ಬುಧವಾರ, ಅಕ್ಟೋಬರ್ 21, 2020
24 °C
ಕೋವಿಡ್: ಪ್ರವಾಸೋದ್ಯಮ ಇಲಾಖೆಯಿಂದ ಜಿಲ್ಲೆಗೆ ಇನ್ನೂ ಬಾರದ ಸೂಚನೆ

ಕಲಬುರ್ಗಿ: ‘ಪ್ರವಾಸಿ ಟ್ಯಾಕ್ಸಿ’ ಯೋಜನೆಗೆ ಕೊಕ್?

ಮನೋಜಕುಮಾರ್‌ ಗುದ್ದಿ Updated:

ಅಕ್ಷರ ಗಾತ್ರ : | |

car

ಕಲಬುರ್ಗಿ: ಬಡ, ನಿರುದ್ಯೋಗಿಗಳಿಗೆ ಪ್ರವಾಸೋದ್ಯಮ ಇಲಾಖೆಯು ಪ್ರತಿ ವರ್ಷ ‘ಪ್ರವಾಸಿ ಟ್ಯಾಕ್ಸಿ’ ಯೋಜನೆಯಡಿ ಕಾರು ಖರೀದಿಸಲು ₹ 3 ಲಕ್ಷ ಸಹಾಯಧನ ನೀಡುವ ಯೋಜನೆ ರೂಪಿಸಿದೆ. ಆದರೆ, ಕೋವಿಡ್‌ ಕಾರಣಕ್ಕಾಗಿ ಜಿಲ್ಲೆಗೆ ಇನ್ನೂವರೆಗೂ ಪ್ರಸಕ್ತ ಸಾಲಿನ ಟ್ಯಾಕ್ಸಿಗಳಿಗೆ ಸಹಾಯಧನ ನೀಡಲು ರಾಜ್ಯ ಸರ್ಕಾರದಿಂದ ಸೂಚನೆ ಬಂದಿಲ್ಲ. ಇದು ಟ್ಯಾಕ್ಸಿ ಆಕಾಂಕ್ಷಿ ಯುವಕರ ಆತಂಕಕ್ಕೆ ಕಾರಣವಾಗಿದೆ.

‘ಜಿಲ್ಲೆಯ ಸನ್ನತಿ, ನಾಗಾವಿ, ಮಳಖೇಡ, ಪರಿಸರ ವೈವಿಧ್ಯ ತಾಣವಾದ ಚಿಂಚೋಳಿ ತಾಲ್ಲೂಕಿನ ಹಲವೆಡೆ ಪ್ರವಾಸಿಗಳನ್ನು ಕರೆದೊಯ್ಯಲು ಪ್ರವಾಸಿ ಟ್ಯಾಕ್ಸಿಗಳನ್ನು ಬಳಸಿಕೊಳ್ಳಬಹುದಾಗಿದೆ. ಇಲಾಖೆಯ ಸಹಾಯಧನ ಪಡೆಯುವುದರ ಜೊತೆಗೆ ತಾವು ಕೂಡಿಟ್ಟ ಹಣದಲ್ಲಿ ಕಾರನ್ನು ಖರೀದಿಸುವುದರಿಂದ ಕುಟುಂಬವನ್ನು ಸಲುಹಬಹುದಾಗಿತ್ತು’ ಎಂದು ಅವರು ಹೇಳುತ್ತಿದ್ದಾರೆ.

ಮೇ ತಿಂಗಳಲ್ಲಿ ಜಿಲ್ಲೆಯ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಆರಂಭವಾಗಬೇಕಿತ್ತು. ಆದರೆ, ಮಾರ್ಚ್‌ನಿಂದಲೇ ಕೊರೊನಾ ಆರಂಭವಾಗಿದೆ. ಕೊರೊನಾ ಕಾರಣದಿಂದಾಗಿ ಇಲಾಖೆಗೆ ಹಣಕಾಸು ಲಭ್ಯತೆಯೂ ಕಡಿಮೆಯಾಗಿದೆ. ಹೀಗಾಗಿ, ಈ ಬಾರಿ ಅರ್ಜಿ
ಆಹ್ವಾನಿಸುವ ಸಾಧ್ಯತೆಗಳು ಕಡಿಮೆ ಎನ್ನುತ್ತವೆ ಇಲಾಖೆಯ ಮೂಲಗಳು.

ಇಲಾಖೆಯು ಪ್ರತಿ ವರ್ಷ ಜಿಲ್ಲೆಯ ಪರಿಶಿಷ್ಟ ಜಾತಿಗೆ ಸೇರಿದ 10, ಪರಿಶಿಷ್ಟ ಪಂಗಡಕ್ಕೆ ಸೇರಿದ 3 ಹಾಗೂ ಇತರೆ ಹಿಂದುಳಿದ ವರ್ಗದವರಿಗೆ ಸೇರಿದವರಿಗೆ 12 ಸೇರಿದಂತೆ 25 ಫಲಾನುಭವಿಗಳಿಗೆ ಪ್ರವಾಸಿ ಟ್ಯಾಕ್ಸಿ ಖರೀದಿಸಲು ತಲಾ ₹ 3 ಲಕ್ಷ ಸಹಾಯಧನ ವನ್ನು ನೀಡುತ್ತಿತ್ತು. ಕಳೆದ ವರ್ಷದ ಸಹಾಧಯನ ಪಡೆದ ಫಲಾನುಭವಿಯೊಬ್ಬರಿಗೆ ಇತ್ತೀಚೆಗೆ ಅಫಜಲಪುರ ಶಾಸಕ ಎಂ.ವೈ.ಪಾಟೀಲ ಅವರು ಕಾರಿನ ಕೀಲಿಯನ್ನು ಹಸ್ತಾಂತರಿಸಿದರು.

ಡಾ.ಬಿ.ಆರ್.ಅಂಬೇಡ್ಕರ್‌ ಅಭಿವೃದ್ಧಿ ನಿಗಮದಿಂದಲೂ ನೆರವಿಲ್ಲ: ಪರಿಶಿಷ್ಟರ ಅಭ್ಯುದಯಕ್ಕಾಗಿ ಅಸ್ತಿತ್ವಕ್ಕೆ ಬಂದ ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದಲೂ ಕಾರು ಖರೀದಿಗೆ ₹ 5 ಲಕ್ಷ ಸಹಾಯಧನವನ್ನು ನೀಡಲಾಗುತ್ತಿದೆ. 2018–19ನೇ ಸಾಲಿನಿಂದ ಅರ್ಜಿ ಸಲ್ಲಿಸಿದವರಿಗೂ ಇನ್ನೂ ಹಣ ಮಂಜೂರಾಗಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

‘ನಿಗಮದ ₹ 5 ಲಕ್ಷ ಪಾಲು ಹೊರತುಪಡಿಸಿದರೂ ಒಂದು ಉತ್ತಮ ಗುಣಮಟ್ಟದ ಪ್ರವಾಸಿ ಟ್ಯಾಕ್ಸಿಯನ್ನು ಖರೀದಿಸಲು ₹ 8ರಿಂದ ₹ 10 ಲಕ್ಷ ಬೇಕಾಗುತ್ತದೆ. ಉಳಿದ ಹಣವನ್ನು ಬ್ಯಾಂಕ್‌ ಸಾಲದ ಮೂಲಕ ಭರಿಸಬೇಕು. ಆದರೆ, ಬ್ಯಾಂಕುಗಳು ಕೊರೊನಾ ನೆಪವೊಡ್ಡಿ ಸಾಲವನ್ನೇ ಮಂಜೂರು ಮಾಡುತ್ತಿಲ್ಲ’ ಎಂದು ಆರೋಪಿಸುತ್ತಾರೆ ಕರ್ನಾಟಕ ರಾಜ್ಯ ಖಾಸಗಿ ಟ್ಯಾಕ್ಸಿ ವಾಹನ ಚಾಲಕರ ಸಂಘದ ಕಲಬುರ್ಗಿ ಜಿಲ್ಲಾಘಟಕದ ಅಧ್ಯಕ್ಷ ರುಕ್ಮಣ್ಣ ಎ. ರೆಡ್ಡಿ.

ಅಂಕಿ ಅಂಶಗಳು

 ₹ 15.75 ಕೋಟಿ - ಕಳೆದ ವರ್ಷ ಯೋಜನೆಗೆ ಮೀಸಲಿಟ್ಟಿದ್ದ ಸಹಾಯಧನ

************


ಶಶಿಧರ ತಳಕೇರಿ

ಪ್ರವಾಸೋದ್ಯಮ ಇಲಾಖೆಯ ಪ್ರವಾಸಿ ಟ್ಯಾಕ್ಸಿ ಯೋಜನೆಯಡಿ ಈ ಬಾರಿ ಅರ್ಜಿ ಆಹ್ವಾನಿಸಬಹುದೇ ಎಂದು ಕಾಯುತ್ತಿದ್ದೆ. ಆ ನಿರೀಕ್ಷೆಯೂ ಹುಸಿಯಾಗಿದೆ. ಇಲಾಖೆಗೆ ಹಂಚಿಕೆಯಾದ ಅನುದಾನದಲ್ಲೇ ಈ ಯೋಜನೆ ಮುಂದುವರಿಸಬೇಕು
ಶಶಿಧರ ತಳಕೇರಿ,  ಬಬಲಾದ (ಎಸ್), ಕಲಬುರ್ಗಿ

********


ಪ್ರಭುಲಿಂಗ ಎಸ್. ತಳಕೇರಿ

ಪ್ರವಾಸಿ ಟ್ಯಾಕ್ಸಿ ಯೋಜನೆಯಡಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಆರಂಭಿಸುವಂತೆ ಸರ್ಕಾರದಿಂದ ನಮಗೆ ಇನ್ನೂ ಸೂಚನೆ ಬಂದಿಲ್ಲ. ಬಂದ ಕೂಡಲೇ ಮುಂದಿನ ಕ್ರಮ ಕೈಗೊಳ್ಳುತ್ತೇವೆ
-ಪ್ರಭುಲಿಂಗ ಎಸ್. ತಳಕೇರಿ
ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.