ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಣಂತಿ ಸಾವು; ಹೆದ್ದಾರಿ ತಡೆದು ಪ್ರತಿಭಟನೆ

ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ನಿರ್ಲಕ್ಷ್ಯ ಆರೋಪ
Last Updated 9 ಅಕ್ಟೋಬರ್ 2021, 6:43 IST
ಅಕ್ಷರ ಗಾತ್ರ

ಅಫಜಲಪುರ: ತಾಲ್ಲೂಕಿನ ಅತನೂರ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಾಣಂತಿ ಸಾವಿಗೆ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ ಎಂದು ಬಾಣಂತಿಯ ಸಂಬಂಧಿಕರು ಮತ್ತು ಗ್ರಾಮಸ್ಥರು ಶುಕ್ರವಾರ ಆರೋಗ್ಯ ಕೇಂದ್ರದ ಎದುರು ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದರು.

ಅತನೂರ ಗ್ರಾಮದ ನಿವಾಸಿ ಗೀತಾ ನಿತೇಶ ಅಗಸರ (24) ಮೃತರು. ಅವರಿಗೆ ಜನಿಸಿರುವ ಗಂಡು ಮಗು ಆರೋಗ್ಯವಾಗಿದ್ದು, ಕಲಬುರ್ಗಿಯ ಜಿಮ್ಸ್‌ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ವೈದ್ಯರ ಮತ್ತು ಸಿಬ್ಬಂದಿ ನಿರ್ಲಕ್ಷ್ಯದಿಂದ ಹೆರಿಗೆ ವೇಳೆ ಬಾಣಂತಿ ಮೃತಪಟ್ಟಿದ್ದಾರೆ. ಹೆರಿಗೆ ಸಮಯದಲ್ಲಿ ಸಾಕಷ್ಟು ರಕ್ತಸ್ರಾವವಾದರೂ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ನೆರವಿಗೆ ಬರಲಿಲ್ಲ. ನಾವು ಎಷ್ಟೇ ಕೋರಿದರೂ ಆಸ್ಪತ್ರೆ ಸಿಬ್ಬಂದಿ ನೆರವಿಗೆ ಬರಲಿಲ್ಲ. ಇಲ್ಲಿನ ವೈದ್ಯ ಡಾ. ಸುರೇಶ ನಾಯ್ಕ ಸಮರ್ಪಕವಾಗಿ ಕಾರ್ಯನಿರ್ವಹಿಸುವುದಿಲ್ಲ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ಶಾಸಕ ಎಂ.ವೈ.ಪಾಟೀಲ ಅವರು ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಲು ಯತ್ನಿಸಿದರು. ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದರು.

‘ಜಿಲ್ಲಾಧಿಕಾರಿ ಸ್ಥಳಕ್ಕೆ ಬರುವವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ’ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.

ಪರಿಸ್ಥಿತಿ ನಿಭಾಯಿಸಲು ಪೊಲೀಸರು ಹರಸಾಹಸಪಟ್ಟರು. ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರಣಬಸಪ್ಪ ಗಣಜಲಖೇಡ, ತಾಲ್ಲೂಕು ಆರೋಗ್ಯ ಅಧಿಕಾರಿ ರತ್ನಾಕರ ತೋರಣ, ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ, ರೇವೂರ ಪೊಲೀಸ್ ಠಾಣೆ ಪಿಎಸ್‌ಐ ಅಶೋಕ ಪಾಟೀಲ ಅವರು ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಬೆಳಿಗ್ಗೆ ಆರಂಭವಾದ ಪ್ರತಿಭಟನೆ ರಾತ್ರಿಯವರೆಗೆ ಮುಂದುವರೆಯಿತು. ನಂತರ ಕೊನೆಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT