ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕರ್ನಾಟಕದಲ್ಲಿ ಜಲ ನಿರ್ವಹಣೆ ಸಮಸ್ಯೆ: ರಾಜೇಂದ್ರ್‌ ಸಿಂಗ್‌

Published 28 ಜನವರಿ 2024, 5:41 IST
Last Updated 28 ಜನವರಿ 2024, 5:41 IST
ಅಕ್ಷರ ಗಾತ್ರ

ಕಲಬುರಗಿ: ‘ಕರ್ನಾಟಕದಲ್ಲಿ ಸಾಕಷ್ಟು ಜಲ ಸಂಪತ್ತಿದೆ. ಯಾರ ಬಳಿ ಯಾವುದು ಹೆಚ್ಚಾಗಿರುತ್ತದೆಯೋ ಅವರಿಗೆ ಅದರ ಮೌಲ್ಯ ತಿಳಿಯಲ್ಲ. ಹೀಗಾಗಿ ನಿಮ್ಮಲ್ಲಿ ಇರುವ ಜಲಸಂಪತ್ತಿನ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ’ ಎಂದು ಜಲತಜ್ಞ ರಾಜೇಂದ್ರ ಸಿಂಗ್ ಅಭಿಪ್ರಾಯಪಟ್ಟರು.

ನಗರದ ಜೈ ಭವಾನಿ ಕನ್ವೆನ್ಷನ್‌ ಹಾಲ್‌ನಲ್ಲಿ ರೋಟರಿ ಆರ್‌ಐ–3160 ಹಮ್ಮಿಕೊಂಡಿದ್ದ ಎರಡು ದಿನಗಳ 40ನೇ ಜಿಲ್ಲಾ ಸಮ್ಮೇಳನ ‘ಸಮನ್ವಯ’ದಲ್ಲಿ ಶನಿವಾರ ಅವರು ‘ಪರಿಸರ ಮತ್ತು ನೀರು ನಿರ್ವಹಣೆ’ ಕುರಿತು ಮಾತನಾಡಿದರು.

‘ರಾಜಸ್ಥಾನದಲ್ಲಿ ವಾರ್ಷಿಕ 9 ಇಂಚಿಗೂ ಕಡಿಮೆ ಮಳೆಯಾಗುತ್ತದೆ. ಕರ್ನಾಟಕದಲ್ಲಿ 40 ಇಂಚುಗಳಿಗೂ ಅಧಿಕ ಮಳೆ ಸುರಿಯುತ್ತದೆ. ಅದರ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಎಲ್ಲಿ ಕಬ್ಬು ಹಾಗೂ ಭತ್ತ ಬೆಳೆಯಲು ಸೂಕ್ತವಾದ ಮಣ್ಣು ಇಲ್ಲವೋ ಅಲ್ಲಿಯೂ ಕಬ್ಬು, ಭತ್ತ ಬೆಳೆಯಲಾಗುತ್ತಿದೆ. ಅಂದರೆ, ಸಂಪನ್ಮೂಲ ದುರುಪಯೋಗ ಆಗುತ್ತಿದೆ ಎಂದರ್ಥ. ಹೀಗಾದರೆ ನೀವು ಉತ್ತಮ ಭವಿಷ್ಯ ನಿರ್ಮಿಸಲು ಸಾಧ್ಯವಿಲ್ಲ’ ಎಂದು ಪ್ರತಿಪಾದಿಸಿದರು.

‘ಹವಾಮಾನ ಬದಲಾವಣೆ ಹಾಗೂ ಜಾಗತಿಕ ತಾಪಮಾನದಿಂದ ಇಡೀ ವಿಶ್ವದಲ್ಲಿ ಅಕಾಲಿಕ ಮಳೆಗಳಾಗುತ್ತಿವೆ. ಹಿಮಾಲಯ, ಕೇರಳದಲ್ಲಿ ಪ್ರವಾಹಗಳು ಉಂಟಾಗುತ್ತಿವೆ. ಭಾರತ ಸ್ವತಂತ್ರವಾದಾಗ ದೇಶದ ಕೇವಲ ಶೇ1ರಷ್ಟು ಪ್ರದೇಶದ ಮೇಲೆ ಪ್ರವಾಹ ಉಂಟಾಗುತ್ತಿತ್ತು. ಕೇವಲ ಶೇ 4ರಷ್ಟು ಪ್ರದೇಶದಲ್ಲಿ ನೀರಿನ ಕೊರತೆಯಿತ್ತು. ಅದರ ದೊಡ್ಡ ಭಾಗವು ಪೈಕಿ ರಾಜಸ್ಥಾನ ಹಾಗೂ ಕರ್ನಾಟಕದ ವಿಜಯಪುರ, ಕಲಬುರಗಿ ಪ್ರದೇಶದಲ್ಲಿತ್ತು. ಆದರೆ, ಇಂದು ಶೇ 62ರಷ್ಟು ಭೂಪ್ರದೇಶದಲ್ಲಿ ನೀರಿನ ಕೊರತೆಯಿದೆ’ ಎಂದರು.

‘1988ರಲ್ಲಿ ಚಂಬಲ್‌ ಕಣಿವೆಯಲ್ಲಿ ಸುಪ್ರೀಂಕೋರ್ಟ್‌ ಆದೇಶದಂತೆ 28 ಸಾವಿರ ಗಣಿಗಳನ್ನು ಮುಚ್ಚಲಾಗಿತ್ತು. ಬಳಿಕ ಚಂಬಲ್‌ ಕಣಿವೆಯು ‌ದರೋಡೆಕೋರರಿಂದ ಗುರುತಿಸಿಕೊಂಡಿತು. ಸಾಕಷ್ಟು ಜಮೀನಿದ್ದರೂ, ನೀರು ಇರಲಿಲ್ಲ. ಜಲ ಜಾಗೃತಿ, ಜಲ ಸಾಕ್ಷರತೆಯ ಪರಿಣಾಮವಾಗಿ ಬಂದೂಕು ಹಿಡಿದಿದ್ದ ಬಂಡುಕೋರರೆಲ್ಲ ಮತ್ತೆ ಕೃಷಿಯತ್ತ ಹೊರಳಿದರು. ವಿಜ್ಞಾನ ಹಾಗೂ ತಂತ್ರಜ್ಞಾನದ ಸಂಯೋಜನೆ ಹಾಗೂ ಸಮುದಾಯದ ಸಹಭಾಗಿತ್ವದಿಂದ ಈ ಬದಲಾವಣೆ ಸಾಧ್ಯವಾಯಿತು. ಸಿರಿಯಾ–ಟರ್ಕಿ, ಪ್ಯಾಲೆಸ್ತೀನ್‌–ಇಸ್ರೇಲ್‌ ಯುದ್ಧಗಳ ಹಿಂದಿನ ನಿಜವಾದ ಕಾರಣವೂ ನೀರಿನ ಸಮಸ್ಯೆಯೇ ಆಗಿದೆ’ ಎಂದು ಪ್ರತಿಪಾದಿಸಿದರು.

‘ಕಲಬುರಗಿ ಪ್ರದೇಶವನ್ನು ಬರಮುಕ್ತಗೊಳಿಸಲು ಜಲ ಸಾಕ್ಷರತೆ ಮೂಡಿಸುವುದು ಅಗತ್ಯ. ಹೃದಯ, ತಲೆ ಹಾಗೂ ಕೈಗಳನ್ನು ಈ ಕೆಲಸದಲ್ಲಿ ತೊಡಗಿಸಬೇಕು. ನೀರನ್ನು ಸಂರಕ್ಷಿಸುವ, ಅದನ್ನು ಶಿಸ್ತುಬದ್ಧವಾಗಿ ಬಳಸುವ, ಕಡಿಮೆ ನೀರಿನಲ್ಲಿ ಹೇಗೆ ಬದುಕಬಹುದೆಂದು ತೋರಿಸುವ ಕೆಲಸವನ್ನು ಆಂದೋಲನವಾಗಿ ರೋಟರಿ ಸಂಸ್ಥೆ ಮುನ್ನಡೆಸಬೇಕಿದೆ’ ಎಂದರು.

ಸಚಿವರು ಭಾಗಿ:

ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ, ಶರಣಬಸಪ್ಪ ದರ್ಶನಾಪುರ, ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್, ವಿಧಾನಪರಿಷತ್ ಸದಸ್ಯ ಶಶೀಲ್‌ ನಮೋಶಿ, ಎಚ್‌ಕೆಇ ಸಂಸ್ಥೆಯ ಅಧ್ಯಕ್ಷ ಭೀಮಾಶಂಕರ ಬಿಲಗುಂದಿ, ಸಮ್ಮೇಳನದ ಅಧ್ಯಕ್ಷ ಶಾಂತಕುಮಾರ ಬಿಲಗುಂದಿ, ಸಹ ಅಧ್ಯಕ್ಷ ಜಯಕುಮಾರ ಮಾಡಗಿ ಸೇರಿದಂತೆ ಹಲವು ಗಣ್ಯರು ವೇದಿಕೆಯಲ್ಲಿದ್ದರು.

ರೋಟರಿ ಆರ್‌.ಐ. 3160 ಗವರ್ನರ್‌ ಮಾಣಿಕ್ ಪವಾರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ರೋಟರಿ ಆರ್‌.ಐ. 3160 ಜಿಲ್ಲಾ ವ್ಯಾಪ್ತಿಯ 85 ರೋಟರಿ ಕ್ಲಬ್‌ಗಳ ನೂರಾರು ಪ್ರತಿನಿಧಿಗಳು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.

ಸಕಾರಾತ್ಮಕವಾಗಿರುವ ಗುಟ್ಟು!
‘ನಿತ್ಯ ಜಂಜಡಗಳ ಕಾರ್ಯದೊತ್ತಡದ ಬದುಕಿನಲ್ಲಿ ಪುಟ್ಟ ವಿರಾಮ ಪಡೆಯಬೇಕು. ಅದರಿಂದ ಯಾವುದೇ ಸಂದರ್ಭದಲ್ಲೂ ಸಕಾರಾತ್ಮಕವಾಗಿ ಇರಲು ಸಾಧ್ಯ’ ಎಂದು ರಾಜಸ್ಥಾನದ ಬಿ.ಕೆ.ಸುನೀತಾ ದೀದಿ ಪ್ರತಿಪಾದಿಸಿದರು. ‘ಸಮನ್ವಯ’ ಸಮ್ಮೇಳನ ಉದ್ಘಾಟಿಸಿ ‘ಏನೇ ಆದರೂ ಸಕಾರಾತ್ಮಕವಾಗಿರುವುದು’ ವಿಷಯ ಕುರಿತು ಅವರು ಮಾತನಾಡಿದರು. ‘ನಮ್ಮ ಜೀವನದಲ್ಲಿ ಎರಡು ವೃತ್ತಗಳಿರುತ್ತವೆ. ಒಂದು ಪ್ರಜ್ಞೆಯ ವೃತ್ತ ಮತ್ತೊಂದು ಸಂದರ್ಭಗಳ ವೃತ್ತ. ಯಾವುದೋ ಘಟನೆ ಜರುಗಿದಾಗ ಈ ಎರಡರಲ್ಲಿ ಯಾವುದನ್ನು ಆಯ್ದುಕೊಳ್ಳಬೇಕು ಎಂಬುದು ನಮಗೇ ಬಿಟ್ಟಿದ್ದು. ಆಗ ಪಡೆಯುವ ಲಘು ವಿರಾಮ ನಮ್ಮನ್ನು ಸಂದರ್ಭಗಳ ವೃತ್ತದಿಂದ ಬೇರ್ಪಡಿಸಿ ಪ್ರಜ್ಞೆಯ ವೃತ್ತದಲ್ಲಿರುವಂತೆ ಮಾಡುತ್ತಿದೆ. ಇದುವೇ ಎಲ್ಲ ಸಂದರ್ಭಗಳಲ್ಲೂ ಸಕಾರಾತ್ಮಕವಾಗಿರುವ ಮಂತ್ರ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT