ಗುರುವಾರ , ಅಕ್ಟೋಬರ್ 29, 2020
19 °C
321 ಶಾಲೆಗಳ 28,221 ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ವೃದ್ಧಿ ಚಟುವಟಿಕೆ

ವಿದ್ಯಾಗಮ: 995 ವಠಾರ ಕೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ತಾಪುರ: ಕೋವಿಡ್-19 ರಿಂದಾಗಿ 2020-21ನೇ ಶೈಕ್ಷಣಿಕ ವರ್ಷದ ಶಾಲೆಗಳು ಪ್ರಾರಂಭವಾಗಿಲ್ಲ. ಶಾಲಾ ರಜೆಯ ಅವಧಿಯಲ್ಲಿ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ವೃದ್ಧಿಸಲೆಂದು ಶಿಕ್ಷಣ ಇಲಾಖೆಯ ನಿರ್ದೇಶನದಂತೆ ತಾಲ್ಲೂಕಿನಲ್ಲಿ 995 ವಠಾರ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

ತಾಲ್ಲೂಕಿನಲ್ಲಿ (ಚಿತ್ತಾಪುರ, ಶಹಾಬಾದ್, ಕಾಳಗಿ) 281 ಸರ್ಕಾರಿ ಪ್ರಾಥಮಿಕ ಶಾಲೆಗಳು, 40 ಸರ್ಕಾರಿ ಪ್ರೌಢ ಶಾಲೆಗಳು, ಒಟ್ಟು 321 ಶಾಲೆಗಳಿವೆ. ಪ್ರಾಥಮಿಕ ಶಾಲಾ ಮಕ್ಕಳಿಗೆ 866 ವಠಾರ ಕೇಂದ್ರ ಹಾಗೂ ಪ್ರೌಢ ಶಾಲಾ ಮಕ್ಕಳಿಗಾಗಿ 129, ಒಟ್ಟು 995 ವಠಾರ ಕೇಂದ್ರಗಳಲ್ಲಿ ಮಕ್ಕಳ ಕಲಿಕಾ ಸಾಮರ್ಥ್ಯ ವೃದ್ಧಿಸುವ ಕಾರ್ಯ ಶಿಕ್ಷಕರಿಂದ ನಡೆಯುತ್ತಿದೆ.

ಆನ್ ಲೈನ್ ಮೂಲಕ ಚಟುವಟಿಕೆಗೆ ಪ್ರೌಢ ಶಾಲೆಯ 555 ವಿದ್ಯಾರ್ಥಿಗಳು ಹಾಗೂ ಪ್ರಾಥಮಿಕ ಶಾಲೆಯ 1,293 ವಿದ್ಯಾರ್ಥಿಗಳು ಹಾಜರಾಗುತ್ತಿದ್ದಾರೆ. ಒಟ್ಟು ಪ್ರವೇಶ ದಾಖಲಾತಿ ಪ್ರಕಾರ ಶೇ 60 ರಷ್ಟು ವಿದ್ಯಾರ್ಥಿಗಳು ವಠಾರ ಕಲಿಕಾ ಕೇಂದ್ರಗಳಿಗೆ ಹಾಜರಾಗುತ್ತಿದ್ದಾರೆ. ಪ್ರಾಥಮಿಕ ಶಾಲೆಯ 1,253 ಶಿಕ್ಷಕರು, ಪ್ರೌಢ ಶಾಲೆಯ 225 ಶಿಕ್ಷಕರು ವಿದ್ಯಾರ್ಥಿಗಳ ಪಠ್ಯೇತರ ಕಲಿಕಾ ಸಾಮರ್ಥ್ಯ ವೃದ್ಧಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ತಾಲ್ಲೂಕಿನಲ್ಲಿ (ಚಿತ್ತಾಪುರ, ಶಹಾಬಾದ್, ಕಾಳಗಿ) ಸರ್ಕಾರದಿಂದ ಅನುದಾನ ಪಡೆಯುತ್ತಿರುವ 14 ಪ್ರೌಢ ಶಾಲೆ ಹಾಗೂ 23 ಪ್ರಾಥಮಿಕ ಶಾಲೆಗಳಲ್ಲಿ ವಠಾರ ಕೇಂದ್ರಗಳು ನಡೆಯುತ್ತಿವೆ. ಸರ್ಕಾರಿ ಮತ್ತು ಅನುದಾನಿತ ಶಾಲೆ ವಿದ್ಯಾರ್ಥಿಗಳ ಬಡಾವಣೆಗಳಿಗೆ ಹೋಗಿ ಶಿಕ್ಷಕರು ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಶ್ರಮಿಸುತ್ತಿದ್ದಾರೆ. ಗ್ರಾಮಗಳ ಸಮುದಾಯ ಭವನ, ದೇವಸ್ಥಾನ, ಮಠಗಳಲ್ಲಿ ಕೇಂದ್ರ ನಡೆಯುತ್ತಿವೆ. ‘ವಿದ್ಯಾಗಮ ನಿರಂತರ ಕಲಿಕಾ ಕಾರ್ಯಕ್ರಮ’ ದಡಿ ವಠಾರ ಕೇಂದ್ರಗಳು ನಡೆಯುತ್ತಿವೆ. ಶಿಕ್ಷಕರು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.30ರ ವರೆಗೆ ವಠಾರ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಂಜೆ 4.15 ರವರೆಗೆ ಶಾಲೆಯಲ್ಲಿ ಮರು ದಿನದ ಚಟುವಟಿಕೆಯ ಸಿದ್ಧತೆ ಮಾಡಿಕೊಳ್ಳುತ್ತಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧವೀರಯ್ಯ ರುದ್ನೂರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ವಠಾರ ಕೇಂದ್ರಗಳಲ್ಲಿ ಶಿಕ್ಷಕರು ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸುವ ಕಡೆಗೆ ಗಮನ ಹರಿಸಬೇಕು ಹಾಗೂ ನಿರಂತರ ಪರಿಶೀಲನೆ ಮಾಡುತ್ತಿರಬೇಕು. ಪ್ರಸ್ತುತ ಶಿಕ್ಷಣ ಇಲಾಖೆ ಮಾಡಿರುವ ಆದೇಶದ ಪ್ರಕಾರ ಪಠ್ಯ ಆಧರಿತ ಪರೀಕ್ಷೆ ನಡೆಸದೆ ಕಲಿಕಾ ಸಾಮರ್ಥ್ಯ ಆಧರಿತ ಪರೀಕ್ಷೆ ನಡೆಸುವ ಸಾಧ್ಯತೆ ಹೆಚ್ಚಿದೆ ಎಂದು ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು