ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳಲಿ ಗುಬ್ಬಚ್ಚಿ ನಮ್ಮ ಮನೆಗೆ

Last Updated 2 ಜುಲೈ 2018, 12:52 IST
ಅಕ್ಷರ ಗಾತ್ರ

ಕಳೆದ ಅನೇಕ ವರ್ಷಗಳಿಂದ ನಮ್ಮ ಮನೆಯ ಒಬ್ಬ ಉತ್ಸಾಹಿ ಸದಸ್ಯ, ತನ್ನ ಆರೋಗ್ಯ ಕಳೆದುಕೊಂಡು ಕಾಣೆಯಾಗಿದ್ದಾನೆ...! 

ಬೆಳಿಗ್ಗೆಯಿಂದ ರಾತ್ರಿಯವರೆಗೂ ತನ್ನ ವಿಶಿಷ್ಟ ಧ್ವನಿಯಲ್ಲಿ ಕ್ಷಣ ಹೊತ್ತು ಕೂಡ ಸುಮ್ಮನಿರದೆ ಮಾತನಾಡುತ್ತಾ, ಜಿಗಿಯುತ್ತಾ, ಪುಟಿಚೆಂಡಿನಂತಿದ್ದ ಆತ ತನ್ನ ಸಂಸಾರ ಸಮೇತ ನಾಪತ್ತೆಯಾಗಿದ್ದಾನೆ!

ಹುಟ್ಟಿದ ಕೂಸಿನಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ತನ್ನ ಕ್ರಿಯಾಶೀಲ ಬದುಕಿನಿಂದ ಮನರಂಜನೆ ಒದಗಿಸುತ್ತಿದ್ದ ಆತ ಈಗ ನಮ್ಮ ಮನೆಗೆ ಬರುವುದನ್ನೇ ಬಿಟ್ಟಿದ್ದಾನೆ. ಆದರೆ ಅವನಾಗಿಯೇ ನಮ್ಮನ್ನು ಬಿಟ್ಟು ಹೋಗಿಲ್ಲ. ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದ್ದ ಅವನು ನಮ್ಮಡನೆ ಇರುತ್ತೇನೆಂದರೂ ಇರಗೊಡದೇ ಅವನನ್ನು ಮನೆಯ ಹೊರಗೆ ಅಲ್ಲಲ್ಲ; ಊರ ಹೊರಗೆ ಹಾಕಿದ್ದೆೀವೆ! ದುರಂತವೆಂದರೆ ಆತ ನಮ್ಮ ಮನೆಯನ್ನು ಬಿಟ್ಟು ಹೋದ ಬಗ್ಗೆ ನಮಗೆ ಕಿಂಚಿತ್ತೂ ಸುಳಿವೇ ಇಲ್ಲ. ಈಗಲಾದರೂ ಆ ನಮ್ಮ ಪ್ರೀತಿಯ ಸದಸ್ಯ ಯಾರೆಂದು ಗೊತ್ತಾಯಿತೆ?

 ಗುಬ್ಬಚ್ಚಿ...? ಹೌದು. ಸದಾ ಚಿಂವ್-ಚಿಂವ್ ಎಂಬ ಕಲರವದೊಂದಿಗೆ, ಟಣ-ಟಣನೇ ಜಿಗಿದಾಡುತ್ತಾ, ಹಾರಾಡುತ್ತಾ ಹುಲ್ಲಿನ ಎಳೆಗಳನ್ನು ತಂದು ಗೂಡು ಕಟ್ಟುತ್ತಾ, ಅಕ್ಕಿ-ಜೋಳ ಹಸನು ಮಾಡುತ್ತಿದ್ದ ಹೆಣ್ಣುಮಕ್ಕಳ ಮುಂದೆ ಚೆಲ್ಲಿದ ಕಾಳುಗಳನ್ನು ತಿನ್ನುತ್ತಾ, ಪುಟಾಣಿ ಮಕ್ಕಳ ಬೆಳ್ಳನೆಯ ನಗೆಗೆ ಕಾರಣವಾಗಿದ್ದ ಗುಬ್ಬಚ್ಚಿ ಕಳೆದುದಕ್ಕೆ ಕಾರಣಗಳು ಹಲವು.

ಆಧುನಿಕ ಸೌಲಭ್ಯಗಳಿರುವ ಕಾಂಕ್ರೀಟಿನ ಮನೆಗಳಿಂದಾಗಿ ಗುಬ್ಬಚ್ಚಿಗಳಿಗೆ ನಮ್ಮ ಮನೆಗಳಲ್ಲಿ ಗೂಡು ಕಟ್ಟಲು ನೆಲೆ ಇಲ್ಲದಂತಾಗಿದೆ. ಊರಿನ ಪಕ್ಕದಲಿಯ್ಲೌ ಹೊಲಗಳಿದ್ದು ಅಲ್ಲಿ ಹೋಗಿ ಕಾಳುಗಳನ್ನು ತಿನ್ನುತ್ತಿದ್ದ ಅವುಗಳಿಗೆ ಈಗ ಆ ಹೊಲಗಳು ಕಾಣುತ್ತಿಲ್ಲ. ಹೊಲಗಳ ಜಾಗದಲ್ಲಿ ಕಾಂಕ್ರೀಟಿನ ಸೌಧಗಳು ಎದ್ದಿವೆ. ಗಿಡ-ಮರಗಳು, ಪೊದೆಗಳೇನಾದರೂ ಇವೆಯೇ..? ಇದ್ದರೆ ಅವುಗಳಲ್ಲಿ ಆಶ್ರಯ ಹುಡುಕಿ ಗೂಡುಗಳನ್ನು ಕಟ್ಟಬಹುದಿತ್ತು.

 ಜನವಸತಿಗೆ, ರಸ್ತೆಗಳಿಗಾಗಿ ಗಿಡ-ಮರಗಳನ್ನು ಕಡಿದಿದ್ದರಿಂದ ಅಲ್ಲಿಯೂ ಅವುಗಳಿಗೆ ನೆಲೆ ಇಲ್ಲದಂತಾಗಿದೆ.  ಹೋಗಲಿ, ಸಿಕ್ಕ ಹೊಲಗಳಿಗೆ ಹಾರಿ ಅಲ್ಲಿ ಸಿಗುವ ಹುಳು-ಹುಪ್ಪಟೆಗಳನ್ನೇ ತಮ್ಮ ಮರಿಗಳಿಗೆ ಉಣಿಸೋಣವೆಂದರೆ, ಹಾಳು ರಾಸಾಯನಿಕ ಕೀಟನಾಶಕಗಳನ್ನು ಬಳಸಿದ್ದರಿಂದ ಅಂತಹ ಹುಳುಗಳು ಕೂಡ ಸತ್ತು ಹೋಗಿವೆ.  ರಣ ಬಿಸಿಲಿನಲ್ಲಿ ಬಾಯಾರಿಕೆಯಾಗಿ ನೀರು ಕುಡಿಯೋಣವೆಂದರೆ ಒಂದು ಕೆರೆ ಕೂಡ ಸಿಗುತ್ತಿಲ್ಲ. ಬಾವಿಗಳು ಬತ್ತಿ ಹೋಗಿವೆ.

 ಗುಬ್ಬಚ್ಚಿಗಳಿಗೆ ಗಾಳಿಯಲ್ಲಿ ಹರಿಯುವ ಮೊಬೈಲಿನ ವಿದ್ಯುತ್ಕಾಂತೀಯ ತರಂಗಗಳು ಕೂಡ ಯಮಪಾಶವಾಗಿ ಪರಿಣಮಿಸುತ್ತಿವೆ ಎಂಬುದು ನಿಜಕ್ಕೂ ಭಯಾನಕವಾದ ಸತ್ಯ..! 1990 ರಿಂದಲೇ ಗುಬ್ಬಚ್ಚಿಗಳು ಕಾಣೆಯಾಗುತ್ತಿರುವ ಬಗ್ಗೆ ಗಮನಿಸಿದ ವಿಜ್ಞಾನಿಗಳು ಆ ಬಗ್ಗೆ ಎಚ್ಚರಿಸುತ್ತಲೇ ಬಂದಿದ್ದಾರೆ.  ಗುಬ್ಬಚ್ಚಿಗಳು ಕಾಣೆಯಾಗುತ್ತಿರುವುದು ನಿಜವಾಗಿಯೂ ನಮ್ಮ ಪರಿಸರ ವ್ಯವಸ್ಥೆ ಹದಗೆಡುತ್ತಿರುವುದರ ಎಚ್ಚರಿಕೆಯ ಕರೆಗಂಟೆಯಾಗಿದೆಯೆಂದರೆ ಅತಿಶಯೋಕ್ತಿಯಲ್ಲ.

`ನಮ್ಮ ಗುಬ್ಬಚ್ಚಿಗಳನ್ನು ಉಳಿಸಿ'  ಎಂಬ ಆಂದೋಲನವನ್ನು `ನೇಚರ್ ಫಾರ್ ಎವರ್ ಸೊಸೈಟಿ'ಯ ಸಂಸ್ಥಾಪಕ ನಾಶಿಕ್‌ನ ಮೊಹಮ್ಮದ ದಿಲಾವರ ಆರಂಭಿಸಿದರು.  2010 ರ ಮಾ. 20ರಂದು ಮೊದಲ ವಿಶ್ವ ಗುಬ್ಬಚ್ಚಿ ದಿನವನ್ನು ಆಚರಿಸಲಾಯಿತು. ಈ ಸಂಸ್ಥೆಯೊಂದಿಗೆ ಫ್ರಾನ್ಸಿನ  `ಇಕೋ-ಸಿಸ್ ಆಕ್ಷನ್ ಫೌಂಡೇಶನ್' ಹಾಗೂ ಇನ್ನೂ ಅನೇಕ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸಂಸ್ಥೆಗಳ ಸಹಯೋಗದಲ್ಲಿ ಈ ದಿನವನ್ನು ಅರ್ಥಪೂರ್ಣವಾಗಿ ವಿಶ್ವದಾದ್ಯಂತ ಆಚರಿಸಲಾಗುತ್ತದೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT