ಸೋಮವಾರ, ಏಪ್ರಿಲ್ 12, 2021
30 °C
ಮೇಳಕ್ಕೆ ಡಿಸಿಪಿ ಡಿ.ಕಿಶೋರಬಾಬು ಚಾಲನೆ; 30ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸುವ ಸಾಧ್ಯತೆ

ಎಸ್‌ಬಿಆರ್‌ನಲ್ಲಿ ಉದ್ಯೋಗ ಮೇಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಉದ್ಯೋಗ ಆಕಾಂಕ್ಷಿಗಳಿಗೆ ಲಾಭದಾಯಕ ಉದ್ಯೋಗವನ್ನು ಪಡೆಯುವುದು ಎಲ್ಲದಕ್ಕೂ ಅಂತ್ಯವಲ್ಲ. ಆದರೆ ಉದ್ಯೋಗ ಪಡೆಯುವುದು ಯಶಸ್ವಿ ವೃತ್ತಿಪರ ವೃತ್ತಿಜೀವನವನ್ನು ನಿರ್ಮಿಸುವ ಮೊದಲ ಹೆಜ್ಜೆ’ ಎಂದು ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಡಿ. ಕಿಶೋರಬಾಬು ಅಭಿಪ್ರಾಯಪಟ್ಟರು.

ನಗರದ ಶರಣಬಸವ ವಿಶ್ವವಿದ್ಯಾಲಯವು ಮಂಗಳವಾರ ಆಯೋಜಿಸಿದ್ದ ‘ಉದ್ಯೋಗ ಮೇಳ–2021’ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಈ ಉದ್ಯೋಗ ಮೇಳದಲ್ಲಿ 30ಕ್ಕೂ ಹೆಚ್ಚು ಹೆಸರಾಂತ ಕೈಗಾರಿಕೆಗಳು ಮತ್ತು ಕಂಪನಿಗಳು ಭಾಗವಹಿಸಿವೆ. ಈ ಭಾಗದ ವಿದ್ಯಾರ್ಥಿಗಳಿಗೆ ಕಂಪನಿಗಳು ಉದ್ಯೋಗ ನೀಡಲು ಮುಂದೆ ಬಂದಿದ್ದು ಶ್ಲಾಘನೀಯ’ ಎಂದರು.

‘ಉದ್ಯೋಗಾಕಾಂಕ್ಷಿಗಳ ಉದ್ದೇಶವು ಕೇವಲ ಕಂಪನಿಯಲ್ಲಿ ಅಥವಾ ಉದ್ಯಮದಲ್ಲಿ ಉದ್ಯೋಗ ಪಡೆಯುವುದಕ್ಕೆ ಸೀಮಿತವಾಗಿರಬಾರದು. ಅವಕಾಶ ಸಿಕ್ಕಾಗ ಉತ್ತಮ ಸಾಧನೆ ಮಾಡುವುದು ಮತ್ತು ವೃತ್ತಿಜೀವನದಲ್ಲಿ ಪರಾಕಾಷ್ಠೆ ಸಾಧಿಸುವುದು ಬಹಳ ಮುಖ್ಯ’ ಎಂದು ಹೇಳಿದರು.

‘ವೃತ್ತಿಜೀವನದಲ್ಲಿ ಉನ್ನತ ಹುದ್ದೆಗಳನ್ನು ಸಾಧಿಸಲು ನಿಮಗೆ ದೊರೆತ ಕೆಲಸದ ಬಗ್ಗೆ ತಮ್ಮ ಜ್ಞಾನವನ್ನು ನಿಯಮಿತವಾಗಿ ನವೀಕರಿಸಿಕೊಳ್ಳಬೇಕು ಮತ್ತು ಅವರು ಕೆಲಸ ಮಾಡುತ್ತಿರುವ ಕೆಲಸ ಮತ್ತು ಉದ್ಯಮದ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಬೇಕು. ಇದಲ್ಲದೆ ನಿಮ್ಮ ಸಹೋದ್ಯೋಗಿಗಳು ಮತ್ತು ವೃತ್ತಿಯಲ್ಲಿ ಹಿರಿಯರಿಂದ ಗೌರವವನ್ನು ಪಡೆಯಲು ಪ್ರಮುಖ ವೃತ್ತಿಪರ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು’ ಎಂದರು.

‘ಭಾರತವು ಎಲ್ಲಾ ಕ್ಷೇತ್ರಗಳಲ್ಲೂ ವಿಶ್ವ ನಾಯಕನಾಗಬೇಕೆಂಬ ಆಕಾಂಕ್ಷೆ ಹೊಂದಿದೆ ಮತ್ತು ವಿಶ್ವ ಆರ್ಥಿಕ ಶಕ್ತಿಯಾಗುವ ಗುರಿಯನ್ನು ಸಾಧಿಸಲು ಹಾಗೂ ಭಾರತವನ್ನು ಸಶಕ್ತಗೊಳಿಸಲು ವಿವಿಧ ಕ್ಷೇತ್ರಗಳಲ್ಲಿ ತಮ್ಮ ನಾಯಕತ್ವದ ಸ್ಥಾನಗಳನ್ನು ಖಚಿತಪಡಿಸಿಕೊಳ್ಳುವ ಹೆಚ್ಚಿನ ಜವಾಬ್ದಾರಿಯನ್ನು ದೇಶದ ಯುವಕರು ಹೊಂದಿದ್ದಾರೆ’ ಎಂದು ಅವರು ಹೇಳಿದರು.

ಶರಣಬಸವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ, ‘ಇಂದು ನಡೆದ ಉದ್ಯೋಗ ಮೇಳವು ನಮ್ಮ ವಿಶ್ವವಿದ್ಯಾಲಯ ನಡೆಸಿದ ಎರಡನೇ ಉದ್ಯೋಗ ಮೇಳವಾಗಿದೆ. ಮೊದಲನೆ ಮೇಳವು ಕೆಲವು ದಿನಗಳ ಹಿಂದೆ ಬೀದರ್‌ನಲ್ಲಿ ಜಿಲ್ಲಾಡಳಿತದ ಸಹಯೋಗದೊಂದಿಗೆ ನಡೆಸಲಾಯಿತು. ಆಗ ವಿದ್ಯಾರ್ಥಿಗಳಿಂದ ಬಂದ ಪ್ರತಿಕ್ರಿಯೆ ಮತ್ತು ಉದ್ಯೋಗ ಕಂಪನಿಗಳು ತೋರಿಸಿದ ಉತ್ಸಾಹ ಅಮೋಘವಾಗಿತ್ತು’ ಎಂದು ಹೇಳಿದರು.

‘ಈ ಉದ್ಯೋಗ ಮೇಳದಲ್ಲಿ 30ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸುತ್ತಿದ್ದು, ಇದರಲ್ಲಿ 1500ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ’ ಎಂದು ವಿಶ್ವವಿದ್ಯಾಲಯದ ಉಪಕುಲಪತಿ ಡಾ. ನಿರಂಜನ್ ವಿ.ನಿಷ್ಠಿ ಅವರು ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.

ವಿಶ್ವವಿದ್ಯಾಲಯದ ಕುಲಸಚಿವ ಡಾ.ಅನೀಲಕುಮಾರ ಬಿಡವೆ, ಕುಲಸಚಿವ (ಮೌಲ್ಯಮಾಪನ) ಡಾ.ಲಿಂಗರಾಜ ಶಾಸ್ತ್ರಿ, ಡೀನ್ ಡಾ.ಲಕ್ಷ್ಮಿ ಪಾಟೀಲ ಮಾಕಾ ಉಪಸ್ಥಿತರಿದ್ದರು. ಪ್ರಾಧ್ಯಾಪಕಿ ಉಮಾ ಪಾಟೀಲ ಸ್ವಾಗತಿಸಿದರು ಮತ್ತು ಪ್ರಾಧ್ಯಾಪಕಿ ಶ್ವೇತಾ ಮಡಿವಾಳ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು