ಸೋಮವಾರ, ಜೂನ್ 21, 2021
23 °C
ಕೇಂದ್ರೀಯ ವಿ.ವಿ.ಯಲ್ಲಿ ಭಾಷಾಂತರ ಕುರಿತ ವೆಬಿನಾರ್‌ನಲ್ಲಿ ಎಚ್‌.ಎಸ್‌.ಶಿವಪ್ರಕಾಶ್

ಅನುವಾದವೆಂಬುದು ಸಂಸ್ಕೃತಿಗಳ ಬೆಸುಗೆ: ಎಚ್‌.ಎಸ್‌.ಶಿವಪ್ರಕಾಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಅನುವಾದ ಎಂದರೆ ಸಂಸ್ಕೃತಿಗಳ ಬೆಸುಗೆ ಎಂದು ಹಿರಿಯ ಸಾಹಿತಿ, ದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಆರ್ಟ್ಸ್ ಅಂಡ್‌ ಅಸ್ಥೆಟಿಕ್ಸ್‌ ಸಂಸ್ಥೆ ಮುಖ್ಯಸ್ಥ ಡಾ.ಎಚ್‌.ಎಸ್‌.ಶಿವಪ್ರಕಾಶ್‌ ಅಭಿಪ್ರಾಯಪಟ್ಟರು.

ಕರ್ನಾಟಕ ಕೇಂದ್ರೀಯ ವಿ.ವಿ. ಸೋಮವಾರದಿಂದ ಆಯೋಜಿಸಿರುವ ಭಾಷಾಂತರ ಕುರಿತ ಮೂರು ದಿನಗಳ ಅಂತರರಾಷ್ಟ್ರೀಯ ಸಂವಾದ ಗೋಷ್ಠಿಯಲ್ಲಿ 'ಭಾಷಾಂತರ ಮತ್ತು ಸಂಸ್ಕೃತಿ' ವಿಷಯ ಕುರಿತು ಮಾತನಾಡಿದ ಅವರು, ಅನುವಾದ ಕೇವಲ ಭಾಷಿಕವಾಗಿರುವುದಿಲ್ಲ, ಸಾಂಸ್ಕೃತಿಕವಾಗಿರುತ್ತದೆ. ಆಚರಣೆ, ಉಡುಪು, ಆಹಾರ ಕ್ರಮ, ವಿಚಾರ ಎಲ್ಲವೂ ಅನುವಾದಗೊಳ್ಳುತ್ತಿರುತ್ತದೆ ಎಂದರು.

ಬೆಂಗಳೂರಿನ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಅಡ್ವಾನ್ಸ್ಡ್‌ ಸ್ಟಡೀಸ್‌ನ (ನಿಯಾಸ್‌) ಪ್ರಾಧ್ಯಾಪಕ ಪ್ರೊ.ಸುಂದರ ಸರುಕ್ಕೈ 'ಭಾಷಾಂತರ ಮತ್ತು ಸಾಮಾಜಿಕ ವಿಜ್ಞಾನ' ಕುರಿತು ಮಾತನಾಡಿ, ಜಗತ್ತನ್ನು ಅರ್ಥ ಮಾಡಿಕೊಳ್ಳಲು ಅನುವಾದ ಅಗತ್ಯ. ಅನುವಾದದಲ್ಲಿ ಸರಿ ತಪ್ಪು ಎಂಬುದಿರುವುದಿಲ್ಲ. ಇಲ್ಲಿ ಜಗತ್ತನ್ನು ಅರ್ಥೈಸಿಕೊಳ್ಳುವ ಬಹುತ್ವದ ಮಾದರಿಗಳಿರುತ್ತವೆ’ ಎಂದು ಹೇಳಿದರು.

ವೆಬಿನಾರ್‌ಗೆ ಚಾಲನೆ ನೀಡಿದ ದೆಹಲಿಯ ಜೆಎನ್‌ಯು ಪ್ರಾಧ್ಯಾಪಕಿ ಪ್ರೊ. ಇಂದ್ರಾಣಿ ಮುಖರ್ಜಿ, ಭಾಷಾಂತರ ಮೂಲತಃ ಮನುಷ್ಯ ಪ್ರಜ್ಞೆ ರೂಪಿಸಿಕೊಂಡ ಕ್ರಿಯಾಶೀಲ ಅಲೋಚನೆ ಇಂದು ಧ್ವನಿಯನ್ನೇ ಕಳೆದುಕೊಂಡ ನೂರಾರು ಸಮುದಾಯಗಳು ‘ಭಾಷಾಂತರ' ಕ್ರಿಯೆಯ ಮೂಲಕ ತಮ್ಮ ಧ್ವನಿಯನ್ನು ಪಡೆದುಕೊಂಡಿವೆ.  ಭಾಷಾಂತರ ಆರಂಭದಲ್ಲಿ ವಸಾಹತು ಪ್ರಭುತ್ವದ ಆಡಳಿತಕ್ಕೆ ಪೂರಕ ಧೋರಣೆಯನ್ನು ಹೊಂದಿದ್ದರೂ ಕಾಲಾನಂತರ ಅದೊಂದು ಬಿಡುಗಡೆಯ ಅವಕಾಶವಾಗಿ ಬದಲಾಗಿದೆ’ ಎಂದರು.

ಪ್ರಾಸ್ತಾವಿಕವಾಗಿ ಕೇಂದ್ರೀಯ ವಿ.ವಿ. ಕುಲಪತಿ ಪ್ರೊ.ಎಚ್‌.ಎಂ.ಮಹೇಶ್ವರಯ್ಯ ಮಾತನಾಡಿದರು. ಸಮ ಕುಲಪತಿ ಪ್ರೊ.ಜಿ.ಆರ್.ನಾಯಕ, ಕುಲಸಚಿವ ಪ್ರೊ.ಮುಷ್ತಾಕ್ ಅಹಮ್ಮದ್ ಪಟೇಲ್ ಇದ್ದರು.

ಡಾ.ವಿಕ್ರಮ ವಿಸಾಜಿ, ಡಾ.ಕಿರಣ ಗಾಜನೂರು ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.