ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಪಾರಿ ಕೊಲೆ- ಕಾಲುವೆಯಲ್ಲಿ ಶವ ಎಸೆದಿದ್ದ ನಾಲ್ವರ ಬಂಧನ

ಅನೈತಿಕ ಸಂಬಂಧ; ಸುಪಾರಿ ಕೊಟ್ಟು ಕೊಲೆ ಮಾಡಿಸಿದ ಆರೋಪಿ
Last Updated 29 ನವೆಂಬರ್ 2022, 15:44 IST
ಅಕ್ಷರ ಗಾತ್ರ

ಕಲಬುರಗಿ: ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಸಿದ್ದಾಪುರ (ಬಿ) ಗ್ರಾಮದಲ್ಲಿ ಸೆಪ್ಟೆಂಬರ್ 4ರಂದು ನಡೆದಿದ್ದ ಕೊಲೆ ಪ್ರಕರಣವನ್ನು ಭೇದಿಸಿರುವ ಯಡ್ರಾಮಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

‘ಸುರಪುರದ ಚಾಂದ್‌ಪಾಶಾ ಎಂಬುವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಾಪುರ ಗ್ರಾಮದ ರೆಹಮಾನ್ ಶಹಾಬುದ್ದೀನ್ ಕೌತಾಳ (23), ಸೈಯದ್ ಶಹಾಬುದ್ದೀನ್ ಕೌತಾಳ (23), ಪ್ರಭುಗೌಡ ಭೀಮನಗೌಡ ಬಿರಾದಾರ (22), ಹುಣಸಗಿ ತಾಲ್ಲೂಕಿನ ದೇವಕತಕಲ್ ಗ್ರಾಮದ ಮಲ್ಲಿಕಾರ್ಜುನ ಬಸವರಾಜ ಲಕಣಾಪೂರ (21) ಎಂಬುವವರನ್ನು ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಘಟನೆ ವಿವರ: ‘ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಚಾಂದ್‌ಪಾಶಾ ಅವರ ಶವ ಯಡ್ರಾಮಿ ಬಳಿ ಬಳಬಟ್ಟಿ ಗ್ರಾಮದ ಕಾಲುವೆಯಲ್ಲಿ ಪತ್ತೆಯಾಗಿತ್ತು. ಕೊಲೆಯ ಶಂಕೆ ಮೂಡಿತ್ತು. ಶವದ ಮೇಲಿದ್ದ ಶರ್ಟ್ ಮೇಲೆ ಬಾಂಬೆ ಟೇಲರ್ಸ್, ಸುರಪುರ ಎಂಬ ಮಾಹಿತಿ ಇತ್ತು. ಪ್ಯಾಂಟ್‌ನಲ್ಲಿ ಸ್ಕ್ರೂಡ್ರೈವರ್ ಸಿಕ್ಕಿತು. ತನಿಖೆ ಮುಂದುವರೆಸಿದಾಗ, ಮೃತ ವ್ಯಕ್ತಿ ಎಲೆಕ್ಟ್ರಿಷಿಯನ್ ಎಂಬುದು ಗೊತ್ತಾಯಿತು’ ಎಂದು

‘ರೆಹಮಾನ್‌ ಕೌತಾಳ ಪತ್ನಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಚಾಂದ್‌ಪಾಶಾಗೆ ಎಚ್ಚರಿಕೆ ಕೊಡಲಾಗಿತ್ತು. ಆದರೂ, ಸಂಬಂಧ ಮುಂದುವರೆದಿತ್ತು. ಇದರಿಂದ ಬೇಸತ್ತ ರೆಹಮಾನ್ ಪ್ರಭುಗೌಡ ಹಾಗೂ ಮಲ್ಲಿಕಾರ್ಜುನಗೆ ತಲಾ ₹ 60 ಸಾವಿರಕ್ಕೆ ಸುಪಾರಿ ನೀಡಿದ್ದ. ಉಪಾಯ ಮಾಡಿದ ಪ್ರಭುಗೌಡ ತನ್ನ ಮನೆಯಲ್ಲಿ ಕರೆಂಟ್ ಸಮಸ್ಯೆಯಿದ್ದು, ದುರಸ್ತಿಗೆಂದು ಚಾಂದ್‌ಪಾಶಾಗೆ ಕರೆಸಿಕೊಂಡಿದ್ದ’ ಎಂದರು.

‘ಸಿದ್ದಾಪುರದ ಪ್ರಭುಗೌಡನ ಮನೆಗೆ ಬರುತ್ತಿದ್ದಂತೆಯೇ ಹೊಂಚು ಹಾಕಿ ಕುಳಿತಿದ್ದ ಮಲ್ಲಿಕಾರ್ಜುನ ಹಾಗೂ ಸೈಯದ್ ಕೌತಾಳ ಪ್ರಭುಗೌಡನೊಂದಿಗೆ ಸೇರಿಕೊಂಡು ಕಾರಿನಲ್ಲಿ ಚಾಂದ್‌ಪಾಶಾಗೆ ಕೊಡೇಕಲ್ ಬಳಿಯ ಕಾಲುವೆ ಬಳಿ ಕರೆದೊಯ್ದರು. ಅಲ್ಲಿ ಕೈಕಾಲು ಕಟ್ಟಿ ಹಾಕಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಕಾಲುವೆಯಲ್ಲಿ ಎಸೆದರು. ಸೆಪ್ಟೆಂಬರ್ 4ರ ರಾತ್ರಿ ಕಾಲುವೆಗೆ ಬಿದ್ದ ಶವ ಸೆಪ್ಟೆಂಬರ್ 10ರಂದು 50 ಕಿ.ಮೀ. ಕ್ರಮಿಸಿ ಬಳಬಟ್ಟಿ ಬಳಿಯ ಮುದುಕಪ್ಪ ಸಜ್ಜನ್ ಅವರ ಹೊಲದ ಕಾಲುವೆಯಲ್ಲಿ ಸಿಕ್ಕಿತ್ತು. ಈ ಬಗ್ಗೆ ಭೀಮನಗೌಡ ಮಲ್ಲೇಶಪ್ಪಗೌಡ ಹಿರೇಗೌಡರ ಎಂಬುವರು ನೀಡಿದ ದೂರು ಆಧರಿಸಿ ‍ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದೆವು’ ಎಂದರು.

ಜೇವರ್ಗಿ ವೃತ್ತದ ಪ್ರಭಾರ ಸಿಪಿಐ ಪಿ.ಎಸ್‌. ವನಂಕಕರ್, ಯಡ್ರಾಮಿ ಪಿಎಸ್‌ಐ ಬಸವರಾಜ ಚಿತಕೋಟಿ, ಎಎಸ್‌ಐಗಳಾದ ಸುರೇಶ, ಚಂದ್ರಕಾಂತ, ಮಲ್ಲಣ್ಣ, ಕಾನ್‌ಸ್ಟೆಬಲ್‌ ಅಣ್ಣ, ಸಿಡಿಆರ್‌ ಘಟಕದ ಹೆಡ್‌ ಕಾನ್‌ಸ್ಟೆಬಲ್ ಬಲರಾಮ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಇತ್ತೀಚಿನ ದಿನಗಳಲ್ಲಿ ಸುಪಾರಿ ಕೊಟ್ಟು ಕೊಲೆ ಮಾಡಿಸುವುದು ಹೆಚ್ಚುತ್ತಿದ್ದು, ಅದರಲ್ಲಿ 21, 22 ವರ್ಷದ ಯುವಕರು ಭಾಗವಹಿಸುತ್ತಿರುವುದು ಕಳವಳಕಾರಿ ವಿದ್ಯಮಾನ

ಇಶಾ ಪಂತ್

ಕಲಬುರಗಿ ಎಸ್ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT