ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ನೀರು ಪೋಲು ತಡೆಗೆ ಮುನ್ನೆಚ್ಚೆರಿಕೆ ಕೈಗೊಳ್ಳಿ: ಶಾಸಕ ಬಿ.ಆರ್. ಪಾಟೀಲ

ಬರ ನಿರ್ವಹಣೆ ಕಾರ್ಯಪಡೆ ಅಧಿಕಾರಿಗಳ ಸಭೆಯಲ್ಲಿ ಶಾಸಕ ಬಿ.ಆರ್‌.ಪಾಟೀಲ ಸೂಚನೆ
Published 25 ನವೆಂಬರ್ 2023, 16:00 IST
Last Updated 25 ನವೆಂಬರ್ 2023, 16:00 IST
ಅಕ್ಷರ ಗಾತ್ರ

ಆಳಂದ: ಮುಂದಿನ 6 ತಿಂಗಳು ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ. ತಾಲ್ಲೂಕಿನಲ್ಲಿ ತುಂಬಿದ ಕೆರೆಗಳ ನೀರು ಪೋಲು ಆಗದಂತೆ ಅಗತ್ಯವಾದ ಮುನ್ನೆಚ್ಚೆರಿಕೆ ಕ್ರಮಕೈಗೊಳ್ಳಬೇಕು ಎಂದು ಶಾಸಕ ಬಿ.ಆರ್. ಪಾಟೀಲ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಶನಿವಾರ ಬರ ನಿರ್ವಹಣೆ ಕುರಿತು ಕಾರ್ಯಪಡೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಸಕ್ತ ವರ್ಷ ಮಳೆ ಪ್ರಮಾಣ ಕಡಿಮೆಯಾಗಿದ್ದು, ಹಳ್ಳಕೊಳ್ಳಗಳಲ್ಲೂ ನೀರು ಹರಿಯಲಿಲ್ಲ. ಹೀಗಾಗಿ ಅಂತರ್ಜಲ ಮಟ್ಟವು ಕುಸಿಯುವ ಸಾಧ್ಯತೆಯಿದೆ. ಕುಡಿಯುವ ನೀರಿಗಾಗಿ ಕೊಳವೆ ಬಾವಿಗೂ ನೀರಿನ ಸಮಸ್ಯೆ ಕಾಡಲಿದೆ. ಅದಕ್ಕೆ ಅಮರ್ಜಾ ಅಣೆಕಟ್ಟೆ ಸೇರಿದಂತೆ ಹಲವು ಗ್ರಾಮದ ಕೆರೆಗಳಲ್ಲಿ ನೀರು ಉಳಿಸಬೇಕು. ಅನಧಿಕೃತ ನೀರು ಬಳಕೆಗೆ ಆಯಾ ಗ್ರಾ.ಪಂ ಪಿಡಿಒ, ಕಾರ್ಯಪಡೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಕೈಗೊಳ್ಳಬೇಕು ಎಂದು ತಿಳಿಸಿದರು.

ಸಣ್ಣ ನೀರಾವರಿ ಇಲಾಖೆ ಎಇಇ ಶಾಂತಪ್ಪ ಮಾತನಾಡಿ, ತಾಲ್ಲೂಕಿನ 35 ಕೆರೆಗಳಲ್ಲಿ ಕೇವಲ 12 ಕೆರೆಗಳಲ್ಲಿ ಮಾತ್ರ ಶೇ 80 ರಷ್ಟು ನೀರಿನ ಸಂಗ್ರಹವಿದೆ. 5 ಕೆರೆಗಳು ಸಂಪೂರ್ಣ ಖಾಲಿಯಾಗಿವೆ. ಉಳಿದ ಕೆರೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಿದೆ. ಈಗಾಗಲೇ ಕೆರೆ ನೀರು ಅನಧೀಕೃತ ಬಳಕೆ ತಡೆಯಲು ಕ್ರಮ ಕೈಗೊಳ್ಳಲಾಗಿದೆ. ಪೊಲೀಸ್‌ ಠಾಣೆಗೆ ದೂರು ನೀಡುವ ಎಚ್ಚೆರಿಕೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗುವ ಗ್ರಾಮಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಆಯಾ ಗ್ರಾ.ಪಂ ಅಧ್ಯಕ್ಷ, ಸದಸ್ಯರು ಹಾಗೂ ಪಿಡಿಒಗಳ ಸಭೆ ನಡೆಸಿ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗೆ ಮಾಹಿತಿ ಸಲ್ಲಿಸಬೇಕು. ನಂತರ ಕೈಗೊಳ್ಳಬೇಕಾದ ಕ್ರಮಗಳ ಬಗೆಗೆ ಯೋಜನೆ ರೂಪಿಸಿ ಖಾಸಗಿ ವ್ಯಕ್ತಿಗಳಿಂದ ನೆರವು, ಸಾಧ್ಯತೆ ಮೇರೆಗೆ ಕೊಳವೆಬಾವಿ ಕೊರೆಯಿಸಲು ನಿರ್ಧರಿಸಬೇಕು. ಆದರೆ ಯಾವುದೇ ಕಾರಣಕ್ಕೂ ಟ್ಯಾಂಕರ್‌ ಮೂಲಕ ನೀರು ಸರಬುರಾಜುಗೊಳಿಸುವಂತಹ ಪರಿಸ್ಥಿತಿ ಎದುರಾಗಿ, ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಶಾಸಕರು ತಾಕೀತು ಮಾಡಿದರು.

ಆಳಂದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಬಿ.ಆರ್.ಪಾಟೀಲ ಅಧ್ಯಕ್ಷತೆಯಲ್ಲಿ ಬರ ನಿರ್ವಹಣೆ ಕುರಿತು ಕಾರ್ಯಪಡೆ ಅಧಿಕಾರಿಗಳ ಸಭೆ ಜರುಗಿತು.
ಆಳಂದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಬಿ.ಆರ್.ಪಾಟೀಲ ಅಧ್ಯಕ್ಷತೆಯಲ್ಲಿ ಬರ ನಿರ್ವಹಣೆ ಕುರಿತು ಕಾರ್ಯಪಡೆ ಅಧಿಕಾರಿಗಳ ಸಭೆ ಜರುಗಿತು.

ತಹಶೀಲ್ದಾರ್‌ ಯಲ್ಲಪ್ಪ ಸುಬೇದಾರ, ತಾ.ಪಂ ಇಒ ಮಾನಪ್ಪ ಕಟ್ಟಿಮನಿ, ಅಧಿಕಾರಿಗಳಾದ ಡಾ.ಸಂಜಯ ರೆಡ್ಡಿ, ಶರಣಗೌಡ ಪಾಟೀಲ, ಭೀಮಣ್ಣಾ ಕುದುರಿ, ಎಇಇ ಶಾಂತಪ್ಪ ಜಾಧವ, ಸಂಗಮೇಶ ಬಿರಾದಾರ ಹಾಗೂ ಪಿಡಿಒಗಳು ಹಾಜರಿದ್ದರು.

ಬರ ಸಂದರ್ಭದಲ್ಲಿ ಕೂಲಿಕಾರ್ಮಿಕರ ವಲಸೆ ತಪ್ಪಿಸಲು ಆಯಾ ಗ್ರಾ.ಪಂ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿ ಕೈಗೊಳ್ಳಲು ಕ್ರಿಯಾ ಯೋಜನೆ ರೂಪಿಸಿ ಅಗತ್ಯ ಕೆಲಸ ಕೈಗೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ
- ಮಾನಪ್ಪ ಕಟ್ಟಿಮನಿ, ತಾ.ಪಂ ಇಒ ಆಳಂದ
ಉದ್ಯೋಗ ಖಾತ್ರಿ ಕಾಮಗಾರಿ ಅಡಿಯಲ್ಲಿ ನೀರು ಖಾಲಿಯಾದ ಕೆರೆ ಹಾಗೂ ಸಿರಪುರ ಮಾದರಿ ಕೆರೆ ಹಾಗೂ ಚೆಕ್‌ ಡ್ಯಾಂಗಳಲ್ಲಿನ ಹೂಳು ಎತ್ತುವ ಕಾರ್ಯಕ್ಕೆ ಆದ್ಯತೆ ನೀಡಬೇಕು. ಮುಂಬರುವ ಮಳೆಗಾಲದಲ್ಲಿ ಅನುಕೂಲವಾಗಲಿದೆ
-ಬಿ.ಆರ್.ಪಾಟೀಲ, ಶಾಸಕ ಆಳಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT