ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಡಾ.ಉಮೇಶ ಜಾಧವಗೆ ಮತ್ತೆ ಒಲಿದ ಅದೃಷ್ಟ

‘ಆಪರೇಶನ್’ನಿಂದ ಕಮಲ ಅರಳಿಸಿದ್ದ ಜಾಧವಗೆ ಎರಡನೇ ಬಾರಿ ಟಿಕೆಟ್
Published 13 ಮಾರ್ಚ್ 2024, 16:05 IST
Last Updated 13 ಮಾರ್ಚ್ 2024, 16:05 IST
ಅಕ್ಷರ ಗಾತ್ರ

ಕಲಬುರಗಿ: ಆಪರೇಶನ್ ಕಮಲವು ತುತ್ತ ತುದಿಯಲ್ಲಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ತೆಕ್ಕೆಯಿಂದ ಜಾರಿ ಬಿಜೆಪಿಗೆ ಹೋಗಿ ಟಿಕೆಟ್ ಪಡೆದು 2019ರಲ್ಲಿ ಪ್ರಭಾವಿ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಣಿಸಿ ಕ್ಷೇತ್ರದ ಸಂಸದರಾಗಿ ಚುನಾಯಿತರಾಗಿದ್ದ ಡಾ.ಉಮೇಶ ಜಾಧವ ಅವರಿಗೇ ಮತ್ತೆ ಬಿಜೆಪಿ ಟಿಕೆಟ್ ಒಲಿದು ಬಂದಿದೆ.

ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಅಷ್ಟಾಗಿ ಇಲ್ಲದಿರುವುದು ಹಾಗೂ ಪಕ್ಷದ ಕಾರ್ಯಕರ್ತರು, ಸಾರ್ವಜನಿಕರೊಂದಿಗಿನ ಒಡನಾಟ ಡಾ.ಜಾಧವ ಅವರ ಕೈ ಹಿಡಿದಿದೆ. ಈ ಬಾರಿ ಬಿಜೆಪಿ ಟಿಕೆಟ್‌ನ್ನು ಕಲ್ಯಾಣ ಕರ್ನಾಟಕದಲ್ಲಿ ಪ್ರಬಲವಾಗಿರುವ ಪರಿಶಿಷ್ಟ ಬಲಗೈ ಪಂಗಡಕ್ಕೆ ನೀಡಬೇಕು ಎಂಬ ಕ್ಷೀಣ ಧ್ವನಿಯ ಬೇಡಿಕೆಯ ಬಗ್ಗೆ ವರಿಷ್ಠರು ಹೆಚ್ಚಿನ ತಲೆ ಕೆಡಿಸಿಕೊಂಡಿಲ್ಲ.

ಹೀಗಾಗಿ, ಈ ಬಾರಿಯ ಟಿಕೆಟ್ ಬಗ್ಗೆ ಸಂಸದ ಜಾಧವ ಹೆಚ್ಚಿನ ತಲೆ ಕೆಡಿಸಿಕೊಂಡಿರಲಿಲ್ಲ. ಕ್ಷೇತ್ರದಲ್ಲಿ ಜಾಧವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಹಾವು–ಮುಂಗುಸಿಯಂತೆ ತಿಕ್ಕಾಟ ನಡೆದೇ ಇರುತ್ತದೆ. ‘ಜಾಧವ ಕಳೆದ ಐದು ವರ್ಷಗಳಲ್ಲಿ ಯಾವ ಕೆಲಸಗಳನ್ನೂ ಮಾಡಿಲ್ಲ. ಒಂದು ರೈಲು ತರಲೂ ಆಗಿಲ್ಲ’ ಎಂಬ ಟೀಕೆಗಳನ್ನು ಸವಾಲಾಗಿ ಸ್ವೀಕರಿಸಿದ್ದ ಜಾಧವ ಅವರು, ಸರ್ಕಾರದ ಅವಧಿ ಮುಗಿಯುವ ಅಂತಿಮ ಗಳಿಗೆಯಲ್ಲಿ ಕಲಬುರಗಿ–ಬೆಂಗಳೂರು ಮಧ್ಯೆ ವಂದೇ ಭಾರತ್ ರೈಲು, ಕಲಬುರಗಿ–ಬೆಂಗಳೂರು ಮಧ್ಯೆ ವಾರದ ಎಕ್ಸ್‌ಪ‍್ರೆಸ್ ರೈಲು, ಕಲಬುರಗಿ, ಗಾಣಗಾಪುರ ರೈಲು ನಿಲ್ದಾಣಗಳ ಅಭಿವೃದ್ಧಿಗಾಗಿ ಸುಮಾರು ₹ 63 ಕೋಟಿ ತಂದು ಸೈ ಎನಿಸಿಕೊಂಡರು.

ಕಲಬುರಗಿ ನಗರದ ಜನತೆಯ ಬೇಡಿಕೆಯಾಗಿದ್ದ ಹಾಗರಗಾ ಕ್ರಾಸ್‌ನಿಂದ ರಾಮಮಂದಿರ ವೃತ್ತದವರೆಗಿನ ಸರ್ವಿಸ್ ರಸ್ತೆಗೆ ₹ 57 ಕೋಟಿ ಬಿಡುಗಡೆ ಮಾಡಿಸಿದ್ದಾರೆ. ಜಾಧವ ಹಾಗೂ ಕೇಂದ್ರದ ಬಿಜೆಪಿ ಸರ್ಕಾರದಿಂದ ಜಿಲ್ಲೆಯ ಜನತೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದು ನಿಜ. ಅದರಲ್ಲಿ ಮುಖ್ಯವಾಗಿ ಮಲ್ಲಿಕಾರ್ಜುನ ಖರ್ಗೆ ಅವರು ರೈಲ್ವೆ ಸಚಿವರಾಗಿದ್ದ ಸಂದರ್ಭದಲ್ಲಿ ಘೋಷಿಸಿದ್ದ ಕಲಬುರಗಿ ರೈಲ್ವೆ ವಿಭಾಗೀಯ ಕೇಂದ್ರವೂ ಒಂದು. ಆದರೆ, ಕೇಂದ್ರದ ಬಿಜೆಪಿ ಸರ್ಕಾರ ಈ ಬೇಡಿಕೆಯನ್ನು ಕೊನೆವರೆಗೂ ಈಡೇರಿಸಲಿಲ್ಲ. ಆದರೆ, ಮೊದಲ ಬಾರಿ ಸಂಸದರಾಗಿರುವ ಉಮೇಶ ಜಾಧವ ಅವರು ತಮ್ಮ ಕೈಲಾದ ಮಟ್ಟಿಗೆ ಪ್ರಯತ್ನ ಮಾಡಿದ್ದಾರೆ. ಇನ್ನೊಂದು ಅವಧಿಗೆ ಸಂಸದರಾದರೆ ಕೇಂದ್ರದಲ್ಲಿ ಹೆಚ್ಚು ಪ್ರಭಾವಿಯಾಗುತ್ತಾರೆ. ಆಗ ಹೆಚ್ಚಿನ ಕೆಲಸಗಳನ್ನು ಜಿಲ್ಲೆಗೆ ತರಬಹುದು ಎನ್ನುತ್ತಾರೆ ಅವರ ಬೆಂಬಲಿಗರು.

2019ರಲ್ಲಿ ಜಾಧವ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಬಿಜೆಪಿ ವರಿಷ್ಠರು ಅವರಿಗೆ ಟಿಕೆಟ್ ನೀಡಿ ಮೋದಿ ಅವರಿಂದ ಪ್ರಚಾರ ಮಾಡಿಸಿ ಗೆಲ್ಲಿಸಿಕೊಂಡು ಬಂದಿತ್ತು. ನಂತರ ನಡೆದ ಉಪಚುನಾವಣೆಯಲ್ಲಿ ಚಿಂಚೋಳಿ ಕ್ಷೇತ್ರದಿಂದ ಅವರ ಪುತ್ರ ಡಾ.ಅವಿನಾಶ ಜಾಧವಗೆ ಟಿಕೆಟ್ ನೀಡಿದ್ದ ಬಿಜೆಪಿ ಅವರನ್ನು ಗೆಲ್ಲಿಸಿಕೊಂಡು ಬಂದಿತ್ತು. 

ಇದೇ 16ರಂದು ಪ್ರಧಾನಿ ನರೇಂದ್ರ ಮೋದಿ ಅವರು ಜಿಲ್ಲೆಗೆ ಭೇಟಿ ನೀಡುತ್ತಿದ್ದು, ಈ ಬಾರಿಯೂ ಉಮೇಶ ಜಾಧವ ಪರ ಪ್ರಚಾರ ನಡೆಸುವ ಮೂಲಕ ಅಖಾಡವನ್ನು ರಂಗೇರಿಸಲಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಬಂಜಾರ ಸಮುದಾಯವೂ ಜಾಧವ ಅವರಿಗೇ ಮತ್ತೆ ಟಿಕೆಟ್ ನೀಡಲು ಪ್ರಮುಖ ಕಾರಣವಾಗಿದೆ.

ಜಾಧವ ಅವರ ಎದುರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರು ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.

ಸಂಸದರಾದರೂ ವೈದ್ಯ ವೃತ್ತಿ ಬಿಡದ ಜಾಧವ

ವೃತ್ತಿಯಲ್ಲಿ ವೈದ್ಯರಾಗಿರುವ ಡಾ.ಉಮೇಶ ಜಾಧವ ಅವರು ತಾವು ಸಂಚರಿಸುತ್ತಿರುವ ಹಾದಿಯಲ್ಲಿ ಏನಾದರೂ ಅವಘಡಗಳಾದರೆ ಅವರಿಗೆ ಮೊದಲು ತಾವೇ ಚಿಕಿತ್ಸೆ ನೀಡುತ್ತಾರೆ. ಹಲವು ಬಾರಿ ತಮ್ಮ ಕಾರಿನಲ್ಲಿಯೇ ಆಸ್ಪತ್ರೆಗೆ ದಾಖಲಿಸಿ ಅವರ ಆರೋಗ್ಯದ ಬಗ್ಗೆ ನಿಗಾ ವಹಿಸಿದ ಉದಾಹರಣೆಗಳೂ ಇವೆ.

ಕೋವಿಡ್ ಮಿತಿಮೀರಿದ ಸಂದರ್ಭದಲ್ಲಿ ರೋಗಿಗಳಿಗೆ ಸಂಜೀವಿನಿಯಂತಿದ್ದ ರೆಮ್‌ಡೆಸಿವಿರ್ ಇಂಜೆಕ್ಷನ್‌ ಪೆಟ್ಟಿಗೆಯನ್ನು ತಾವೇ ವಿಮಾನದಲ್ಲಿ ತೆಗೆದುಕೊಂಡು ಬಂದು ಕಲಬುರಗಿಯಲ್ಲಿ ಜಿಮ್ಸ್ ಆಸ್ಪತ್ರೆಗೆ ತಲುಪಿಸಿದ್ದರು. ಕಲಬುರಗಿಯಲ್ಲಿ ಹಾದು ಹೋಗುತ್ತಿರುವ ಚೆನ್ನೈ–ಸೂರತ್ ಭಾರತ್ ಮಾಲಾ ಯೋಜನೆಯ ಅನುಷ್ಠಾನಕ್ಕೆ ಆಸ್ಥೆ ವಹಿಸುತ್ತಿದ್ದಾರೆ ಎಂದು ಅವರ ಬೆಂಬಲಿಗರು ಹೇಳಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT