ಭಾನುವಾರ, ಮೇ 29, 2022
22 °C
ಸನ್‌ರೈಸ್ ಆಸ್ಪತ್ರೆಯಲ್ಲಿ ಮೆದುಳಿನ ಭಾಗ ತೆರೆಯದೇ ಶಸ್ತ್ರಚಿಕಿತ್ಸೆ

20 ವರ್ಷಗಳ ಹಿಂದೆ ಗಾಯಗೊಂಡಿದ್ದ ವ್ಯಕ್ತಿಗೆ ಶಸ್ತ್ರಚಿಕಿತ್ಸೆ; ಗುಣಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಸುಮಾರು 20 ವರ್ಷಗಳ ಹಿಂದೆ ಅಪಘಾತದಲ್ಲಿ ಗಾಯಗೊಂಡು ಮೆದುಳಿಗೆ ಹಾನಿ ಮಾಡಿಕೊಂಡಿದ್ದ ಯುವಕನಿಗೆ ಇಲ್ಲಿನ ಸನ್‌ರೈಸ್ ಆಸ್ಪತ್ರೆಯಲ್ಲಿ ಒಂದೂವರೆ ತಿಂಗಳ ಹಿಂದೆ ಸತತ ನಾಲ್ಕು ಗಂಟೆ ಶಸ್ತ್ರಚಿಕಿತ್ಸೆ ಮಾಡಿದ್ದು, ಇದೀಗ ಸಂಪೂರ್ಣ ಗುಣಮುಖನಾಗಿದ್ದಾನೆ’ ಎಂದು ಆಸ್ಪತ್ರೆಯ ನರರೋಗ ತಜ್ಞರಾದ ಡಾ. ರೋಹನ್ ಶಹಾ, ಡಾ. ದಿನೇಶ್ ವಲ್ಸೆ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯಾದಗಿರಿ ಜಿಲ್ಲೆ ಶಹಾಪುರ ತಾಲ್ಲೂಕು ಗೋಗಿ ಗ್ರಾಮದ ಸಯ್ಯದ್ ಶಂಷಾಲಮ್ ಎಂಬ ಯುವಕನ ಮೆದುಳಿಗೆ ಹಾನಿಯಾಗಿದ್ದರಿಂದ ಕಾಲಾಂತ ರದಲ್ಲಿ ಮೆದುಳಿನ ಒಂದು ಭಾಗ ಕರಗಿ ಮೂಗಿನ ತುದಿಯಲ್ಲಿ ಕುಳಿತುಕೊಂಡಿತ್ತು. ಇದರಿಂದಾಗಿ ತಲೆನೋವು ಕಾಣಿಸಿಕೊಳ್ಳುತ್ತಿತ್ತು. ಅಲ್ಲದೇ, ಸುಮಾರು ಏಳು ಬಾರಿ ಐಸಿಯುನಲ್ಲಿ ದಾಖಲಿಸಲಾಗಿತ್ತು. ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ ಮೆದುಳಿನ ಮೇಲ್ಭಾಗವನ್ನು ತೆರೆಯಬೇಕಾಗುತ್ತಿತ್ತು. ಈ ವಿಧಾನದಲ್ಲಿ ಸಾಕಷ್ಟು ರಕ್ತ ನಷ್ಟವಾಗುತ್ತಿತ್ತು. ಅಲ್ಲದೇ, ಶಸ್ತ್ರಚಿಕಿತ್ಸೆ ಯಶಸ್ವಿಯಾಗುವ ಬಗ್ಗೆ ಅನುಮಾನಗಳಿದ್ದವು. ಆದ್ದರಿಂದ ಮೂಗಿನ ಮೂಲಕ ಎಂಡೊಸ್ಕೊಪಿ ವಿಧಾನವನ್ನು ಬಳಸಿ ಮೆದುಳಿನ ಅಂಶ ಇರುವ ಜಾಗವು ಸೋರಿ ಹೋಗದಂತೆ ತಡೆಯಲು ಸೊಂಟದ ಭಾಗದ ಕೊಬ್ಬನ್ನು ಬಳಸಿ ಮೆದುಳಿನ ಕೆಳಭಾಗದಲ್ಲಿ ಅಂಟಿಸಲಾಯಿತು’
ಎಂದರು.

ಅಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಸಲ್ಮಾನ್ ಪಟೇಲ್ ಮಾತನಾಡಿ, ‘ಡಿ.28ರಂದು ಸತತ 4 ಗಂಟೆಗಳವರೆಗೆ ಈ ಶಸ್ತ್ರಚಿಕಿತ್ಸೆ ನಡೆಯಿತು. ಆರು ವಾರಗಳ ನಿಗಾ ಅವಧಿಯಲ್ಲಿ ಸಯ್ಯದ್‌ ಶಂಷಾಲಮ್‌ಗೆ ಯಾವುದೇ ಸಮಸ್ಯೆಗಳು ಕಂಡು ಬಂದಿಲ್ಲ. ಇಂತಹ ಅಪರೂಪದ ಶಸ್ತ್ರಚಿಕಿತ್ಸೆ ಪಡೆಯಬೇಕೆಂದರೆ ರೋಗಿಗಳು ಹೈದರಾಬಾದ್ ಅಥವಾ ಮುಂಬೈಗೆ ಹೋಗಬೇಕಿತ್ತು. ಸುಮಾರು ₹ 3ರಿಂದ ₹ 4 ಲಕ್ಷ ವೆಚ್ಚವಾಗುತ್ತಿತ್ತು. ಶಂಷಾಲಮ್‌ ಕುಟುಂಬ ಆರ್ಥಿಕವಾಗಿ ದುರ್ಬಲವಾಗಿದ್ದರಿಂದ ಬರೀ ಶಸ್ತ್ರಚಿಕಿತ್ಸೆಗೆ ಅಗತ್ಯವಾದ ಪರಿಕರಗಳ ವೆಚ್ಚವನ್ನಷ್ಟೇ ಪಡೆದುಕೊಳ್ಳಲಾಗಿದೆ. ವೈದ್ಯರು ಉಚಿತವಾಗಿ ಚಿಕಿತ್ಸೆ ನೀಡಿದ್ದಾರೆ’ ಎಂದು ಹೇಳಿದರು.‌

ಅರವಳಿಕೆ ತಜ್ಞ ಡಾ. ಹಸೀಬ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು