ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಫಜಲಪುರ: ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೇ ರೋಗಿಗಳ ಪರದಾಟ

Published 16 ಮೇ 2024, 6:09 IST
Last Updated 16 ಮೇ 2024, 6:09 IST
ಅಕ್ಷರ ಗಾತ್ರ

ಅಫಜಲಪುರ: ತಾಲ್ಲೂಕಿನ ಅತನೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎರಡು–ಮೂರು ತಿಂಗಳಿಂದ ವೈದ್ಯರಿಲ್ಲದೇ ರೋಗಿಗಳು ಪರದಾಡುವಂತಾಗಿದೆ. ಜತೆಗೆ ಬರುವ ರೋಗಿಗಳ ನೀರಿನ ಸೌಲಭ್ಯವೂ ಇಲ್ಲ. ಇದು ರೋಗಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ತಾಲ್ಲೂಕಿನ ಅತನೂರು ಪ್ರಾಥಮಿಕ ಆರೋಗ್ಯ ಕೇಂದ್ರ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿದೆ. ಆಸ್ಪತ್ರೆಯಲ್ಲಿ ಕಟ್ಟಡ ಚೆನ್ನಾಗಿದೆ. ಆಸ್ಪತ್ರೆಗೆ ದಿನಾಲು ಸುಮಾರು 70ರಿಂದ 80 ರೋಗಿಗಳು ಬರುತ್ತಾರೆ. ಆದರೆ ಅವರಿಗೆ ಚಿಕಿತ್ಸೆ ನೀಡಲು ವೈದ್ಯರಿಲ್ಲ. ಮೊದಲು ಇಲ್ಲಿದ್ದ ವೈದ್ಯರು ಡೆಪ್ಯುಟೇಷನ್ ಮೇಲೆ ಬೇರೆಡೆ ತೆರಳಿದ್ದಾರೆ. ಸದ್ಯ ಬಿಎಎಂಎಸ್ ಗುತ್ತಿಗೆ ಆಧಾರದ ಮೇಲೆ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ಎಲ್ಲ ಸಂದರ್ಭದಲ್ಲೂ ಬಿಎಎಂಎಸ್‌ ವೈದ್ಯರು, ರೋಗಿಗಳನ್ನು ಪರೀಕ್ಷಿಸಲಾಗುವುದಿಲ್ಲ. ಎಂಬಿಬಿಎಸ್‌ ವೈದ್ಯರ ಅಗತ್ಯವಿದ್ದು, ಆದರೆ ಅವರಿಲ್ಲ. ಹೀಗಾಗಿ ರೋಗಿಗಳು ಚಿಕಿತ್ಸೆ ದೊರೆಯದೇ ಪರದಾಡುವಂತಾಗಿದೆ.

ನೀರಿನ ಸೌಲಭ್ಯವಿಲ್ಲ: ಆಸ್ಪತ್ರೆಯಲ್ಲಿ ಶುದ್ಧ ಕುಡಿಯವ ನೀರಿನ ವ್ಯವಸ್ಥೆಯಿಲ್ಲ. ಆಸ್ಪತ್ರೆಗಾಗಿ ಕೊಳವೆಬಾವಿ ಕೊರೆಯಿಸಲಾಗಿದ್ದು, ಅದು ಕೆಟ್ಟು ಹೋಗಿದೆ. ಎರಡು ಬಾರಿ ದುರಸ್ತಿ ಮಾಡಿದ್ದರೂ ಸರಿಯಾಗಿಲ್ಲ ಎಂದು ವೈದ್ಯರು ಹೇಳುತ್ತಾರೆ.

ಕೇಂದ್ರದ ಗುತ್ತಿಗೆ ವೈದ್ಯ ಡಾ.ಪ್ರವೀಣ ಮಾತನಾಡಿ, ‘ಆಸ್ಪತ್ರೆಗೆ ದಿನಾಲು 70 ಜನ ರೋಗಿಗಳು ಬರುತ್ತಾರೆ. ಆದರೆ ಅವರಿಗೆ ನೀರಿನ ಸಮಸ್ಯೆಯಿದೆ. ಎಂಬಿಬಿಎಸ್ ವೈದ್ಯರು ಬೇರೆ ಕಡೆ ವರ್ಗವಾಗಿ ಹೋಗಿದ್ದಾರೆ. ಸದ್ಯಕ್ಕೆ ರೋಗಿಗಳಿಗೆ ನಾವೇ ಚಿಕಿತ್ಸೆ ನೀಡುತ್ತಿದ್ದೇವೆ. ಆಸ್ಪತ್ರೆಯಲ್ಲಿ ರೋಗಿಗಳಿಗೆ ಎಲ್ಲ ಸೌಲಭ್ಯಗಳಿವೆ. ಆದರೆ ಆಸ್ಪತ್ರೆಯಲ್ಲಿ ನೀರಿನ ದೊಡ್ಡ ಸಮಸ್ಯೆ ಇದೆ. ಆಸ್ಪತ್ರೆಗೆ ಮೊದಲು ನೀರು ಬೇಕು. ನಮ್ಮ ಆಸ್ಪತ್ರೆಯಲ್ಲಿ ಹೆರಿಗೆ ವ್ಯವಸ್ಥೆಯಿದೆ. ಆದರೆ ನೀರಿಲ್ಲ. ಈಗಿರುವ ಕೊಳವೆಬಾವಿ ಕೆಟ್ಟು ಹೋಗಿದೆ. ಗ್ರಾ.ಪಂನವರು ಒಂದು ಬಾರಿ ದುರಸ್ತಿಗೊಳಿಸಿದ್ದರೂ ಸರಿಯಾಗಿಲ್ಲ. ರೇವೂರ(ಬಿ) ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಪ್ರಸನ್ನ ಕಟ್ಟಿ ಅವರು ಈ ಕೇಂದ್ರದ ಮೇಲಾಧಿಕಾರಿಯಾಗಿದ್ದಾರೆ’ ಎಂದು ತಿಳಿಸಿದರು.

ಆಸ್ಪತ್ರೆಯ ನೀರಿನ ಸಮಸ್ಯೆ ಕುರಿತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಬಾಬುರಾವ ಜ್ಯೋತಿ ಅವರನ್ನು ವಿಚಾರಿಸಿದಾಗ, ‘ಸೋಮವಾರ ಮಾಹಿತಿ ಪಡೆದು ಆಸ್ಪತ್ರೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು’ ಎಂದು ತಿಳಿಸಿದರು.

ಆದಷ್ಟು ಬೇಗನೆ ಆಸ್ಪತ್ರೆಗೆ ಎಂಬಿಬಿಎಸ್ ವೈದ್ಯರನ್ನ ಮತ್ತು ಕುಡಿಯುವ ನೀರು ವ್ಯವಸ್ಥೆ ಮಾಡಬೇಕು. ಬೇಸಿಗೆ ಇರುವುದರಿಂದ ನೀರು ಬಹಳ ಅವಶ್ಯಕತೆ ಇದೆ. ಮಹಿಳೆಯರ ಹೆರಿಗೆಗೆ ನೀರಿನ ವ್ಯವಸ್ಥೆ ಇರಬೇಕಾಗುತ್ತದೆ. ಅದಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಗ್ರಾಮದಿಂದ ಮತ್ತು ರಾಷ್ಟ್ರೀಯ ಹೆದ್ದಾರಿಯಿಂದ ಆಸ್ಪತ್ರೆಗೆ ಸಂಚಾರ ಮಾಡಲು ಅಲ್ಲಲ್ಲಿ ಗಿಡಗಂಟಿಗಳು ಬೆಳೆದುಕೊಂಡಿವೆ. ರಾತ್ರಿ ವೇಳೆಯಲ್ಲಿ ಬೆಳಕಿನ ವ್ಯವಸ್ಥೆಯಿಲ್ಲ. ಆಸ್ಪತ್ರೆಯ ಮುಂದೆ ಅಳವಡಿಸಿರುವ ಹೈಮಾಸ್ಟ್‌ ವಿದ್ಯುತ್ ದೀಪಗಳು ಕೆಟ್ಟು ಹೋಗಿವೆ. ಹೀಗಾಗಿ ಆಸ್ಪತ್ರೆಗೆ ರೋಗಿಗಳು ಸಂಚಾರ ಮಾಡಲು ಕಷ್ಟವಾಗುತ್ತಿದೆ ಎಂದು ಆಸ್ಪತ್ರೆಗೆ ಬಂದಿರುವ ರೋಗಿಗಳು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT