ಶುಕ್ರವಾರ, ಜುಲೈ 1, 2022
23 °C
ಅಗತ್ಯ ಸೇವಾ ವಲಯದ ಸಿಬ್ಬಂದಿ, ಹಮಾಲರಿಗೆ ಸೇರಿ ಇತರರಿಗೆ ಆದ್ಯತೆ

ಎಪಿಎಂಸಿ: 317 ಮಂದಿಗೆ ಲಸಿಕೆ

ಪ್ರಜಾವಾಣಿ ವಾರ್ತೆ‌ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣದಲ್ಲಿ ಸೋಮವಾರ ಕೊರೊನಾ ವಾರಿಯರ್‌ ಎಂದು ಪರಿಗಣಿಸಿದ 317 ಮಂದಿಗೆ ಕೋವಿಡ್‌ ಲಸಿಕೆ ಹಾಕಲಾಯಿತು.

ಎಪಿಎಂಸಿ ಅಧಿಕಾರಿಗಳು, ಸಿಬ್ಬಂದಿ, ಕೆಲಸಗಾರರು, ಪೇಟೆ ಕಾರ್ಯಕರ್ತರು, ಭದ್ರತಾ ಸಿಬ್ಬಂದಿ, ಸ್ವಚ್ಛತಾ ಸಿಬ್ಬಂದಿ, ಹಮಾಲರು, ವಾಹನ ಚಾಲಕರು, ತೂಕದವರು ಸೇರಿದಂತೆ ಎಲ್ಲ ಫಲಾನುಭವಿಗಳಿಗೂ ಲಸಿಕೆಗಾಗಿ ನೋಂದಣಿ ಮಾಡಿಸಲಾಗಿದೆ. ಎಲ್ಲರಿಗೂ ಕೋವಿಶೀಲ್ಡ್‌ ಚುಚ್ಚುಮದ್ದು ನೀಡಲಾಯಿತು. ಅರ್ಧ ತಾಸು ಪ್ರಾಂಗಣದ ಕೊಠಡಿಯಲ್ಲಿ ವಿಶ್ರಾಂತಿ ನೀಡಿದ ಬಳಿಕ ಮನೆಗೆ ಕಳುಹಿಸಲಾಯಿತು.

ಲಸಿಕಾ ಉತ್ಸವಕ್ಕೆ ಚಾಲನೆ ನೀಡಿದ ಎಪಿಎಂಸಿ ಅಧ್ಯಕ್ಷ ಅಪ್ಪು ಕಣಕಿ ಮಾತನಾಡಿ, ‘ಸರ್ಕಾರದ ಮೇಲೆ ಹೆಚ್ಚು ಅವಲಂಬನೆ ಮಾಡುವುದಕ್ಕಿಂತ ನಮ್ಮ ಸುರಕ್ಷತೆ ಬಗ್ಗೆ ನಾವೇ ಎಚ್ಚರಿಕೆ ವಹಿಸಬೇಕು. ಎಪಿಎಂಸಿ ಪ್ರಾಂಗಣದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಎಷ್ಟೇ ಹತ್ತಿರದ ಸ್ನೇಹಿತ, ಸಹೋದ್ಯೋಗಿ, ಸಂಬಂಧಿ ಇದ್ದರೂ ಕನಿಷ್ಠ ಅಂತರ ಕಾಪಾಡಿಕೊಂಡೇ ವ್ಯವಹರಿಸಬೇಕು. ಪದೇಪದೇ ಕೈ ತೊಳೆಯುವುದನ್ನು ರೂಢಿಸಿಕೊಳ್ಳಬೇಕು. ಮುಂಜಾಗ್ರತೆ ವಹಿಸಿದರೆ ಮಾತ್ರ ಕೊರೊನಾದಿಂದ ದೂರ ಇರಬಹುದು’ ಎಂದರು.

ಕಾರ್ಯದರ್ಶಿ ಎಂ.ವಿ. ಶೈಲಜಾ ಮಾತನಾಡಿ, ‘ಅಗತ್ಯ ಸೇವಾ ವಲಯದಲ್ಲಿ ಬರುವ ಕಾರಣ ಜಿಲ್ಲಾಡಳಿತವು ಎಪಿಎಂಸಿ ಸಿಬ್ಬಂದಿ ಹಾಗೂ ಕೆಲಸಗಾರರನ್ನು ಕೊರೊನಾ ವಾರಿಯರ್‌ ಎಂದು ಗುರುತಿಸಿದೆ. ಸರ್ಕಾರದ ಮಾರ್ಗಸೂಚಿ ಅನುಸಾರ ಎಲ್ಲ ಫಲಾನುಭವಿಗಳಿಗೆ ಚುಚ್ಚುಮದ್ದು ಕೊಡಿಸಿದ್ದೇವೆ’ ಎಂದರು.‌

‘ಲಾಕ್‌ಡೌನ್‌ ನಿಯಮಗಳನ್ನು ಕೂಡ ಪ್ರಾಂಗಣದಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರುವ ಯತ್ನಗಳು ನಡೆದಿವೆ. ಸಂಪೂರ್ಣ ಲಾಕ್‌ಡೌನ್‌ ಇದ್ದ ವೇಳೆ ಎಲ್ಲ ವ್ಯವಹಾರಗಳು ಬಂದ್‌ ಇರುತ್ತವೆ. ಉಳಿದ ದಿನ ಬೆಳಿಗ್ಗೆ ಅವಕಾಶ ನೀಡಿದ್ದರಿಂದ ಅಂಗಡಿಗಳ ಖರೀದಿದಾರರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಅವರಿಗೆ ಅಂತರ ಕಾಯ್ದುಕೊಂಡೇ ವ್ಯವಹರಿಸುವಂತೆ ಸೂಚಿಸಿದ್ದೇವೆ. ಅಲ್ಲದೇ, ಪ್ರತಿದಿನವೂ ಮೈಕ್‌ನಲ್ಲಿ ಎಚ್ಚರಿಕೆ ಸಂದೇಶ ನೀಡಲಾಗುತ್ತಿದೆ’ ಎಂದರು.

ಎಪಿಎಂಸಿ ಉಪಾಧ್ಯಕ್ಷ ರಾಜು ಕೋಟೆ, ಸಹಾಯಕ ಕಾರ್ಯದರ್ಶಿ ರಾಜಕುಮಾರ ಹಾಗೂ ಸದಸ್ಯರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು