ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸಾಪ ಚುನಾವಣೆ: ಜಾತಿ, ರಾಜಕೀಯ ವಾಸನೆ!

Last Updated 2 ಜುಲೈ 2018, 12:52 IST
ಅಕ್ಷರ ಗಾತ್ರ

ಗುಲ್ಬರ್ಗ: ಶತಮಾನೋತ್ಸವದ ಅಂಚಿನಲ್ಲಿರುವ ಕನ್ನಡಿಗರ ಏಕೈಕ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ ಇದೀಗ ಅಧ್ಯಕ್ಷ ಚುನಾವಣೆಯ ಭರಾಟೆಯಲ್ಲಿದೆ. ಮೂರುವರೆ ವರ್ಷಗಳ ನಂತರ ಮತ್ತೆ ಚುನಾವಣೆ ಬಂದಿರುವುದರಿಂದ ಗುಲ್ಬರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಲ್ಲೂ ಚುನಾವಣಾ ಕಾವು ದಿನದಿಂದ ದಿನಕ್ಕೆ ತಾರಕಕ್ಕೆ ಏರುತ್ತಿದೆ.

ಕನ್ನಡ ಸಾಹಿತ್ಯ ಸಂಸ್ಕೃತಿಯನ್ನು ಪೋಷಿಸಿ ಬೆಳೆಸುವ ಮೂಲ ಆಶಯದೊಂದಿಗೆ ಸ್ಥಾಪಿಸಲಾದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಇದೀಗ ರಾಜಕೀಯ ಪ್ರಮುಖರು, ಉದ್ಯಮಿಗಳು, ಮಠಾಧೀಶರು ಅತ್ಯಂತ ಉತ್ಸಾಹದಲ್ಲಿ ಭಾಗಿಯಾಗುತ್ತಿರುವುದರಿಂದ ಸಾರ್ವತ್ರಿಕ ಚುನಾವಣೆಯಷ್ಟೇ ಮಹತ್ವ ಪಡೆಯುತ್ತಿದೆ.

ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ವೀರಭದ್ರ ಸಿಂಪಿ ಹಾಗೂ ಕಳೆದ ಬಾರಿ ಪರಾಭವ ಅನುಭವಿಸಿದ ಮಹಿಪಾಲರೆಡ್ಡಿ ಮುನ್ನೂರ್ ಕಣದಲ್ಲಿ ಉಳಿಯುವ ಮೂಲಕ ತೀವ್ರ ಪ್ರಚಾರದಲ್ಲಿ ತೊಡಗಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಪರಸ್ಪರ ತೀವ್ರ ಸ್ಪರ್ಧೆಯೊಡ್ಡಿದ್ದ ಅಭ್ಯರ್ಥಿಗಳೇ ಈ ಬಾರಿಯೂ ಕಣದಲ್ಲಿರುವುದರಿಂದ ಚುನಾವಣೆ ಫಲಿತಾಂಶ ತೀವ್ರ ಕುತೂಹಲ ಕೆರಳಿಸಿದೆ.

ಕನ್ನಡ ಭವನದ ಬಾಕಿ ಉಳಿದ ಕೆಲಸಗಳನ್ನು ಪೂರ್ಣಗೊಳಿಸುವುದರ ಜೊತೆಗೆ ಸಾಹಿತ್ಯ ಸೇವೆಗೆ ಮತ್ತೊಮ್ಮೆ ನನ್ನನ್ನು ಬೆಂಬಲಿಸಿ ಎಂದು ಮನವಿ ಮಾಡಿಕೊಳ್ಳುತ್ತಿರುವ ಸಿಂಪಿ, ಕನ್ನಡದ ರಚನಾತ್ಮಕ ಕಾರ್ಯ ಮಾಡಲು ಈ ಬಾರಿ ನನಗೆ ಆಶೀರ್ವದಿಸಿ ಎಂದು ಕೋರುತ್ತಿರುವ ರೆಡ್ಡಿ ಮತದಾರರ ಮನೆ ಮನೆಗೆ ತೆರಳಿ ಮತ ಯಾಚಿಸುವುದರಲ್ಲಿ ನಿರತರಾಗಿದ್ದಾರೆ.

ಈ ಮಧ್ಯೆ ಅಭ್ಯರ್ಥಿಗಳು ರಾಜಕೀಯ ಧುರೀಣರು, ಉದ್ಯಮಿಗಳ ಮತ್ತು ಮಠಾಧೀಶರ ಬೆಂಬಲ ಪಡೆದು ಮತ ಹಾಕುವಂತೆ ಫೋನ್ ಮಾಡಿಸುತ್ತಿರುವುದಾಗಿ ಸದಸ್ಯರೊಬ್ಬರು ಆರೋಪಿಸಿದ್ದಾರೆ. ಮತದಾನಕ್ಕೆ ಇನ್ನೂ ಕೇವಲ ನಾಲ್ಕು ದಿನ ಬಾಕಿ ಇರುವಾಗಲೇ ಇಬ್ಬರೂ ಅಭ್ಯರ್ಥಿಗಳು ಪರಸ್ಪರ ಆರೋಪ, ಪ್ರತ್ಯಾರೋಪ ಬಿಟ್ಟು ಮತದಾರರ ಮನ ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸಿರುವುದು ಕಂಡು ಬರುತ್ತಿದೆ. ಆದರೆ ಮತದಾರರ ನಾಡಿಮಿಡಿತ ಮಾತ್ರ ಇನ್ನೂ ನಿಗೂಢವಾಗಿದೆ.

ಚುನಾವಣಾ ಹಿನ್ನೋಟ: ಅವಿಭಜಿತ ಗುಲ್ಬರ್ಗ ಜಿಲ್ಲೆಯಲ್ಲಿ ಈ ಮುಂಚೆ 3,550 ಮತದಾರರಿದ್ದರು. ಆದರೆ ಮೂರುವರೆ ವರ್ಷ ಕಳೆದ ನಂತರ ಯಾದಗಿರಿ, ಶಹಾಪುರ, ಸುರಪುರ ತಾಲ್ಲೂಕು ಹೊರತುಪಡಿಸಿ ಇದೀಗ 4,392 ಮತದಾರಿದ್ದಾರೆ.

ಕಳೆದ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದ ವೀರಭದ್ರ ಸಿಂಪಿ 973 ಮತಗಳನ್ನು ಪಡೆಯುವ ಮೂಲಕ ತಮ್ಮ ಸಮೀಪದ ಪ್ರತಿಸ್ಪರ್ಧಿ ಮಹಿಪಾಲರೆಡ್ಡಿ ಮುನ್ನೂರ್ ಅವರನ್ನು 76 ಮತಗಳ ಅಂತರದಲ್ಲಿ ಸೋಲಿಸಿದ್ದರು. ಮಹಿಪಾಲರೆಡ್ಡಿ 879 ಮತಗಳನ್ನು ಪಡೆದಿದ್ದರು.  ಆಗ ಚುನಾವಣಾ ಕಣದಲ್ಲಿದ್ದ ಲಿಂಗರಾಜ ಶಾಸ್ತ್ರಿ 359 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದರು. ಉಳಿದಂತೆ ಭೀಮಣ್ಣ ಬೋನಾಳ 14, ಶಿವಾನಂದ ಅಣಜಗಿ 9 ಮತಗಳನ್ನು ಪಡೆದಿದ್ದರು.
 

ಜಾತ್ಯತೀತವಾಗಿ ನಡೆಯಬೇಕು, ಆದರೆ....

“ಸರ್ಕಾರದ ಅನುದಾನ ಪಡೆದರೂ ಸಂಪೂರ್ಣ ಸ್ವಾಯತ್ತ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಸ್ಥಾನದ ಚುನಾವಣೆ ಜಾತ್ಯತೀತವಾಗಿ ನಡೆಯಬೇಕು. ಆದರೆ ದುರದೃಷ್ಟವಶಾತ್ ಈಗಾಗಲೇ ಪರಿಷತ್ ಚುನಾವಣೆಯಲ್ಲೂ ರಾಜಕೀಯ, ಹಣ, ಜಾತಿ, ಧರ್ಮ ಸೇರಿಕೊಳ್ಳುತ್ತಿರುವುದು ಭವಿಷ್ಯದ ದೃಷ್ಟಿಯಿಂದ ಸರಿಯಾದ ಬೆಳವಣಿಗೆಯಲ್ಲ”  .                    -ಗೀತಾ ನಾಗಭೂಷಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT