ಸೇಡಂ: ಪಟ್ಟಣದ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ವೀರೇಂದ್ರ ರುದ್ನೂರ ಮತ್ತು ಉಪಾಧ್ಯಕ್ಷರಾಗಿ ಸೈಜಾದಬಿ ಇಬ್ರಾಹಿಂ ಸಾಬ್ ಬುಧವಾರ ಅವಿರೋಧವಾಗಿ ಆಯ್ಕೆಯಾದರು.
ಒಟ್ಟು 23 ಸದಸ್ಯ ಸ್ಥಾನಗಳನ್ನು ಹೊಂದಿರುವ ಪುರಸಭೆಯಲ್ಲಿ ಕಾಂಗ್ರೆಸ್ 11 ಸ್ಥಾನಗಳನ್ನು ಹೊಂದಿತ್ತು. ಬಿಜೆಪಿ 12 ಸ್ಥಾನಗಳನ್ನು ಹೊಂದಿತ್ತು. ಪುರಸಭೆ ಚುನಾವಣೆಯಲ್ಲಿ ಶಾಸಕ ಮತ್ತು ಸಂಸದರ ಮತ ಚಲಾವಣೆಗೆ ಅವಕಾಶವಿರುವುದರಿಂದ ಕಾಂಗ್ರೆಸ್‌ಗೆ ಒಟ್ಟು 13 ಮತಬಲ ಸಿಗುವ ಸಾಧ್ಯತೆಯಿತ್ತು. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ವೀರೇಂದ್ರ ರುದ್ನೂರು ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸೈಜಾದಬಿ ಇಬ್ರಾಹಿಂ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಚುನಾವಣಾಧಿಕಾರಿ ಮತ್ತು ತಹಶೀಲ್ದಾರ್ ಶ್ರೀಯಾಂಕ ಧನಶ್ರೀ ಅವಿರೋಧ ಆಯ್ಕೆಯೆಂದು ಘೋಷಿಸಿದರು. ಚುನಾವಣಾ ಪ್ರಕ್ರಿಯೆಯಲ್ಲಿ ತಹಶೀಲ್ದಾರ್ ಕಚೇರಿ ಗ್ರೇಡ್-2 ತಹಶೀಲ್ದಾರ್ ಸಿದ್ರಾಮ ನಾಚವಾರ, ರಾಜಕುಮಾರ ಶೆಟ್ಟಿ, ಅರುಣಕುಮಾರ, ಪುಸರಭೆ ಮುಖ್ಯಾಧಿಕಾರಿ ಶರಣಯ್ಯಸ್ವಾಮಿ, ಸಿಬ್ಬಂದಿಗಳಾದ ಗ್ವಾಲೇಶ, ಗುರುಪ್ರಸಾದ ಇದ್ದರು.
ವೀರೇಂದ್ರ ಅಧ್ಯಕ್ಷರಾಗುತ್ತಿದ್ದಂತೆಯೇ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪುರಸಭೆ ಎದುರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು. ನಂತರ ನೂತನ ಅಧ್ಯಕ್ಷರನ್ನು ಸತ್ಕರಿಸಲಾಯಿತು. ಈ ಸಂದರ್ಭದಲ್ಲಿ ಸಂಸದ ರಾಧಾಕೃಷ್ಣ ದೊಡ್ಡಮನಿ, ಸಚಿವ ಡಾ.ಶರಣಪ್ರಕಾಶ ಪಾಟೀಲ ಇದ್ದರು.
ಪುರಸಭೆ ಕಚೇರಿಯತ್ತ ಸುಳಿಯದ ಬಿಜೆಪಿ ಸದಸ್ಯರು: ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬಿಜೆಪಿಯ ಯಾರೊಬ್ಬ ಸದಸ್ಯರೂ ಪಾಲ್ಗೊಳ್ಳಲಿಲ್ಲ. ಪುರಸಭೆ ಕಚೇರಿ ಹೊರಗಡೆ ಇದು ತೀವ್ರ ಚರ್ಚೆಯ ವಿಷಯವಾಗಿ ಮಾರ್ಪಟ್ಟಿತ್ತು. ಈ ನಡೆ ಸ್ವತಃ ನಮನ್ನು ಅಚ್ಚರಿಗೆ ಒಳಗಾಗುವಂತೆ ಮಾಡಿದೆ ಎಂಬ ಮಾತು ಬಿಜೆಪಿ ಕಾರ್ಯಕರ್ತರೊಬ್ಬರಿಂದ ಬಂದಿತು.
ಜನಪರವಾಗಿ ಕೆಲಸ ಮಾಡಿ:ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವೀರೇಂದ್ರ ರುದ್ನುರು ಅವರಿಗೆ ಪಕ್ಷದಿಂದ ಅಧಿಕಾರ ನೀಡಲಾಗಿದೆ. ಪುರಸಭೆ ಅಧ್ಯಕ್ಷರಾಗಿ ತಾವು, ಜನಪರ ಕೆಲಸವನ್ನು ಮಾಡಬೇಕು. ಜನರ ಪ್ರೀತಿ ವಿಶ್ವಾಸದಿಂದ ಕೆಲಸ ಮಾಡಿ, ಪಕ್ಷದ ಘನತೆ ಹೆಚ್ಚಿಸಬೇಕು’ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ಸಲಹೆ ನೀಡಿದರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ನಡೆದ ಪುರಸಭೆ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಘಟಕದಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಸತ್ಕರಿಸಲಾಯಿತು. ಸೇಡಂ ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ, ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವೀಂದ್ರ ನಂದಿಗಾಂವ್, ಬಸವರಾಜ ಪಾಟೀಲ ಊಡಗಿ, ನಾಗೇಶ್ವರರಾವ ಮಾಲಿಪಾಟೀಲ, ರಾಜಶೇಖರ ಪುರಾಣಿಕ್, ಶಿವಶರಣಪ್ಪ, ಸತೀಶ ಪೂಜಾರಿ, ಜಗನ್ನಾಥ ಚಿಂತಪಳ್ಳಿ, ಸತೀಶರೆಡ್ಡಿ ರಂಜೋಳ, ಅಬ್ದುಲ್ ರಶೀದ್ ಸೇರಿದಂತೆ ಇನ್ನಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.