ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇವೂರ, ಮತ್ತಿಮೂಡ ಬೆಂಬಲಿಗರ ಆಕ್ರೋಶ

ಸತತ ಪ್ರಯತ್ನ ಮಾಡಿದರೂ ದೊರೆಯದ ಸಚಿವ ಸ್ಥಾನ
Last Updated 4 ಆಗಸ್ಟ್ 2021, 16:23 IST
ಅಕ್ಷರ ಗಾತ್ರ

ಕಲಬುರ್ಗಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನ ಸಿಗದೇ ಇದ್ದುದಕ್ಕೆ ಕಲಬುರ್ಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಕಲಬುರ್ಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ ಅವರ ಬೆಂಬಲಿಗರು ನಗರದಲ್ಲಿ ಬುಧವಾರ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.

ರೇವೂರ ಅವರಿಗೆ ಸಚಿವ ಸ್ಥಾನ ಖಚಿತ ಎಂದೇ ವಿಶ್ವಾಸದಿಂದ ಇದ್ದ ಅವರ ಬೆಂಬಲಿಗರು ವಿಜಯೋತ್ಸವ ನಡೆಸಲೂ ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ನೂತನ ಸಚಿವ ಸಂಪುಟದಲ್ಲಿ ದತ್ತಾತ್ರೇಯ ಪಾಟೀಲ ರೇವೂರ ಅವರ ಹೆಸರು ಇಲ್ಲದಿರುವುದು ಖಚಿತವಾದ ಕೂಡಲೇ ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಒಂದು ಹಂತದಲ್ಲಿ ಪ್ರತಿಭಟನೆ ನಡೆಸುವ ವಿಚಾರವನ್ನು ಶಾಸಕ ರೇವೂರ ಗಮನಕ್ಕೆ ತಂದ ಕೂಡಲೇ ಪಕ್ಷಕ್ಕೆ ಮುಜುಗುರವಾಗುವುದರಿಂದ ಪ್ರತಿಭಟನೆಯ ಹಾದಿ ಹಿಡಿಯದಂತೆ ಸಲಹೆ ನೀಡಿದರು ಎನ್ನಲಾಗಿದೆ. ಆದರೆ, ಅವರ ಬೆಂಬಲಿಗರು ಪ್ರತಿಭಟನೆಯಿಂದ ಹಿಂದೆ ಸರಿಯಲಿಲ್ಲ.

ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ‘ಜಿಲ್ಲೆಯಲ್ಲಿ ಕಳೆದ 35 ವರ್ಷಗಳಿಂದ ಭಾರತೀಯ ಜನತಾ ಪಕ್ಷವನ್ನು ಬೇರುಮಟ್ಟದಿಂದ ಕಟ್ಟಿ ಬೆಳೆಸಿದ ದಿ.ಚಂದ್ರಶೇಖರ ಪಾಟೀಲ ರೇವೂರ ಅವರ ಕುಟುಂಬಕ್ಕೆ ರಾಜ್ಯ ಬಿಜೆಪಿ ಹಾಗೂ ಬಸವರಾಜ ಬೊಮ್ಮಾಯಿಯವರು ಸಚಿವ ಸ್ಥಾನ ನೀಡಲು ನಿರಾಕರಿಸಿದ್ದು ಖಂಡನೀಯ’ ಎಂದರು. ‌‌

ರೇವೂರ ಬೆಂಬಲಿಗರಾದ ಕಲ್ಯಾಣರಾವ ಪಾಟೀಲ ಕಣ್ಣಿ, ಪರಮೇಶ್ವರ ಯಳಮೇಲಿ, ಮಹೇಶ್ ಪಾಟೀಲ ಕಣ್ಣಿ, ಸುನೀಲ್ ಮಹಾಗಾಂವಕರ, ಸಿದ್ಧರಾಮ ಕುಸನೂರ, ಶಾಂತು ರೇವೂರ, ಗುರುರಾಜ್ ಸೂಂಟನೂರ, ಆಕಾಶ ಸೇವಲಾನಿ, ದೇವರಾಜ ಗೋಳಾ, ಅಲೀಂ ಖಾನ್, ಅನಿಲ್ ಕುಮಾರ್ ಡಾಂಗೆ, ಶಶಿ ಗದಲೆಗಾಂವ್, ಶಾಮರಾಯ ಪಾಟೀಲ, ಶರಣು, ಮಂಜುನಾಥ ಅಂಕಲಗಿ, ನಾರಾಯಣ ಜಹಗೀರದಾರ ಇದ್ದರು.

ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ ಅವರಿಗೆ ಸಚಿವ ಸ್ಥಾನ ನೀಡದ ಕ್ರಮವನ್ನು ಖಂಡಿಸಿ ಮಾದಿಗ ಒಕ್ಕೂಟದ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಎದುರು ಟೈರ್ ಸುಟ್ಟು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ದಶರಥ ಎಂ. ಕಲಗುರ್ತಿ, ‘ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲು ಮಾದಿಗ, ಸಮಗಾರರಂತಹ ಹಿಂದುಳಿದ ವರ್ಗಗಳು ಬೆನ್ನಿಗೆ ನಿಂತಿದ್ದೇ ಪ್ರಮುಖ ಕಾರಣವಾಗಿದೆ. ಆದ್ದರಿಂದ ಜಿಲ್ಲೆಯ ಬಸವರಾಜ ಮತ್ತಿಮೂಡ ಅವರಿಗೆ ಸಚಿವ ಸ್ಥಾನ ನೀಡದಿರುವ ಮೂಲಕ ಶೋಷಿತ ಸಮುದಾಯವನ್ನು ಮತ್ತಷ್ಟು ಶೋಷಣೆಗೆ ಈಡು ಮಾಡಿದಂತಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಪ್ಪು ಬಾವುಟ ಪ್ರದರ್ಶನ: ಸೆಪ್ಟೆಂಬರ್ 17ರಂದು ನಡೆಯಲಿರುವ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಂದರೆ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಕಲಗುರ್ತಿ ಎಚ್ಚರಿಸಿದರು.

ರಮಾಕಾಂತ ಪೂಜಾರಿ, ಲೋಕೇಶ, ಪ್ರಭು ಗಡಿಸಿ, ಚಂದ್ರಕಾಂತ ನಾಟೀಕಾರ, ಅಪ್ಪು ಹಾದಿಮನಿ, ಅರ್ಜುನ್ ಬೆಳಕೇರಿ, ಸಂದೇಶ, ವಿಶಾಲ ಹಾಗೂ ಸಮಾಜದ ಮುಖಂಡರು ಇದ್ದರು.

ಪ್ರಾತಿನಿಧ್ಯ ಕಡೆಗಣನೆ: ಬೊಮ್ಮಾಯಿಯವರ ನೇತೃತ್ವದ ಕರ್ನಾಟಕ ಸರ್ಕಾರದಲ್ಲಿ ಜಿಲ್ಲೆಗೆ ಒಂದೇ ಒಂದು ಸಚಿವ ಸ್ಥಾನವನ್ನೂ ನೀಡದೇ ಪ್ರಾತಿನಿಧ್ಯ ಕಡೆಗಣಿಸಿದ್ದು ಸರಿಯಲ್ಲ. ಇದು ಕಲಬುರ್ಗಿ ಜಿಲ್ಲೆಗೆ ಮತ್ತು ಜಿಲ್ಲೆಯ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರಿಗೆ ಒಂದು ರೀತಿಯಲ್ಲಿ ನೋವನ್ನುಂಟು ಮಾಡಿದೆ ಎಂದು ಬಿಜೆಪಿ ಜಿಲ್ಲಾ ಮಾಧ್ಯಮ ವಕ್ತಾರ ಅರುಣಕುಮಾರ ಕುಲಕರ್ಣಿ ಬೇಸರ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿಗೆ ತೆರಳಿದ ಬೆಂಬಲಿಗರಿಗೆ ನಿರಾಸೆ

ಜಿಲ್ಲೆಯ ಒಬ್ಬ ಶಾಸಕರಿಗಾದರೂ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆಯಿಂದ ಬೆಂಗಳೂರಿಗೆ ದೌಡಾಯಿಸಿದ್ದ ಬಿಜೆಪಿ ಕಾರ್ಯಕರ್ತರಿಗೆ ಸಂಪುಟದಲ್ಲಿ ಯಾರಿಗೂ ಸ್ಥಾನ ಸಿಗದೇ ಇದ್ದುದರಿಂದ ತೀವ್ರ ನಿರಾಸೆಯಾಗಿದೆ. ಎರಡು ದಿನಗಳ ಹಿಂದೆಯೇ ರಾಜಧಾನಿಗೆ ತೆರಳಿ ತಮ್ಮ ಶಾಸಕರೊಂದಿಗೆ ಓಡಾಡುತ್ತಿದ್ದರು. ಆದರೆ, ಪಟ್ಟಿಯಲ್ಲಿ ಹೆಸರು ಕಾಣಿಸಿಕೊಳ್ಳದೇ ಇರುವಾಗ ಆತಂಕಕ್ಕೊಳಗಾದರು.

ಅಂತಿಮ ಹಂತದವರೆಗೂ ಪಟ್ಟಿಯಲ್ಲಿ ದತ್ತಾತ್ರೇಯ ಪಾಟೀಲ ರೇವೂರ ಅವರ ಹೆಸರಿತ್ತು. ಕೊನೆ ಗಳಿಗೆಯಲ್ಲಿ ಅವರ ಹೆಸರನ್ನು ಕೈಬಿಡಲಾಗಿದೆ ಎಂದು ಅವರ ಆಪ್ತರೊಬ್ಬರು ಮಾಹಿತಿ ನೀಡಿದರು.

ಸಚಿವಾಕಾಂಕ್ಷಿಯಾಗಿದ್ದ ಸೇಡಂ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಅವರು ಸ್ಥಾನ ಸಿಗದಿದ್ದುದಕ್ಕೆ ಬೇಸರಗೊಂಡಿದ್ದರೂ, ಅದನ್ನು ತೋರಗೊಡದೇ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದರು.

‘ಕಲ್ಯಾಣ ಕರ್ನಾಟಕಕ್ಕೆ ಡಬಲ್ ದೋಖಾ’

ಬಿಜೆಪಿ ಸರ್ಕಾರದ ಮಂತ್ರಿ ಮಂಡಲದಲ್ಲಿ ಕಲಬುರ್ಗಿ ಸೇರಿದಂತೆ ಕಲ್ಯಾಣ ನಾಡಿನ ಜಿಲ್ಲೆಗಳನ್ನು ಕಡೆಗಣಿಸಿರುವ ಡಬಲ್ ಎಂಜಿನ್ ಎಂದು ಕರೆಸಿಕೊಳ್ಳುವ ಬಿಜೆಪಿ ಈ ಭಾಗದ ಜನತೆಗೆ ಡಬಲ್ ದೋಖಾ ಮಾಡಿದೆ.

ಕಲ್ಯಾಣ ಕರ್ನಾಟಕವೆಂದು ಹೆಸರು ಬದಲಿಸಿದ್ದೇ ಬಂತು. ಅದಕ್ಕೆ ತಕ್ಕಂತೆ ಯಾವುದೇ ವಿಚಾರದಲ್ಲೂ ಈ ಭಾಗದ ಜಿಲ್ಲೆಗಳ ಆದ್ಯತೆ ಬಿಜೆಪಿ ಸರ್ಕಾರ ನೀಡುತ್ತಿಲ್ಲ. ಕಲಂ 371 (ಜೆ) ಅನುಷ್ಠಾನಕ್ಕೆ ಪ್ರತ್ಯೇಕ ಸಮೀತಿ ರಚಿಸುವ ಗೋಜಿಗೂ ಹೋಗಿಲ್ಲ, ಪ್ರತೇಕ ಸಚಿವಾಲಯ ಮಾಡುವ ಘೋಷಣೆ ಮಾಡಿದ್ದ ಯಡಿಯೂರಪ್ಪ ಮೌನವಾದರು. ಇದೀಗ ಮಂತ್ರಿಗಿರಿ ಸಹ ನೀಡದೆ ಬಿಜೆಪಿ ಹಿಂದುಳಿದ ಜನರಿಗೆ ಅಗೌರವ ತೋರಿದೆ, ಮೋಸ ಮಾಡಿದೆ.

ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಾಗೆಲ್ಲಾ ಕಲಬುರ್ಗಿಗೆ ಮಂತ್ರಿಸ್ಥಾನ ವಂಚಿತವಾಗಿ ಮಾಡಲಾಗಿದೆ. ಬಿಜೆಪಿಗೆ ಇಲ್ಲಿನವರ ಮತಗಳು ಬೇಕೇ ಹೊರತು ಇಲ್ಲಿನವರಿಗೆ ಸ್ಥಾನಮಾನ ಕೊಡುವುದು ಬೇಕಿಲ್ಲ.

ಡಾ. ಅಜಯ್ ಸಿಂಗ್, ಜೇವರ್ಗಿ ಶಾಸಕ.

**

ಕಲ್ಯಾಣ ಕರ್ನಾಟಕ ಕಡೆಗಣನೆ

ನೂತನ ಸಚಿವ ಸಂಪುಟ ಸಂಪೂರ್ಣವಾಗಿ ಪ್ರಾದೇಶಿಕ ಅಸಮಾನತೆಯಿಂದ ಕೂಡಿದೆ. ಕಲ್ಯಾಣ ಕರ್ನಾಟಕ ಭಾಗವನ್ನು ಕಡೆಗಣಿಸಲಾಗಿದೆ. ಈ ಸರ್ಕಾರದಿಂದ ರಾಜ್ಯದ ಜನತೆಗೆ ಯಾವುದೇ ಬದಲಾವಣೆಯಾಗಲಿ, ಪ್ರಯೋಜನವಾಗಲಿ ನಿರೀಕ್ಷಿಸಲು ಸಾಧ್ಯವಿಲ್ಲ.

ಬಿ.ಆರ್.ಪಾಟೀಲ, ಮಾಜಿ ಶಾಸಕ

**

ಪ್ರತ್ಯೇಕ ರಾಜ್ಯದ ಬೇಡಿಕೆ ಅನಿವಾರ್ಯ

ಕಲ್ಯಾಣ ಕರ್ನಾಟಕಕ್ಕೆ ಭವಿಷ್ಯವಿಲ್ಲ ಎಂಬುದು ಪ್ರಸ್ತುತ ಸರ್ಕಾರದಿಂದ ಸಾಬೀತಾಗಿದೆ. ಇನ್ನು ಮುಂದೆ ನಮ್ಮ ಪ್ರದೇಶದ ಅಭಿವೃದ್ಧಿಗೆ ಮತ್ತು ಅಸ್ತಿತ್ವಕ್ಕಾಗಿ ಪ್ರತ್ಯೇಕ ರಾಜ್ಯ ಬೇಡಿಕೆ ಹೋರಾಟ ಅನಿವಾರ್ಯವಾಗಲಿದೆ
ಲಕ್ಷ್ಮಣ ದಸ್ತಿ
ಅಧ್ಯಕ್ಷ, ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT