ಭಾನುವಾರ, ಸೆಪ್ಟೆಂಬರ್ 27, 2020
24 °C
ಕೇಂದ್ರದ ನೆರವಿನ ನಿರೀಕ್ಷೆಯಲ್ಲಿ ಕಾವೇರಿ, ಕೃಷ್ಣಾ, ಮಹದಾಯಿ ಕಣಿವೆ ರೈತರು

ಬಜೆಟ್‌ನಲ್ಲಿ ಘೋಷಣೆಯಾಗಲಿದೆಯೇ ರಾಷ್ಟ್ರೀಯ ನೀರಾವರಿ ಯೋಜನೆ?

ಮನೋಜಕುಮಾರ್‌ ಗುದ್ದಿ / ಯೋಗೇಶ್‌ ಎಂ.ಎನ್‌ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಕೇಂದ್ರ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಬಜೆಟ್‌ ಮಂಡಿಸಲು ಸಿದ್ಧತೆ ನಡೆಸುತ್ತಿರುವಂತೆಯೇ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಪೂರಕ ಘೋಷಣೆಗಳನ್ನು ಹೊರಡಿಸಬಹುದೇ ಎಂಬ ನಿರೀಕ್ಷೆಯಲ್ಲಿದ್ದಾರೆ ರಾಜ್ಯದ ರೈತರು.

ಜೊತೆಗೆ, ಅಂತರ್ಜಲ ಬಳಕೆ, ಮಳೆ ನೀರು ಸಂಗ್ರಹ, ಕೆರೆ, ಬಾವಿಯಂತಹ ಸಾಂಪ್ರದಾಯಕ ನೀರಿನ ಮೂಲಗಳನ್ನು ಉಳಿಸುವ ನಿಟ್ಟಿನಲ್ಲಿ ನರೇಂದ್ರ ಮೋದಿ ಸರ್ಕಾರ ಏನಾದರೂ ‘ಪವಾಡ’ ರೂಪಿ ಯೋಜನೆಯನ್ನು ಪ್ರಕಟಿಸಬಹುದೇ ಎಂಬ ನಿರೀಕ್ಷೆಯಲ್ಲಿದ್ದಾರೆ ರಾಜ್ಯದ ನೀರಾವರಿ ತಜ್ಞರು.

ಬಜೆಟ್‌ನ ತಾಜಾ ಅಪ್‌ಡೇಟ್‌ಗೆ https://www.prajavani.net/budget-2019 ನೋಡಿ


ಮಹದಾಯಿ ನದಿ ತಿರುವು ಯೋಜನೆ ಕಾಮಗಾರಿ (24/12/17ರ ಚಿತ್ರ)

ಮಹದಾಯಿ ಯೋಜನೆ: ಅಧಿಸೂಚನೆ ನಿರೀಕ್ಷೆ

ಉತ್ತರ ಕರ್ನಾಟಕದ ಬೆಳಗಾವಿ, ಧಾರವಾಡ, ಗದಗ ಹಾಗೂ ಬಾಗಲಕೋಟೆ ಜಿಲ್ಲೆಗಳ 9 ತಾಲ್ಲೂಕುಗಳಿಗೆ ಜೀವದಾಯಿನಿಯಾಗಲಿರುವ ಮಹದಾಯಿ ಯೋಜನೆ ಬಗ್ಗೆ ರೈತರು ಸಾಕಷ್ಟು ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಕರ್ನಾಟಕಕ್ಕೆ ಮಹದಾಯಿ ನ್ಯಾಯಮಂಡಳಿಯು 13.5 ಟಿಎಂಸಿ ಅಡಿ ನೀರನ್ನು ಹಂಚಿಕೆ ಮಾಡಿ ಆದೇಶ ನೀಡಿದೆ. ಆ ಪೈಕಿ ಕೃಷಿ ಹಾಗೂ ವಿದ್ಯುತ್‌ ಉತ್ಪಾದನೆಗೆ ಬಳಕೆಯಾಗುವ ನೀರನ್ನು ಹೊರತುಪಡಿಸಿ 5.5 ಟಿಎಂಸಿ ಅಡಿ ನೀರನ್ನು ಕುಡಿಯುವ ನೀರಿಗೆ ಬಳಕೆ ಮಾಡಿಕೊಳ್ಳಲು ನ್ಯಾಯಮೂರ್ತಿ ಜೆ.ಎಂ.ಪಾಂಚಾಲ್‌ ನೇತೃತ್ವದ ನ್ಯಾಯಮಂಡಳಿಯು ಕರ್ನಾಟಕಕ್ಕೆ ಅವಕಾಶ ನೀಡಿದೆ. ಅದನ್ನು ಬಳಸಿಕೊಳ್ಳುವ ಯತ್ನಗಳು ಇನ್ನೂ ಆರಂಭವಾಗಿಲ್ಲ ಎಂಬುದು ಮಹದಾಯಿ, ಕಳಸಾ, ಬಂಡೂರಿ ಹೋರಾಟ ಸಮಿತಿಯ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ.

ಸರ್ಕಾರ ಬಜೆಟ್‌ ನೆಪದಲ್ಲಿಯಾದರೂ ನ್ಯಾಯಮಂಡಳಿ ತೀರ್ಪಿನಂತೆ ಗೆಜೆಟ್‌ ಅಧಿಸೂಚನೆಯನ್ನು ತುರ್ತಾಗಿ ಹೊರಡಿಸಿದರೆ ನೀರು ಬಳಕೆಗೆ ರಾಜ್ಯ ಸರ್ಕಾರ ಯೋಜನೆ ರೂಪಿಸಲು ರಹದಾರಿ ಸಿಕ್ಕಂತಾಗುತ್ತದೆ ಎಂಬುದು ಮಹದಾಯಿಗಾಗಿ ಹೋರಾಟ ನಡೆಸಿದ ರೈತ ಸೇನಾ ಕರ್ನಾಟಕ ಸಂಘಟನೆಯ ಅಧ್ಯಕ್ಷ ವೀರೇಶ ಸೊಬರದಮಠ ಅವರ ಅಭಿಮತ.

ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಜಲಸಂಪನ್ಮೂಲ ಸಚಿವರು, ವಿರೋಧ ಪಕ್ಷದ ನಾಯಕರು, ರಾಜ್ಯದ ಎಲ್ಲ 28 ಸಂಸದರು, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ ಎನ್ನುತ್ತಾರೆ ಸೊಬರದಮಠ.

ಮಹದಾಯಿ ಯೋಜನೆ ಕುರಿತು ಸುದ್ದಿಗಳಿಗೆ https://www.prajavani.net/tags/mahadayi ನೋಡಿ


ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಆಂತರಿಕ ಸಮಿತಿ ಸದಸ್ಯರು ಜೂನ್  4ರಂದು ಕೆಆರ್‌ಎಸ್‌ ಜಲಾಶಯಕ್ಕೆ ಭೇಟಿ ನೀಡಿದ್ದರು (ಚಿತ್ರ: ಪ್ರಜಾವಾಣಿ ಸಂಗ್ರಹ)

ಕಾವೇರಿ ಕೊಳ್ಳದ ನಿರೀಕ್ಷೆ ದೊಡ್ಡದು

ಕೆಆರ್‌ಎಸ್‌ ಜಲಾಶಯದಿಂದ ಕಾವೇರಿಗೆ ನೀರು ಹರಿಸುವಂತೆ ಒತ್ತಾಯಿಸಿ ಮಂಡ್ಯ ಜಿಲ್ಲೆಯಾದ್ಯಂತ ಪ್ರತಿದಿನ ಹೋರಾಟಗಳು ನಡೆಯುತ್ತಿವೆ. ಆದರೆ ನೀರು ಹರಿಸುವ ಕುರಿತು ರಾಜ್ಯ ಸರ್ಕಾರದ ಕೈ ಕಟ್ಟಿಹಾಕಲಾಗಿದೆ.

ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕ ಮತ್ತು ತಮಿಳುನಾಡು ನಡುವೆ ವಿವಾದ ಇರುವ ಕಾರಣ ಈ ಬಾರಿಯ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ನೀರಿನ ಹಂಚಿಕೆ ವಿಚಾರದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ. ಸುಪ್ರೀಂ ಕೋರ್ಟ್‌ ಸೂಚನೆಯಂತೆ ಪ್ರಾಧಿಕಾರ ರಚನೆಯಾಗಿರುವ ಕಾರಣ ಕೇಂದ್ರ ಸರ್ಕಾರವೂ ಪ್ರಾಧಿಕಾರದತ್ತ ಬೆರಳು ತೋರಿಸುತ್ತದೆ. ಆದರೆ ನೀರಾವರಿ ಯೋಜನೆಗಳ ಕುರಿತು ಬಜೆಟ್‌ನಲ್ಲಿ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ. ಕೆಆರ್‌ಎಸ್‌ ಜಲಾಶಯ ಬಲಪಡಿಸುವ ಬಗ್ಗೆ ಯೋಜನೆ ರೂಪಿಸಬಹುದು. ಜೊತೆಗೆ ನೀರಾವರಿ ಯೋಜನೆಗಳನ್ನು ಪ್ರಕಟಿಸಬಹುದು.

ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ರಚನೆಯ ನಂತರ ನೀರು ಹರಿಸುವ ನಿರ್ಧಾರ ಕೈಗೊಳ್ಳುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲವಾಗಿದೆ. ಆದರೂ ಲೋಕಸಭಾ ಚುನಾವಣೆ ವೇಳೆ ಸರ್ಕಾರ ನಾಲೆಗಳಿಗೆ ನೀರು ಹರಿಸಿತ್ತು. ನಂತರ ಪ್ರಾಧಿಕಾರ ಕಾವೇರಿ ನೀರಾವರಿ ನಿಗಮಕ್ಕೆ ನೋಟಿಸ್‌ ನೀಡಿ ವಿವರಣೆ ಪಡೆದಿತ್ತು. ಚುನಾವಣೆಯಲ್ಲಿ ಪುತ್ರ ನಿಖಿಲ್‌ ಅವರನ್ನು ಗೆಲ್ಲಿಸಿಕೊಳ್ಳುವ ಉದ್ದೇಶದಿಂದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರಾಧಿಕಾರದ ಅನುಮತಿ ಪಡೆಯದೇ ನೀರು ಹರಿಸಿದ್ದಾರೆ ಎಂದು ಆರೋಪಿಸಲಾಗಿತ್ತು.

ಈಗ ನೀರು ಹರಿಸುವ ಅಧಿಕಾರ ನಮಗೆ ಇಲ್ಲ ಎಂದು ಕುಮಾರಸ್ವಾಮಿ ಅವರು ಪ್ರಾಧಿಕಾರದ ಕಡೆ ಕೈತೋರಿಸುತ್ತಿದ್ದಾರೆ. ಮಗನ ಸೋಲಿಗೆ ಮುಖ್ಯಮಂತ್ರಿ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನೀರು ಹರಿಸಲು ಸಾಧ್ಯವಾಯಿತು. ಈಗ ಏಕೆ ಸಾಧ್ಯವಿಲ್ಲ ಎಂದು ರೈತರು ಪ್ರಶ್ನಿಸುತ್ತಿದ್ಧಾರೆ.

ಕರ್ನಾಟಕ ಮೇಕೆದಾಟು ಬಳಿ ಕಾವೇರಿ ನದಿಗೆ ಜಲಾಶಯ ನಿರ್ಮಿಸಲು ಮುಂದಾಗಿದೆ. ತಮಿಳುನಾಡು ಬಿಳಿಗುಂಡ್ಲು ಬಳಿ ಜಲಾಶಯ ನಿರ್ಮಿಸುವ ಯೋಜನೆ ರೂಪಿಸುತ್ತಿದೆ. ಮೇಕೆದಾಟು ಯೋಜನೆಗೆ ತಮಿಳುನಾಡಿನ ವಿರೋಧವಿದೆ. ಆದರೆ ಬಿಳಿಗುಂಡ್ಲು ಯೋಜನೆ ಬಗ್ಗೆ ಕರ್ನಾಟಕ ವಿರೋಧಿಸಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ತೀರ್ಮಾನ ಸೂತ್ರ ಪ್ರಕಟಿಸಬಹುದು ಎಂಬ ನಿರೀಕ್ಷೆ ಇದೆ.

ಕಾವೇರಿ ನೀರಾವರಿ ಯೋಜನೆಗಳ ಮಾಹಿತಿಗೆ https://www.prajavani.net/tags/cauvery ನೋಡಿ


ರಾಯಬಾಗ ತಾಲ್ಲೂಕಿನ ಸಿದ್ದಾಪೂರ ಗ್ರಾಮದ ಬಳಿ ಈಗ ಕೃಷ್ಣಾ ನದಿ ಹೀಗೆ ಕಾಣುತ್ತದೆ

ಕೃಷ್ಣಾ ‘ಬಿ’ ಸ್ಕೀಮ್‌: ರಾಷ್ಟ್ರೀಯ ಯೋಜನೆಗೆ ರೈತರ ಒತ್ತಾಯ

ಮಹಾರಾಷ್ಟ್ರದಲ್ಲಿ ಹುಟ್ಟಿ ಕರ್ನಾಟಕದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಯಾದಗಿರಿ, ರಾಯಚೂರು ಮೂಲಕ ಆಂಧ್ರಪ್ರದೇಶ ಸೇರುವ ಕೃಷ್ಣಾ ನದಿ ನೀರನ್ನು ಮೂರೂ ರಾಜ್ಯಗಳು ಸಮರ್ಪಕವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಸಂಪನ್ಮೂಲವನ್ನು ಹೊಂದಿಸಲು ರಾಷ್ಟ್ರೀಯ ಯೋಜನೆ ಎಂದು ಘೋಷಿಸಲು ಒತ್ತಾಯಳು ಕೇಳಿ ಬರುತ್ತಿವೆ.

ಕೃಷ್ಣಾ ‘ಎ’ ಸ್ಕೀಂನಡಿ ರಾಜ್ಯ ಸರ್ಕಾರ 2.5 ಲಕ್ಷ ಎಕರೆ ಭೂಸ್ವಾಧೀನಪಡಿಸಿಕೊಂಡು ಆಲಮಟ್ಟಿ ಅಣೆಕಟ್ಟೆಯನ್ನು ನಿರ್ಮಿಸಲಾಗಿದೆ. 519.6 ಮೀಟರ್‌ನಷ್ಟು ಎತ್ತರದ ಕ್ರೆಸ್ಟ್‌ಗೇಟ್‌ಗಳನ್ನು ನಿಲ್ಲಿಸಿ ನೀರನ್ನು ಸಂಗ್ರಹಿಸಲಾಗಿದೆ. ಕೃಷ್ಣಾ ‘ಬಿ’ ಸ್ಕೀಮ್‌ನಡಿ ಈ ಎತ್ತರವನ್ನು 524.256 ಮೀಟರ್‌ಗೆ ಎತ್ತರಿಸಲು ರಾಜ್ಯ ಸರ್ಕಾರ ಕಾರ್ಯಪ್ರವೃತ್ತವಾಗಬೇಕಿದೆ. ಇದಕ್ಕೆ ನಿರೀಕ್ಷೆಯಂತೆ ಆಂಧ್ರಪ್ರದೇಶದ ಆಕ್ಷೇಪ ಕೇಳಿ ಬಂದಿದೆ. 

ಇನ್ನೊಂದು ಸಮಸ್ಯೆಯೂ ಈಗ ಎದುರಾಗಿದೆ. ಕೃಷ್ಣಾ ನದಿಯಿಂದ ಆಂಧ್ರಪ್ರದೇಶಕ್ಕೆ ಹಂಚಿಕೆ ಮಾಡಿದ್ದ 1001 ಟಿಎಂಸಿ ಅಡಿ ನೀರನ್ನು ಪ್ರತ್ಯೇಕವಾಗಿ ಹಂಚಿಕೆ ಮಾಡಬೇಕು ಎಂದು ಆಂಧ್ರದಿಂದ ಬೇರ್ಪಟ್ಟಿರುವ ತೆಲಂಗಾಣವು ಹೊಸ ತಕರಾರು ತೆಗೆದಿದೆ. ಈ ವಿವಾದ ರಾಜ್ಯದ ಪಾಲಿನ ನೀರಿಗೆ ಧಕ್ಕೆ ತರದಂತೆ ನೋಡಿಕೊಳ್ಳುವ ಹೊಣೆ ಕೇಂದ್ರ ಸರ್ಕಾರದ ಮೇಲಿದೆ.

‘ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿದರೆ ಖಂಡಿತವಾಗಿಯೂ ಇದರ ಲಾಭ ರಾಜ್ಯಕ್ಕೆ ದೊರೆಯಲಿದೆ. ಪಕ್ಷಗಳ ಭಿನ್ನಾಭಿಪ್ರಾಯಗಳನ್ನು ಹೊರತುಪಡಿಸಿ ರಾಜ್ಯದ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಮಾಡಿ ಒತ್ತಾಯಿಸಿದರೆ ಪ್ರಧಾನಿ ಖಂಡಿತವಾಗಿಯೂ ಒಪ್ಪುತ್ತಾರೆ. ಇದರಿಂದ ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ ಹಾಗೂ ಆಂಧ್ರಪ್ರದೇಶ ಮಧ್ಯೆ ಜಲವಿವಾದ ಎದುರಾದರೆ ಖಂಡಿತವಾಗಿಯೂ ಕೇಂದ್ರ ಬಗೆಹರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಭೀಮಾ ನದಿಯ ನೈಸರ್ಗಿಕ ಹರಿವನ್ನು ಖಾತ್ರಿಪಡಿಸಲು ಮಹಾರಾಷ್ಟ್ರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸುಪ್ರೀಂಕೋರ್ಟ್‌ಗೆ ಹೋಗಿದ್ದ ವಿಜಯಪುರದ ಹೋರಾಟಗಾರ, ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಪಂಚಪ್ಪ ಕಲಬುರ್ಗಿ.

ಕೃಷ್ಣಕೊಳ್ಳದ ಯೋಜನೆಗಳ ಮಾಹಿತಿಗೆ https://www.prajavani.net/tags/krishna-river ನೋಡಿ


ಹಳೇಬೀಡು–ಮಾದಿಹಳ್ಳಿ ಏತ ನೀರಾವರಿ ಯೋಜನೆ ಮೂಲಕ ನಾಲೆಗೆ ಹರಿಯುತ್ತಿರುವ ನೀರು.

ನೀರಿನ ಸದ್ಬಳಕೆಗೆ 36 ಸಲಹೆಗಳು

ಬಜೆಟ್‌ ಘೋಷಣೆಯಾಗುವ ಮುನ್ನವೇ ಹಿರಿಯ ನೀರಾವರಿ ತಜ್ಞ ಕ್ಯಾಪ್ಟನ್‌ ರಾಜಾರಾವ್‌ ಅವರು ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಕುರಿತು ಕೇಂದ್ರ ಸರ್ಕಾರಕ್ಕೆ 36 ಸಲಹೆಗಳನ್ನು ಕಳಿಸಿಕೊಟ್ಟಿದ್ದಾರೆ. ಆ ಸಲಹೆಗೆ ಪ್ರಧಾನಿ ಕಚೇರಿಯಿಂದ ಪ್ರತ್ಯುತ್ತರವೂ ಬಂದಿದೆ.

‘ಬೆಂಗಳೂರಿನಲ್ಲಿ 2027ಕ್ಕೆ ನೀರಿಗಾಗಿ ಹಾಹಾಕಾರ ಏಳಲಿದೆ ಎಂದು ನೀತಿ ಆಯೋಗ ಎಚ್ಚರಿಕೆ ನೀಡಿದೆ. ಅದನ್ನು ನಾವು ಅಲ್ಲಗಳೆಯುವಂತಿಲ್ಲ. ಇದನ್ನು ತಪ್ಪಿಸಲು ಈಗಿನಿಂದಲೇ ಕಾರ್ಯಪ್ರವೃತ್ತರಾಗಬೇಕು. 400 ಕಿ.ಮೀ. ದೂರದಿಂಶ ಶರಾವತಿ ನೀರನ್ನು ತರುವ ಬದಲು ಬೆಂಗಳೂರಿನ ಸುತ್ತಮುತ್ತಲಿನ ಜಲಮೂಲಗಳಿಂದಲೇ 60 ಟಿಎಂಸಿ ಅಡಿ ನೀರನ್ನು ಪಡೆಯಲು ಸಾಧ್ಯವಿದೆ. ಬೆಳ್ಳಂದೂರು ಕೆರೆಗೆ ಪುನರುಜ್ಜೀವ ನೀಡಬೇಕಿದೆ. ಅಪಾರ್ಟ್‌ಮೆಂಟುಗಳಿಂದ ಹೊರಬಿದ್ದ ಹೊಲಸನ್ನು ಕೆರೆಗಳು ತುಂಬಿಕೊಂಡಿವೆ. ಆ ಕೆರೆಯಲ್ಲಿ ಶುದ್ಧ ನೀರು ಸಂಗ್ರಹಿಸಲು ಕೇಂದ್ರ ಸರ್ಕಾರ ಇಡೀ ದೇಶಕ್ಕೆ ಅನ್ವಯವಾಗುವಂತೆ ಒಂದು ಯೋಜನೆಯೊಂದನ್ನು ಸಿದ್ಧಪಡಿಸಬೇಕು. ಅಂತರ್ಜಲವನ್ನು ಮೇಲ್ಮಟ್ಟಕ್ಕೆ ತರಬೇಕು. ನೀರಿರುವ ಜೌಗು ಪ್ರದೇಶವನ್ನು ಹಾಗೆಯೇ ಉಳಿಸಿಕೊಳ್ಳಬೇಕು. ಇದಕ್ಕೆ ನಗರ ನಿರ್ಮಾತೃಗಳ ಸಹಕಾರ ಅಗತ್ಯ. ನೀರನ್ನು ನಾವು ಬಳಸಿ, ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಕೇಂದ್ರ ಬಜೆಟ್‌ನಲ್ಲಿ ಮಹತ್ವದ ಘೋಷಣೆ ಹೊರಡಬೇಕಿದೆ’ ಎನ್ನುತ್ತಾರೆ ಕ್ಯಾಪ್ಟನ್‌ ರಾಜಾರಾವ್‌.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.