಾನಿಟೈಸರ್, ಸುರಕ್ಷಾ ಕಿಟ್ ಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಕಠಿಣ ಲಾಕ್ ಡೌನ್ ಸಂದರ್ಭದಲ್ಲಿ ಉದ್ಯೋಗ ನಾಶವನ್ನು ತಡೆಗಟ್ಟಿ. ಜೀವನೋಪಾಯ ಕಳೆದುಕೊಳ್ಳುವ ಬೀದಿಬದಿ ವ್ಯಾಪಾರಿಗಳು, ಅಟೊ–ಟ್ಯಾಕ್ಸಿ ಚಾಲಕರು, ಗಾರ್ಮೆಂಟ್ಸ್ ಕಾರ್ಮಿಕರು, ಮನೆಗೆಲಸದವರು, ಸಣ್ಣ ವ್ಯಾಪಾರಿಗಳು, ಸ್ವಂತ ಕಸುಬು ನಡೆಸುವ ದೋಬಿಗಳು, ಕ್ಷೌರಿಕರು, ಚಮ್ಮಾರರು, ದರ್ಜಿಗಳು ಮೊದಲಾದವರೆಲ್ಲರಿಗೆ ಮಾಸಿಕ ₹ 7500 ಸಹಾಯಧನ ಒದಗಿಸಿ. ಬಡವರು ಹಸಿವೆಗೆ ಬಲಿಯಾಗದಂತೆ ತಡೆಯಲು ಪಡಿತರ ಮೂಲಕ ತಲಾ 10 ಕೆ.ಜಿ ಅಕ್ಕಿ, ಅಡುಗೆ ಎಣ್ಣೆ, ಬೇಳೆಕಾಳುಗಳು, ಸಕ್ಕರೆ ಮೊದಲಾದ ಅಗತ್ಯ ವಸ್ತುಗಳನ್ನು ಪೂರೈಸಬೇಕು. ಎಲ್ಲರಿಗೂ ಸಾರ್ವತ್ರಿಕವಾಗಿ ಉಚಿತ ಲಸಿಕೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಕೋವಿಡ್ ಲಾಕ್‌ಡೌನ್‌ ನಿರ್ಬಂಧಗಳ ದುರುಪಯೋಗ ಪಡೆದುಕೊಂಡು ಜನವಿರೋಧಿ ನೀತಿಗಳ ಜಾರಿಯನ್ನು ಕೈಬಿಡಬೇಕು. ಖಾಸಗೀಕರಣ, ಕಾರ್ಮಿಕ ವಿರೋಧಿ–ರೈತ ವಿರೋಧಿ ಕಾನೂನುಗಳ ಜಾರಿ, ರಸಗೊಬ್ಬರ ದರ ಏರಿಕೆ, ಆಸ್ತಿ ತೆರಿಗೆ ಏರಿಕೆ, ಶಿಕ್ಷಣದ ಶುಲ್ಕಗಳ ಏರಿಕೆ ಇತ್ಯಾದಿ ತೀರ್ಮಾನಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ದಿವಾಕರ ಒತ್ತಾಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು