ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂಜೆಯ ಕೈಂಕರ್ಯಕ್ಕೆ ಮಣ್ಣಿನ ಸೇವೆ

ಅಕ್ಷರ ಗಾತ್ರ

ಗುಲ್ಬರ್ಗ: ನಮ್ಮ ಸಂಸ್ಕೃತಿ, ಧಾರ್ಮಿಕ ಆಚರಣೆಗಳು, ವಿಧಿ-ವಿಧಾನಗಳು ಕೇವಲ ಏಕೋದ್ದೇಶಗಳಿಗಾಗಿ ರೂಪುಗೊಂಡಿರುವುದಲ್ಲ. ಬಹು ಸಂಸ್ಕೃತಿಯ ನಾಡಿನಲ್ಲಿ ಪ್ರತಿಯೊಂದು ಆಚರಣೆಗೂ ತನ್ನದೇ ಹಲವು ಆಯಾಮಗಳಿವೆ. ಭಿನ್ನ ರೂಪಗಳ ಉದ್ದೇಶಗಳು ಉಂಟು. ಅಂಥ ಹಬ್ಬಗಳು ಕೇವಲ ಆನಂದಕ್ಕಲ್ಲದೇ, ಬದುಕಿಗೂ ಆಸರೆಯಾಗುತ್ತವೆ ಎನ್ನುವುದು ವಿಶೇಷ ಸಂಗತಿ.

ಇನ್ನೂ ಕೆಲ ದಿನಗಳಲ್ಲಿ ಈ ಭಾಗದ ರೈತಾಪಿ ಕುಟುಂಬಗಳ ಅದ್ದೂರಿ ಹಬ್ಬವಾಗಿ ಆಚರಣೆಯಾಗುವ ಮಣ್ಣೆತ್ತಿನ ಅಮಾವಾಸ್ಯೆ ಕೂಡ ಅಂಥ ಹಬ್ಬಗಳಲ್ಲೊಂದು. ಹಬ್ಬಕ್ಕೆಂದೆ ಮಹಾರಾಷ್ಟ್ರದಿಂದ ಬಂದಿರುವ ವ್ಯಾಪಾರಿಗಳು ಮಣ್ಣಿನ ಎತ್ತುಗಳನ್ನು ಮಾರಾಟಕ್ಕಾಗಿ ತಯಾರಿಸುತ್ತಿದ್ದಾರೆ.

ಸುಮಾರು ಹನ್ನೆರಡು ವರ್ಷಗಳಿಂದ ಗುಲ್ಬರ್ಗದ ನಂಟು ಬೆಳೆಸಿಕೊಂಡಿರುವ ಈ ಕುಟುಂಬಗಳು ಒಂದು ತಿಂಗಳು ಮುಂಚೆಯೇ ಬಂದು ನಗರದಲ್ಲಿ ನೆಲೆಸಿದ್ದಾರೆ. ಸುಂದರ ಎತ್ತುಗಳನ್ನು ರೂಪಿಸಿ ಮಾರುತ್ತಾರೆ.

ಈ ಬಗ್ಗೆ ಕುಟುಂಬದ ಮುಖಂಡ ವಸಂತರನ್ನು ಮಾತನಾಡಿಸಿದಾಗ, ‘ಈ ಭಾಗದಲ್ಲಿ ಎತ್ತುಗಳನ್ನು ದೇವರಂತೆ ಕಾಣುತ್ತಾರೆ. ಕಾರ ಹುಣ್ಣಿಮೆ, ಮಣ್ಣೆತ್ತಿನ ಅಮವಾಸ್ಯೆಗಳಲ್ಲಿ ಮನೆಯ ಎತ್ತುಗಳಿಗೆ ವಿಶೇಷ ಪೂಜೆ ನಡೆಯುತ್ತದೆ. ಇಂಥ ಸುಂದರ ಆಚರಣೆಗಳು ನಮ್ಮ ಬದುಕಿಗೆ ಆಸರೆಯಾಗಿದೆ.

ಇಲ್ಲಿನ ಜನರು ಸಂಸ್ಕೃತಿಯೊಂದಿಗೆ ಭಾವನಾತ್ಮಕ ಬೆಸುಗೆಯನ್ನು ಬೆಳೆಸಿಕೊಂಡಿದ್ದಾರೆ. ಆಚರಣೆಗಳಗೂ ತಮ್ಮದೇ ಆದ ಮಹತ್ವ ನೀಡಿದ್ದಾರೆ. ಆ ಕಾರಣಕ್ಕೆ ಇಲ್ಲಿಯವರೆಗೂ ನಮಗೆ ಗುಲ್ಬರ್ಗ ನಂಟು ಕಳೆದಿಲ್ಲ’ ಎಂದು ಭಾವನಾತ್ಮಕವಾಗಿ ನುಡಿದರು. 

ದಿನವೊಂದಕ್ಕೆ 100 ಜೋಡಿ ಎತ್ತುಗಳ ಕಲಾಕೃತಿಗಳನ್ನು ತಯಾರಿಸುತ್ತಾರೆ. ಹಾಗಂತ ತಯಾರಿಯೇನು ಸುಲಭವಲ್ಲ. ಇಡೀ ಕುಟುಂಬ ಸೇರಿ ದಿನದ 12- 14 ಗಂಟೆಗೂ ಅಧಿಕ ಹೊತ್ತು ಕೆಲಸ ಮಾಡುತ್ತಾರೆ. ಅದಕ್ಕೆಲ್ಲ ಸಮಯದ ತೀವ್ರತೆ ಕಾರಣ ಎನ್ನುವುದು ಅವರ ಅಭಿಮತ.

ಲಾತೂರ್‌ನಿಂದ ಜಿಪ್ಸಮ್ ಮಿಶ್ರಿತ ಮಣ್ಣನ್ನು ತರುತ್ತಾರೆ. ಹದವಾಗಿಸಿದ ನಂತರ ಕಲಾಕೃತಿಗಳ ಹಚ್ಚಿಗೆ ಸುರಿಯಲಾಗುತ್ತದೆ. ಅವುಗಳನ್ನು ಕೆಲ ಹೊತ್ತು ಬಿಸಿಲಲ್ಲಿ ಕಾಯಿಸಲಾಗುತ್ತದೆ. ಅದಕ್ಕೆ ಎತ್ತಿನ ರೂಪು ಬಂದ ಮೇಲೆ ಬೇಡವಾದ  ಭಾಗವನ್ನು ತೆಗೆದು ಹಾಕಿ ಬಣ್ಣ ಬಳಿಯುತ್ತಾರೆ.


‘ಇಲ್ಲಿ 20 ರೂಪಾಯಿಯಿಂದ 200ರ ವರೆಗಿನ ಕಲಾಕೃತಿಗಳಿವೆ. ಕೆಲ ರೈತರು ದೊಡ್ಡ ಗಾತ್ರದ ಎತ್ತುಗಳ ಮೂರ್ತಿಗಳನ್ನು ಕೊಳ್ಳುತ್ತಾರೆ. ಇನ್ನೂ ಕೆಲವರು ಚೌಕಾಸಿ ಮಾಡುವುದುಂಟು. ಆದರೆ ವ್ಯಾಪಾರ ಮಾತ್ರ ಖಚಿತ’ ಎನ್ನುತ್ತಾರೆ ವ್ಯಾಪಾರಿ ಸುನೀಲ.

‘ನಮಗೆ ಇದು ಕೇವಲ ಜೀವನೋಪಾಯ ಮಾತ್ರವಲ್ಲ, ಇದು ನಮ್ಮ ಹಿರಿಯರು ಹಾಕಿ ಬಾಳಿನ ದಾರಿ ಎನ್ನುವ ವಸಂತ, ಇದಾದ ನಂತರ ಮಹಾರಾಷ್ಟ್ರದಲ್ಲಿ ಗಣೇಶ ಚತುರ್ಥಿಗಾಗಿ ಮೂರ್ತಿಗಳು, ನವರಾತ್ರಿಗಾಗಿ ದೇವಿ ಮೂರ್ತಿಗಳನ್ನು ತಯಾರಿಸುವ ಕಾರ್ಯ ಶುರುವಾಗಲಿದೆ. ಹೀಗೆ ವರ್ಷದಲ್ಲಿ 6 ತಿಂಗಳು ನಾವು ಕಾರ್ಯನಿರತವಾಗಿರುತ್ತೇವೆ’ ಎನ್ನುತ್ತಾ ಕಾರ್ಯೋನ್ಮುಖರಾದರು.

ಈ ಬಗ್ಗೆ ರೈತರಿಗೂ ಸಮಾಧಾನವಿದೆ. ಗ್ರಾಮೀಣ ಪ್ರದೇಶದಲ್ಲಾದರೆ ಇಂದಿಗೂ ಕುಂಬಾರಿಕೆ ಜೀವಂತವಿದೆ. ಆದರೆ ನಗರಗಳಲ್ಲಿ ಮಾತ್ರ ಎತ್ತುಗಳ ಕಲಾಕೃತಿಗಳನ್ನು ಹುಡುಕಿಕೊಂಡು ಹೋಗಬೇಕಾಗುತ್ತದೆ. ನಗರ ಪ್ರದೇಶದಲ್ಲಿಯೂ ನಮ್ಮ ಸಂಸ್ಕೃತಿ ಉಳಿಸಿಕೊಳ್ಳಲು ಇಂಥ ವ್ಯಾಪರಿಗಳು ನಮಗೆ ಹೆಚ್ಚು ಸಹಕಾರಿ ಎನ್ನುತ್ತಾರೆ. ಆಚರಣೆಗಳು ಕೇವಲ ಆನಂದಕ್ಕಲ್ಲದೇ ಬದುಕಿಗೂ ಆಸರೆಯಾಗಿರುವ ಬಗ್ಗೆ ಮಾತ್ರ ಈ ವ್ಯಾಪಾರಿಗಳಲ್ಲಿ ತೃಪ್ತ ಭಾವವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT