ಶುಕ್ರವಾರ, ಸೆಪ್ಟೆಂಬರ್ 24, 2021
24 °C
ಕಲ್ಯಾಣ ಕರ್ನಾಟಕದ ಜನಪ್ರತಿನಿಧಿಗಳು ಬದ್ಧತೆ ತೋರಲಿ: ಎಂ.ಕೃಷ್ಣಮೂರ್ತಿ

ಜಿ.ಪಂ, ತಾ.ಪಂ ಚುನಾವಣೆಗೆ ಸ್ಪರ್ಧೆ: ಬಿಎಸ್‌ಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ಬಹುಜನ ಸಮಾಜ ಪಕ್ಷ‌ದ (ಬಿಎಸ್‌ಪಿ) ರಾಜ್ಯ ಘಟಕದ ಅಧ್ಯಕ್ಷ‌ ಎಂ.ಕೃಷ್ಣಮೂರ್ತಿ ತಿಳಿಸಿದರು.

ರಸ್ತೆ, ಕುಡಿಯುವ ನೀರು, ಆರೋಗ್ಯ ಸೇವೆ‌ ವಿಷಯಗಳನ್ನು ಜನರ ಮುಂದಿಟ್ಟು ಚುನಾವಣೆ ಎದುರಿಸುತ್ತೇವೆ ಎಂದು ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ರಾಜ್ಯದಲ್ಲಿ ಕ್ಲಿಷ್ಟಕರ‌ ಸನ್ನಿವೇಶವಿದೆ. ಕೋವಿಡ್ ಹಾಗೂ ಪ್ರವಾಹದಿಂದ ಜನ ಕಂಗೆಟ್ಟಿದ್ದಾರೆ. ಕಲ್ಯಾಣ‌ ಕರ್ನಾಟಕದ ಕೆಲ ಹಳ್ಳಿಗಳಲ್ಲಿ ಇಂದಿಗೂ ಕುಡಿಯುವ ನೀರು ಸಿಗುತ್ತಿಲ್ಲ. ಉತ್ತಮ ರಸ್ತೆಗಳಿಲ್ಲ. ಇಲ್ಲಿನ ಜನಪ್ರತಿನಿಧಿಗಳು ಬದ್ಧತೆ ತೋರುತ್ತಿಲ್ಲ. ಜಲಾಶಯಗಳ‌ ಸದ್ಬಳಕೆ‌ ಆಗುತ್ತಿಲ್ಲ ಎಂದು ದೂರಿದರು. 

ಈ ಭಾಗದಲ್ಲಿ ಬಗರ್ ಹುಕುಂ ಸಾಗುವಳಿ ಮಾಡುತ್ತಿರುವವರಿಗೆ ಹಕ್ಕುಪತ್ರ ವಿತರಣೆ‌ ಮಾಡಬೇಕು. ನಗರದ ಇಎಸ್ಐ‌ ಆಸ್ಪತ್ರೆಯಲ್ಲಿ ರೋಗಿಗಳಿಗೆ ಎಲ್ಲ ಸೌಲಭ್ಯ ಸಿಗುವಂತಾಗಬೇಕು. ಈ ಬಗ್ಗೆ ಜನಪ್ರತಿನಿಧಿಗಳು ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಎನ್.ಮಹೇಶ್ ರಾಜೀನಾಮೆ ನೀಡಲಿ: ಬಹುಜನ ಸಮಾಜ ಪಕ್ಷದಿಂದ ಗೆದ್ದು ಶಾಸಕರಾಗಿ, ಇದೀಗ ಬಿಜೆಪಿ ಸೇರುತ್ತಿರುವ ಕೊಳ್ಳೆಗಾಲ ಶಾಸಕ ಎನ್‌.ಮಹೇಶ್ ಅವರಿಗೆ ತಾಕತ್ತಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿಯಿಂದ ಗೆದ್ದು ಬರಲಿ ಎಂದು ಎಂ.ಕೃಷ್ಣಮೂರ್ತಿ ಸವಾಲು ಹಾಕಿದರು.

ಪಕ್ಷವನ್ನು ಯಾರಾದರೂ ತೊರೆದ ಸಂದರ್ಭದಲ್ಲಿ, ‘ಕಸ, ಕಸದ ಬುಟ್ಟಿಗೆ ಸೇರಿತು’ ಎಂದು ಪಕ್ಷದ ಸಂಸ್ಥಾಪಕ ಕಾನ್ಶಿರಾಂ ಅವರು ಹೇಳುತ್ತಿದ್ದರು. ಮಹೇಶ್‌ ಅವರು ಈ ಮಾತುಗಳನ್ನು ಹೆಚ್ಚು ಬಳಸುತ್ತಿದ್ದರು. ಈಗ ಅವರೇ ಈ ಮಾತಿಗೆ ಉದಾಹರಣೆಯಾಗಿರುವುದು ದುರಂತ’ ಎಂದು ಅವರು ಟೀಕಿಸಿದರು.

ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ಎ.ಬಿ.ವಾಸುದೇವ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಆರ್.ಮುನಿಯಪ್ಪ, ಮಹಾದೇವ ಧನ್ನಿ, ಜಿಲ್ಲಾ‌ ಘಟಕದ ಸಂಯೋಜಕ ಕೆ.ಎಂ.ಪ್ರಕಾಶ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.