ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕ ಲಿಂಗಾಯತ ಧರ್ಮ ಶಿಫಾರಸು ತಿರಸ್ಕರಿಸಿ: ಲಿಂಗಾಯತ ಸ್ವಾಭಿಮಾನಿ ಬಳಗ

ವೀರಶೈವ ಲಿಂಗಾಯತ ಸ್ವಾಭಿಮಾನಿಗಳ ಬಳಗದಿಂದ ಬೃಹತ್‌ ಮೆರವಣಿಗೆ, ಪ್ರಧಾನಿಗೆ ಮನವಿ
Last Updated 8 ಡಿಸೆಂಬರ್ 2018, 11:53 IST
ಅಕ್ಷರ ಗಾತ್ರ

ಕಲಬುರ್ಗಿ: ‘ಪ್ರತ್ಯೇಕ ಲಿಂಗಾಯತ ಧರ್ಮ ಶಿಫಾರಸ್ಸನ್ನು ತಿರಸ್ಕರಿಸಬೇಕು ಹಾಗೂ ಮಹಾರಾಷ್ಟ್ರದಲ್ಲಿ ಮರಾಠರಿಗೆ ನೀಡಿದ ಮಾದರಿಯ ಮೀಸಲಾತಿಯನ್ನು ರಾಜ್ಯದ ವೀರಶೈವ ಲಿಂಗಾಯತರಿಗೆ ನೀಡಬೇಕು’ ಎಂದು ಆಗ್ರಹಿಸಿ ವೀರಶೈವ ಲಿಂಗಾಯತ ಸ್ವಾಭಿಮಾನಿಗಳ ಬಳಗದ ಕಾರ್ಯಕರ್ತರು, ವಿವಿಧ ಮಠಾಧೀಶರು ನಗರದಲ್ಲಿ ಶನಿವಾರ ಮೆರವಣಿಗೆ ನಡೆಸಿದರು.

ಜಗತ್‌ ವೃತ್ತದಿಂದ ಆರಂಭವಾದ ಬೃಹತ್‌ ಮೆರವಣಿಗೆ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತವನ್ನು ಸುತ್ತುಹಾಕಿ, ಜಿಲ್ಲಾಧಿಕಾರಿ ಕಚೇರಿ ತಲುಪಿತು. ಅಲ್ಲಿ ಕೆಲಕಾಲ ಧರಣಿ ನಡೆಸಿದ ಕಾರ್ಯಕರ್ತರು, ನಂತರ ಮನವಿ ನೀಡಿದರು. ಮೆರವಣಿಗೆಯುದ್ದಕ್ಕೂ ವೀರಶೈವ– ಲಿಂಗಾಯತ ಒಂದೇ ಎಂಬ ಘೋಷಣೆ ಮೊಳಗಿಸಿದರು.

‘ಶೈವನಾಗಿದ್ದ ನಾನು ವೀರಶೈವನಾದೆ’ ಎಂದು ಬಸವಣ್ಣನವರು ತಮ್ಮ ವಚನದಲ್ಲಿ ಬರೆದಿದ್ದಾರೆ. ಸಿದ್ಧರಾಮರು ‘ಚತುರ್ವರ್ಣಿಯಾದಡೇನು ಚತುರ್ವರ್ಣಾತೀತನೆ ವೀರಶೈವ ನೋಡಾ’ ಎಂದಿದ್ದಾರೆ. ಜತೆಗೆ, ಲಿಂಗಾಯತ ಎಂಬ ಪದವನ್ನೂ ಬಳಸಿದ್ದಾರೆ. ವೀರಶೈವ– ಲಿಂಗಾಯತ– ಲಿಂಗವೇಂದ ಈ ಮೂರೂ ಪದಗಳು ಒಂದೇ ಆಗಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಮನವಿಯಲ್ಲಿ ತಿಳಿಸಲಾಗಿದೆ.

‘ಬಸವಣ್ಣನವರಿಗಿಂತಲೂ ಹಿಂದಿನ ಕೊಂಡಗುಳಿ ಕೇಶಿರಾಜನ (1100–1170) ಕೃತಿಯಲ್ಲಿ ವೀರಶೈವ– ಲಿಂಗಾಯತ ಪದಗಳಿವೆ. ವೀರಶೈವ ಪದದ ಅಸ್ತಿತ್ವ 1033ಕ್ಕಿಂತಲೂ ಹಿಂದಿನದು ಎಂಬುದಕ್ಕೆ ಕೊಪ್ಪಳದಲ್ಲಿ ಸಿಕ್ಕ ಶಿಲಾಶಾಸನಗಳು ಸಾಕ್ಷಿಯಾಗಿವೆ. ಬಸವಣ್ಣನವರು ಇದಕ್ಕೊಂದು ಆಯಾಮ ನೀಡಿದ್ದಾರೆ’ ಎಂದೂ ವಿವರಿಸಲಾಗಿದೆ.

‘ಸನಾತನ ಸಂಸ್ಕೃತಿ, ಧರ್ಮವನ್ನು ಒಡೆಯಲು ಕೆಲವರು ಹುನ್ನಾರ ನಡೆಸಿದ್ದಾರೆ. ಇದಕ್ಕೆ ಉಗ್ರ ವಿರೋಧ ವ್ಯಕ್ತವಾದ್ದರಿಂದ ತುಸು ಬದಲಾವಣೆ ಮಾಡಿ ಈಗ ‘ಅಲ್ಪಸಂಖ್ಯಾತ ಸ್ಥಾನಮಾನ’ ಬೇಡಿಕೆ ಇಡುತ್ತಿದ್ದಾರೆ. ಅಲ್ಪಸಂಖ್ಯಾತ ಸ್ಥಾನಮಾನ ನೀಡಿದರೆ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಲಾಭವಾಗಲಿದೆ. ಈ ಕಾರಣಕ್ಕಾಗಿಯೇ ಹಲವು ಶಿಕ್ಷಣ ಸಂಸ್ಥೆಗಳ ಮುಖಂಡರೂ ಧರ್ಮ ಒಡೆಯುವ ಕೆಲಸದಲ್ಲಿ ತೊಡಗಿದ್ದಾರೆ’ ಎಂದು ದೂರಲಾಗಿದೆ.

ಬಳಗದ ಅಧ್ಯಕ್ಷ ಎಂ.ಎಸ್‌.ಪಾಟೀಲ ನರಿಬೋಳ, ಮಹಿಳಾ ಘಟಕದ ಅಧ್ಯಕ್ಷೆ ದಿವ್ಯಾ ಆರ್‌. ಹಾಗರಗಿ, ಮುಖಂಡರಾದ ಧರ್ಮಪ್ರಕಾಶ ಪಾಟೀಲ, ಸಿದ್ರಾಮಪ್ಪ ಅಳಗೂಡಕರ್, ಶಿವರಾವ ಪಾಟೀಲ, ಮಚೇಂದ್ರನಾಥ ಮುಲಗೆ, ಶಿವಶರಣಪ್ಪ ಸರಸಂಬಾ, ಸತೀಶ ಆರಾಧ್ಯ, ಪ್ರಶಾಂತ ಆರ್‌.ಟಿ., ಕಾರ್ತಿಕ ಮಠಪತಿ, ಮಂಜುನಾಥ ಅಂಕಲಗಿ ಸೇರಿದಂತೆ ಕಡಕೋಳ ಮಠ, ಪಾಳಾ ಮಠ, ತೊಣಸಳ್ಳಿ, ಕುಕನೂರ, ಆಗಾಂವ ಮಠದ ಶ್ರೀಗಳು, ಬೀದರ್‌ನ ಶಿವಾಚಾರ್ಯರ ಒಕ್ಕೂಟದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT