ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಕ ಸಮ್ಮೇಳನ ಮಹಿಳೆಯರೇ ಪ್ರಧಾನ

ಅಕ್ಷರ ಗಾತ್ರ

ಗುಲ್ಬರ್ಗ: ನಾಲ್ಕು ವರ್ಷಗಳಿಂದ ಗುಲ್ಬರ್ಗದಲ್ಲಿ ಸುಂದರ ಸಮ್ಮೇಳನವೊಂದು ಜರುಗುತ್ತಿದೆ. ಈ ಭಾಗದ ಸೊಗಡು, ವಚನ ಸಂಸ್ಕೃತಿಯ ಮೆರುಗು, ಎಲ್ಲಕ್ಕಿಂತ ಮಿಗಿಲಾಗಿ ಮಾನಿನಿಯರ ಸುಪ್ತ ಪ್ರತಿಭೆಯನ್ನು ಗುರುತಿಸುವಂಥ ಸಮ್ಮೇಳನ ಇಲ್ಲಿನ ಬಸವ ಸಮಿತಿಯ ಅಕ್ಕನ ಬಳಗದ ವತಿಯಿಂದ ನಡೆದುಕೊಂಡು ಬಂದಿದೆ.

ನಗರದ ಖೂಬಾ ಕಲ್ಯಾಣ ಮಂಟಪದಲ್ಲಿ ಜುಲೈ 22, 23 ಮಹಾದೇವಿಯಕ್ಕಗಳ 4ನೇ ಸಮ್ಮೇಳನದ ಸಂಭ್ರಮ ಜರುಗಲಿದೆ.  ಮನೆ, ಸಂಸಾರ ಎಂಬ ಜಂಜಾಟದಲ್ಲಿಯೂ ಮಹಿಳೆಯರು ಮುಕ್ತವಾಗಿ ತಮ್ಮ ಪ್ರತಿಭೆಯನ್ನು ಹೊರಹಾಕಲು ಸೃಷ್ಟಿಯಾಗಿರುವ ವೇದಿಕೆ ಇದು. ಸಮ್ಮೇಳನಕ್ಕೆ ಇನ್ನೇನು ಕೆಲ ದಿನಗಳ ಬಾಕಿ ಇರುವಾಗಲೇ ಮಹಿಳೆಯರಿಗಾಗಿ ವಿವಿಧ ಸ್ಪರ್ಧೆಗಳು ಏರ್ಪಟ್ಟಿವೆ. ವಚನ ಕಂಠಪಾಠ, ವಚನಗಳ ಬರವಣಿಗೆ, ಜಾನಪದ ಹಾಡುಗಾರಿಕೆ, ಶರಣಶರಣೆಯರ ವೇಷ ಭೂಷಣ ಧರಿಸುವುದು, ರಂಗೋಲಿಯಂಥ ಸ್ಪರ್ಧೆಗಳು ನಡೆಯುತ್ತವೆ. ಸುಮಾರು 150ಕ್ಕೂ ಅಧಿಕ ಮಹಿಳೆಯರು ಸ್ಪರ್ಧೆಗಳಲ್ಲಿ ಅತ್ಯುತ್ಸಾಹದಿಂದಲೇ ಪಾಲ್ಗೊಳ್ಳುತ್ತಾರೆ.

ನಳಪಾಕದಲ್ಲಿ ಕೈ ಚಳಕ: ಮಹಿಳೆಯರಿಗೆ ಅಡುಗೆ ಸ್ಪರ್ಧೆ ಎಂದರೆ ಕೇಳಬೇಕೆ. ಈ ಭಾಗದ ಪ್ರಮುಖ ಬೆಳೆಯಾದ ತೊಗರಿ ಬೇಳೆಯದ್ದೆ ಹತ್ತಾರು ಖಾದ್ಯಗಳು ಭಾನುವಾರ ನಡೆದ ಸ್ಪರ್ಧೆಯಲ್ಲಿ ಸಿದ್ಧಗೊಂಡಿದ್ದವು. ತೊಗರಿ ಮಿಕ್ಸ್ ವಡಾ, ತೊಗರಿ ಚಟ್ನಿ, ಮುಟ್ಟಿಗೆ, ಕಟ್ಲೆಟ್, ತೂರ್ ದಾಲ್ ವಡಾ, ತೊಗರಿ ಪಾಯಸ, ಬರ್ಫಿ, ಕಂದುಟ್ಲು, ಪಾಲಕ್ ಪೂರಿ, ಕ್ಯಾಬೇಜ್ ಪಕೋಡಾ, ಖಾರ ಸಮೋಸ ಒಂದಲ್ಲ ಎರಡಲ್ಲ ಹತ್ತಾರು ನಮೂನೆಯ ಖಾದ್ಯಗಳು ನಿರ್ಣಾಯಕರಲ್ಲಿ ಬಾಯಲ್ಲಿ ನೀರೂರಿಸುವಂತಿತ್ತು.

ಅದರೊಂದಿಗೆ ವಚನ ಗಾಯನ, ವಚನ ಬರೆಯುವುದು, ಶರಣರ ವೇಷಧಾರಣೆಯಂಥ ಸ್ಪರ್ಧೆಗಳು ನಡೆದವು. ಕಳೆದ ವರ್ಷ ಇಂಥ ಸ್ಪಧೆಯಲ್ಲಿ ಕೇವಲ 10 ನಿಮಿಷದಲ್ಲಿ 52 ವಚನಗಳನ್ನು ಪಠಿಸಿದ ಸುರೇಖಾ ಮಾಲಿಪಾಟೀಲ ಇಂದಿಗೂ ಎಲ್ಲರ ನೆನಪಿನಲ್ಲಿದ್ದಾರೆ. ಜುಲೈ 21ರಂದು ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಸಮ್ಮೇಳನದ ಪೂರ್ವತಯಾರಿ ಬಗ್ಗೆ ಸಮಿತಿ ಸಂಚಾಲಕಿ ಡಾ. ಜಯಶ್ರೀ ದಂಡೆ ಅವರನ್ನು ಮಾತನಾಡಿಸಿದಾಗ, `ಶರಣ ಸಂಸ್ಕೃತಿಯ ಉಳಿವು, ಬೆಳವಣಿಗೆ ಇರುವುದು ನಮ್ಮ ಗೃಹಿಣಿಯರ ಕೈಯಲ್ಲಿ. ಅವರಿಂದಲೇ ಇಂದಿಗೂ ನಮ್ಮ ಆಚಾರ, ಸಂಪ್ರದಾಯಗಳು ಬೆಳೆದಿವೆ. ಅಂಥವರನ್ನು ಗುರುತಿಸಿ ಅವರ ಪ್ರತಿಭೆಗೆ ಒಂದು ವೇದಿಕೆಯಾಗಿ ಈ ಆಚರಣೆ ಆರಂಭಗೊಂಡಿದೆ. ಹೈದ್ರಾಬಾದ್ ಕರ್ನಾಟಕ ಭಾಗ ಇಂದಿಗೂ ತನ್ನದೇ ಅಸ್ತಿತ್ವಕ್ಕಾಗಿ ಯತ್ನಿಸುತ್ತಿದೆ.

ಈ ಭಾಗದಲ್ಲಿ ಮಹಿಳೆಯರಿಗೆ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿದೆ ಎಂಬುದು ಹುಸಿ ಮಾತು. ಅವರಲ್ಲಿನ ಪ್ರತಿಭೆಗೊಂದು ಮನ್ನಣೆ ಹಾಗೂ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿಯೇ ಈ ಭಾಗದಲ್ಲಿ ಸಮಿತಿ ಸಮ್ಮೇಳನ ಆರಂಭಿಸಿದೆ. ಹಲವು ಮಹಿಳೆಯರು ಸ್ವ-ಆಸಕ್ತಿಯಿಂದಲೇ ಪಾಲ್ಗೊಳ್ಳುತ್ತಾರೆ. ಪ್ರತಿಯೊಬ್ಬರೂ ಒಂದೊಂದು ಕಾರ್ಯವನ್ನು ಹೊಣೆಗಾರಿಕೆಯಂತೆ ನಿಭಾಯಿಸಿ ಸಮ್ಮೇಳನ ಯಶಸ್ವಿಗೊಳಿಸುತ್ತಾರೆ~ ಎಂದರು.

ಸಮ್ಮೇಳನದಲ್ಲಿ ಈ ಭಾಗದ ಕಲಾವಿದೆಯರಿಗೆ ಹೆಚ್ಚಿನ ಪ್ರಾಶಸ್ತ್ಯವಿದೆ. ಮಹಿಳೆಯರು ಮುಕ್ತವಾಗಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು ಎಂದು ಸಮಿತಿ ಅಧ್ಯಕ್ಷೆ ವಿಲಾಸವತಿ ಖೂಬಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT