ಶನಿವಾರ, ನವೆಂಬರ್ 28, 2020
18 °C
ಸಚಿವರಾದ ಪ್ರಲ್ಹಾದ್‌ ಜೋಶಿ, ಜಗದೀಶ ಶೆಟ್ಟರ್‌ ವಿರುದ್ಧ ಡಾ.ಶರಣಪ್ರಕಾಶ ಪಾಟೀಲ ಕಿಡಿ

‘ವಿನಯ ಕುಲಕರ್ಣಿ ಬಂಧನ ರಾಜಕೀಯ ಪಿತೂರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಮಾಜಿ ಸಚಿವ, ಕಾಂಗ್ರೆಸ್‌ ಮುಖಂಡ ವಿನಯ ಕುಲಕರ್ಣಿ ಅವರ ಬಂಧನ ರಾಜಕೀಯ ಪ್ರೇರಿತವಾಗಿದೆ. ಇದರ ಹಿಂದೆ ವ್ಯವಸ್ಥಿತ ಪಿತೂರಿ ನಡೆದಿದೆ’ ಎಂದಿ ಕಾಂಗ್ರೆಸ್‌ ಮುಖಂಡ ಡಾ.ಶರಣಪ್ರಕಾಶ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.

‘ಹುಬ್ಬಳ್ಳಿ– ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ, ರಾಜ್ಯಸಚಿವ ಜಗದೀಶ ಶೆಟ್ಟರ್‌  ಅವರಿಗೆ ವಿನಯ ಕುಲಕರ್ಣಿ ಅವರು ರಾಜಕೀಯವಾಗಿ ಮುಳುವಾಗಿದ್ದಾರೆ. ನೇರವಾಗಿ ಅವರನ್ನು ಎದುರಿಸುವ ಶಕ್ತಿ ಇಲ್ಲದೇ ಈ ರೀತಿ ಮಟ್ಟ ಹಾಕಲು ಪಿತೂರಿ ನಡೆಸಿದ್ದಾರೆ. ಈ ಹಿಂದೆಯೇ ಬಿಜೆಪಿಗೆ ಬರುವಂತೆ ವಿನಯ ಕುಲಕರ್ಣಿ ಅವರಿಗೆ ಆಹ್ವಾನ ನೀಡಿದ್ದರು. ಆದರೆ, ಅವರು ನಿರಾಕರಿಸಿದ್ದರಿಂದ ಉದ್ದೇಶಪೂರ್ವಕವಾಗಿ ಈಗ ಸಿಬಿಐ ದಾಳಿ ನಡೆಸಿ, ಬಂಧಿಸುವಂತೆ ಮಾಡಿದ್ದಾರೆ’ ಎಂದು ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಕಾಂಗ್ರೆಸ್ ಪಕ್ಷವನ್ನು ಧಾರವಾಡ ಜಿಲ್ಲೆಯಲ್ಲಿ ಸಮರ್ಥವಾಗಿ ಕಟ್ಟಿದವರಲ್ಲಿ ವಿನಯ ಕುಲಕರ್ಣಿ ಕೂಡ ಒಬ್ಬರು. ಅವರ ವರ್ಚಸ್ಸು ಬೆಳೆದಿದೆ. ಇದು ಇಬ್ಬರೂ ಸಚಿವರಿಗೆ ಬಿಸಿ ತುಪ್ಪವಾಗಿದೆ. ಹೀಗಾಗಿ, ಜೋಶಿ ಮುಂದಿನ ಚುನಾವಣೆಯಲ್ಲಿ ತಮ್ಮ ಎದುರಾಳಿ ಇಲ್ಲದಂತೆ ಮಾಡಿಕೊಳ್ಳಲು ಹುನ್ನಾರ ನಡೆಸಿ ಕುಲಕರ್ಣಿ ಅವರ ರಾಜಕೀಯವಾಗಿ ಶಕ್ತಿ ಕುಂದುವಂತೆ ಮಾಡಲು ಕುತಂತ್ರ ನಡೆಸಿದ್ದಾರೆ. ಕೊಲೆ ಪ್ರಕರಣದಲ್ಲಿ ಸಿಲುಕಿಸಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ’ ಎಂದೂ ದೂರಿದರು.

‘ಇಂಥ ಕೆಟ್ಟ ಚಾಳಿ ಮುಂದಿನ ದಿನಗಳಲ್ಲಿ ಬಿಜೆಪಿಗೆ ಮುಳುವಾಗಲಿದೆ. ದಾಳಿ ನಡೆಸುವ ಮುನ್ನ ಅವರು ಕೆಟ್ಟವರಾಗಿರುತ್ತಾರೆ. ಅವರ ಮೇಲೆ ಹಲವು ಆರೋಪ ಮಾಡುತ್ತಾರೆ. ಬಿಜೆಪಿ ಸೇರಿದ ತಕ್ಷಣ ಅವರು ಒಳ್ಳೆಯವರು ಎಂದು ಬಿಜೆಪಿಯವರೇ ಬಿಂಬಿಸುತ್ತಾರೆ. ಇದು ಹೇಗೆ ಸಾಧ್ಯ?’ ಎಂದು ವ್ಯಂಗ್ಯವಾಡಿದರು.

‘ಪಕ್ಷದ ಇನ್ನೊಬ್ಬ ಮುಖಂಡ ಬಿ.ಆರ್.ಪಾಟೀಲ ಅವರ ವಿರುದ್ಧ ಆಳಂದ ಪೊಲೀಸರು ಇಲ್ಲದ ಸುಳ್ಳು ಕೇಸ್ ದಾಖಲಿಸಿಕೊಂಡಿದ್ದು ಖಂಡನಾರ್ಹ. ಇದನ್ನು ನಾವು ಬಲವಾಗಿ ಖಂಡಿಸುತ್ತೇವೆ. ಆಳಂದ ಶಾಸಕರು ಜನರ ಸಂಕಷ್ಟಕ್ಕೆ ಸ್ಪಂದಿಸುವುದನ್ನು ಬಿಟ್ಟು, ಈ ರೀತಿ ಪರೋಕ್ಷ ‘ವಾರ್‌’ ಮಾಡುವುದು ಎಷ್ಟು ಸರಿ’ ಎಂದೂ ಅವರು ಪ‍್ರಶ್ನಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.