ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯುವಕರಲ್ಲಿ ರಂಗಭೂಮಿ ಆಸಕ್ತಿ ಬೆಳೆಸಿ’

ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮ
Last Updated 27 ಮಾರ್ಚ್ 2019, 17:17 IST
ಅಕ್ಷರ ಗಾತ್ರ

ಕಲಬುರ್ಗಿ: ‘ಧಾರಾವಾಹಿ, ಸಿನಿಮಾಗಳ ಹಾವಳಿಯಲ್ಲಿ ನಾಟಕಗಳು ಕಣ್ಮರೆಯಾಗುತ್ತಿವೆ. ರಂಗಭೂಮಿ ಕಲಾವಿದರು ಆರ್ಥಿಕ ಸಂಕಷ್ಟದಿಂದ ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ‘ ಎಂದು ನಾಟಕಕಾರ ಮಹಾಂತೇಶ ನವಲ್ಕಲ್ ಕಳವಳ ವ್ಯಕ್ತಪಡಿಸಿದರು.

ನಗರದಲ್ಲಿ ರಂಗಸಂಗಮ ಕಲಾ ವೇದಿಕೆ, ವಿಶ್ವರಂಗ ನಾಟಕ ಮತ್ತು ನೃತ್ಯ ಸೇವಾ ಸಂಘ, ಸೂರ್ಯನಗರಿ ಸಾಂಸ್ಕೃತಿಕ ಕಲಾ ಸಂಘ, ರಂಗವೃಕ್ಷ ನಾಟಕ ಮತ್ತು ನೃತ್ಯ ಸೇವಾ ಸಂಘದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ವಿಶ್ವರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ‘ರಂಗಭೂಮಿಯ ವರ್ತಮಾನದ ತಲ್ಲಣಗಳು’ ಕುರಿತು ಅವರು ಉಪನ್ಯಾಸ ನೀಡಿದರು.

ಇಂದಿನ ಸಿನಿಮಾಗಳಲ್ಲಿ ತಂತ್ರಜ್ಞಾನ ಹೆಚ್ಚಾಗಿ ಬಳಸಿಕೊಳ್ಳಲಾಗುತ್ತಿವೆ. ಆ ಮೂಲಕ ಪ್ರೇಕ್ಷಕರನ್ನು ಸೆಳೆಯಲಾಗುತ್ತಿದೆ. ಧಾರಾವಾಹಿಗಳೂ ಇದರಲ್ಲಿ ಹಿಂದೆ ಬಿದ್ದಿಲ್ಲ. ಆದರೆ, ವೃತ್ತಿ ರಂಗಭೂಮಿ ಕಲಾವಿದರಿಗೆ ಇದು ಸಾಧ್ಯವಾಗುತ್ತಿಲ್ಲ ಎಂದರು.

ಯುವಕರಲ್ಲಿ ರಂಗಭೂಮಿಯೆಡೆಗೆ ಆಸಕ್ತಿ ಕಡಿಮೆ ಆಗುತ್ತಿದೆ. ಸಿನಿಮಾಗಳ ಅಬ್ಬರದ ನಡುವೆ ರಂಗಭೂಮಿ ಮಂಕಾಗಿದೆ. ಕೆಲವು ನಾಟಕ ಸಂಘಗಳು ಮಾತ್ರ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿ ಕೊಂಡಿರುವುದರಿಂದ ಇಂದಿಗೂ ಕ್ರಿಯಾಶೀಲವಾಗಿವೆ ಎಂದು ಹೇಳಿದರು.

ಗ್ರಾಮೀಣ ಭಾಗದಲ್ಲಿ ದೊಡ್ಡಾಟ, ಸಣ್ಣಾಟಗಳನ್ನು ಜನರು ರಾತ್ರಿಯಿಡಿ ವೀಕ್ಷಿಸುತ್ತಿದ್ದರು. ಆದರೆ, ಇಂದು ನಾಟಕ ಪ್ರದರ್ಶನಗಳಲ್ಲಿ ಬೆರಳೆಣಿಕೆಯಷ್ಟು ಜನ ಮಾತ್ರ ಇರುತ್ತಾರೆ. ಇದರಿಂದ ನಾಟಕ ಕಂಪನಿಗಳಿಗೆ ಹಿನ್ನಡೆಯಾಗುತ್ತಿದೆ ಎಂದರು.

ರಂಗಕರ್ಮಿ ಶೋಭಾ ರಂಜೋಳ್ಕರ್ ಮಾತನಾಡಿ, ಇಂದಿನ ಯುವ ಸಮೂಹ ಸಂಗೀತ, ಕ್ರೀಡಾ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದೆ. ಅದರ ಜತೆಗೆ ರಂಗಭೂಮಿಯಲ್ಲಿಯೂ ಆಸಕ್ತಿ ಬೆಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪಾಲಕರು ಮಕ್ಕಳ ಮೇಲೆ ಕೇವಲ ಓದುವಂತೆ ಒತ್ತಡ ಹಾಕುತ್ತಾರೆ. ಓದಿನ ಜತೆಗೆ ರಂಗಭೂಮಿ ಯಲ್ಲಿ ತೊಡಿಗಿಕೊಳ್ಳುವಂತೆ ಪ್ರೋತ್ಸಾಹಿಸಬೇಕು. ಅವರಿಗೆ ಮುಕ್ತ ಸ್ವಾತಂತ್ರ್ಯ ನೀಡಬೇಕು ಎಂದರು.

ರಂಗಕರ್ಮಿ ಡಾ.ಸುಜಾತಾ ಜಂಗಮಶೆಟ್ಟಿ ಮಾತನಾಡಿ, ನಾಟಕಗಳಿಗೆ ಪ್ರೇಕ್ಷಕರನ್ನು ಸೆಳೆಯುವ ಕೆಲಸ ಮಾಡಬೇಕಾಗಿದೆ. ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳನ್ನು ರಂಗಭೂಮಿಗೆ ಕರೆತರುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕು ಎಂದು ಹೇಳಿದರು.

ಪ್ರಸ್ತುತ ದಿನಗಳಲ್ಲಿ ಹಲವು ಸವಾಲುಗಳ ನಡುವೆ ನಾಟಕ ಪ್ರದರ್ಶನ ಮಾಡಬೇಕಾಗಿದೆ. ಆದರೆ, ಸಿನಿಮಾಗಳು ಹೆಚ್ಚು ಬಂಡವಾಳ ಹಾಕಿ ಹೆಚ್ಚು ಲಾಭ ಗಳಿಸುತ್ತವೆ. ಆದರೆ, ನಾಟಕಗಳಲ್ಲಿ ಹಾಕಿದ ಬಂಡವಾಳ ಬರುವುದು ಅನುಮಾನ. ಹೀಗಾಗಿ ಕಲಾವಿದರಿಗೆ ಪ್ರೋತ್ಸಾಹ ಅಗತ್ಯ ಎಂದರು.

ಪತ್ರಕರ್ತರಾದ ಪ್ರಭಾಕರ ಜೋಶಿ, ಡಾ.ಶಿವರಾಮ ಅಸುಂಡಿ, ಸಾಹಿತಿ ಡಾ.ಎಚ್.ಟಿ.ಪೋತೆ ಅವರನ್ನು ಸನ್ಮಾನಿಸಲಾಯಿತು.

ಅಂಬಿಕಾ ಬಿ.ಹಳ್ಳಿ ಪ್ರಾರ್ಥಿಸಿದರು. ಆರಾಧ್ಯ ಕರದಳ್ಳಿ ಹಾಗೂ ಮಲ್ಲಿಕಾರ್ಜುನ ನಿರೂಪಿಸಿದರು. ರಾಜಕುಮಾರ ಎಸ್.ಕೆ., ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT