ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜ್ಞಾನದಿಂದ ಸುಜ್ಞಾನದೆಡೆ ಕೊಂಡೊಯ್ಯುವ ಗುರು: ನಿಂಗಪ್ಪ ಮಂಗೊಂಡಿ ಲೇಖನ

Published 5 ಸೆಪ್ಟೆಂಬರ್ 2023, 5:22 IST
Last Updated 5 ಸೆಪ್ಟೆಂಬರ್ 2023, 5:22 IST
ಅಕ್ಷರ ಗಾತ್ರ

ವಿಶ್ವ ಗುರು ಬಸವಣ್ಣನವರು ತಮ್ಮ ವಚನದಲ್ಲಿ ಶಿವಪಥವ ಅರಿಯಬೇಕಾದರೆ ಗುರು ಬೇಕು ಎಂದಿದ್ದಾರೆ. ಹಾಗಾಗಿ ಗುರು ಎಂದರೆ ಸ್ವಾಮಿ ವಿವೇಕಾನಂದರೇ ಹೇಳಿದಂತೆ, ‘ಅಜ್ಞಾನದ ಕತ್ತಲೆಯ ಕಳೆದು ಸುಜ್ಞಾನದೆಡೆ ಕರೆದುಕೊಂಡು ಹೋಗುವವರೇ ಗುರು’.

ಶಿಕ್ಷಕ ಪದದ ಅರ್ಥ, ‘ಶಿ’ ಎಂದರೆ ಶಿಸ್ತು, ‘ಕ್ಷ’ ಎಂದರೆ ಕ್ಷಮೆ, ‘ಕ’ ಎಂದರೆ ಕರುಣೆ. ಎರಡು ಪದಗಳು ಸಮಸಮವಾಗಿ ಅರ್ಥ ಒಂದೇ ಆಗಿವೆ. ಈ ಪದವ ಹೊತ್ತ ವ್ಯಕ್ತಿಯ ಮೇಲೆ ಗುರುತರ ಜವಾಬ್ದಾರಿಯಿದೆ. ಶಿಕ್ಷಕ ಇಡೀ ಸಮಾಜದ ಪರಿವರ್ತಕ, ನಿರ್ಮಾತೃ. ಅಥವಾ ಅವುಗಳ ನಾಶಕ್ಕೂ ಕಾರಣವಾಗುತ್ತಾನೆ. ಹಾಗಾಗಿ ಶಿಕ್ಷಕ ತನ್ನ ಆತ್ಮ ವಿಮರ್ಶೆ ಮಾಡಿಕೊಳ್ಳುವುದು ಬಹಳ ಮಹತ್ವವಾಗಿದೆ. ಅದಕ್ಕಾಗಿ ಶಿಕ್ಷಕ ದಿನಾಚರಣೆಗೆ ಮಹತ್ವವಿದೆ.

ಹಿಂದಿನ ಕಾಲದಲ್ಲಿ ಶಿಕ್ಷಣವು ಗುರುಕುಲದಲ್ಲಿ ನಡೆಯುತ್ತಿತ್ತು. ಗುರು ಇದ್ದಲ್ಲಿಯೇ ಶಿಷ್ಯರು ಹೋಗುತ್ತಿದ್ದರು. ಗುರು ಕೇಂದ್ರಿತ ಶಿಕ್ಷಣ ಪದ್ಧತಿಯಾಗಿರುವುದರಿಂದ ಗುರುವಿನ ನಡವಳಿಕೆ, ಜೀವನ ಕ್ರಮ, ಆತನ ಕಾರ್ಯಗಳು ಎಲ್ಲವನ್ನೂ ಮಕ್ಕಳು ಅನುಕರಣೆ ಮಾಡುತ್ತಿದ್ದರು. ಗುರುಗಳಾದವರು ಬಹಳ ಎಚ್ಚರದಿಂದ ನಡೆಯುತ್ತಿದ್ದರು. ಆಗಿನ ಶಿಕ್ಷಣ ಅರ್ಥ ವ್ಯಾಪ್ತಿಯು ಸೀಮಿತವಾಗಿತ್ತು. ಮಕ್ಕಳಲ್ಲಿ ವಿದ್ಯೆ ಜೊತೆಗೆ ನೈತಿಕ ಮೌಲ್ಯಗಳನ್ನು ಬೆಳಸಲು ಹೆಚ್ಚು ಒತ್ತು ಕೊಡುತ್ತಿದ್ದರು. ಅವರ ಗರಡಿ ಮನೆಯಲ್ಲಿ ಪಳಗಿದ ಶಿಷ್ಯರು ಪ್ರಾಮಾಣಿಕವಾಗಿ ನಿಷ್ಠೆಯಿಂದ ಕಾಯಕ ಮಾಡುತ್ತ ಸಮಾಜದ ಸೇವೆ ಮತ್ತು ತಮ್ಮ ರಾಜ್ಯದ ಹಿತವನ್ನು ಕಾಯುತ್ತಿದ್ದರು. ಆಗಿನ ಕಾಲದಲ್ಲಿ ಗುರುಗಳಿಗೆ ನಿರ್ದಿಷ್ಟ ಸಂಬಳ ಇರಲಿಲ್ಲ. ಶಿಷ್ಯಂದಿರು ಕೊಟ್ಟ ಕಾಣಿಕೆಗಳ ಮೇಲೆ ತಮ್ಮ ಕುಟುಂಬವನ್ನು ನಿರ್ವಹಿಸುತ್ತಿದ್ದರು. ಅವರು ಸಾರ್ಥಕ ಜೀವನ ನಡೆಸಿ ಸಮಾಜಕ್ಕೆ ಮಾದರಿಯಾಗಿರುತ್ತಿದ್ದರು.

ಗುರು ಎಂದರೆ ವ್ಯಕ್ತಿಯಲ್ಲ, ಒಂದು ಶಕ್ತಿ. ಸಮಾಜದ ಶಿಲ್ಪಿ ಎಂದು ಅರಿತು ಗುರು ತನ್ನ ನಡವಳಿಕೆಯನ್ನು ಪರಿವರ್ತನೆ ಮಾಡಿಕೊಳ್ಳುತ್ತಿದ್ದ.

ಆಧುನಿಕ ಕಾಲದಲ್ಲಿ ಗುರು ಕೇಂದ್ರಿತ ಶಿಕ್ಷಣ ಹೋಗಿ ಮಗು ಕೇಂದ್ರಿತ ಶಿಕ್ಷಣವಾದಾಗ ಮಕ್ಕಳು ಎಲ್ಲಿ ಇರುತ್ತಾರೋ ಅಲ್ಲಿಗೆ ಹೋಗಿ ಕಲಿಸುವುದು ರೂಢಿಗೆ ಬಂದಿತು. ಆಗ ಶಿಕ್ಷಕನ ವಾಸ ಒಂದು ಕಡೆ ಮಗುವಿನ ವಾಸ ಒಂದು ಕಡೆ ಆಗಿ ಶಿಕ್ಷಕ ಮತ್ತು ಮಕ್ಕಳ ಸಂಬಂಧದಲ್ಲಿ ಅಂತರ ಉಂಟಾಯಿತು. ಇದರಿಂದ ಶಿಕ್ಷಕನ ಸಂಪೂರ್ಣ ನಡವಳಿಕೆ ಅನುಕರಣೆ ಮಾಡುವುದು ಸಾಧ್ಯವಾಗುವುದಿಲ್ಲ. ಆದ್ದರಿಂದ ಶಿಕ್ಷಕನ ನಡವಳಿಕೆಯಲ್ಲಿ ಬದಲಾವಣೆಯಾದವು. ಅದಕ್ಕೆ ಕಾರಣ ಹಲವಾರು ಇರಬಹುದು. ಆದಾಗ್ಯೂ ನಮಗೆ ಆದರ್ಶ ಗುರುಗಳು ಮತ್ತು ಶಿಕ್ಷಕರು ದೊರೆಯುತ್ತಾರೆ.

ಉದಾಹರಣೆ ಬುದ್ಧ, ಬಸವ, ಸಾವಿತ್ರಿಬಾಯಿ ಫುಲೆ, ಸರ್ವಪಲ್ಲಿ ರಾಧಾಕೃಷ್ಣನ್, ಎಪಿಜೆ ಅಬ್ದುಲ್ ಕಲಾಂ ಅವರು ನಮಗೆ ಮಾದರಿಯಾಗಿದ್ದಾರೆ. ಬಹಳಷ್ಟ ಶಿಕ್ಷಕರು ವಿದ್ಯಾರ್ಥಿಯ ಏಳಿಗೆಯೇ ತಮ್ಮ ಜವಾಬ್ದಾರಿ ಎಂದು ತಿಳಿದು ಪ್ರಮಾಣಿಕವಾಗಿ ಸೇವೆ ಸಲ್ಲಿಸಿ ಮಕ್ಕಳಲ್ಲಿ ಧನಾತ್ಮಕ ಪರಿಣಾಮವನ್ನು ಉಂಟು ಮಾಡಿ ಆಧುನಿಕ ಸಮಾಜದ ರೂವಾರಿಗಳಾಗಿದ್ದಾರೆ. ಆದಾಗ್ಯೂ ಕೆಲವೇ ಜನ ಶಿಕ್ಷಕರು ಕೇವಲ ತಮ್ಮ ಸ್ವಾರ್ಥ ನಡವಳಿಕೆಯಿಂದ ಕೆಟ್ಟ ಹೆಸರು ತರುತ್ತಿರುವುದು ದುರದೃಷ್ಟಕರ. ಅವರು ವೈಚಾರಿಕ ಮನೋಭಾವ ಹೊಂದದೇ ಪಾಠ ಹೇಳುವುದೊಂದು ಮಾಡುವುದು ಮಾಡುತ್ತಿದ್ದಾರೆ.

ಸಮಾಜದಲ್ಲಿ ಬುದ್ಧಿವಂತರಿದ್ದಾರೆ. ಹಲವಾರು ಕೌಶಲಗಳನ್ನು ಹೊಂದಿದ ತಾಂತ್ರಿಕ ಪರಿಣಿತರು ಇದ್ದಾರೆ. ಆದರೆ, ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡವರು ತೀರ ಕಡಿಮೆಯಾಗಿದ್ದಾರೆ. ಆದ್ದರಿಂದ ಸಮಾಜದಲ್ಲಿ ಅಪ್ರಮಾಣಿಕರು, ಮೋಸಗಾರರು, ಭ್ರಷ್ಟಚಾರಿಗಳು, ನಯವಂಚಕರು, ಬಾಲಕಿಯರ ಮೇಲೆ ದೌರ್ಜನ್ಯ ಮತ್ತು ದೇಶದ್ರೋಹಿ ಕೆಲಸಗಳು ಶಿಕ್ಷಣ ಕಲಿತವರಿಂದಲೇ ಆಗುತ್ತಿದ್ದು, ಆದರ್ಶ ಸಮಾಜ ಕಾಣುವುದು ಯಕ್ಷ ಪ್ರಶ್ನೆಯಾಗಿದೆ.

ಶಿಕ್ಷಕರಾದ ನಾವೆಲ್ಲರೂ ನುಡಿದಂತೆ ನಡೆಯುವುದು, ಹೇಳಿದಂತೆ ಆಚರಣೆ ಮಾಡುವುದು ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಪ್ರಸ್ತುತವಾಗಿ ಮಕ್ಕಳಲ್ಲಿ ನೈತಿಕ ಮೌಲ್ಯಗಳು ಹೆಚ್ಚಾಗುವ ತಂತ್ರಗಳನ್ನು ಅಳವಡಿಸಿಕೊಳ್ಳುವುದು, ಆಧುನಿಕ ಸವಾಲುಗಳನ್ನು ಎದುರಿಸುವ ಕೌಶಲಗಳನ್ನು ಬೆಳೆಸುವುದು, ತಂತ್ರಜ್ಞಾನವನ್ನು ಬಳಸಿಕೊಂಡು ನಮ್ಮ ಬೋಧನೆ ಪರಿವರ್ತನೆ ಮಾಡಿಕೊಳ್ಳುವುದು, ಪರಿಸರ ಪ್ರಜ್ಞೆ, ದೇಶದ ಹಿತ, ಜಾತ್ಯತೀತ ಮನೋಭಾವನೆ ಬೆಳೆಸುವುದು ಮತ್ತು ಧರ್ಮ ಸಹಿಷ್ಣತೆ ಭಾವನೆ ಅಳವಡಿಸುವ ಕೌಶಲಗಳನ್ನು ಮಕ್ಕಳಲ್ಲಿ ಮೂಡಿಸುವುದು ನಮ್ಮೆಲ್ಲರ ಮುಂದೆ ಇರುವ ಸವಾಲುಗಳಾಗಿವೆ.

(ಲೇಖಕರು: ಗುಂಜಬಬಲಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT