ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಆರ್‌‍ಪಿ ಪರಿಷ್ಕರಿಸದಿದ್ದರೆ ಹೋರಾಟ

ರಾಜ್ಯ ಕಬ್ಬುಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಎಚ್ಚರಿಕೆ
Last Updated 17 ಸೆಪ್ಟೆಂಬರ್ 2021, 4:03 IST
ಅಕ್ಷರ ಗಾತ್ರ

ಕಲಬುರ್ಗಿ: ‘ಕಬ್ಬಿಗೆ ಕೇಂದ್ರ ಸರ್ಕಾರ ನಿಗದ ಮಾಡಿದ ಎಫ್‌ಆರ್‌ಪಿ (ನ್ಯಾಯಸಮ್ಮತ ಹಾಗೂ ಮೌಲ್ಯಾಧಾರಿತ ಬೆಲೆ) ಅವೈಜ್ಞಾನಿಕವಾಗಿದ್ದು, ತಕ್ಷಣ ಇದನ್ನು ಪುನರ್‌ ಪರಿಶೀಲಿಸಬೇಕು. ಇಲ್ಲದಿದ್ದರೆ ಅ. 5ರಂದು ಬೆಂಗಳೂರಿನ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು’ ಎಂದು ರಾಜ್ಯ ಕಬ್ಬುಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಎಚ್ಚರಿಸಿದರು.

‘ಎರಡು ವರ್ಷಗಳಿಂದ ಕಬ್ಬಿನ ಎಫ್‌ಆರ್‌ಪಿ ನಿಗದಿ ಮಾಡದೆ ನಿರ್ಲಕ್ಷ್ಯ ವಹಿಸಿದ್ದ ಕೇಂದ್ರ ಸರ್ಕಾರ ಈಗ ಕೇವಲ ₹5 ರಷ್ಟು ದರ ಹೆಚ್ಚಿಸಿ ರೈತರಿಗೆ ಅನ್ಯಾಯ ಮಾಡಿದೆ. ಈ ಹಿಂದೆ ಪ್ರತಿ ಕ್ವಿಂಟಲ್‌ಗೆ ₹ 285 ಇದ್ದ ದರವನ್ನು ₹ 290ಕ್ಕೆ ಹೆಚ್ಚಿಸಿದೆ. ‌ಈ ಬಿಡಿಗಾಸಿನಿಂದ ರೈತರಿಗೆ ಏನೂ ಲಾಭ ಬರುವುದಿಲ್ಲ. ಆದ್ದರಿಂದ ಕನಿಷ್ಠ ₹ 500ಕ್ಕೆ ಹೆಚ್ಚಿಸಬೇಕು’ ಎಂದು ಅವರು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ
ಆಗ್ರಹಿಸಿದರು.

‘ಉತ್ತರ ಪ್ರದೇಶದಲ್ಲಿ ಪ್ರತಿ ಕ್ವಿಂಟಲ್‌ಗೆ ₹ 3200 ದರವನ್ನು ಅಲ್ಲಿನ ರಾಜ್ಯ ಸರ್ಕಾರವೇ ನಿಗದಿ ಮಾಡಿದೆ. ಆದರೆ, ನಮ್ಮಲ್ಲಿ ಇನ್ನೂ ₹ 2400ರ ಒಳಗೆ ಇದೆ. ಉತ್ತರ ಪ್ರದೇಶಕ್ಕಿಂತಲೂ ಹೆಚ್ಚು ಗುಣಮಟ್ಟದ ಕಬ್ಬು ರಾಜ್ಯದಲ್ಲಿ ಬೆಳೆಯಲಾಗುತ್ತದೆ. ಈ ಅನ್ಯಾಯವನ್ನು ಸರಿಪಡಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದರು.

‘ಎಲ್ಲ ಕಬ್ಬು ಕಾರ್ಖಾನೆಗಳಿಗೂ ಶೇ 25ರಷ್ಟು ಎಥೆನಾಲ್‌ ಉತ್ಪಾದನೆ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಇದಕ್ಕೆ ಸಾಲ, ರಿಯಾಯಿತಿ ಹಾಗೂ ಮಾರುಕಟ್ಟೆಯನ್ನೂ ನೀಡಿದೆ. ಪ್ರತಿ ಲೀಟರ್‌
ಎಥೆನಾಲ್‌ಗೆ ₹ 59 ನೀಡಿ ಸರ್ಕಾರವೇ ಖರೀದಿಸುತ್ತಿದೆ. ಆದರೆ, ಇದರ ಲಾಭ ರೈತರಿಗೆ ಬರುವಂತೆ ಮಾಡಿಲ್ಲ. ಉತ್ಪಾದನಾ ವೆಚ್ಚ ತೆಗೆದು ಬರುವ ಲಾಭದಲ್ಲಿ ಕಾರ್ಖಾನೆ ಹಾಗೂ ರೈತರಿಗೆ ಶೇ 50ರಂತೆ ಲಾಭ ಹಂಚಿಕೆಯಾಗಬೇಕು’ ಎಂದೂ ಪುನರುಚ್ಚರಿಸಿದರು.

ವಿದ್ಯುತ್‌ ಖಾಸಗೀಕರಣಕ್ಕೆ ವಿರೋಧ: ‘ರಾಜ್ಯದಲ್ಲಿ 35 ಲಕ್ಷ ವಿದ್ಯುತ್‌ ಪಂಪ್‌ಸೆಟ್‌ಗಳಿವೆ. ಇವುಗಳಿಗೆ ನೀಡುವ ಉಚಿತ ವಿದ್ಯುತ್‌ ನಿಲ್ಲಿಸುವ ಉದ್ದೇಶದಿಂದ ಸರ್ಕಾರ ವಿದ್ಯುತ್‌ ಖಾಸಗೀಕರಣಕ್ಕೆ ಮುಂದಾಗಿದೆ. ಯಾವ ಕಾರಣಕ್ಕೂ ಇದಕ್ಕೆ ಅನುಮತಿ ನೀಡುವುದಿಲ್ಲ’ ಎಂದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಗದೀಶ ಪಾಟೀಲ, ಕಾರ್ಯದರ್ಶಿ ಧರ್ಮರಾಜ ಸಾಹು, ಮುಖಂಡರಾದ ಈರಣ್ಣಗೌಡ ಪಾಟೀಲ, ರಮೇಶ ಎಸ್., ಶಾಂತವೀರಪ್ಪ ಹಸ್ತಾಪುರ ಇತರರು ಇದ್ದರು.

ಭಾರತ್‌ ಬಂದ್‌ಗೆ ಬೆಂಬಲ

‘ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಸಂಯುಕ್ತ ಕಿಸಾನ್‌ ಮೋರ್ಚಾ ಸೆ. 27ರಂದು ಕರೆ ನೀಡಿದ ಭಾರತ್‌ ಬಂದ್‌ಗೆ ನಾವೂ ಸಿದ್ಧರಾಗಿದ್ದೇನೆ. ರಾಜ್ಯ ಕಿಸಾನ್‌ ಮೋರ್ಚಾ ನೇತೃತ್ವದಲ್ಲಿ ಇಡೀ ರಾಜ್ಯವನ್ನು ಬಂದ್‌ ಮಾಡಲಾಗುವುದು. ಹಳ್ಳಿಯಿಂದ ವಿಧಾನಸೌಧದವರೆಗೂ ಹೋರಾಟ ನಡೆಯಲಿದೆ. ಎತ್ತಿನಗಾಡಿ, ಟ್ರ್ಯಾಕ್ಟರ್‌ ರ್‍ಯಾಲಿ, ಮಹಿಳೆಯರಿಂದ ರಸ್ತೆ ತಡೆಗಳನ್ನೂ ಮಾಡಲಾಗುವುದು’ ಎಂದು ಕುರುಬೂರು ಶಾಂತಕುಮಾರ್ ಹೇಳಿದರು.

‘ಕೆಲವು ಪಕ್ಷಗಳು ನೆಪಮಾತ್ರಕ್ಕೆ ಮಾತ್ರ ಈ ಹೋರಾಟಕ್ಕೆ ಬೆಂಬಲ ನೀಡಿವೆ. ಆದರೆ, ಸಕ್ರಿಯ ಬೆಂಬಲ ನೀಡಿ ಮುಂದೆ ಬಂದರೆ ಮಾತ್ರ ರೈತರು ವಿರೋಧ ಪಕ್ಷಗಳನ್ನು ಒಪ್ಪಿಕೊಳ್ಳುತ್ತಾರೆ’ ಎಂದೂ ಅವರು ಹೇಳಿದರು.

ಅಂಕಿ ಅಂಶ

ರಾಜ್ಯದ ಕಬ್ಬು ಬೆಳೆಯ ನೋಟ

5.5 ಲಕ್ಷ ಹೆಕ್ಟೇರ್‌ – ಕಬ್ಬು ಕೃಷಿ ಮಾಡುವ ಪ್ರದೇಶ

25 ಲಕ್ಷ – ಕಬ್ಬು ಬೆಳೆಗಾರರ ಸಂಖ್ಯೆ

67 – ಚಾಲ್ತಿಯಲ್ಲಿರುವ ಸಕ್ಕರೆ ಕಾರ್ಖಾನೆಗಳು

35 ಲಕ್ಷ – ಒಟ್ಟು ವಿದ್ಯುತ್‌ ಪಂಪ್‌ಸೆಟ್‌ಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT