ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗರ ಕೆಎಫ್‌ಡಿ ಘಟಕಕ್ಕೆ ಮತ್ತೆ ಮರುಜೀವ

ಮಂಗನ ಕಾಯಿಲೆ ತಡೆ ವಿಚಾರಣಾ ಸಮಿತಿ ಸಭೆಯಲ್ಲಿ ಮದನ್ ಗೋಪಾಲ್ ಭರವಸೆ
Last Updated 6 ಫೆಬ್ರುವರಿ 2019, 14:31 IST
ಅಕ್ಷರ ಗಾತ್ರ

ಶಿವಮೊಗ್ಗ:ಸಾಗರದಲ್ಲಿ ಈ ಹಿಂದೆ ಆರಂಭಿಸಲಾಗಿದ್ದ ಕೆಎಫ್‌ಡಿ ಘಟಕಕ್ಕೆ ವೈದ್ಯಾಧಿಕಾರಿ, ಕೀಟಶಾಸ್ತ್ರ ತಜ್ಞರು ಸೇರಿದಂತೆ ಅಗತ್ಯ ಸಿಬ್ಬಂದಿ ನೇಮಿಸಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಮಂಗನ ಕಾಯಿಲೆ ತಡೆ ವಿಚಾರಣಾ ಸಮಿತಿ ಸದಸ್ಯ, ನಿವೃತ್ತ ಐಎಎಸ್ ಅಧಿಕಾರಿ ಮದನ್ ಗೋಪಾಲ್ ಭರವಸೆ ನೀಡಿದರು.

ಭವಿಷ್ಯದಲ್ಲಿ ಕಾಯಿಲೆ ಹರಡದಂತೆ ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಶಿಫಾರಸು ಮಾಡಲು ಸರ್ಕಾರ ರಚಿಸಿರುವ ದ್ವಿಸದಸ್ಯ ಸಮಿತಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.

ದಶಕಗಳ ಹಿಂದೆಯೇ ನಿರ್ದಿಷ್ಟ ಮಾರ್ಗಸೂಚಿ:

ಮಂಗನ ಕಾಯಿಲೆ ನಿಯಂತ್ರಣಕ್ಕೆ ದಶಕಗಳ ಹಿಂದೆಯೇ ನಿರ್ದಿಷ್ಟ ಮಾರ್ಗಸೂಚಿ ರಚಿಸಲಾಗಿದೆ. ಪ್ರತಿ ಇಲಾಖೆಗಳು ಕೈಗೊಳ್ಳಬೇಕಾದ ಜವಾಬ್ದಾರಿ, ಏಕರೂಪದ ಕ್ರಮಗಳ ಕುರಿತು ಸ್ಪಷ್ಟಪಡಿಸಲಾಗಿದೆ. ಆ ಪ್ರಕಾರ ಕಂದಾಯ, ಆರೋಗ್ಯ, ಅರಣ್ಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಮಾಹಿತಿ ನೀಡಿದರು.

ಮಳೆ ಬೀಳುವ ಮೊದಲೇ ಸಿದ್ಧತೆ:ಮಳೆಗಾಲ ಆರಂಭವಾಗುವ ಪೂರ್ವದಲ್ಲೇ ಕಾಯಿಲೆ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಸಾಕಷ್ಟು ಪ್ರಮಾಣದಲ್ಲಿ ಡಿಎಂಪಿ ತೈಲ ಹಾಗೂ ಲಸಿಕೆ ದಾಸ್ತಾನು ಇರಿಸಬೇಕು. ಮುನ್ನೆಚ್ಚರಿಕೆ ಕ್ರಮ ಕೈಗೊಂಡರೆ ಜನರ ಸಾವು ನೋವು ತಪ್ಪಿಸಬಹುದು. ಒಂದೇ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಎಂಟು ಸಾವು ಸಂಭವಿಸುವುದು ನಿರ್ವಹಣೆಯ ಲೋಪ ಎಂದು ಅರ್ಥೈಸಿದರು.

ಕಾಯಿಲೆ ತಡೆ ಲೋಪಗಳ ತನಿಖೆ:ಅರಳಗೋಡು ಪ್ರಾಥಮಿಕ ಆರೋಗ್ಯ ಕೇಂದ್ರ, ಸಾಗರ ತಾಲೂಕು ಆಸ್ಪತ್ರೆಯಲ್ಲಿ ದಾಖಲಾಗಿರುವ ಮಂಗನ ಕಾಯಿಲೆ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ಒದಗಿಸುವಲ್ಲಿ ಆಗಿರುವ ಲೋಪಗಳ ತನಿಖೆ ನಡೆಸಲಾಗುವುದು. ತಪ್ಪಿತಸ್ಥ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ವಿಚಾರಣೆ ನಡೆಸಲಾಗುವುದು ಎಂದರು.

ತಂದು ಬಿಡುವ ಮಂಗಗಳ ವಿರುದ್ಧ ಕ್ರಮ:ನೆರೆಯ ಜಿಲ್ಲೆಗಳಿಂದ ಮಂಗಗಳನ್ನು ತಂದು ರಾತ್ರಿ ವೇಳೆ ಜಿಲ್ಲೆಯ ಕಾಡುಗಳಿಗೆ ಬಿಡುತ್ತಿರುವ ಮಾಹಿತಿ ಇದೆ. ಇದರಿಂದ ಜಿಲ್ಲೆಯಲ್ಲಿ ಮಂಗಗಳ ಸಂಖ್ಯೆ ವಿಪರೀತವಾಗಿ ಹೆಚ್ಚಾಗಿದೆ. ಇಂತಹ ಪ್ರವೃತ್ತಿಗೆ ಕಡಿವಾಣ ಹಾಕಬೇಕು ಎಂದು ತಾಕೀತು ಮಾಡಿದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಚಕ್ರವರ್ತಿ ಮೋಹನ್, ಸಮಿತಿಯ ಸದಸ್ಯ ಡಾ.ಶಿವಕುಮಾರ್ ವೀರಯ್ಯ, ಹೆಚ್ಚುವರಿ ಜಿಲ್ಲಾಧಿಕಾರಿ ಅನುರಾಧ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಸುರಗಿಹಳ್ಳಿ, ಡಾ.ಕಿರಣ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT