ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿ ಪ್ರದೇಶ ನುಗ್ಗಿದ ಚರಂಡಿ ನೀರು

Last Updated 2 ಜುಲೈ 2018, 12:52 IST
ಅಕ್ಷರ ಗಾತ್ರ

ಗುಲ್ಬರ್ಗ: ಇಲ್ಲಿನ ನಗರ ಪಾಲಿಕೆಯ ಕಾರ್ಯ ವೈಖರಿ ಎಂಥದು ಎಂಬುದಕ್ಕೆ ಚಿತ್ರದಲ್ಲಿ ಕಾಣುವ ಈ ದೃಶ್ಯವೇ ಉತ್ತಮ ನಿದರ್ಶನವಾಗಿದೆ.

ಗುಲ್ಬರ್ಗ ನಗರದ ಗಂಜ್ ಕಾಲನಿಯಲ್ಲಿರುವ ಉಮಾಕಾಂತ ಜಮಶೆಟ್ಟಿ ಪಾಟೀಲ ಹಾಗೂ ಮಹಾದೇವಪ್ಪ ಚೌಡ್ಯಾಳ ಅವರ ಮನೆಗಳಲ್ಲಿ ಸತತ ಎರಡು ವರ್ಷಗಳಿಂದ ಚರಂಡಿ ನೀರು ಆಗಾಗ ಮನೆಯೊಳಗೆ ನುಗ್ಗುವುದರಿಂದ ತೀವ್ರ ಸಮಸ್ಯೆ ತಲೆದೂರಿದೆ. ಈ ಕುರಿತು ನಗರ ಸಭೆ ಆಯುಕ್ತರಿಗೆ ಮತ್ತು ಸಂಬಂಧಿಸಿದ ನಗರ ಸಭೆ ಸದಸ್ಯರಿಗೆ  ಸುಮಾರು ಏಳೆಂಟು ಬಾರಿ ಮನವಿ ಸಲ್ಲಿಸಿದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಎನ್ನುವುದು ಆಡಳಿತ ಯಂತ್ರ ಕುಸಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಕಳೆದ ಹದಿನೈದು ದಿನಗಳಿಂದ ಮನೆಯಲ್ಲಿ ನೀರು ನುಗ್ಗುವುದು ಸಾಮಾನ್ಯವಾಗಿರುವುದರಿಂದ ಮನೆಯಲ್ಲಿ ವಾಸಿಸುವ ಸದಸ್ಯರು ತಮ್ಮ ಮನೆಯೊಳಗೆ ಪ್ರವೇಶಿಸಬೇಕಾದರೆ ಹರಸಾಹಸ ಪಡಬೇಕಾಗುತ್ತಿದೆ. ಮೇಲಾಗಿ ಚರಂಡಿ ನೀರಿನ ಗಬ್ಬುವಾಸನೆ ತಲೆ ಹಿಡಿಯುವಂತಾಗಿದೆ. ಇದರಿಂದಾಗಿ ಮನೆಯಲ್ಲಿ ಓಡಾಡುವ ಹಿರಿಯರಿಗೆ ಹಾಗೂ ಮಕ್ಕಳಿಗೆ ತುಂಬಾ ತೊಂದರೆಯಾಗುತ್ತಿದೆ.

ಮಳೆಗಾಲದಲ್ಲಿ ಮಳೆ ನೀರಿನೊಂದಿಗೆ ಚರಂಡಿ ನೀರು ಸೇರಿಕೊಂಡು ಮನೆಯ ಅಂಗಳದ ತುಂಬೆಲ್ಲ ಸಂಚಾರಕ್ಕೆ ಸಂಚಕಾರವನ್ನುಂಟು ಮಾಡುತ್ತದೆ. ಆಗ ಮೊಳಕಾಲುದ್ದದಷ್ಟು ನೀರು ಸಂಗ್ರಹಗೊಳ್ಳುತ್ತದೆ. ಹೀಗಾಗಿ ಮನೆಯ ಸದಸ್ಯರು ವಿವಿಧ ಸಾಂಕ್ರಾಮಿಕ ರೋಗದಿಂದ ಬಳಲುವುದು ಸಾಮಾನ್ಯವಾಗಿದೆ. ವಾರ್ಡ್ ಸಂಖ್ಯೆ 9ರ ವ್ಯಾಪ್ತಿಯಲ್ಲಿ ಬರುವ ಈ ಕಾಲೊನಿಗೆ ಅಗತ್ಯ ಮೂಲಸೌಕರ್ಯ ಒತ್ತಟ್ಟಿಗಿರಲಿ ಈಗ ತಲೆದೂರಿರುವ ಸಮಸ್ಯೆಯನ್ನೇ  ನಿವಾರಿಸಲಿಕ್ಕೆ ಆಗುತ್ತಿಲ್ಲ ಎಂಬುದು ವಿಷಾದದ ಸಂಗತಿ.

“ಸಂಬಂಧಿಸಿದ ಪಾಲಿಕೆ ಸದಸ್ಯರಿಗೆ ಈ ಕುರಿತು ವಿಚಾರಿಸಿದಾಗ ಮಾತ್ರ ಮುಖ್ಯ ನಾಲೆಯಲ್ಲಿ ಒಂದೆಡೆ ಸಂಗ್ರಹವಾದ ಚರಂಡಿ ನೀರನ್ನು ಸ್ವಚ್ಛಗೊಳಿಸುತ್ತಾರೆ. ಆದರೆ ಇದಕ್ಕೆ ಶಾಶ್ವತ ಪರಿಹಾರ ಹುಡುಕುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಕೇವಲ ಹಾರಿಕೆಯ ಉತ್ತರ ನೀಡುತ್ತಿದ್ದಾರೆ ಹೊರತು ಶಾಶ್ವತ ಪರಿಹಾರ ಕಂಡು ಹಿಡಿಯುತ್ತಿಲ್ಲ” ಎಂದು ಉಮಾಕಾಂತ ದೂರುತ್ತಾರೆ.

“ನನ್ನ ವ್ಯಾಪ್ತಿಯಲ್ಲಿ ಇಸ್ಲಾಮಾಬಾದ್, ಬಗದಾದ್, ಬ್ಯಾಂಕ್, ಗೇಸುದ್ರಾಸ್, ಗಂಜ್ ಕಾಲೊನಿ, ಒಕ್ಕಲಗೇರಾ ಕಾಲೊನಿ ಸೇರಿದಂತೆ ಸುಮಾರು ಆರೇಳು ಕಾಲೊನಿಗಳು ಬರುತ್ತಿದ್ದು, ಆದ್ಯತೆ ಮೇರೆಗೆ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುತ್ತಿದೆ. ಗಂಜ್ ಕಾಲೊನಿಯಲ್ಲಿನ ಈ ಸಮಸ್ಯೆಯನ್ನು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿ ಕೂಡಲೇ ಬಗೆಹರಿಸಲಾಗುವುದು” ಎಂದು ಪಾಲಿಕೆ ಸದಸ್ಯೆ ಶಾಯಿಸ್ತಾ ನಯಿಮ್ ಶೇರಿಕಾರ್ `ಪ್ರಜಾವಾಣಿ~ಗೆ ತಿಳಿಸಿದರು.

ಪಾಲಿಕೆ ಸಭೆಯಲ್ಲಿ ಕೆಲಸಕ್ಕೆ ಬಾರದ ವಿಷಯದ ಮೇಲೆಯೇ ತಾಸೊತ್ತು ಚರ್ಚಿಸುವ ನಗರ ಸಭೆ ಸದಸ್ಯರು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲೇ ಕಾಲ ಹರಣ ಮಾಡುತ್ತಾರೆ ವಿನಃ ತಮ್ಮ ವಾರ್ಡ್‌ಗಳಿಗೆ ಅಗತ್ಯವಾದ ಸೌಲಭ್ಯದ ಕಡೆ ಗಮನ ಹರಿಸದಿರುವುದಿಲ್ಲ. ಇದರಿಂದಾಗಿಯೇ ಇಡೀ ಗುಲ್ಬರ್ಗ ನಗರ ಗಬ್ಬೆದ್ದು ಹೋಗಿದೆ ಎಂಬುದು ನಗರ ನಿವಾಸಿಗಳ ಅನಿಸಿಕೆಯಾಗಿದೆ. ಈ ಕುರಿತು ಸಂಬಂಧಿಸಿದವರು ಕ್ರಮ ಕೈಗೊಳ್ಳುವರೇ ಕಾದು ನೋಡಬೇಕಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT