ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲಮಟ್ಟಿ | 10 ಲಕ್ಷ ಸಸಿ ವಿತರಣೆಗೆ ಕೆಬಿಜೆಎನ್‌ಎಲ್ ಸಜ್ಜು

ವಿಜಯಪುರ, ಬಾಗಲಕೋಟೆ, ರಾಯಚೂರ, ಕಲಬುರ್ಗಿ ಜಿಲ್ಲೆಯಲ್ಲಿ ರಿಯಾಯ್ತಿ ದರದಲ್ಲಿ ವಿತರಣೆ
Last Updated 17 ಮೇ 2020, 20:00 IST
ಅಕ್ಷರ ಗಾತ್ರ

ಆಲಮಟ್ಟಿ: ಮುಂಗಾರು ಹಂಗಾಮು ಆರಂಭಕ್ಕೂ ಮೊದಲು ವಿಜಯಪುರ, ಬಾಗಲಕೋಟೆ, ರಾಯಚೂರ, ಕಲಬುರ್ಗಿ ಜಿಲ್ಲೆಯಲ್ಲಿ 10 ಲಕ್ಷದಷ್ಟು ಸಸಿಗಳ ವಿತರಣೆಗೆ ಕೃಷ್ಣಾ ಭಾಗ್ಯ ಜಲ ನಿಗಮದ ಅರಣ್ಯ ಇಲಾಖೆ ಸಜ್ಜಾಗಿದೆ. ಜೂನ್ 1ರಿಂದ ರೈತರು, ಸಂಘ ಸಂಸ್ಥೆ, ಶಿಕ್ಷಣ ಸಂಸ್ಥೆಗಳಿಗೆ ರಿಯಾಯ್ತಿ ದರದಲ್ಲಿ ಸಸಿಗಳ ವಿತರಣೆ ಆರಂಭಗೊಳ್ಳಲಿದೆ.

ವಿವಿಧ ಐದು ಕಡೆಯ ನರ್ಸರಿಗಳಲ್ಲಿ ಕಳೆದ 8 ತಿಂಗಳಿಂದ ಈ ಸಸಿಗಳ ಬೆಳೆಸುವ ಕಾರ್ಯ ನಡೆದಿದೆ. ಈಗ ಆ ಎಲ್ಲ ನರ್ಸರಿಗಳಲ್ಲಿ ಪ್ರತ್ಯೇಕವಾಗಿ ಸಸಿಗಳ ವಿತರಣೆ ನಡೆಯಲಿದೆ.

‘ತೋಟಗಾರಿಕೆ, ಹಣ್ಣು, ಕೃಷಿ ಮತ್ತು ಅರಣ್ಯ, ವಾಣಿಜ್ಯ ಅರಣ್ಯ, ಧಾರ್ಮಿಕ ಪ್ರಾಮುಖ್ಯ, ಆಲಂಕಾರಿಕ, ಔಷಧಿ ಸಸಿಗಳೆಂಬ ಏಳು ವಿಭಾಗಗಳ 150ಕ್ಕೂ ಹೆಚ್ಚು ತಳಿಗಳ ಸಸ್ಯಗಳು ಮಾರಾಟಕ್ಕೆ ಲಭ್ಯ ಇವೆ. ರೋಗಾಣು ರಹಿತ ಉತ್ತಮ ತಳಿಯ ಸಸಿಗಳಿದ್ದು, 10X16 ಎತ್ತರದ ಪ್ರತಿ ಸಸಿಗೆ ₹5, 8X12 ಅಳತೆಯ ಸಸಿಗೆ ₹3 ಹಾಗೂ 6X9 ಅಳತೆಯ ಸಸಿಗೆ ₹1 ದರ ನಿಗದಿಪಡಿಸಲಾಗಿದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಕೆ. ಪೈ ತಿಳಿಸಿದರು.

‘2016-17ನೇ ಸಾಲಿನಿಂದ ಕೋಟಿ ವೃಕ್ಷ ಅಭಿಯಾನದಡಿ ಪ್ರತಿ ವರ್ಷವೂ 10 ಲಕ್ಷ ಸಸಿಗಳ ಬೆಳೆಸುವ ಕಾರ್ಯ ಕಳೆದ ನಾಲ್ಕು ವರ್ಷಗಳಿಂದಲೂ ಇಲ್ಲಿ ನಡೆಯುತ್ತಿದ್ದು, ಇಲ್ಲಿಯವರೆಗೆ 40 ಲಕ್ಷ ಸಸಿಗಳನ್ನು ಬೆಳೆಸಿ, ಅದರಲ್ಲಿ 30 ಲಕ್ಷ ಸಸಿಗಳನ್ನು ರೈತರಿಗೆ ವಿತರಿಸಲಾಗಿದೆ. ಇನ್ನುಳಿದ 10 ಲಕ್ಷ ಸಸಿಗಳನ್ನು ಕೆಬಿಜೆಎನ್ಎಲ್ ವತಿಯಿಂದ ನಾನಾ ಕಡೆ ಹಚ್ಚಲಾಗಿದೆ.ಈ ವರ್ಷವೂ 10 ಲಕ್ಷ ಸಸಿಗಳನ್ನು ಬೆಳೆಸಿದ್ದು, ಅವುಗಳ ವಿತರಣೆ ಆರಂಭಗೊಳ್ಳಲಿದೆ’ ಎಂದರು.

2016-17 ನೇ ಸಾಲಿನಲ್ಲಿ ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರು ಜಿಲ್ಲೆಯಲ್ಲಿ ಐದು ವರ್ಷಗಳ ಅವಧಿಯಲ್ಲಿ ಕೋಟಿ ವೃಕ್ಷ ಬೆಳೆಸುವ ಅಭಿಯಾನದ ಮೂಲಕ ಜಿಲ್ಲೆಯಲ್ಲಿ ಅರಣ್ಯೀಕರಣಕ್ಕೆ ಚಾಲನೆ ನೀಡಿದ್ದರು. ಅದೇ ಯೋಜನೆಯಡಿ ಈ ಸಸಿಗಳನ್ನು ಬೆಳೆಸಲಾಗಿದೆ.

‘ಜೂನ್ 1 ರಿಂದ ರೈತರಿಗೆ ವಿತರಿಸಲಾಗುತ್ತಿದ್ದು, ಸಸಿ ನೆಡುವ ಸ್ಥಳದ ಪಹಣಿ ಪತ್ರ, ಜಿಪಿಎಸ್ ರೀಡಿಂಗ್, ಆಧಾರ ಕಾರ್ಡ್ ಕಡ್ಡಾಯವಾಗಿದೆ. ಪ್ರತಿಯೊಬ್ಬ ರೈತರಿಗೆ 25 ಮಾವು, ತೆಂಗು 25, ನಿಂಬು 200, ಕಸಿ ಕಟ್ಟಿದ ಹಣ್ಣಿನ ಸಸಿ 50, ಶ್ರೀಗಂಧ 500, ರಕ್ತ ಚಂದನ 500, ಹೆಬ್ಬೇವು 500 ಸಸಿಗಳು ಹಾಗೂ ಇನ್ನೀತರ ಸಸಿಗಳನ್ನು ಬೇಡಿಕೆಗೆ ಅನುಗುಣವಾಗಿ ನೀಡಲಾಗುವುದು. ಇದಕ್ಕೂ ಹೆಚ್ಚಿನ ಸಸಿಗಳು ಬೇಕಿದ್ದರೇ ಗುಂಡಿ ತೋಡಿದ ಬಗ್ಗೆ ಅಧಿಕೃತ ದಾಖಲೆ ಒದಗಿಸಬೇಕು’ ಎಂದು ಆರ್ ಎಫ್ ಓ ಮಹೇಶ ಪಾಟೀಲ ಹೇಳಿದರು.

ಲಭ್ಯವಿರುವ ಪ್ರಮುಖ ಸಸಿಗಳು

* ತೋಟಗಾರಿಕಾ ಸಸಿಗಳು: ತೆಂಗು, ವಿವಿಧ ತಳಿಗಳ ಪೇರು, ದಾಳಿಂಬೆ, ಚಿಕ್ಕು, ನಿಂಬೆ (ಜವಾರಿ), ಕಿತ್ತಳೆ

* ಹಣ್ಣಿನ ಮರಗಳು: ಜಂಬು ನೇರಳೆ ,ರಾಮಫಲ, ಅಂಜೂರು, ಹಲಸು , ಸೀತಾಫಲ, ಕಂಚಿ ಮರ, ಕಡಿಗೋಲ ನೆಲ್ಲಿ, ಸಿಹಿ ಹುಣಸೆ, ಗೇರು, ಬಾರಿ ಗಿಡ, ಉಮ್ರಾನಿ, ಸ್ಟಾರ್ ಫ್ರೂಟ್, ಪನ್ನೇರಳೆ

* ಕೃಷಿ ಅರಣ್ಯ ಬೆಳೆಗಳು: ನುಗ್ಗೆ, ಕರಿಬೇವು, ಸೀಲ್ವರ್ ಓಕ್, ಗೊಬ್ಬರ ಗಿಡ, ತೋಗಚೆ

* ವಾಣಿಜ್ಯ ಅರಣ್ಯ ಬೆಳೆಗಳು: ಹೆಬ್ಬೇವು, ರಕ್ತ ಚಂದನ, ಶ್ರೀಗಂಧ, ಸಾಗವಾನಿ

* ಧಾರ್ಮಿಕ ಪ್ರಾಮುಖ್ಯತೆಯ ಗಿಡಗಳು: ತುಳಸಿ, ಬನ್ನಿ, ಪತ್ರಿ, ನಂದಿಪಾದ (ಆರೆ), ನಾಗಲಿಂಗ ಪುಷ್ಪ, ದೇವಕನಗಲ

* ಆಲಂಕಾರಿಕ ಸಸಿಗಳು: ಗಾಳಿಮರ, ಕಣಗಲ, ನಂದಿ ಬಟ್ಲು, ಕ್ಯಾಲಿಯಂಡ್ರಾ, ಕ್ಯಾಶಿಯಾ ಬೈಪ್ಲೊರಾ, ಬೋಗನವಿಲ್ಲಾ,ರಾತ ಕಿ ರಾಣಿ, ದಿನ-ಕಾ-ರಾಜಾ

* ಔಷಧಿ ಗಿಡಗಳು: ಲೋಳಸರ, ಮದರಂಗಿ, ಅಶ್ವಗಂಧ, ಸರ್ಪಗಂಧ, ಬ್ರಹ್ಮ, ಮಧುನಾಶಿನಿ, ಆಡಸೋಗೆ, ದೊಡ್ಡ ಪತ್ರಿ, ಅಮೃತ್ ಬಳ್ಳಿ, ಮುರಗಲು (ಕೋಕಂ), ಸರ್ವ ಸಾಂಬಾರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT