ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲ ಸೌಲಭ್ಯ ವಂಚಿತ ಹಿಂಚಗೇರಿ

ಶೌಚಾಲಯ, ಕುಡಿಯುವ ನೀರು, ಉತ್ತಮ ರಸ್ತೆ ಇಲ್ಲದ ಗ್ರಾಮ
Last Updated 12 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಅಫಜಲಪುರ: ತಾಲ್ಲೂಕು ಕೇಂದ್ರದಿಂದ ಕೇವಲ 8 ಕಿಲೋಮೀಟರ್ ದೂರದಲ್ಲಿರುವ ಹಿಂಚಗೇರಿ ಗ್ರಾಮವು ಹಲವು ವರ್ಷಗಳಿಂದ ಮೂಲ ಸೌಲಭ್ಯಗಳಿಲ್ಲದೆ ಜನರು ನಿತ್ಯ ಸಂಕಟಪಡುತ್ತಿದ್ದಾರೆ.

ಹಿಂಚಗೇರಿ ಗ್ರಾಮವು ರೇಣುಕಾ ಸಕ್ಕರೆ ಕಾರ್ಖಾನೆ ಹಾಗೂ ಘತ್ತರಗಿ ಭಾಗ್ಯವಂತಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬದಿಯಲ್ಲಿ ಇದೆ. ಎರಡರಿಂದ ಮೂರು ಸಾವಿರ ಜನಸಂಖ್ಯೆ ಇದೆ.

ಗ್ರಾಮದ ಅಭಿವೃದ್ಧಿಗೆ ಕೆಲವು ವರ್ಷಗಳಿಂದ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಶಾಸಕರ ಅನುದಾನ– ಹೀಗೆ ಯಾವ ಮೂಲದಿಂದಲೂ ಅನುದಾನ ಬಂದಿಲ್ಲ. ಹೀಗಾಗಿ ಗ್ರಾಮದಲ್ಲಿ ಮೂಲ ಸೌಲಭ್ಯಗಳ ಕೊರತೆ ಎದ್ದುಕಾಣುತ್ತಿದೆ. ಗ್ರಾಮಸ್ಥರು ರಸ್ತೆಗಾಗಿ, ಶೌಚಾಲಯಕ್ಕಾಗಿ, ಶುದ್ಧ ಕುಡಿಯುವ ನೀರಿಗಾಗಿ ಕಷ್ಟಪಡುತ್ತಿದ್ದಾರೆ.

ಗ್ರಾಮದಲ್ಲಿ ವಿದ್ಯುತ್ ಪರಿವರ್ತಕಗಳು ಹಾದಿಯಲ್ಲಿ ಇವೆ, ವಿದ್ಯುತ್ ತಂತಿಗಳು ಅಲ್ಲಲ್ಲಿ ಜೋತು ಬಿದ್ದಿವೆ. ಜನರು ಜೀವ ಕೈಯಲ್ಲಿ ಹಿಡಿದು ಬದುಕುವಂತಾಗಿದೆ.

ಗ್ರಾಮದಲ್ಲಿ ಎಪಿಎಂಸಿಯವರು ಒಂದು ಕಟ್ಟೆ ಕಟ್ಟಿದ್ದು ಬಿಟ್ಟರೆ ಶೌಚಾಲಯವಾಗಲೀ ಚರಂಡಿಯಾಗಲೀ ಸಿಮೆಂಟ್ ರಸ್ತೆಯಾಗಲೀ ಇಲ್ಲ. ಜನರು ರಸ್ತೆ ಬದಿಯಲ್ಲಿಯೇ ಬಹಿರ್ದೆಸೆ ಮಾಡುತ್ತಿದ್ದಾರೆ. 20 ವರ್ಷಗಳ ಹಿಂದೆ ರಸ್ತೆ ಬದಿಯಲ್ಲಿ ನಿರ್ಮಿಸಿದ ಚಿಕ್ಕ ಬಸ್ ನಿಲ್ದಾಣ ಈಗ ಹಾಳಾಗಿ ಹೋಗಿದೆ. ಮಳೆ ಬಂದರೆ ಅದರಲ್ಲಿ ನೀರು ನಿಂತುಕೊಳ್ಳುತ್ತದೆ. ಹೀಗಾಗಿ ಗ್ರಾಮಸ್ಥರು ಬಿಸಿಲಿನಲ್ಲಿ ಕಾಯುವ ಪರಿಸ್ಥಿತಿ ಬಂದಿದೆ.

ಗ್ರಾಮದಲ್ಲಿ ಒಂದರಿಂದ 7ನೇ ತರಗತಿವರೆಗಿನ ಸರ್ಕಾರಿ ಶಾಲೆ ಇದೆ. ಆದರೆ ಶಾಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ.

ಮೂಲ ಸೌಲಭ್ಯಗಳಿಗಾಗಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಅವರಿಗೆ ಕೇಳಿಕೊಂಡರೂ ಪ್ರಯೋಜನ ಆಗಿಲ್ಲ ಎಂದು ಗ್ರಾಮಸ್ಥರಾದ ಸುಭಾಸ್ ರೋಗಿ , ಪರಮೇಶ್ವರ್ ಕುಂಬಾರ, ಮಾಳಪ್ಪ ಜಿಡ್ಡಿಮನಿ, ಶರಣಗೌಡ ಬಿರಾದಾರ, ಸಿದ್ದು ಸಾಲೋಟಗಿ ತಿಳಿಸಿದರು.

ಗ್ರಾಮಸ್ಥರ ಬೇಡಿಕೆ ಮೇರೆಗೆ ಶಾಸಕ ಎಂ.ವೈ ಪಾಟೀಲ ಭಾನುವಾರ ಗ್ರಾಮಕ್ಕೆ ಭೇಟಿ ನೀಡಿ ಸುಮಾರು ₹2 ಕೋಟಿ ಅಂದಾಜು ವೆಚ್ಚದಲ್ಲಿ ಮಾದರಿ ಗ್ರಾಮ ಮಾಡುವುದಾಗಿ ಭರವಸೆ ನೀಡಿ ಕೆಲವು ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಸದ್ಯಕ್ಕೆ ತುರ್ತಾಗಿ ಗ್ರಾಮದಲ್ಲಿ ಮಹಿಳಾ ಶೌಚಾಲಯ, ಬಸ್ ನಿಲ್ದಾಣ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಬೇಕು ಎಂಬುದು ಗ್ರಾಮಸ್ಥರ ಒಕ್ಕೊರಲ ಬೇಡಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT